
ಜೀವನಶೈಲಿ ಕಾಯಿಲೆಗಳು ಮನುಷ್ಯರನ್ನಷ್ಟೇ ಬಾಧಿಸುತ್ತಿಲ್ಲ; ಸಾಕುಪ್ರಾಣಿಗಳನ್ನೂ ಕಾಡುತ್ತಿವೆ. ನಾಯಿ–ಬೆಕ್ಕುಗಳಂತಹ ಪ್ರಾಣಿಗಳು ಮಾಲೀಕರ ಅತಿ ಮುದ್ದಿನಿಂದ ಜಂಕ್ ಫುಡ್ ವ್ಯಸನ ಅಂಟಿಸಿ ಕೊಂಡಿವೆ, ಕಾಯಿಲೆಗಳಿಗೆ ತುತ್ತಾಗುತ್ತಿವೆ. ವಿವೇಕವಿಲ್ಲದ ಪ್ರೀತಿ ಕೂಡ ‘ಪ್ರಾಣಿ ಕ್ರೌರ್ಯ’ ಎನ್ನುವುದನ್ನು ಪ್ರಾಣಿಪ್ರಿಯರು ಅರಿತುಕೊಳ್ಳಬೇಕು.
ತನ್ನ ಮುದ್ದು ನಾಯಿಯನ್ನು ಚೆಕಪ್‌ಗೆ ಕರೆತಂದಿದ್ದ ಮಹಿಳೆಯೊಬ್ಬರು, ‘ಸರ್, ಇವಳು ಸರಿಯಾಗಿ ಊಟ ಮಾಡುವುದಿಲ್ಲ. ಹೊಟ್ಟೆ ಹುಳಕ್ಕೆ ಔಷಧ ಕೊಟ್ಟಾಯ್ತು. ಹಸಿವಾಗಲಿಕ್ಕೆಂದು ಟಾನಿಕ್ ಹಾಕಾಯ್ತು. ಆದ್ರೂ ಸರಿ ಆಗಿಲ್ಲ. ಈಗ ಕೂದಲು ಉದುರಿ ಚರ್ಮದ ಮೇಲೆ ಅಲ್ಲಲ್ಲಿ ಸಣ್ಣ ಸಣ್ಣ ಪ್ಯಾಚ್‌ಗಳು ಕಾಣ್ತಿವೆ’ ಎಂದರು ಆತಂಕದಿಂದ. ಮೈಕೈ ತುಂಬಿಕೊಂಡು ಗುಂಡುಗುಂಡಾಗಿ ಕಾಣುತ್ತಿದ್ದ ನಾಯಿಯನ್ನು ಪರಿಶೀಲಿಸುತ್ತ, ‘ಬೇರೆ ಏನಾದ್ರೂ ತಿನ್ನುತ್ತಾ?’ ಎಂದು ಅನುಮಾನದಿಂದ ಕೇಳಿದೆ. ಆಕೆ ಅಡ್ಡಡ್ಡ ತಲೆಯಾಡಿಸುತ್ತಾ ‘ಇಲ್ಲ ಸರ್, ಇವಳು ಊಟ–ತಿಂಡಿ ಮುಟ್ಟೋದೇ ಇಲ್ಲ. ಬಿಸ್ಕತ್ತು, ರಸ್ಕು, ಬ್ರೆಡ್ ಕೊಟ್ರೆ ಎಷ್ಟು ಬೇಕಾದ್ರೂ ತಿಂತಾಳೆ. ಚಾಕೊಲೇಟ್ ಅಂದ್ರೂ ಪಂಚಪ್ರಾಣ. ಚಿಪ್ಸ್, ಐಸ್‌ಕ್ರೀಮ್, ಕೇಕು ಕೂಡ ತುಂಬಾ ಇಷ್ಟ’ ಎಂದರು ಉತ್ಸಾಹದಿಂದ. ಮನುಷ್ಯರಂತೆ ಜಂಕ್ ಫುಡ್ ರುಚಿ ಹತ್ತಿಸಿಕೊಂಡ ನಾಯಿಗೆ ಸಹಜವಾಗಿಯೇ ಬೇರೆ ಊಟ ಸೇರುತ್ತಿರಲಿಲ್ಲ! ಪರಿಣಾಮ, ಸ್ಥೂಲಕಾಯದ ಜೊತೆಗೆ ಚರ್ಮದ ಸಮಸ್ಯೆಯೂ ಕಾಣಿಸಿಕೊಂಡಿತ್ತು.
ಇಂದಿನ ಬದಲಾದ ಕಾಲಘಟ್ಟದಲ್ಲಿ ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಗಳು ಬರೀ ಪ್ರಾಣಿಗಳಾಗಿ ಉಳಿದಿಲ್ಲ. ಅವು ಕುಟುಂಬದ ಅವಿಭಾಜ್ಯ ಅಂಗವಾಗಿ ಅತಿ ಮುದ್ದಿನಿಂದ ಬೆಳೆಯುತ್ತಿವೆ. ತಾವು ತಿನ್ನುವ ಆಹಾರವನ್ನು ತಮ್ಮ ಮುದ್ದುಪ್ರಾಣಿಗಳಿಗೂ ಹಂಚಿ ಖುಷಿಪಡಿಸುವ ಮಾಲೀಕರ ಕುರುಡುಪ್ರೇಮವೇ ಸಾಕುಪ್ರಾಣಿಗಳ ಪಾಲಿಗೆ ವಿಷವಾಗುತ್ತಿದೆ! ತಮ್ಮ ನಾಲಿಗೆಗೆ ರುಚಿ ನೀಡುವ ಸಿಹಿ ತಿನಿಸು, ಬಿಸ್ಕತ್ತು, ಬ್ರೆಡ್, ಪಿಜ್ಜಾ, ಬರ್ಗರ್, ಕರಿದ ತಿಂಡಿಯಂತಹ ಸಂಸ್ಕರಿತ ಆಹಾರ ಪದಾರ್ಥಗಳನ್ನು ನಾಯಿಗೂ ತಿನ್ನಿಸುತ್ತಿದ್ದಾರೆ. ಮಾನವನ ದೇಹಕ್ಕೆ ಹಾನಿ ಮಾಡುವ ಈ ಜಂಕ್ ತಿನಿಸುಗಳು ಪ್ರಾಣಿಗಳಿಗೆ ಮತ್ತಷ್ಟು ಅಪಾಯಕಾರಿ ಎಂಬ ಅರಿವು ಬಹುತೇಕ ಸಾಕಣೆದಾರರಿಗಿಲ್ಲ. ಹಸಿವನ್ನಷ್ಟೇ ಇಂಗಿಸಿ ತೃಪ್ತಿ ಸಿಗುವಂತೆ ಮಾಡುವ, ಆದರೆ ಪೌಷ್ಟಿಕಾಂಶದ ದೃಷ್ಟಿಯಿಂದ ಅತ್ಯಂತ ಕಳಪೆಯಾಗಿರುವ ಈ ತಿಂಡಿಗಳ ಹಾವಳಿಯು ನಾಯಿಗಳ ಸ್ವಾಭಾವಿಕ ಜೈವಿಕ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದು, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬದಲಾದ ಆಹಾರಶೈಲಿಯಿಂದ ಅವುಗಳ ಸಹಜ ಚೈತನ್ಯ, ಉತ್ಸಾಹ ಕುಂದುವ ಜೊತೆಗೆ ಜೀವಿತಾವಧಿಯೂ ಆತಂಕಕಾರಿಯಾಗಿ ಕುಸಿಯುತ್ತಿದೆ.
ನಾಯಿ, ಬೆಕ್ಕುಗಳ ಜೀರ್ಣಕ್ರಿಯೆಯು ಮನುಷ್ಯರಿಗಿಂತ ಭಿನ್ನವಾಗಿದೆ. ನಮ್ಮ ಆಹಾರದಲ್ಲಿ ಅತಿಯಾಗಿ ಬಳಸುವ ಉಪ್ಪು, ಸಕ್ಕರೆ, ಎಣ್ಣೆ, ಮಸಾಲೆ ಪದಾರ್ಥಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಈ ಪ್ರಾಣಿಗಳಿಗಿಲ್ಲ. ಮೊದಲೇ ಜಂಕ್ ಆಹಾರಗಳಲ್ಲಿ ಪೌಷ್ಟಿಕಾಂಶದ ಪ್ರಮಾಣ ಕಡಿಮೆ. ಜೊತೆಗೆ ಅವುಗಳಲ್ಲಿರುವ ಕೃತಕ ಬಣ್ಣಗಳು, ಸಂರಕ್ಷಕಗಳು, ರುಚಿಕಾರಕ ರಾಸಾಯನಿಕಗಳು ಪ್ರಾಣಿಗಳ ಅಂಗಾಂಗಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಜಂಕ್ ಫುಡ್‌ನಲ್ಲಿರುವ ಸಕ್ಕರೆ ರೂಪದ ಅತಿಯಾದ ಕ್ಯಾಲೊರಿಗಳು ತುಂಬಾ ವೇಗವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಈ ಅತಿ ಬೊಜ್ಜಿನಿಂದಾಗಿ ಮೂಳೆ, ಕೀಲುಗಳ ಮೇಲೆ ಒತ್ತಡ ಬಿದ್ದು ಬೇಗನೆ ನಡೆಯಲಾಗದ ಸ್ಥಿತಿ ತಲಪುತ್ತವೆ. ಸಂಧಿವಾತ, ಉಸಿರಾಟದ ಸಮಸ್ಯೆಗಳು, ಮಧುಮೇಹ, ಥೈರಾಯ್ಡ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.
ನಾಯಿ–ಬೆಕ್ಕುಗಳಲ್ಲೂ ಮಾನವರಂತೆ ಜೀವನಶೈಲಿ ಕಾಯಿಲೆಗಳು ಈಗ ಹೆಚ್ಚು ಹೆಚ್ಚಾಗಿ ಕಾಣಿಸುತ್ತಿವೆ. ಇದಕ್ಕೆ ಕಾರಣ ಮಾನವನೇ. ತಾನು ತಿನ್ನುವುದನ್ನೆಲ್ಲ ತನ್ನ ಸಾಕುಪ್ರಾಣಿಗಳಿಗೆ ತಿನ್ನಿಸುತ್ತಿರುವುದರಿಂದ ಅವುಗಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಮೊದಲೇ ಪಟ್ಟಣಗಳಲ್ಲಿ ಸಾಕಲಾಗುತ್ತಿರುವ ಹೆಚ್ಚಿನ ನಾಯಿಗಳಿಗೆ ಓಡಾಡಲು ಸಾಕಷ್ಟು ಸ್ಥಳವಿಲ್ಲ. ‘ಪಂಜರದ ಗಿಣಿ’ಗಳಾದ ಕಾರಣ ಶಾರೀರಿಕ ವ್ಯಾಯಾಮವೂ ಆಗುತ್ತಿಲ್ಲ. ಸದಾ ಮಾಲೀಕನ ಕುಟುಂಬದ ಜೊತೆಯಲ್ಲೇ ಇರುವುದರಿಂದ ಮನೆಯ ಎಲ್ಲಾ ಸದಸ್ಯರ ಆಹಾರದ ಒಂದೊಂದು ಪಾಲು ನಾಯಿ ಹೊಟ್ಟೆ ಸೇರುತ್ತಿದೆ! ‘ನೀವು ತಿನ್ನುವುದನ್ನೆಲ್ಲಾ ನಾಯಿಗಳಿಗೆ ಹಾಕಬೇಡಿ, ಇದರಿಂದ ಅವುಗಳ ಆರೋಗ್ಯ ಕೆಡುತ್ತದೆ’ ಎಂದು ಮಾಲೀಕರಿಗೆ ಎಚ್ಚರಿಸಿದರೆ, ‘ಅಯ್ಯೋ ಅದೆಲ್ಲಾ ಎಲ್ಲಿ ಆಗುತ್ತೆ? ನಾವು ತಿನ್ನುವುದನ್ನೇ ಆಸೆಯಿಂದ ನೋಡ್ತಿರ್ತವೆ, ಕೊಡದೆ ಬಿಡೋದೇ ಇಲ್ಲ. ಪಾಪ! ಅವಕ್ಕೆ ಹಾಕದೆ ಬರೀ ನಾವಷ್ಟೇ ತಿನ್ನಲಿಕ್ಕೆ ಹೇಗೆ ಆಗುತ್ತೆ?’ ಎಂಬ ಉದ್ದುದ್ದ ಸಮಜಾಯಿಷಿ ಬೇರೆ. ಇದು ಸಾಕುಪ್ರಾಣಿಗಳನ್ನು ನಮ್ಮ ಡೈನಿಂಗ್ ಹಾಲ್, ಮಲಗುವ ಕೋಣೆ, ಅಡುಗೆಮನೆಗಳಿಗೆ ಧಾರಾಳವಾಗಿ ಬಿಟ್ಟುಕೊಂಡಿರುವುದರ ಪರಿಣಾಮ. ಹೌದು, ಮನೆಯಲ್ಲಿ ನಾಯಿಗೇ ನಿಗದಿಪಡಿಸಿದ ನಿರ್ದಿಷ್ಟ ಜಾಗವಿರಬೇಕು. ಅದು ಮನೆಯೊಳಗೆ ಮುಕ್ತವಾಗಿ ಓಡಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಆಹಾರ, ಕಾಯಿಲೆ ಸೇರಿದಂತೆ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುವ ಪರಿಸ್ಥಿತಿ ಬರುತ್ತದೆ.
ಕರಿದ ತಿಂಡಿ, ಜಂಕ್ ಆಹಾರಗಳಲ್ಲಿ ಯಥೇಚ್ಛ ಬಳಸುವ ಈರುಳ್ಳಿ, ಬೆಳ್ಳುಳ್ಳಿಗಳು ನಾಯಿಗಳಿಗೆ ವಿಷಕಾರಿ. ಇವು ಕೆಂಪು ರಕ್ತಕಣಗಳಿಗೆ ಹಾನಿ ಮಾಡಿ ರಕ್ತಹೀನತೆಗೆ ಕಾರಣವಾಗುತ್ತವೆ. ಚಾಕೊಲೇಟ್‌ನಲ್ಲಿರುವ ಥಿಯೋಬ್ರೋಮಿನ್, ಕೆಫೀನ್‌ನಂತಹ ಅಂಶಗಳನ್ನು ಅವು ಜೀರ್ಣಿಸಿಕೊಳ್ಳಲಾರವು. ಈ ರಾಸಾಯನಿಕಗಳು ಅವುಗಳ ನರಮಂಡಲ, ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅತಿಯಾದ ಸಕ್ಕರೆ, ಕೆಫೀನ್ ಅಂಶ ಮೆದುಳಿನ ಮೇಲೆ ಪ್ರಭಾವ ಬೀರುವುದರಿಂದ ಪ್ರಾಣಿಗಳು ಆಕ್ರಮಣಕಾರಿ ವರ್ತನೆ ತೋರಬಹುದು. ತಮ್ಮ ಮುದ್ದು ಪ್ರಾಣಿಗಳಿಗೆ ಪ್ರತಿನಿತ್ಯ ಟೀ, ಕಾಫಿ ಕುಡಿಸುವ ಅಭ್ಯಾಸ ಹಲವರದ್ದು. ಈ ಪಾನೀಯಗಳಲ್ಲಿರುವ ಕೆಫೀನ್ ಅಂಶ ಹೃದಯದ ಬಡಿತವನ್ನು ಅಸಹಜಗೊಳಿಸಿ ದೀರ್ಘಾವಧಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಒಣದ್ರಾಕ್ಷಿಯ ನಿರಂತರ ಸೇವನೆ ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗುತ್ತದೆ.
ಬೆಕ್ಕು, ನಾಯಿಗಳಿಗೆ ಸಿಹಿ ಅಪಾಯಕಾರಿ. ಸಿಹಿ ಪದಾರ್ಥಗಳನ್ನು ತುಂಬಾ ಇಷ್ಟದಿಂದಲೇ ತಿನ್ನುವ ಇವು ವಾಂತಿ, ಭೇದಿ, ಹೊಟ್ಟೆಯುಬ್ಬರ ಸಮಸ್ಯೆಯಿಂದ ಬಳಲುತ್ತವೆ. ಹುಳುಕು ಹಲ್ಲು, ಬೊಜ್ಜು, ಸಂಧಿವಾತ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳೂ ಕಾಣಿಸಿಕೊಳ್ಳಬಹುದು. ಸಿಹಿ ತಿಂಡಿ, ಜಂಕ್ ಆಹಾರ ಅಲರ್ಜಿ, ಚರ್ಮರೋಗಗಳಿಗೂ ಕಾರಣವಾಗುತ್ತದೆ. ಜಂಕ್ ಆಹಾರದಲ್ಲಿರುವ ಹೆಚ್ಚಿನ ಉಪ್ಪು, ಖಾರ, ಮಸಾಲೆ ಅಂಶಗಳಿಂದ ಜಠರದ ಒಳ ಆವರಣದಲ್ಲಿ ಹುಣ್ಣುಗಳಾಗಿ ಗ್ಯಾಸ್ಟ್ರಿಕ್ ತೊಂದರೆಗಳು ಶುರುವಾಗುತ್ತವೆ. ಎಣ್ಣೆಯಲ್ಲಿ ಕರಿದ ತಿಂಡಿ, ಕೊಬ್ಬಿನ ಅಂಶ ಹೆಚ್ಚಿರುವ ಪದಾರ್ಥಗಳು ಮೇದೋಜೀರಕ ಗ್ರಂಥಿಯ ಉರಿಯೂತಕ್ಕೆ ಕಾರಣವಾಗಬಹುದು. ಇದರಿಂದ ತೀವ್ರ ಹೊಟ್ಟೆನೋವು, ವಾಂತಿಯಂತಹ ತೊಂದರೆಗಳಾಗಿ ಮಾರಣಾಂತಿಕ ಸ್ಥಿತಿ ತರಬಹುದು. ಗೋಲ್ಡನ್ ರಿಟ್ರೀವರ್, ಲೆಬ್ರಡಾರ್, ಡಾಬರ್‌ಮನ್‌ನಂತಹ ಶ್ವಾನ ತಳಿಗಳಲ್ಲಿ ಬದಲಾದ ಆಹಾರ ಪದ್ಧತಿಯ ಕಾರಣ ಥೈರಾಯ್ಡ್ ತೊಂದರೆಗಳು ಹೆಚ್ಚು ಕಾಣಿಸುತ್ತಿವೆ.
ಸಾಕುಪ್ರಾಣಿಗಳೊಂದಿಗೆ ಮಾನವನ ಅನುಬಂಧ, ಒಡನಾಟವನ್ನೇ ಬಂಡವಾಳ ಮಾಡಿಕೊಂಡು ನಾಯಿ–ಬೆಕ್ಕುಗಳ ಪೌಷ್ಟಿಕ ಆಹಾರದ ಹೆಸರಿನಲ್ಲಿ ವಿವಿಧ ಬಗೆಯ ತಿನಿಸುಗಳು ಮಾರುಕಟ್ಟೆಗೆ ದಾಂಗುಡಿಯಿಡುತ್ತಿವೆ. ಇವುಗಳ ಗುಣಮಟ್ಟ ಖಾತರಿಪಡಿಸಿಕೊಳ್ಳುವುದು ಸುಲಭದ ಕಾರ್ಯವಲ್ಲ. ಕಳಪೆ ಗುಣಮಟ್ಟದ, ಕಲಬೆರಕೆಯ ತಿನಿಸುಗಳು ಖಂಡಿತವಾಗಿಯೂ ಸಾಕುಪ್ರಾಣಿಗಳ ಆರೋಗ್ಯಕ್ಕೆ ಮಾರಕ. ಹಾಗಾಗಿ, ಆಹಾರದ ವಿಷಯದಲ್ಲಿ ರಾಜಿ ಸಲ್ಲದು. ಜವಾಬ್ದಾರಿಯುತ ಮಾಲೀಕರಾಗಿ ಮಾರುಕಟ್ಟೆಯಲ್ಲಿನ ಆಕರ್ಷಕ ಪ್ಯಾಕೆಟ್ ಆಹಾರಗಳಿಗಿಂತ, ಮನೆಯ ಊಟಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಮನೆಯಲ್ಲಿ ನಾವು ನಿತ್ಯ ಉಣ್ಣುವ ಸಾಂಪ್ರದಾಯಿಕ ಆಹಾರವನ್ನೇ ಸಾಕುಪ್ರಾಣಿಗಳಿಗೆ ಅಭ್ಯಾಸ ಮಾಡಿಸುವುದು ಒಳ್ಳೆಯದು. ಬೀನ್ಸ್, ಕ್ಯಾರೆಟ್, ಸೌತೆಕಾಯಿಯಂತಹ ತರಕಾರಿಗಳು, ಬೀಜ ತೆಗೆದ ಸೇಬುಹಣ್ಣು, ಬೇಯಿಸಿದ ಮೊಟ್ಟೆ ಊಟದ ಭಾಗವಾಗಿರಲಿ. ಜೊತೆಗೆ ಕೊಡುವ ಆಹಾರ ಹಿತಮಿತವಾಗಿರುವಂತೆ, ಬೊಜ್ಜು ಬಾರದಂತೆ ಜಾಗೃತಿ ವಹಿಸಬೇಕು. ಮನೆಯ ಮಕ್ಕಳಂತೆ ನಾಯಿ–ಬೆಕ್ಕುಗಳೂ ದುಂಡು ದುಂಡು ಕಾಣಬೇಕೆಂದು ಹೆಚ್ಚಿನ ಉಪಚಾರ ಮಾಡದೆ, ಸಪೂರವಾಗಿ, ಲವಲವಿಕೆಯಿಂದ ಇರುವುದೇ ಆರೋಗ್ಯ ಎಂಬುದನ್ನು ಸಾಕುವವರು ಮನಗಾಣಬೇಕಿದೆ. ನಿಸ್ಸಹಾಯಕ ಜೀವಿಗಳಿಗೆ ಆಹಾರದ ವಿಷಯದಲ್ಲಿ ವಿವೇಚನೆಯಿಲ್ಲದೆ ತೋರುವ ಅತಿ ಮಮತೆಯೂ ಒಂದರ್ಥದಲ್ಲಿ ಪ್ರಾಣಿ ಕ್ರೌರ್ಯವೇ.
ಬಹುಮುಖ್ಯವಾಗಿ, ನಾಯಿ ಸಾಕಲು ನಿರ್ಧರಿಸುವ ಮುಂಚೆ ಓಡಾಟಕ್ಕೆ ಸಾಕಷ್ಟು ಸ್ಥಳವಿದೆಯೇ; ಅದಕ್ಕೆ ವ್ಯಾಯಾಮ, ವಾಕಿಂಗ್ ಮಾಡಿಸಲು, ಜೊತೆಗೆ ಒಡನಾಡಲು, ಅನಾರೋಗ್ಯದ ಸಂದರ್ಭದಲ್ಲಿ ನೋಡಿಕೊಳ್ಳಲು ಸಮಯವಿದೆಯೇ; ಚಿಕ್ಕ ಮನೆ, ದೊಡ್ಡ ವಸತಿ, ಅಪಾರ್ಟ್‌ಮೆಂಟ್‌ಗೆ ಯಾವ ತಳಿ ಸೂಕ್ತ ಎಂದು ಯೋಚಿಸಿ, ಸಲಹೆ ಪಡೆದು, ಕುಟುಂಬದವರೊಂದಿಗೆ ಚರ್ಚಿಸಿ ಮುಂದುವರಿಯುವುದು ಒಳಿತು. ನಾಯಿ–ಬೆಕ್ಕುಗಳು ಮುಗ್ಧ ಪ್ರಾಣಿಗಳು, ಅವುಗಳಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬ ಅರಿವಿಲ್ಲ. ಹಾಗಾಗಿ, ಅವುಗಳ ವಸತಿಯ ಕುರಿತಾಗಲಿ, ಆಹಾರದ ವಿಷಯವಾಗಲಿ, ಆರೈಕೆಯ ವಿಚಾರವಾಗಲಿ ಮಾಲೀಕರೇ ಹೆಚ್ಚು ಜವಾಬ್ದಾರಿ, ವಿವೇಚನೆಯಿಂದ ನಡೆದುಕೊಳ್ಳಬೇಕಿದೆ. ‘ಒಂದು ರಾಷ್ಟ್ರದ ಶ್ರೇಷ್ಠತೆ ಮತ್ತು ಅದರ ನೈತಿಕ ಪ್ರಗತಿಯನ್ನು ಅಲ್ಲಿನ ಪ್ರಾಣಿಗಳನ್ನು ನಡೆಸಿಕೊಳ್ಳುವ ರೀತಿಯಿಂದ ಅಳೆಯಬಹುದು’ ಎನ್ನುವ ಮಹಾತ್ಮ ಗಾಂಧೀಜಿಯ ಮಾತನ್ನು ಪ್ರಾಣಿಗಳ ಸಾಂಗತ್ಯದಲ್ಲಿರುವವರೆಲ್ಲ ಸದಾ ನೆನಪಿಡಬೇಕು.
ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.