ADVERTISEMENT

ವಿಶ್ಲೇಷಣೆ | ರಾಜ–ದೈವ: ಎಲ್ಲಿದೆ ಮಾದರಿ?

ಡಾ.ಬಸವರಾಜ ಸಾದರ
Published 17 ಸೆಪ್ಟೆಂಬರ್ 2025, 23:30 IST
Last Updated 17 ಸೆಪ್ಟೆಂಬರ್ 2025, 23:30 IST
ಡಾ. ಬಸವರಾಜ ಸಾದರ
ಡಾ. ಬಸವರಾಜ ಸಾದರ   
ರಾಜಕಾರಣಿಗಳು, ದೇವರುಗಳು ಹೇಗಿರಬೇಕು ಎನ್ನುವುದಕ್ಕೆ ಉತ್ತಮ ನಿದರ್ಶನಗಳು ಸಾಹಿತ್ಯ ಕೃತಿಗಳಲ್ಲಿ ಹಾಗೂ ಜಾನಪದದಲ್ಲಿ ದೊರಕುತ್ತವೆ. ಕಟ್ಟ ಕಡೆಯವನ ಹಿತವನ್ನೂ ಬಯಸುವ ಆ ಮಾದರಿಗಳನ್ನು ನಾವು ಹುಡುಕಿಕೊಳ್ಳಬೇಕು ಹಾಗೂ ಅವುಗಳನ್ನು ವರ್ತಮಾನದ ರಾಜಕಾರಣಿಗಳು ಮತ್ತು ಜನಪ್ರಿಯ ದೇವರುಗಳ ಜೊತೆ ಹೋಲಿಸಿ ಚರ್ಚಿಸಬೇಕು.

ವರ್ತಮಾನದ ಪರಿಸ್ಥಿತಿಯಲ್ಲಿ ನಂಬಲು ಸಾಧ್ಯವೇ ಇರದ, ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಪುರಾಣ ಪರಂಪರೆಯ ಮಾತೊಂದು ನಮ್ಮಲ್ಲಿದೆ. ದೇವರಾಗುವ ಮಾತಿರಲಿ, ರಾಕ್ಷಸರೇ ಆಗಿ ಜನರ ಶೋಷಣೆ ಮಾಡುತ್ತ, ದೇಶವನ್ನೇ ಹರಾಜು ಹಾಕುವ ಸ್ಥಿತಿಗೆ ತಳ್ಳುವ ರಾಜಕಾರಣಿಗಳೇ ಹೆಚ್ಚಾಗುತ್ತಿದ್ದಾರೆ. ವಿಶ್ವದ ಅನೇಕ ರಾಷ್ಟ್ರಗಳು ಬೆಂಕಿಯಲ್ಲಿ ಬೇಯುತ್ತಿರುವುದು ಹಾಗೂ ದಿವಾಳಿಯಂಚು ತಲಪುತ್ತಿರುವುದು ಇಂಥ ರಾಕ್ಷಸಿ ಪ್ರವೃತ್ತಿಯ ರಾಜಕಾರಣಿಗಳಿಂದಲೇ. ಇಂಥವರನ್ನು ‘ಪ್ರತ್ಯಕ್ಷ ದೇವರುಗಳು’ ಎಂದರೆ ಹಾಸ್ಯಾಸ್ಪದ ಆಗಲಿಕ್ಕಿಲ್ಲವೆ?

ಆಳುವವನ ಕೃಪೆ ತಮಗಿರಲಿ ಎಂದೋ, ತಮ್ಮ ಮೇಲೆ ಸಿಟ್ಟಾಗದಿರಲೆಂದೋ ರಾಜನನ್ನು ‘ಪ್ರತ್ಯಕ್ಷ ದೇವತೆ’ ಎಂದು ಜನ ಸಂಬೋಧಿಸುತ್ತಿದ್ದರೆಂದು ತೋರುತ್ತದೆ. ಅಂಥ ರಾಜರುಗಳನ್ನು ‘ಬಹು ಪರಾಕ್’ ಎಂದು ಹಾಡಿ–ಹೊಗಳಿ ಅಟ್ಟಕ್ಕೇರಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿತ್ತು ಒಂದು ವರ್ಗ. ವಾಸ್ತವವೇನೆಂದರೆ, ಬಹುತೇಕ ರಾಜರು ಪ್ರಜಾವಾತ್ಸಲ್ಯಕ್ಕಿಂತ, ತಮ್ಮ ಕುಟುಂಬವತ್ಸಲರೂ, ಯುದ್ಧ ಮಾಡಿ ರಾಜ್ಯ ವಿಸ್ತಾರವನ್ನು ಹೆಚ್ಚಿಸಿ ಕೊಳ್ಳುವವರೂ, ವಂಶಪಾರಂಪರ್ಯ ಆಡಳಿತದಲ್ಲೇ ಹೆಚ್ಚು ಮುತುವರ್ಜಿ ವಹಿಸುತ್ತಿದ್ದವರೂ, ಹೆಚ್ಚು ರಾಣಿಯರನ್ನು ಹೊಂದುವಲ್ಲಿ ಆಸಕ್ತರಾದವರೂ ಹಾಗೂ ಜನತೆಯಿಂದ ಸುಂಕ ವಸೂಲಿ ಮಾಡುತ್ತ ಬೊಕ್ಕಸವನ್ನು ತುಂಬಿಕೊಳ್ಳುವವರೂ ಆಗಿರುತ್ತಿದ್ದುದು ಇತಿಹಾಸದ ಪುಟಗಳಿಂದ ತಿಳಿಯುತ್ತದೆ. ಪುರಾತನ ರಾಜರುಗಳ ಇಂಥ ನಡತೆಗಳೇ ಇಂದಿನ ರಾಜಕಾರಣಿಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅತ್ಯಾಚಾರ, ದರ್ಪ, ಧಾರ್ಷ್ಟ್ಯ– ಹೀಗೆ ವಿವಿಧ ಮುಖಗಳನ್ನು ತೊಟ್ಟು ಪ್ರಜೆಗಳಿಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿವೆ. ಒಟ್ಟಾರೆ, ಪ್ರಜೆಗಳ ಹಿತಾಸಕ್ತಿಯನ್ನು ಕಾಯಬೇಕಾದ ಪ್ರಜಾಪ್ರಭುತ್ವವು ಈ ಬಗೆಯ ರಾಜಕಾರಣಿಗಳಿಂದಾಗಿ ತನ್ನ ನಿಜಾರ್ಥ ಕಳೆದುಕೊಂಡು, ಹಳೆಯ ‘ರಾಜಪ್ರಭುತ್ವ’ವೇ ಆಗಿ ಇಡೀ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದೆ.

ಇಂಥ ಹೊತ್ತಲ್ಲಿ, ಯಾವ ಕಾಲದ ರಾಜಕಾರಣಿಗಳೂ ಅನುಸರಿಸಬೇಕಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಕ್ರಿಯಾತ್ಮಕವಾಗಿ ಜಾರಿಗೆ ತಂದು ತೋರಿಸಿದ ‘ಕೆಲವರಾದರೂ’ ರಾಜರುಗಳು ಆಗಿ ಹೋಗಿರುವುದು ಮುಖ್ಯವಾಗುತ್ತದೆ. ಅಂಥವರು, ಶೋಷಿತರು, ನೊಂದವರು, ಬಡವರು ಮತ್ತು ದಲಿತರ ಬಗ್ಗೆ ಅಪಾರ ಕಾಳಜಿ ತೋರಿಸಿ, ಅವರಿಗೆ ಸಲ್ಲಬೇಕಾದ ಮಾನವಹಕ್ಕುಗಳನ್ನು ದೊರಕಿಸಿಕೊಟ್ಟು, ಅವರೂ ಎಲ್ಲರಂತೆ ಸಮಾನರು ಎಂಬ ಸಂದೇಶವನ್ನು ಸಾರಿದ್ದಾರೆ. ರಾಜರುಗಳಷ್ಟೇ ಅಲ್ಲ, ನಮ್ಮ ಅನೇಕ ಜನಪದ ದೇವರುಗಳೂ ಇಂಥದ್ದೇ ಕೆಲಸ ಮಾಡಿ ತೋರಿಸಿ, ಪರಂಪರಾಗತ ಸ್ಥಾಪಿತ ದೇವರುಗಳ ಮುಖದ ಮೇಲೆ ಹೊಡೆಯುವಂಥ ಮಾನವೀಯತೆ ಮೆರೆದಿದ್ದುಂಟು.

ADVERTISEMENT

ಚಂದ್ರಾಪೀಡ ಎಂಬ ರಾಜನೊಬ್ಬನ ಅನನ್ಯ ಉದಾಹರಣೆ ಗಮನಿಸಬಹುದು. ಕಾಶ್ಮೀರದ ಶ್ರೇಷ್ಠ ಕವಿ ಕಲ್ಹಣನು ತನ್ನ ಮಹತ್ವದ ಗ್ರಂಥ ‘ರಾಜತರಂಗಿಣಿ’ಯಲ್ಲಿ ಈತನ ಬಗ್ಗೆ ಪ್ರಸ್ತಾಪಿಸುತ್ತಾನೆ. ಹನ್ನೆರಡನೆಯ ಶತಮಾನದಲ್ಲಿದ್ದ ಚಂದ್ರಾಪೀಡನು, ಒಬ್ಬ ಬಡ ಹಾಗೂ ದಲಿತ ಚರ್ಮಕಾರನ ಹಕ್ಕುಗಳನ್ನು ಯಾವ ಬಗೆಯಲ್ಲಿ ರಕ್ಷಿಸಿಕೊಟ್ಟ ಎಂಬುದು ಹೃದಯಸ್ಪರ್ಶಿಯಾಗಿ ದಾಖಲಾಗಿದೆ.

ಚಂದ್ರಾಪೀಡನ ಅಧಿಕಾರಿಗಳು ರಾಜನ ಆರಾಧ್ಯ ದೈವವಾದ ತ್ರಿಭುವನ ಸ್ವಾಮಿಯ ದೇವಾಲಯವನ್ನು ಕಟ್ಟಿಸಲು ಆರಂಭಿಸುತ್ತಾರೆ. ದೇವಾಲಯಕ್ಕಾಗಿ ಅವರು ಗುರುತಿಸಿದ ಜಾಗದಲ್ಲಿದ್ದ ಚರ್ಮಕಾರನ ಗುಡಿಸಲಿರುತ್ತದೆ. ಆ ಜಾಗವನ್ನು ಖಾಲಿ ಮಾಡಲು ಆದೇಶಿಸಿದಾಗ, ಆತ ಒಪ್ಪುವುದಿಲ್ಲ. ಕೋಪಗೊಂಡ ಅಧಿಕಾರಿಗಳು ಗುಡಿಸಲನ್ನೇ ಕೆಡವಿ ಹಾಕಲು ಹೊರಟಾಗ, ಚರ್ಮಕಾರ ದೊರೆಯ ಹತ್ತಿರ ಹೋಗಿ, ‘ರಾಜನಿಗೆ ಅರಮನೆ ಪ್ರಿಯವಾದಂತೆ, ನನಗೆ ಈ ಗುಡಿಸಲೇ ಪ್ರಿಯವಾದದ್ದು. ಅದಕ್ಕಾಗಿ ಇದನ್ನು ಕೆಡವಬಾರದು’ ಎಂದು ಮನವಿ ಸಲ್ಲಿಸುತ್ತಾನೆ. ಆಗ ರಾಜ ನೀಡಿದ ಆದೇಶ ಅನನ್ಯವಾದುದಾಗಿದೆ:

‘ಅಧಿಕಾರಿಗಳೆ, ತಕ್ಷಣ ದೇವಾಲಯ ಕಟ್ಟುವುದನ್ನು ನಿಲ್ಲಿಸಿರಿ. ಕಟ್ಟುವುದೇ ಆದರೆ ಅದನ್ನು ಬೇರೆ ಕಡೆ ಮಾಡಿರಿ. ಬೇರೆಯವರ ಭೂಮಿಯನ್ನು ಕಸಿದುಕೊಂಡು ಅದರಲ್ಲಿ ದೇವಾಲಯ ಕಟ್ಟಿಸಿ ಯಾರು ತಮ್ಮ ಪುಣ್ಯವನ್ನು ಕಳೆದುಕೊಳ್ಳುತ್ತಾರೆ? ಸರಿ ಮತ್ತು ತಪ್ಪುಗಳನ್ನು ನಿರ್ಧರಿಸಬೇಕಾದ ನಾವೇ ಮನುಷ್ಯವಿರೋಧಿ ಹಾಗೂ ಧರ್ಮವಿರೋಧಿ ಕೆಲಸಗಳನ್ನು ಮಾಡಿದರೆ, ಬೇರೆಯವರು ಧರ್ಮ ಮಾರ್ಗದಲ್ಲಿ ನಡೆಯಲು ಸಾಧ್ಯವೆ?’

ರಾಜನ ಆದೇಶದ ಪರಿಣಾಮವಾಗಿ ಅಧಿಕಾರಿಗಳು ಅಲ್ಲಿ ದೇವಾಲಯ ಕಟ್ಟುವುದನ್ನು ನಿಲ್ಲಿಸಿ, ಚರ್ಮಕಾರನ ಗುಡಿಸಲನ್ನು ಉಳಿಸುತ್ತಾರೆ. ಇಷ್ಟಕ್ಕೇ ಮುಗಿಯುವುದಿಲ್ಲ ಘಟನೆ. ರಾಜನ ಉದಾರತೆ ಮೆಚ್ಚಿಕೊಳ್ಳುವ ಚರ್ಮಕಾರನು, ಅತ್ಯಂತ ಕೃತಜ್ಞತೆಯಿಂದ, ‘ರಾಜಧರ್ಮವನ್ನು ಅನುಸರಿಸಿ, ಬೇರೆಯವರಿಗೆ ಯಾವುದೇ ಹಾನಿಯಿಲ್ಲದೇ ಅನುಕೂಲ ಮಾಡಿಕೊಡುವುದೇ ನಿಜವಾದ ರಾಜರಿಗೆ ಭೂಷಣವಾದದ್ದು. ಇಂಥ ನಿನ್ನ ನಡೆ ನಿನಗೆ ಮಂಗಲವನ್ನುಂಟು ಮಾಡಲಿ. ನಿನ್ನ ರಾಜಧರ್ಮದ ನೀತಿಯು ಈ ನೆಲದಲ್ಲಿ ಬಹಳ ಕಾಲ ಉಳಿಯಲಿ. ಯಾಕೆಂದರೆ, ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ರಾಜರುಗಳಿಗೆ ನಿನ್ನ ಈ ನಡೆ ನಂಬಿಕೆಯನ್ನು ಉಂಟು ಮಾಡುವಂಥದ್ದು’ ಎಂದೂ ಹರಸುತ್ತಾನೆ.

ಇದೇ ಮಾದರಿಯಲ್ಲಿ, ನಮ್ಮ ಜನಪದ ದೇವರು ಗಳೂ ಜನಸಾಮಾನ್ಯರ ನೋವು–ನಲಿವುಗಳಿಗೆ ಸ್ಪಂದಿಸಿದ್ದು ಕುತೂಹಲಕಾರಿಯಾಗಿದೆ. ಕವಿ ಸಿದ್ಧಲಿಂಗಯ್ಯ ಅವರು, ಲೇಖಕ ದೇವನೂರ ಮಹಾದೇವ ಅವರಿಗೆ ಹೇಳಿದ ಜನಪದ ಕಥೆ ಯೊಂದು ಗಮನ ಸೆಳೆಯುವಂತಿದೆ. ಆ ಐತಿಹ್ಯಾತ್ಮಕ ಘಟನೆ ಸ್ವಾರಸ್ಯಕರವಾಗಿಯಷ್ಟೇ ಅಲ್ಲ, ನಮ್ಮ ದೇಶಿ ಹಾಗೂ ಜನಪದ ದೇವರುಗಳು ಹೇಗೆ ಜನರ ಸಂಕಷ್ಟಗಳಿಗೆ ಮಿಡಿಯುತ್ತವೆ ಎಂಬ ಕುತೂಹಲಕಾರಿ ವಾಸ್ತವವನ್ನೂ ಕಟ್ಟಿಕೊಡುತ್ತದೆ. ಕಥೆ ಹೀಗಿದೆ:

ಒಂದು ಊರಲ್ಲಿ, ಆ ಊರಿನ ಜನರೆಲ್ಲಾ ಸೇರಿ, ಗ್ರಾಮದೇವತೆ ಮಂಚಮ್ಮನಿಗೆ ಗುಡಿ ಕಟ್ಟಲು ಯೋಚಿಸುತ್ತಾರೆ. ಕಟ್ಟುವ ಕೆಲಸ ಒಂದು ಹಂತಕ್ಕೆ ಬಂದಾಗ, ಒಮ್ಮೆಲೇ ಮಂಚಮ್ಮ ಒಬ್ಬ ವ್ಯಕ್ತಿಯ ಮೈಯಲ್ಲಿ ಆವಾಹನೆಗೊಂಡು, ‘ನಿಲ್ಲಿಸಿ ನನ್ನ ಮಕ್ಳಾ’ ಎಂದು ಉಗ್ಗಡಿಸುತ್ತಾಳೆ. ದೇವಿಯ ದನಿ ಕೇಳಿದ ಗ್ರಾಮಸ್ಥರು ಅಚ್ಚರಿಪಡುತ್ತಾರೆ; ತಮ್ಮಿಂದ ಏನೋ ದೋಷ ಆಗಿರಬೇಕೆಂಬ ಭಯ ಅವರಿಗೆ. ತಮಗೆ ಹಾಗೂ ಊರಿಗೆ ಏನು ಕೇಡಾಗುತ್ತದೆಯೋ ಎಂದು ಭಯಭೀತರಾಗಿ ನಿಂತಿದ್ದಾಗಲೇ ಮಂಚಮ್ಮ ಅವರಿಗೆ, ‘ಮಕ್ಕಳಾ ಇದೇನು? ನೀವೆಲ್ಲಾ ಸೇರಿ ಏನು ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸುತ್ತಾಳೆ. ‘ತಾಯಿ ನಿನಗೆ ಗುಡಿ ಇಲ್ಲವಲ್ಲ; ಅದಕ್ಕಾಗಿ ಗುಡಿ ಕಟ್ಟಿಸ್ತಾ ಇದ್ದೇವೆ’ ಎಂದು ಉತ್ತರಿಸುತ್ತಾರೆ. ‘ಓಹೋ ಹಾಗಾ? ಅಂದ್ರೆ ನೀವು ನನಗೆ ಗುಡಿ ಕಟ್ಟಿಸ್ತಿದ್ದೀರಿ ಅಂತಾಯ್ತು’. ‘ಹೌದು ತಾಯಿ’ ಎನ್ನುತ್ತಾರೆ ಅವರೆಲ್ಲ. ಆಗ ಮಂಚಮ್ಮ, ‘ಹಾಗಿದ್ರೆ, ಇಲ್ಲಿರುವ ನಿಮಗೆಲ್ಲಾ ಮನೆಗಳು ಇವೆಯಾ?’ ಎಂದು ಪ್ರಶ್ನೆ ಕೇಳುತ್ತಾಳೆ. ಕೂಡಲೇ ಜನರಲ್ಲೊಬ್ಬ, ‘ಇಲ್ಲ ತಾಯಿ, ನನಗೆ ಮನೆಯಿಲ್ಲ’ ಎನ್ನುತ್ತಾನೆ. ತಕ್ಷಣ ದೇವಿ, ‘ಹಾಗಿದ್ದರೆ, ಈ ಊರಲ್ಲಿ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಗುಡಿ ಬೇಡ’ ಎಂದು ಹೇಳಿದವಳೇ ಆವಾಹನೆಗೊಂಡ ವ್ಯಕ್ತಿಯಿಂದ ಹೋಗಿಬಿಡುತ್ತಾಳೆ.

ದೇವಿಯ ಮಾತನ್ನು ಮೀರಲು ಸಾಧ್ಯವೆ? ದೇವಿಗೆ ಗುಡಿ ಕಟ್ಟುವುದೇ ಬೇಡ ಎಂದು ಊರವರು ನಿರ್ಧರಿಸಿ, ಮಂಚಮ್ಮನನ್ನು ಬಟಾಬಯಲಿನಲ್ಲಿಯೇ ಪೂಜಿಸತೊಡಗುತ್ತಾರೆ. ಅಂದಿನಿಂದ ಆ ದೇವಿಯ ಹೆಸರು, ‘ಮನೆ ಮಂಚಮ್ಮ’.  

ನಮ್ಮ ಜನಪದ ದೇವರುಗಳು ಹೇಗೆ ಮನುಷ್ಯಪರ ಮತ್ತು ಜೀವಪರ ಕರುಣೆ ಮತ್ತು ಕಾಳಜಿ ಹೊಂದಿದ್ದವೆಂಬುದಕ್ಕೆ ಮಂಚಮ್ಮನ ಕಥೆ ಸಾಕ್ಷಿ. ಈ ಕಥೆಯಲ್ಲಿ ಬರೀ ಕರುಣೆಯೊಂದೇ ಇಲ್ಲ; ಸರ್ವರನ್ನೂ ಸಮಾನವಾಗಿ ಕಾಣುವ ಹಾಗೂ ಸರ್ವರಿಗೂ ಅವರ ಎಲ್ಲ ಆವಶ್ಯಕತೆಗಳು ಸಮಾನವಾಗಿಯೇ ದೊರೆಯಬೇಕೆಂಬ ಆಶಯ ಗಾಢವಾಗಿದೆ.

ನಮ್ಮ ಹೊಲಗಳ ಬದುವುಗಳಲ್ಲಿ, ಊರುಗಳ ಹೊರಗೆ, ಊರ ಗಡಿಗಳಲ್ಲಿ, ಗಿಡಗಳ ಬುಡದಲ್ಲಿ, ಮಂಚಮ್ಮನಂಥ ಅನೇಕ ದೇಸಿ ದೇವರುಗಳು ಈಗಲೂ ಬಯಲಲ್ಲೇ ಪೂಜೆಗೊಳ್ಳುತ್ತವೆ. ಕರೆವ್ವ, ಮರೆವ್ವ, ಕೆಂಚವ್ವ, ಬಂದವ್ವ, ಕಾಳವ್ವ, ಗಾಳೆವ್ವ, ಹೀಗೆ ನೆಲದ ದನಿಬನಿಯ ಹೆಸರುಗಳು ಅವುಗಳಿಗಿದ್ದು, ಅವೆಲ್ಲವೂ ಜನರ ಹೃದಯದೊಳಗಿಂದಲೇ ಉದಿಸಿದ ದೇವರುಗಳು. ಹಾಗಾಗಿಯೇ ಅವು ಜನರ ಉದ್ಧಾರವನ್ನೇ ತಮ್ಮ ಆಶಯ ಮತ್ತು ಗುರಿಯನ್ನಾಗಿ ಹೊಂದಿರುತ್ತವೆ. ಇದಕ್ಕೆ ವಿರುದ್ಧವೆಂಬಂತೆ ನಮ್ಮ ಅನೇಕ ದೊಡ್ಡ ದೊಡ್ಡ ದೇವರುಗಳು ಬೃಹತ್ ದೇವಾಲಯಗಳಲ್ಲಿ ಪ್ರತಿಷ್ಠಾಪನೆಗೊಂಡು, ಬಂಗಾರ, ವಜ್ರ–ವೈಢೂರ್ಯಗಳಲ್ಲೇ ಮರೆಯಾಗಿ, ಹಾಲು–ತುಪ್ಪ–ಜೇನಿನಿಂದ ಅಭಿಷೇಕಗೊಳ್ಳುತ್ತ, ಶ್ರೀಮಂತರ ‘ದೇವಾಲಯೋದ್ಯಮ’ಕ್ಕೆ ಸಾಕಷ್ಟು ನೆರವಾಗುತ್ತಿವೆ. ಇದೇ ಬಹುದೊಡ್ಡ ದೇವದುರಂತ!

ನಮ್ಮ ಇಂದಿನ ಧರ್ಮಕ್ಷೇತ್ರ ಮತ್ತು ರಾಜಕೀಯ ವಲಯಗಳು ಚಂದ್ರಾಪೀಡನಂಥ ರಾಜಕಾರಣಿಗಳ ಹಾಗೂ ಮನೆ ಮಂಚಮ್ಮನಂಥ ದೇವರುಗಳ, ಮನುಷ್ಯಪರ ಮತ್ತು ಜೀವಪರ ಕಾಳಜಿಗಳಿಂದ ಪಾಠ ಕಲಿಯುವ ಅಗತ್ಯವಿದೆ. ಜೀವಜಗತ್ತಿನ ನೋವಿಗೆ ಮಿಡಿಯುವ ಸಂವೇದನೆಗಳೇ ಇಲ್ಲದ ದೇವರಿಂದ ಅಥವಾ ರಾಜಕಾರಣಿಗಳಿಂದ ಜಗತ್ತಿಗೆ ಅದೆಂಥ ಒಳಿತಾಗಲು ಸಾಧ್ಯ?

ಈಗ ನಮಗೆ ಬೇಕಿರುವುದು ಚಂದ್ರಾಪೀಡನಂಥ ರಾಜಕಾರಣಿಗಳು ಹಾಗೂ ಮನೆ ಮಂಚಮ್ಮನಂಥ ದೇವರುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.