ಅಮಾನವೀಯ ಕೃತ್ಯವೆಸಗಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ, ಈ ಹೊತ್ತಿನ ಶಿಕ್ಷಣ ಕ್ರಮದ ವೈಫಲ್ಯದ ಸಂಕೇತವೂ ಹೌದು. ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹಾಗೂ ಸಮಾಜದ ಆರೋಗ್ಯಕ್ಕೆ ಕಾರಣವಾಗಬೇಕಿದ್ದ ‘ವಿದ್ಯೆ’, ವ್ಯಕ್ತಿಯನ್ನು ಟೊಳ್ಳಾಗಿಸುತ್ತಿದೆ. ವಿದ್ಯೆಯನ್ನು ‘ವ್ಯಂಗ್ಯ’ವಾಗಿಸುವ ಮೂಲಕ ದುರಿತ ಕಾಲವನ್ನು ಸೃಷ್ಟಿಸುವ ಕೆಲಸದಲ್ಲಿ ಸಮಾಜ ತೊಡಗಿಕೊಂಡಿರುವುದು ದುರದೃಷ್ಟಕರ ಸಂಗತಿ.
‘ಕಲ್ಲುಬಂಡೆಯಂತೆ ನಿಂತ ಸಂತ್ರಸ್ತೆ’ –ವಿಶೇಷ ತನಿಖಾ ತಂಡದ (ಎಸ್ಐಟಿ) ಈ ಮಾತಿಗೆ ನಮ್ಮ ಕಾಲದಲ್ಲಿ ವಿಶೇಷ ಮಹತ್ವವಿದೆ. ಬಡ ಹೆಣ್ಣುಮಗಳೊಬ್ಬಳು ಪ್ರಕರಣ ಗೆದ್ದಿರುವುದು ಮತ್ತು ಅತಿ ಬಲಿಷ್ಠನೊಬ್ಬನಿಗೆ ಕಠಿಣ ಶಿಕ್ಷೆ ಆಗಿರುವುದು ಈ ಕಾಲದ ಅತಿದೊಡ್ಡ ಭರವಸೆಯೂ ಹೌದು.
ವ್ಯಂಗ್ಯವೊಂದನ್ನು ಗಮನಿಸಬೇಕಾಗಿದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿ, ಕೊನೆಯ ಪ್ರಯತ್ನವಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಎಂದು ನ್ಯಾಯಾಲಯವನ್ನು ಕೇಳಿಕೊಳ್ಳುವಾಗ ಪ್ರಜ್ವಲ್ ರೇವಣ್ಣ ಕೊಟ್ಟ ಕಾರಣ: ತಾನು ‘ವಿದ್ಯಾವಂತ’ನಾಗಿರುವುದು ಮತ್ತು ಹಾಸನವನ್ನು ‘ಆಳಿರುವುದು’! ಪ್ರಜ್ವಲ್ ಮಾತುಗಳನ್ನು ಕೇಳಿದ ಯಾರಿಗಾದರೂ, ವಿದ್ಯೆ ಎಂದರೆ ಏನು? ಅದು ನೆನಪಾಗಬೇಕಾದ ಸಂದರ್ಭ ಯಾವುದು? ಎನ್ನುವ ಪ್ರಶ್ನೆಗಳು ಕಾಡದೇ ಇರಲಾರವು.
ಮನೆಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಾಕೆಗೆ ಬದುಕುವ ಛಲ, ಹೋರಾಡುವ ಛಲ, ಕೋಟ್ಯಂತರ ರೂಪಾಯಿಗಳ ಆಮಿಷವನ್ನು ನಿರಾಕರಿಸುವ ದೃಢತೆ ಎಲ್ಲಿಂದ ಬಂತು? ಆಕೆ ಹೆಚ್ಚು ‘ವಿದ್ಯಾವಂತೆ’ ಇರಲಿಕ್ಕಿಲ್ಲ. ಆಕೆಯಿಂದ ಬದುಕಿನ ಪಾಠ ಕಲಿತಿದ್ದಿದ್ದರೆ ಕೋರ್ಟಿನಲ್ಲಿ ಶಿಕ್ಷೆ ಕಡಿಮೆ ಮಾಡಿ ಎಂದು ಗೋಗರೆಯುವ ಪ್ರಮೇಯ ಪ್ರಜ್ವಲ್‌ಗೆ ಬರುತ್ತಿರಲಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರನ್ನು ಯಾರೂ ಆಳುವುದಕ್ಕೆ ಆಯ್ಕೆ ಮಾಡಿರುವುದಿಲ್ಲ, ಸೇವೆ ಮಾಡುವುದಕ್ಕೆ ಆಯ್ಕೆ ಮಾಡುತ್ತಾರೆ; ಇಲ್ಲೀಗ ಯಾರೂ ರಾಜ ಮಹಾರಾಜರಲ್ಲ ಎನ್ನುವುದು ವಿದ್ಯಾವಂತನಿಗೆ ತಿಳಿಯಲಿಲ್ಲವಲ್ಲ! ದೋಷ ವಿದ್ಯೆಯದೇ? ವ್ಯಕ್ತಿಯದೇ? ಅಥವಾ ಇದ್ಯಾವುದನ್ನೂ ವ್ಯಕ್ತಿಗೆ ನೆನಪು ಮಾಡಿಕೊಡದ ಸಮಾಜದ್ದೇ? ವಿದ್ಯೆ ಎಂದರೆ ಅಹಂಕಾರವೇ? ವಿದ್ಯಾವಂತರಲ್ಲದವರಿಗೆ ಶಿಕ್ಷೆ ಕೊಟ್ಟುಬಿಡಬಹುದೇ? ಬರಿಯ ಪದವಿ ಪಡೆದಾಕ್ಷಣ ಅವರು ‘ಶ್ರೇಷ್ಠ’ರೆನಿಸಿಕೊಳ್ಳುತ್ತಾರೆಯೇ? ನಿಜವಾಗಿಯೂ ವಿದ್ಯಾವಂತ ಎನ್ನಿಸಿಕೊಂಡವರು ಇಂತಹ ಅಪರಾಧಗಳನ್ನೇ ಮಾಡಬಾರದಲ್ಲವೇ? ಶಿಕ್ಷಣ ದುರಹಂಕಾರವನ್ನು ದಯಪಾಲಿಸುವುದಾದರೆ ಅಂತಹ ಶಿಕ್ಷಣ ಯಾಕಾಗಿ ಬೇಕು?
ಶಿವರಾಮ ಕಾರಂತರ ‘ಕನ್ನಡಿಯಲ್ಲಿ ಕಂಡಾತ’ ಕಾದಂಬರಿಯಲ್ಲಿ ಪರಮೇಶ್ವರ ಎಂಬ ‘ವಿದ್ಯಾವಂತ’ ಇದ್ದಾನೆ. ಐವತ್ತರ ದಶಕದ ಆಚೀಚೆಯ ಕಾಲದಲ್ಲೇ ಹೆಡ್‌ಮೇಷ್ಟ್ರಾದ ಆತನಿಗೆ ನನ್ನಿಂದಲೇ ಬೇರೆಯವರು ಬದುಕಿದ್ದಾರೆ ಎಂಬ ಅಹಂ. ತನಗೆ ಯಾರ ಋಣವೂ ಇಲ್ಲ ಎಂದುಕೊಂಡವನು. ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಹೆಂಡತಿ ಮಕ್ಕಳು, ತಂದೆ–ತಾಯಿ, ಒಡಹುಟ್ಟಿದವರು ಯಾರೇ ಇರಲಿ, ಬರೀ ದಂಡಿಸುವ, ದೂಷಿಸುವ, ಪೀಡಿಸುವ ಆತನಿಗೆ ಅವನ ತಪ್ಪು ಎಂದೂ ಕಾಣಿಸುವುದಿಲ್ಲ. ಹೆಂಡತಿ ಮಕ್ಕಳಿಗೆ ಬುದ್ಧಿ ಕಲಿಸುತ್ತೇನೆ ಎಂದು ಊರು ಬಿಡುತ್ತಾನೆ. ಆದರೆ, ಅವನ ಎಣಿಕೆಯಂತೆ ಯಾರೂ ಅವನಿಗಾಗಿ ಕಾಯುವುದಿಲ್ಲ. ಅದರಿಂದ ಮುಖಭಂಗವಾಗಿ ಹಿಂತಿರುಗದೆ, ದೇಶವೆಲ್ಲ ಅಲೆದು, ಒಮ್ಮೆ ಕಾಡಿನ ದಾರಿಯಲ್ಲಿ ಪ್ರಜ್ಞೆತಪ್ಪಿ ಬೀಳುತ್ತಾನೆ. ಜೀವಂತ ಶವ ಆಗಿದ್ದ ಆತನನ್ನು ಮಂಜಪ್ಪ ಎನ್ನುವವರು ತಮ್ಮ ಮನೆಯಲ್ಲಿ ತಿಂಗಳುಗಟ್ಟಲೆ ನೋಡಿಕೊಂಡು ಬದುಕಿಸಿಕೊಳ್ಳುತ್ತಾರೆ. ಆ ಮನೆ ಅವನಿಗೆ ಅವನನ್ನೇ ಕಾಣಿಸತೊಡಗುತ್ತದೆ.
ಮಂಜಪ್ಪ ಎಲ್ಲರನ್ನೂ ಅಕ್ಕರೆಯಿಂದ ನೋಡುವ ವ್ಯಕ್ತಿತ್ವದವರು. ತಮ್ಮ ನಡೆಯಿಂದ ಇಡೀ ಮನೆಗೆ ಮಾದರಿ ಹಾಕಿಕೊಟ್ಟ ಹಿರಿಯರು. ಮನೆ ಮಂದಿಯೆಲ್ಲರೂ ಕಲೆತು ಬದುಕುವುದನ್ನು ನೋಡುತ್ತಾ, ತಾನು ಹೇಗೆ ಕ್ಷುದ್ರನಾಗಿದ್ದೆ ಎಂಬುದು ಪರಮೇಶ್ವರನಿಗೆ ಅರಿವಾಗುತ್ತದೆ. ಶಾಲೆಯ ಶಿಕ್ಷಣ ಸಿಗದ ಮಂಜಪ್ಪ ತಮ್ಮ ಮಕ್ಕಳಿಗೆ ಮನೆಯಲ್ಲೇ ಮೇಷ್ಟ್ರನ್ನು ಇಟ್ಟು ಓದಿಸಬಲ್ಲ ಅನುಕೂಲಸ್ಥರಾಗಿದ್ದರೂ, ಊರಿಗೊಂದು ಶಾಲೆ ಕಟ್ಟುವ ಕನಸು ಕಂಡವರು. ಅದಕ್ಕಾಗಿ ಶ್ರಮ ಹಾಕಿದವರು. ಆ ಊರ ಶಾಲೆಯಲ್ಲಿ ಮತ್ತೆ ಮೇಷ್ಟ್ರಾದ ಪರಮೇಶ್ವರ ಮೊದಲ ಬಾರಿಗೆ ಬೆತ್ತರಹಿತ ಪಾಠವನ್ನೂ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವನ್ನೂ ಅನುಷ್ಠಾನಕ್ಕೆ ತಂದು, ತಾನೂ ಕಲಿಯುತ್ತಾ, ಸಾಮುದಾಯಿಕ ಕಲಿಕೆಯಲ್ಲಿರುವ ಖುಷಿಯು ಮನುಷ್ಯರನ್ನು ಬೆಸೆಯುವ ಸಂಜೀವಿನಿ ಎಂಬುದನ್ನು ಕಂಡುಕೊಳ್ಳುತ್ತಾನೆ. ಇದನ್ನು ಇಂದಿನ ನಾವು ಕಂಡುಕೊಳ್ಳುತ್ತಿದ್ದೇವೆಯೇ?
ಶಿಕ್ಷಣವನ್ನು ಎಲ್ಲರಿಗೂ ಸಮಾನವಾಗಿ ಕೊಡದೆ ಅನುಕೂಲವಂತರ ಪರವಾಗಿ ವಿಭಜಿಸಿದ್ದರ ಪರಿಣಾಮ ಎಷ್ಟು ಅಪಾಯಕಾರಿ ಎಂಬುದು ಸಮಾಜಕ್ಕಾಗಲೀ, ಸರ್ಕಾರಗಳಿಗಾಗಲೀ ಅರಿವಿಗೆ ಬಂದಂತಿಲ್ಲ. ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳು ದೇಶದಲ್ಲಿ ವಿರಳ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳಿದ್ದವಾದರೂ, ಹೆಚ್ಚಿನವು ಸರ್ಕಾರಿ ಶಾಲೆಗಳೇ ಆಗಿದ್ದವು. ಅವುಗಳಲ್ಲಿ ಸ್ಥಳೀಯ ಮತ್ತು ಆಸುಪಾಸಿನ ಊರುಗಳ ಎಲ್ಲ ಜಾತಿ, ಧರ್ಮಗಳ ಮಕ್ಕಳು ಓದುತ್ತಿದ್ದರು. ಲೋಕದಲ್ಲಿರುವ ಬಡತನ, ವೈವಿಧ್ಯಮಯ ಜೀವನಕ್ರಮಗಳು, ಸಹಕಾರದಿಂದ ಬದುಕಬೇಕಾದ ಅನಿವಾರ್ಯತೆ, ಇನ್ನೊಬ್ಬರ ಕಷ್ಟ– ಸುಖಗಳು ಎಲ್ಲವೂ ಶಾಲೆಯಲ್ಲಿ ಮಕ್ಕಳ ಅನುಭವಕ್ಕೆ ಬರುತ್ತಿದ್ದವು. ಅಲ್ಲಿ ಕೊರತೆಗಳೇ ಇರಲಿಲ್ಲ ಎಂದಲ್ಲ. ಆದರೆ, ಸಮಾಜ ಎಂದರೆ ಏನು ಎಂಬುದು ಮಕ್ಕಳಿಗೆ ತಿಳಿಯುತ್ತಿತ್ತು. ಇವತ್ತು ಶಾಲೆಗಳೇ ಶ್ರೇಣೀಕರಣವನ್ನು ಕಲಿಸುವ ಮೊದಲ ಮೆಟ್ಟಿಲುಗಳಾಗಿವೆ. ಮಧ್ಯಮ ವರ್ಗದ ಮಕ್ಕಳಿಗೆ ಕೂಡ ಬಡ ಮಕ್ಕಳ ಸ್ಥಿತಿ ಏನೆಂಬುದು ಗೊತ್ತಿಲ್ಲ. ಹೆಚ್ಚಿನ ಮಕ್ಕಳಿಗೆ ಇನ್ನೊಂದು ಧರ್ಮದ ಮಕ್ಕಳ ಜೊತೆಗೆ ಒಡನಾಡುವ ಸನ್ನಿವೇಶವೇ ಎದುರಾಗುವುದಿಲ್ಲ. ಅವರ ಮನಸ್ಸುಗಳೊಳಗೆ ಸಂಶಯದ ಬೀಜ ಹುಟ್ಟಿಸಿದರೆ ಅದು ಮುಂದೆ ಬೃಹತ್ತಾಗಿ ಬೆಳೆಯುವುದರ ಬಗೆಗೆ ಸಂಶಯವೇ ಇಲ್ಲ. ಒಂದು ರೀತಿಯಲ್ಲಿ ಇವರೆಲ್ಲಾ ಈ ಸಂಶಯದ ಫಲವಾದ ಹೆದರುಪುಕ್ಕಲರು ಆಗುತ್ತಿದ್ದಾರೆ.
‘ಶಿಕ್ಷಣ ಎಂಬುದು ಮಾನವ ಹಕ್ಕು’ ಎಂದು ಹೇಳಿದ್ದ ಜ್ಯೋತಿಬಾ ಫುಲೆ, ಅದನ್ನು ತಾವು ಮಂಡಿಸುವ ಶಿಕ್ಷಣದ ತತ್ವವಾಗಿಸಿಕೊಂಡಿದ್ದರು. ಶಿಕ್ಷಣದ ಕೊರತೆಯು ಚುರುಕುಮತಿಯ ಲೋಪಕ್ಕೆ ಕಾರಣವಾಗುತ್ತದೆ. ಅದರಿಂದ ನ್ಯಾಯ ವಂಚನೆಯಾಗುತ್ತದೆ. ಪ್ರಗತಿ ಕುಂಠಿತವಾಗುತ್ತದೆ. ತಳಜಾತಿಗಳು ಬಡತನದಲ್ಲೇ ಉಳಿಯುತ್ತವೆ. ಅವರ ಬಡತನ ಅವರ ದಮನಕ್ಕೆ ಕಾರಣವಾಗುತ್ತದೆ ಎನ್ನುವ ಫುಲೆಯವರು, ಜಾತಿ, ಜನಾಂಗ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಶಿಕ್ಷಣದ ಸೌಲಭ್ಯ ಸಿಗಬೇಕು ಎಂಬ ಚಿಂತನೆ ಪ್ರತಿಪಾದಿಸಿದವರು. ಶಿಕ್ಷಣವು ಸಮಾಜವನ್ನು ಜೊತೆಗೂಡಿಸುವ ಶಕ್ತಿಯಾಗಿ ಕೆಲಸ ಮಾಡಬೇಕು. ಕೃಷಿ ಮತ್ತು ಆರೋಗ್ಯದ ಪ್ರಾಥಮಿಕ ಜ್ಞಾನವನ್ನು ಪಠ್ಯಕ್ರಮದೊಳಗೆ ಅಳವಡಿಸಬೇಕು ಎಂಬುದು ಅವರ ಸಲಹೆಯಾಗಿತ್ತು. 1882ರಲ್ಲಿ ‘ಹಂಟರ್ ಕಮಿಷನ್’ಗೆ ಅವರು ಬರೆದ ಪತ್ರದಲ್ಲಿರುವ ಈ ಅಂಶಗಳು ಇಂದಿಗೂ ಬಹಳ ಮುಖ್ಯವಾದುವು ಮಾತ್ರವಲ್ಲ, ಇಂದಿಗೂ ಸಂಪೂರ್ಣವಾಗಿ ಜಾರಿಗೆ ಬರದೇ ಇರುವ ಸಂಗತಿಗಳೂ ಆಗಿವೆ.
ಇವತ್ತು ಸಮಾನ ಶಿಕ್ಷಣ ಎನ್ನುವುದು ‘ಎಲ್ಲರಿಗೂ ಇಂಗ್ಲಿಷ್ ಮಾಧ್ಯಮ’ ಎಂಬ ಸೀಮಿತ ಯೋಚನೆಗೆ ಬಂದು ತಲುಪಿದೆ. ಇದು ನವಶ್ರೇಣೀಕರಣದ ಮೆಟ್ಟಿಲ ಮೇಲೆ ನಮಗೂ ದೊರೆತಿರುವ ಪ್ರವೇಶ ಅಷ್ಟೇ ಎಂಬ ಅರಿವು ನಮ್ಮೊಳಗಿನ್ನೂ ಇಳಿದಿಲ್ಲ. ವಾಸ್ತವ ಜಗತ್ತಿಗೆ ಗೋಡೆ ಕಟ್ಟಿಕೊಂಡ ಒಂದೇ ವರ್ಗದ, ಕೆಲವೇ ಜಾತಿಗಳ ಮಕ್ಕಳು, ನೆಲದ ನಡೆ–ನುಡಿಯಿಂದ ವಂಚಿತರಾಗಿ, ತಾವೇ ಶ್ರೇಷ್ಠರು ಎಂದು ಬೀಗುವುದನ್ನೇ ದೊಡ್ಡಸ್ತಿಕೆ ಎಂದು ಬಿತ್ತುವ ಶಿಕ್ಷಣ ಕ್ರಮಕ್ಕೆ ನಾವು ವೇಗವಾಗಿ ಜಾರುತ್ತಿದ್ದೇವೆ. ಇದು ಅಂತರಂಗ ಬಹಿರಂಗಗಳ ನಡುವೆ ಸಂಘರ್ಷವನ್ನು ಹುಟ್ಟು ಹಾಕುತ್ತಿದೆ. ಇದೆಲ್ಲದರ ಪರಿಣಾಮವಾಗಿ ಖಿನ್ನತೆಗೆ ಒಳಗಾಗುತ್ತಾ, ಬದುಕನ್ನೇ ಅಂತ್ಯಗೊಳಿಸಿಕೊಳ್ಳುವ ಮಕ್ಕಳ ಸುದ್ದಿಗಳು ನಮ್ಮನ್ನು ಆತಂಕಗೊಳಿಸುತ್ತಿವೆ. ಆದರೆ, ನಾವ್ಯಾರೂ ವರ್ತಮಾನದ ದುರಂತಗಳಿಗೆ ನಿಜ ಕಾರಣವನ್ನು ಸಾಮಾಜಿಕ ವ್ಯವಸ್ಥೆಯೊಳಗೆ ಹುಡುಕಲು ತಯಾರಿಲ್ಲ. ನಮ್ಮೊಳಗೆ ಎಂತಹ ಮೂಲಭೂತವ್ಯಾಧಿ ತುಂಬಿಕೊಂಡಿದೆಯೆಂದರೆ, ಸರ್ಕಾರಿ ಶಾಲೆಯಲ್ಲಿ ಎಲ್ಲ ರೀತಿಯ ಮಕ್ಕಳ ಜೊತೆ ನಮ್ಮ ಮಕ್ಕಳು ಕಲಿತರೆ, ಅವರು ‘ಏನೆಲ್ಲಾ’ ಕಲಿಯುವರೋ ಎಂಬ ಪೂರ್ವಗ್ರಹವಿದೆ.
ಒಂದು ಕೌತುಕವನ್ನು ಗಮನಿಸಬೇಕು. ಬಡತನ ಹಾಸಿ ಉಂಡು, ಮಳೆ ಚಳಿಯಲ್ಲಿ ಬೇಯುವ ಮಕ್ಕಳು ಬದುಕುವ ದಾರಿಯನ್ನು ಧ್ಯಾನಿಸುತ್ತಾರೆಯೇ ಹೊರತು ಸಾವಿನೆಡೆಗೆ ಧಾವಿಸುವುದಿಲ್ಲ. ಲೋಕವನ್ನು ನರಕವೆಂದು ಭಾವಿಸಿ ಬದುಕಿಗೆ ವಿಮುಖ ಆಗುತ್ತಿರುವವರಲ್ಲಿ ಅನುಕೂಲಸ್ಥರ ಮಕ್ಕಳೇ ಹೆಚ್ಚು. ಮಕ್ಕಳನ್ನು ಸದಾ ಒಂದು ಕಣ್ಣಿಟ್ಟು ಕಾಯುವುದೇ ‘ಪೇರೆಂಟಿಂಗ್’ ಎಂಬಂತೆ ಬಿಂಬಿಸಲಾಗುತ್ತಿದೆ. ‘ಬೀದಿ ಮಕ್ಕಳು ಬೆಳೆದೋ’ ಎಂಬ ಜಾನಪದ ಸಾಲಿಗಿಂತ ನೀತಿ ಬೇಕಾಗಿಲ್ಲ. ಆದರೆ, ಕೂತರೆ ನಿಂತರೆ ಇನ್ನೊಬ್ಬರೊಂದಿಗೆ ಹೋಲಿಸುವುದು, ಚಿಕ್ಕ ಮಕ್ಕಳ ಎದುರು ಪಕ್ಷ ರಾಜಕೀಯವನ್ನು ಮಾತಾಡುವುದು, ದ್ವೇಷ ಅಸೂಯೆಯನ್ನು ಎಗ್ಗಿಲ್ಲದೆ ಪ್ರದರ್ಶಿಸುವುದು ಹಿರಿಯರ ಚಾಳಿಯಾಗಿದೆ. ಮಕ್ಕಳೂ ಅದನ್ನೇ ಕಲಿಯುತ್ತಿದ್ದಾರೆ. ಅದರಿಂದ ಹತಾಶೆಗೆ ಒಳಗಾಗುತ್ತಿದ್ದಾರೆ. ಮಕ್ಕಳು ಆಟೋಟಗಳಲ್ಲಿ ಮುಳುಗಿ ತಮ್ಮದೇ ಪ್ರತಿ ಜಗತ್ತು ಸೃಷ್ಟಿಸಿಕೊಂಡರೆ ಅವರೊಳಗೆ ಖಾಲಿತನ ಕಾಡುವುದಿಲ್ಲ.
ಒಂದೋ ಮೇಲರಿಮೆ, ಇಲ್ಲವೇ ಕೀಳರಿಮೆಯನ್ನು ಸೃಷ್ಟಿಸುತ್ತಿರುವ ಶ್ರೇಣೀಕೃತ ಶಿಕ್ಷಣದ ಒಂದು ರೋಗ ಚಿಹ್ನೆಯಾಗಿ ಪ್ರಜ್ವಲ್ ರೇವಣ್ಣನ ಮಾತು ಎಚ್ಚರಿಕೆಯ ಗಂಟೆಯಂತೆ ಧ್ವನಿಸುತ್ತಿದೆ. ಜಾತಿ, ಧರ್ಮ, ವರ್ಗ, ಲಿಂಗ ಶ್ರೇಷ್ಠತೆಯ ಅಹಂಗಳು ಕೊಚ್ಚಿ ಹೋಗಿ, ನಿಷ್ಕಲ್ಮಶ ಸ್ನೇಹಭಾವದ ಉದ್ದೀಪನವು ಮನುಷ್ಯನ ಒಳಗನ್ನು ಮತ್ತು ಹೊರಗನ್ನು ಪೊರೆಯುವ ಮಂತ್ರವಾಗಬೇಕು. ಅದರ ಮೊದಲ ಮೆಟ್ಟಿಲಾಗಿ, ಪ್ರಾಥಮಿಕ ಶಿಕ್ಷಣವನ್ನಾದರೂ ರಾಷ್ಟ್ರೀಕರಣಗೊಳಿಸುವುದು ತುರ್ತಾಗಿ ಆಗಬೇಕಿರುವ ಕೆಲಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.