ಸ್ನೇಹಿತರೊಬ್ಬರ ಮಗಳ ದ್ವಿತೀಯ ಪಿಯುಸಿ ಫಲಿತಾಂಶ ಏನಾಯಿತು ಎಂದು ವಿಚಾರಿಸಿದಾಗ ‘ಅಷ್ಟೇನೂ ಚೆನ್ನಾಗಿ ಸ್ಕೋರ್ ಆಗಿಲ್ಲ ಸರ್, ಒಳ್ಳೆಯ ಕಾಲೇಜು ಮತ್ತು ಫೇಮಸ್ ಕೋಚಿಂಗ್ ಸೆಂಟರ್ ಎರಡಕ್ಕೂ ಸೇರಿಸಿದ್ದೆ, ಏನೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಕಾಲೇಜಿನ ಶುಲ್ಕಕ್ಕಿಂತ ಡಬಲ್ ಹಣ ಪೇ ಮಾಡಿದ್ದೆ, ಟ್ಯೂಷನ್ ಸೆಂಟರ್‌ನವರು ಮೋಸ ಮಾಡಿಬಿಟ್ರು’ ಎಂದವರೇ ‘ಕಾಲೇಜಿನವರು ಹೇಳಿಕೊಟ್ಟದ್ದನ್ನೇ ಕಲಿತಿದ್ದರೆ ಸಾಕಿತ್ತು ಅಂತ ಈಗ ಅನ್ನಿಸುತ್ತಿದೆ’ ಎಂದು ಮರುಗಿದರು.
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ಮೂರು ವಾರಗಳಾಗಿವೆ. ಹೆಚ್ಚಿನ ಅಂಕ ಪಡೆದವರು ಸಂಭ್ರಮದಲ್ಲಿದ್ದಾರೆ. ಕಡಿಮೆ ಪಡೆದವರು ಮರುಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ಒಳ್ಳೆಯ ಕಾಲೇಜು, ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳಿಗೆ ಸೇರಿಸಿದ್ದರೂ ಮಕ್ಕಳಿಗೆ ಬರಬೇಕಾಗಿದ್ದ ಅಂಕಗಳು ಬಂದಿಲ್ಲ ಎಂಬ ಬೇಜಾರಿನಲ್ಲಿರುವ ಪೋಷಕರು, ಶಿಕ್ಷಣ ವ್ಯವಸ್ಥೆಯ ಬಗ್ಗೆ ಭ್ರಮನಿರಸನಗೊಂಡಿದ್ದಾರೆ.
ಶಾಲೆ– ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವುದಕ್ಕಿಂತ ಮುಂಚೆ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಹುಡುಕುವ ಪರಿಪಾಟ ನಮ್ಮಲ್ಲಿ ಜಾಸ್ತಿಯಾಗಿದೆ. ಕೆಲವು ಪ್ರತಿಷ್ಠಿತ ಕೋಚಿಂಗ್ ಕೇಂದ್ರಗಳಲ್ಲಿ ದಾಖಲಾತಿ ಪಡೆಯಲು ಹಣವಷ್ಟೇ ಅಲ್ಲ ಮಂತ್ರಿಗಳ ಶಿಫಾರಸು ಸಹ ಬೇಕಾಗುತ್ತದೆ! ಕೋಚಿಂಗ್ ಸೆಂಟರ್ ಸೇರಿಕೊಳ್ಳುವ ವಿದ್ಯಾರ್ಥಿಗಳು ಕಾಲೇಜಿನ ಪಾಠ, ಪ್ರಯೋಗಗಳಿಗಿಂತಕೋಚಿಂಗ್ ಕೇಂದ್ರದ ಕೆಲಸಗಳಿಗೆ ಆದ್ಯತೆ ನೀಡುತ್ತಾರೆ. ವಾರ್ಷಿಕ ಪರೀಕ್ಷೆ ಬರೆಯಲು ಒಂದು ಕಾಲೇಜು ಬೇಕಲ್ಲ ಎಂದು ಅಲ್ಲಿಗೆ ಸೇರಿಕೊಂಡಿರುತ್ತಾರೆ. ಕಾಲೇಜಿನ ಪಾಠವೇನಿದ್ದರೂ ಸೆಕೆಂಡರಿ, ಟ್ಯೂಷನ್‌ನಲ್ಲಿ ಹೇಳಿಕೊಡುವುದೇ ಮುಖ್ಯ ಎಂಬ ಭಾವನೆ ಅನೇಕ ಮಕ್ಕಳು ಹಾಗೂ ಪೋಷಕರಲ್ಲಿದೆ.
ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೋಚಿಂಗ್ ಸೆಂಟರ್‌ನವರು, ವಿಶೇಷ ಡಿಜಿಟಲ್ ಸಾಧನ-ಸೌಲಭ್ಯಗಳನ್ನು ಬಳಸಿ ಪಾಠ ಮಾಡುತ್ತೇವೆ, ನಮ್ಮಲ್ಲಿ ನುರಿತ ಅಧ್ಯಾಪಕರಿದ್ದಾರೆ, ಪ್ರತಿದಿನ ಬೆಳಿಗ್ಗೆ ಪರೀಕ್ಷೆ ನಡೆಸುತ್ತೇವೆ, ನೀಟ್, ಜೆಇಇ ಪಾಸಾದವರಿಂದ ಕೋಚಿಂಗ್ ಕೊಡಿಸುತ್ತೇವೆ, ಆಲ್ ಇಂಡಿಯಾ ಲೆವೆಲ್‌ನಲ್ಲಿ ನಮ್ಮ ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್‌ನೊಂದಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದುಕೊಂಡಿದ್ದಾರೆ ಎಂದೆಲ್ಲ ಜಾಹೀರಾತು ನೀಡಿ ಜನರನ್ನು ಆಕರ್ಷಿಸುತ್ತಾರೆ. ಇದನ್ನು ನಂಬಿ ವಿದ್ಯಾರ್ಥಿಗಳು ಕೋಚಿಂಗ್ಕೇಂ ದ್ರಗಳಿಗೆ ಸೇರಿಕೊಳ್ಳುತ್ತಾರೆ.
ಕಾಲೇಜಿನವರು ಹೇಳಿಕೊಡುವುದು ಸಾಕಾಗುವುದಿಲ್ಲ ಅಂತಲೋ ಕಾಲೇಜಿನಲ್ಲಿ ಟೀಚಿಂಗ್ ಸರಿ ಇಲ್ಲ ಎಂದೋ ಕೋಚಿಂಗ್ ಕ್ಲಾಸ್‌ಗೆ ಹಾಕಿದ್ದೇವೆ ಎನ್ನುವ ಪೋಷಕರು ಹೆಜ್ಜೆಗೊಬ್ಬರು ಸಿಗುತ್ತಾರೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿ, ಟರ್ಮ್ ಟೆಸ್ಟ್, ವಿಶೇಷ ತರಗತಿ, ರೆಮೆಡಿಯಲ್ ಕ್ಲಾಸ್ (ಪರಿಹಾರ ಬೋಧನೆ) ಎಂದೆಲ್ಲ ಕನಿಷ್ಠ ಆರು ಗಂಟೆ ಪಾಠ ಕೇಳಿಸಿಕೊಳ್ಳುತ್ತಾರೆ. ನಂತರ ಬೆಂಗಳೂರಿನಂತಹ ಊರುಗಳಲ್ಲಿ ಮನೆಗೂ ತೆರಳದೆ ನೇರ ಕೋಚಿಂಗ್ ಕೇಂದ್ರಗಳಿಗೆ ಹೋಗಿ ಮೂರರಿಂದ ನಾಲ್ಕು ತಾಸು ಅಲ್ಲಿನ ಪಾಠಗಳಿಗೆ ಕಿವಿಯಾಗುತ್ತಾರೆ. ಅಲ್ಲಿ ನೀಡುವ ಹೋಂವರ್ಕ್, ಟೆಸ್ಟ್‌ಗಳನ್ನು ಮಾಡಿ ಮುಗಿಸಿ ಮನೆ ತಲುಪುವ ವೇಳೆಗೆ ರಾತ್ರಿಯ ಊಟದ ಸಮಯ ಮುಗಿದಿರುತ್ತದೆ.
ಇಡೀ ದಿನ ದಣಿಯುವ ದೇಹ, ಮನಸ್ಸುಗಳಿಗೆ ವಿಶ್ರಾಂತಿಯ ವಿನಾ ಬೇರೇನೂ ಬೇಕೆನಿಸುವುದಿಲ್ಲ. ಆದರೂ ಮನೆಯವರ ಒತ್ತಾಯಕ್ಕೆ ಊಟದ ಶಾಸ್ತ್ರ ಮಾಡುವ ವಿದ್ಯಾರ್ಥಿಗಳು ಊಟವಾದ ತಕ್ಷಣ ನಿದ್ರೆಗೆ ಜಾರುತ್ತಾರೆ. ವರ್ಷದಲ್ಲಿ ಏಳೆಂಟು ತಿಂಗಳು ಹೀಗೇ ನಡೆಯುತ್ತಿರುತ್ತದೆ. ಹೊತ್ತಿಗೆ ಸರಿಯಾಗಿ ಊಟ, ವಿಶ್ರಾಂತಿ ದೊರಕದೆ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಬಳಲುತ್ತಾರೆ. ಆಟೋಟಗಳಿಗೆ ಸಮಯವೇ ದೊರಕುವುದಿಲ್ಲ. ಎಷ್ಟೋ ಶಾಲಾ-ಕಾಲೇಜುಗಳ ವೇಳಾಪಟ್ಟಿಯಲ್ಲಿ ಮನಸ್ಸನ್ನು ಪ್ರಫುಲ್ಲಗೊಳಿಸುವ, ಒತ್ತಡ ನಿವಾರಿಸುವ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವೇ ಇರುವುದಿಲ್ಲ.
ಒಂದನೇ ತರಗತಿಯಿಂದಲೇ ಮಕ್ಕಳನ್ನು ಮನೆಪಾಠಕ್ಕೆ ಕಳುಹಿಸುವ ಪೋಷಕರಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಂತದಲ್ಲಿ ಕೋಚಿಂಗ್ ಇಲ್ಲದಿದ್ದರೆ ಭವಿಷ್ಯವೇ ಇಲ್ಲ ಎಂಬ ಭಾವನೆ ಇದೆ. ಕಾಲೇಜಿನ ಶುಲ್ಕಕ್ಕಿಂತ ಕೋಚಿಂಗ್ ಕೇಂದ್ರದ ಶುಲ್ಕ ಹೆಚ್ಚಿರುತ್ತದೆ. ಆದರೂ ಕೋಚಿಂಗ್ ಕೇಂದ್ರಗಳು ಭರ್ತಿಯಾಗಿರುತ್ತವೆ.
ಐಐಟಿ ಮತ್ತು ಜೆಇಇ ಪರೀಕ್ಷೆಯ ತಯಾರಿಗೆ ಬೆಂಗಳೂರು, ಮಂಗಳೂರಿನ ಕೋಚಿಂಗ್ ಕೇಂದ್ರಗಳು ಸಾಲದು ಎನ್ನುವವರು ಹೆಚ್ಚಿನ ಕೋಚಿಂಗ್‌ಗಾಗಿ ರಾಜಸ್ಥಾನದ ‘ಕೋಟ’ಗೆ ತೆರಳುತ್ತಾರೆ. ಅಲ್ಲಿನಕೋಚಿಂಗ್ ಕೇಂದ್ರಗಳಲ್ಲಿ ಕಲಿತರೆ ಉತ್ತಮ ರ್‍ಯಾಂಕ್ ಸಿಗುವುದು ಗ್ಯಾರಂಟಿ ಎಂಬ ನಂಬಿಕೆ ಇದೆ. ಲಾಂಗ್ ಟರ್ಮ್ ಕೋಚಿಂಗ್ ಹೆಸರಿನಲ್ಲಿ ಕುಟುಂಬಗಳೇ ಒಂದೆರಡು ವರ್ಷಗಳ ಮಟ್ಟಿಗೆ ಕೋಟಕ್ಕೆ ಸ್ಥಳಾಂತರಗೊಳ್ಳುವುದೂ ಇದೆ.
ಇತ್ತೀಚಿನ ದಿನಗಳಲ್ಲಿ ಕಲಿಕೆಯ ಒತ್ತಡ ತಾಳಲಾಗದೆ, ಅಂದುಕೊಂಡ ಫಲಿತಾಂಶ ದೊರಕದೆ ನಿರಾಶರಾಗುವ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 2023ರಲ್ಲಿ ಕೋಟದಲ್ಲಿ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಹಿಂದಿನ ವರ್ಷ ಇಡೀ ದೇಶದಲ್ಲಿ ಪರೀಕ್ಷಾ ಕಾರಣಗಳಿಗಾಗಿ 13,044 ವಿದ್ಯಾರ್ಥಿಗಳು ಆತ್ಯಹತ್ಯೆಗೆ ಶರಣಾಗಿದ್ದರು. ಮನೆಯವರ ಒತ್ತಾಸೆ, ಶೈಕ್ಷಣಿಕ ಒತ್ತಡ, ಸಂಪನ್ಮೂಲಗಳ ಕೊರತೆ, ಅನಾರೋಗ್ಯವು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ದುರ್ಬಲಗೊಳಿಸಿಬಿಡುತ್ತವೆ.
ನೀಟ್ ಮತ್ತು ಜೆಇಇ ಪರೀಕ್ಷೆಗಳ ತಯಾರಿ ಒಂದು ರೀತಿಯಲ್ಲಿ 7ನೇ ತರಗತಿಯಿಂದಲೇ ಶುರುವಾಗುತ್ತದೆ. ದಿನಕ್ಕೆ 16-18 ಗಂಟೆಗಳ ಕಾಲ ಓದುವುದರಲ್ಲಿ ಮಗ್ನರಾಗುವ ಎಳೆಯರು ಬರೀ ಆರು ಗಂಟೆ ನಿದ್ರಿಸುತ್ತಾರೆ. ಓದಿನ ಜೊತೆ ಆಟೋಟ, ವಿನೋದಗಳಲ್ಲಿ ಸಮಯ ಕಳೆಯಬೇಕಾದ ಮಕ್ಕಳು ಪೋಷಕರ ನಿರ್ಧಾರದಂತೆ ಕೋಚಿಂಗ್ ವ್ಯವಸ್ಥೆಯ ಭಾಗವಾಗಿ ಶಾಲೆ, ಟ್ಯೂಷನ್, ವಿಶೇಷ ತರಗತಿ, ಮಾಕ್ ಎಕ್ಸಾಮ್ ಎಂದೆಲ್ಲ ಸದಾ ಪುಸ್ತಕಗಳ ಜೊತೆಯೇ ಇರುತ್ತಾರೆ.
ಕೋಚಿಂಗ್‌ನ ಅಡ್ಡಪರಿಣಾಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹಲವು ಕಠಿಣ ನಿಯಮಗಳನ್ನು ರೂಪಿಸಿದೆ. 16ರ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳನ್ನು ಕೋಚಿಂಗ್ ಕೇಂದ್ರಗಳಿಗೆ ಸೇರಿಸಿಕೊಳ್ಳುವಂತಿಲ್ಲ, ಕೋಚಿಂಗ್ ಉದ್ಯಮವು ಗ್ರಾಹಕ ರಕ್ಷಣಾ ಕಾಯ್ದೆಗೆ ಒಳಪಡುತ್ತದೆ, ವಿದ್ಯಾರ್ಥಿಯು ತರಬೇತಿಯ ನಡುವೆಯೇ ಕೋಚಿಂಗ್ ಕೇಂದ್ರ ತೊರೆದರೆ ಶುಲ್ಕದ ಇಂತಿಷ್ಟು ಭಾಗವನ್ನು ಹಿಂದಿರುಗಿಸಬೇಕು, ಕೋಚಿಂಗ್ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ಸುವ್ಯವಸ್ಥಿತವಾದ ಜಾಗದಲ್ಲಿ ತರಗತಿ ನಡೆಸಬೇಕು ಮತ್ತು ಕೋಚಿಂಗ್ ನೀಡುವ ಶಿಕ್ಷಕರು ಪದವಿ ವಿದ್ಯಾಭ್ಯಾಸವನ್ನು ಪೂರೈಸಿರಲೇಬೇಕು ಎಂಬ ನಿಯಮಗಳಿವೆ. ರಾಜ್ಯ ಸರ್ಕಾರಗಳು ಇವುಗಳನ್ನು ಜಾರಿಗೆ ತರಬೇಕಿದೆ.
ಕೋಚಿಂಗ್ ವ್ಯವಸ್ಥೆ ಈಗ ಸಮಾನಾಂತರ ಶಿಕ್ಷಣ ಎನಿಸಿದೆ. ನಾಗರಿಕ ಸೇವೆ, ಬ್ಯಾಂಕ್, ರೈಲ್ವೆ, ಟೋಫೆಲ್, ಜಿಆರ್‌ಇ, ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ತರಬೇತಿಯ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಷ್ಟೇ ಅಲ್ಲ, 7ನೇ ತರಗತಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಎದುರಿಸುವವರು ಸಹ ಕೋಚಿಂಗ್ ಬಯಸುತ್ತಾರೆ. ಕೋಚಿಂಗ್ ವ್ಯವಸ್ಥೆ ಬಲಗೊಳ್ಳಲು ಮತ್ತು ವ್ಯಾಪಿಸಲು ಶಾಲಾ ವ್ಯವಸ್ಥೆಯಲ್ಲಿನ ದೋಷಗಳೇ ಕಾರಣ ಎಂಬ ಮಾಹಿತಿ ಇದೆ. ಶಾಲೆ ಕಾಲೇಜುಗಳಲ್ಲಿನ ಮೂಲ ಸೌಲಭ್ಯ ಕೊರತೆ, ಕಲಿಕಾ ಸಾಮಗ್ರಿ, ನುರಿತ ಅಧ್ಯಾಪಕರ ಅನುಪಸ್ಥಿತಿಯಿಂದಾಗಿ ಪೋಷಕರು ಮಕ್ಕಳ ಭವಿಷ್ಯವನ್ನು ಸದೃಢಗೊಳಿಸಲು ಕೋಚಿಂಗ್ ಕೇಂದ್ರಗಳ ಮೊರೆ ಹೋಗುತ್ತಾರೆ.
ಕೋಚಿಂಗ್ ಅನಿವಾರ್ಯವೇ? ಖಂಡಿತ ಇಲ್ಲ. ಆದರೆ ಕಲಿಕೆಯಲ್ಲಿ ಹಿಂದುಳಿದವರಿಗೆ ಅದರಿಂದ ಅನುಕೂಲವಾಗುತ್ತದೆ. ಬುದ್ಧಿವಂತರಿಗೆ ಹೆಚ್ಚಿನ ಬಲ ತುಂಬುತ್ತದೆ. ಹಲವರಿಗೆ ಯಶಸ್ಸು ಲಭಿಸಿದೆ. ಅತಿಯಾದ ಪೈಪೋಟಿ ಇರುವುದರಿಂದ ಪರೀಕ್ಷೆಗಳು ಕಠಿಣವಾಗುತ್ತಿವೆ. ಕಷ್ಟದ ಅಥವಾ ಸವಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾಗಲು ವಿಶೇಷ ತರಬೇತಿಬೇಕು.
ಕೋಚಿಂಗ್ ಕೇಂದ್ರ ಸೇರಿಕೊಂಡಾಕ್ಷಣ ಬಯಸಿದ ಅಂಕಗಳು ಬರುತ್ತವೆ ಎಂದು ಯಾವ ಗ್ಯಾರಂಟಿಯೂ ಇಲ್ಲ. ಆದರೂ ಅದಕ್ಕೆ ಮುಗಿಬೀಳುವ ಪ್ರವೃತ್ತಿ ಕಡಿಮೆಯಾಗಿಲ್ಲ. ಮಕ್ಕಳು ಯಶಸ್ವಿ ಆಗಲಿ ಎಂದು ಬಯಸುವುದು ಪೋಷಕರ ತಪ್ಪಲ್ಲ. ಆದರೆ ಇದು ಆಗಲೇಬೇಕು, ಆಗದಿದ್ದರೆ ಭವಿಷ್ಯವೇ ಇಲ್ಲ ಎಂಬಂತೆ ಒತ್ತಡ ಹೇರಬಾರದು. ಶಾಲೆಗಳಲ್ಲಿ ಓದಿದ್ದನ್ನೇ ಓದಿಸುವ, ಬಾಯಿಪಾಠ ಮಾಡಿಸುವ ವಿಧಾನಗಳ ಬದಲಿಗೆ ಪರಿಕಲ್ಪನಾತ್ಮಕ ಮತ್ತು ಪ್ರಾಯೋಗಿಕ ಕಲಿಕೆಗಳನ್ನು ಪ್ರೋತ್ಸಾಹಿಸಿದರೆ ಮಾತ್ರ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳತ್ತ ಸುಳಿಯುವುದನ್ನು ಕಡಿಮೆ ಮಾಡಬಹುದು ಮತ್ತು ಅನಗತ್ಯ ಒತ್ತಡ ತಪ್ಪಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.