ADVERTISEMENT

ವಿಶ್ಲೇಷಣೆ | ಸ್ವಾವಲಂಬನೆ: ಚರಕದಿಂದ ಚಿಪ್‌ವರೆಗೆ

ಚಿಪ್ ಕ್ರಾಂತಿಯಿಂದ ಸಾಧ್ಯವಾಗಲಿದೆ ಎಲೆಕ್ಟ್ರಾನಿಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತಿ

ಗುರುರಾಜ್ ಎಸ್.ದಾವಣಗೆರೆ
Published 21 ಮಾರ್ಚ್ 2024, 22:44 IST
Last Updated 21 ಮಾರ್ಚ್ 2024, 22:44 IST
   

ಮಹಾತ್ಮ ಗಾಂಧೀಜಿಯ ಚರಕವು ಭಾರತ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಎಳೆ ಎಳೆಯಾಗಿ ಜೋಡಿಸಿ ಕೊಟ್ಟರೆ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್‌ಎಂ), ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಮಹತ್ವದ ಹೆಜ್ಜೆ ಇರಿಸಿದೆ.

ಹತ್ತಿ ಅರಳೆಯಿಂದ ಖಾದಿ ಬಟ್ಟೆಯನ್ನು ನೀಡಿದ ಬಾಪೂಜಿಯ ಚರಕವು ಸ್ವತಂತ್ರ ಹಾಗೂ ಚಲನಶೀಲ ಭಾರತದ ಸಂಕೇತದಂತೆ ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ ದೇಶದ ಅಸ್ಮಿತೆ, ಸ್ವಾವಲಂಬನೆ, ಸ್ವದೇಶಿತನ ಮತ್ತು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ದಿಟ್ಟತನವನ್ನು ಎತ್ತಿ ತೋರಿಸುತ್ತಿತ್ತು. ಗಾಂಧೀಜಿಯ ಚರಕದಿಂದ ಎಳೆ ಎಳೆಯಾಗಿ ಹೊಮ್ಮಿದ ಖಾದಿ ಬಟ್ಟೆಯು ವಿದೇಶದ ವಸ್ತ್ರಗಳನ್ನು ಈ ನೆಲದಿಂದ ಹೊರಹಾಕುವಲ್ಲಿ ಬಹುತೇಕ ಯಶಸ್ವಿಯಾಗಿತ್ತು. ಸಾಬರಮತಿ ಆಶ್ರಮದಿಂದ ಮುಖ್ಯವಾಹಿನಿಗೆ ಬಂದ ಖಾದಿ ತಯಾರಿಕೆ ಕೆಲವೇ ವರ್ಷಗಳಲ್ಲಿ ಉದ್ಯಮವಾಗಿ ರೂಪುಗೊಂಡದ್ದು ಈಗ ಇತಿಹಾಸ. ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ ಸ್ಥಾಪನೆಗೊಂಡ ಅಖಿಲ ಭಾರತ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಕೋಟ್ಯಂತರ ಜನರಿಗೆ ಬೇಕಾದ ಸ್ವದೇಶಿ ಸೊಗಡಿನ ಬಟ್ಟೆಯನ್ನು ಇಂದಿಗೂ ನೇಯ್ದು ಕೊಡುತ್ತಿದೆ.

ಒಂದು ಶತಮಾನದ ಹಿಂದೆ, ತೊಡುವ ಬಟ್ಟೆಯ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿ ತೋರಿಸಿದ ನಾವು, ಇಂದು ವಿಕಸಿತ ಭಾರತದ ಮಂತ್ರ ಜಪಿಸುತ್ತಾ ಎಲೆಕ್ಟ್ರಾನಿಕ್ಸ್ ಉದ್ಯಮ ಕ್ಷೇತ್ರದ ಸ್ವಾವಲಂಬನೆ ಸಾಧಿಸುವ ದಿಸೆಯಲ್ಲಿ ದೃಢ ಹೆಜ್ಜೆ ಇಡುತ್ತಿದ್ದೇವೆ. ಅಂದು ಮೈತುಂಬ ಧರಿಸುವ ಖಾದಿಯಿಂದ ವಿಶ್ವಕ್ಕೆ ನಮ್ಮತನ ತೋರಿದ್ದ ನಾವು, ಈಗ ಕೈಯ ಉಗುರಿನ, ಕಣ್ಣ ರೆಪ್ಪೆಯ ಸಂದಿಗಳ ಒಳಗೆ ಅಡಗಿಸಿ ಇಡಬಹುದಾದಷ್ಟು ಚಿಕ್ಕ ಅಳತೆಯ ಚಿಪ್ ತಯಾರಿಸಿ ವಿದ್ಯುನ್ಮಾನ ಉಪಕರಣ ಕ್ಷೇತ್ರದ ಸ್ವಾವಲಂಬನೆ ಗಳಿಸುವ ಪಣ ತೊಟ್ಟಿದ್ದೇವೆ. ನಾವು ಬಳಸುವ ಪ್ರತಿ ಎಲೆಕ್ಟ್ರಾನಿಕ್ ಉಪಕರಣದ ಜೀವಕೇಂದ್ರವೇ ಆಗಿರುವ ಚಿಪ್‌ನ ತಯಾರಿಕೆ ನಮ್ಮಲ್ಲಿ 40 ವರ್ಷಗಳ ಹಿಂದೆಯೇ ಶುರುವಾಗಿದ್ದರೂ ನಾವು ಬಯಸಿದ ಸಾಧನೆ ಆಗಿರಲಿಲ್ಲ.

ADVERTISEMENT

ತೈವಾನ್, ಚೀನಾ, ಅಮೆರಿಕ ದೇಶಗಳು ಚಿಪ್ ತಯಾರಿಕಾ ಉದ್ಯಮದ ಬಹುದೊಡ್ಡ ಮಾರುಕಟ್ಟೆ ಸ್ವಾಮ್ಯ ಸಾಧಿಸಿ ಸೆಮಿಕಂಡಕ್ಟರ್ ಉದ್ಯಮದ ಮುಂಚೂಣಿಯಲ್ಲಿವೆ. ಅಮೆರಿಕ ಮೂಲದ ಎನ್‌ವಿಡಿಯ ಮತ್ತು ಜಪಾನ್‌ನ ಎಲೆಕ್ಟ್ರಾನಿಕ್ ಕಂಪನಿಗಳ ಷೇರು ಬಂಡವಾಳ ಹಲವು ಅಭಿವೃದ್ಧಿಪರ ದೇಶಗಳ ಆರ್ಥಿಕ ಗಾತ್ರಕ್ಕೆ ಸಮನಾಗಿದೆ. ಗೇಮಿಂಗ್ ಕನ್ಸೋಲ್, ಜಿಪಿಯು ಮತ್ತು ಸಿಪಿಯುಗಳಿಗೆ ಚಿಪ್ ಒದಗಿಸುವ ಎನ್‌ವಿಡಿಯ ಕಂಪನಿಯ ಇಂದಿನ ಷೇರು ಮೌಲ್ಯ ಇನ್ನೂರ ಇಪ್ಪತ್ತು ಶತಕೋಟಿ ಡಾಲರ್‌ನಷ್ಟಿದೆ. ಮೈಕ್ರೊಸಾಫ್ಟ್ ಮತ್ತು ಆ್ಯಪಲ್ ಕಂಪನಿಗಳಿಗೆ ಪೈಪೋಟಿ ನೀಡುತ್ತಿರುವ ಇದರ ಗಳಿಕೆ ಇದೇ ವೇಗದಲ್ಲಿ ಮುಂದುವರಿದರೆ, ವಿಶ್ವದ ಆರ್ಥಿಕತೆಯೇ ಎನ್‌ವಿಡಿಯ ಕಂಪನಿಯ ಗಳಿಕೆಯ ಎದುರು ಕುಬ್ಜವಾಗಲಿದೆ ಎಂಬ ಮಾತು ಆರ್ಥಿಕ ವಲಯದಲ್ಲಿ ಕೇಳಿಬರುತ್ತಿದೆ.

1987ರಿಂದಲೂ ಸೆಮಿಕಂಡಕ್ಟರ್ ಉದ್ಯಮದ ಮುಂಚೂಣಿಯಲ್ಲಿರುವ ತೈವಾನ್ ದೇಶದ ಸೆಮಿಕಂಡಕ್ಟರ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ (ಟಿಎಸ್‌ಎಂಸಿ) ವಿಶ್ವದ ಅತ್ಯುತ್ತಮ ಚಿಪ್ ತಯಾರಿಕೆಗೆ ಹೆಸರುವಾಸಿಯಾಗಿದೆ. ಹೋದ ವರ್ಷ ಬರೀ ಚಿಪ್ ತಯಾರಿಕೆ ಒಂದರಿಂದಲೇ 6,900 ಕೋಟಿ ಡಾಲರ್ ಗಳಿಸಿರುವ ಕಂಪನಿಯು ವಾರ್ಷಿಕ ಗಳಿಕೆಯ ವಿಷಯದಲ್ಲಿ ಸ್ಯಾಮ್ಸಂಗ್ ಮತ್ತು ಇಂಟೆಲ್ ಕಂಪನಿಗಳನ್ನು ಹಿಂದಿಕ್ಕಿದೆ. ಇದರ ಒಂದು ಬ್ರ್ಯಾಂಚ್ ಆಫೀಸು ನಮ್ಮ ಬೆಂಗಳೂರಿನ ದೊಮ್ಮಲೂರಿನಲ್ಲೂ ಇದೆ.

ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಸೆಮಿಕಂಡಕ್ಟರ್ ಉದ್ಯಮ ಭಾರಿ ಬೇಡಿಕೆ ಗಳಿಸಿತ್ತು. ದೇಶ ವಿದೇಶಗಳಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಚಿಪ್‌ಗಳನ್ನು ಸರಬರಾಜು ಮಾಡುತ್ತಿದ್ದ ವ್ಯವಸ್ಥೆ ಹಿಂದೆಂದೂ ಕಂಡರಿಯದ ಒತ್ತಡ ವನ್ನು ಎದುರಿಸಿತು. ಕೆಲವೇ ಕೆಲವು ಮುಂಚೂಣಿ ಉದ್ಯಮ ಗಳು ಬೇಡಿಕೆಯನ್ನು ಪೂರೈಸಲಾರದೆ ಒದ್ದಾಡಿದವು. ಬೇಡಿಕೆ ಹೆಚ್ಚಿದಂತೆ ಬೆಲೆಯೂ ಹೆಚ್ಚಾಯಿತು.

ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಕಾಲಿಡಬೇಕೆನ್ನುವ ನಾವು 1983ರಷ್ಟು ಹಿಂದೆಯೇ ಚಂಡೀಗಢದಲ್ಲಿ ಚಿಪ್ ತಯಾರಿಕೆಗೆ ಕೈ ಹಾಕಿದ್ದೆವು. ಚಿಪ್ ತಯಾರಿಕೆಗೆ ಬೇಕಾಗಿದ್ದ ತಂತ್ರಜ್ಞಾನ ನಮ್ಮಲ್ಲಿ ಇರಲಿಲ್ಲ ಮತ್ತು ಹೊರದೇಶಗಳಿಂದ ತಂತ್ರಜ್ಞಾನದ ನೆರವು ದೊರಕದ್ದರಿಂದ ಅಂದುಕೊಂಡ ಸಾಧನೆ ನಮ್ಮಿಂದಾಗಲಿಲ್ಲ. ಇದರ ಹಿನ್ನೆಲೆಯಲ್ಲಿ 2022ರಲ್ಲಿಯೇ ಸೆಮಿಕಂಡಕ್ಟರ್ ಇಂಡಿಯಾ ಮಿಷನ್‌ಗೆ ಚಾಲನೆ ನೀಡಿದ ಕೇಂದ್ರ ಸರ್ಕಾರ, ಈಗ ಚಿಪ್ ತಯಾರಿಕಾ ಕ್ಷೇತ್ರದಲ್ಲಿ ದಾಪುಗಾಲಿಡಲು ಸಜ್ಜಾಗಿದೆ. ತಾಂತ್ರಿಕ ಜ್ಞಾನದ ಸ್ವಾವಲಂಬನೆಗಾಗಿ ನಾವೀಗ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಬರೋಬ್ಬರಿ ₹ 76,000 ಕೋಟಿ ಬಂಡವಾಳ
ತೆಗೆದಿಟ್ಟಿದ್ದೇವೆ.

ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ಮೆದುಳಿನಂತಿರುವ ಚಿಪ್‌ನ ಗಾತ್ರ ಕೆಲವೇ ವರ್ಷಗಳ ಹಿಂದೆ ಸೆಂಟಿ ಮೀಟರ್‌ಗಳಷ್ಟು ಇರುತ್ತಿತ್ತು. ಈಗ ನ್ಯಾನೊಮೀಟರ್ ಗಾತ್ರ ತಲುಪಿದ್ದು ಬರೀ ಎರಡು ನ್ಯಾನೊಮೀಟರ್ ಗಾತ್ರದ ಚಿಪ್ ತಯಾರಿಕೆಯೂ ಸಾಧ್ಯವಿದೆ. ಮಾರುಕಟ್ಟೆಗೆ ಬರುತ್ತಿರುವ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಅಥವಾ ವಾಹನದಲ್ಲಿ ಚಿಪ್ ಇರಲೇಬೇಕು. ಸಣ್ಣ ಸಣ್ಣ ಸಿಗ್ನಲ್ ಟ್ರಾನ್ಸಿಸ್ಟರ್‌ಗಳು, ಸ್ವಿಚಿಂಗ್ ಡಯೋಡ್, ಹೈ ವೋಲ್ಟೇಜ್ ತಡೆಯುವ ಸರ್ಕ್ಯೂಟ್ ಬ್ರೇಕರ್‌ಗಳು, ತನ್ನಿಂತಾನೆ ಕೆಲಸ ಶುರುಮಾಡುವ- ಸುಮ್ಮನಾಗುವ ಎಲೆಕ್ಟ್ರಾನಿಕ್ ಭಾಗಗಳು, ಎಲೆಕ್ಟ್ರೋಸ್ಟಾಟಿಕ್ ಡಿಸ್ಚಾರ್ಜ್ ತಡೆಯುವ ಸಾಧನ ತಯಾರಿಕೆಯ ಏಕಸ್ವಾಮ್ಯ ಗಳಿಸಿರುವ ತೈವಾನ್‌ನ ಟಿಎಸ್‌ಎಂಸಿಯು ಇಂಟೆಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳಿಗೆ ಎಷ್ಟೋ ಸಾರಿ ಗ್ರಹಣ ಹಿಡಿಸಿದೆ.

ಇಂದು, ನಾಳಿನ ತಂತ್ರಜ್ಞಾನ ಎಂದೇ ಬಿಂಬಿತ ವಾಗಿರುವ ಯಾಂತ್ರಿಕ ಬುದ್ಧಿಮತ್ತೆ (ಎ.ಐ) ಮತ್ತು ಕ್ರಿಪ್ಟೊ ತಂತ್ರಜ್ಞಾನಕ್ಕೆ ಅತ್ಯಾಧುನಿಕ ಕ್ಷಮತೆಯ ಚಿಪ್ ಇರಲೇಬೇಕು. ವಿಶ್ವದ ಪ್ರತಿಯೊಂದು ದೇಶವೂ ಯಾಂತ್ರಿಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲು ಮುಂದಾಗುತ್ತಿರುವುದರಿಂದ ಚಿಪ್ ಉದ್ಯಮದ ಪೈಪೋಟಿ ತಾರಕ ಕ್ಕೇರಿದೆ. ಇದುವರೆಗೂ ಬಳಕೆದಾರನಾಗಿದ್ದ ನಾವು ಉತ್ಪಾದಕನಾಗಬೇಕಿದೆ. ಅದಕ್ಕಾಗಿ ಭಾರತ್ ಸೆಮಿ ಕಂಡಕ್ಟರ್ ರಿಸರ್ಚ್ ಸೆಂಟರ್ ಅಸ್ತಿತ್ವಕ್ಕೆ ಬರುತ್ತಿದೆ. ದೇಶದ ತಂತ್ರಜ್ಞಾನ ಕ್ಷೇತ್ರದ ದೊಡ್ಡಣ್ಣ ಟಾಟಾ ಸಮೂಹವು ಸರ್ಕಾರದ ಕೆಲಸಕ್ಕೆ ಕೈಜೋಡಿಸಿದೆ.

ದಶಕಗಳ ಹಿಂದೆ ನಾವೂ ಉಕ್ಕು ತಯಾರಿಸುತ್ತೇವೆ (ವೀ ಆಲ್ಸೋ ಮೇಕ್ ಸ್ಟೀಲ್) ಎಂದು ಹೇಳಿ ಅದನ್ನು ತಯಾರಿಸಿ ತೋರಿಸಿದ ಉದಾಹರಣೆ ನಮ್ಮೆದುರಿಗಿದೆ. ಈಗ ‘ನಾವೂ ಚಿಪ್ ತಯಾರಿಸುತ್ತೇವೆ’ (ವೀ ಆಲ್ಸೋ ಮೇಕ್ ಚಿಪ್) ಎಂಬ ಧ್ಯೇಯವಾಕ್ಯದಿಂದ ಮುನ್ನುಗ್ಗು ತ್ತಿದ್ದೇವೆ. ತೈವಾನ್‌ನ ಪಿಎಸ್ಎಂಸಿ (ಪವರ್‌ಚಿಪ್ ಸೆಮಿಕಂಡಕ್ಟರ್ ಮ್ಯಾನ್ಯುಫ್ಯಾಕ್ಚರಿಂಗ್ ಕಾರ್ಪೊರೇಷನ್) ಜೊತೆ ಒಪ್ಪಂದ ಮಾಡಿಕೊಂಡಿರುವ ಟಾಟಾ ಎಲೆಕ್ಟ್ರಾನಿಕ್ಸ್, ಗುಜರಾತ್‌ನ ಧೋಲೆರೋ ಮತ್ತು ಸಾನಂದ್ ಹಾಗೂ ಅಸ್ಸಾಂನ ಮೋರಿಗಾಂ ಘಟಕಗಳಲ್ಲಿ ₹ 1 ಲಕ್ಷ ಕೋಟಿ ಬಂಡವಾಳ ಹೂಡುತ್ತಿದೆ. ಈ ಯೋಜನೆ ಸಫಲವಾಗಲು ಕನಿಷ್ಠ ನಾಲ್ಕು ವರ್ಷಗಳು ಬೇಕು. ಕೌಶಲ ಗಳಿಸಿದ, 60 ಲಕ್ಷದಿಂದ 70 ಲಕ್ಷ ಕೆಲಸಗಾರರು ಬೇಕು. ಮೈಕ್ರಾನ್ ಮತ್ತು ಟವರ್ ಕಂಪನಿಗಳು ಈಗಾಗಲೇ ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಅಲ್ಲಿನ ವಿದ್ಯಾರ್ಥಿಗಳಿಗೆ ಚಿಪ್ ತಯಾರಿಕಾ ತರಬೇತಿಯನ್ನು ಪ್ರಾರಂಭಿಸಲು ಮುಂದಾಗಿವೆ.

ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಮಾರಾಟದ ವಿಷಯದಲ್ಲಿ ಏರುತ್ತಿರುವ ಬಿಸಿ ಮತ್ತು ಪೈಪೋಟಿಯ ಈ ದಿನಗಳಲ್ಲಿ ನಮ್ಮ ಪ್ರಯತ್ನಗಳು ನಿಶ್ಚಿತ ಫಲ ನೀಡಿದಲ್ಲಿ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಸ್ವಾವಲಂಬನೆ ಗಳಿಸುವ ದಿನಗಳು ದೂರವಿಲ್ಲ. ಗಾಂಧೀಜಿಯ ಚರಕದಿಂದ ಸ್ವಾವಲಂಬನೆಯ ಪ್ರಾಥಮಿಕ ಪಾಠ ಕಲಿತು ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿದ್ದ ನಾವು, ಚಿಪ್ ಕ್ರಾಂತಿಯಿಂದ ಎಲೆಕ್ಟ್ರಾನಿಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತೇವೆ ಎಂಬ ನಂಬಿಕೆ ಇದೆ.

ಮರೆಯುವ ಮುನ್ನ: ನೆನಪಿರಲಿ, ಒಂದು ಸೆಂಟಿ ಮೀಟರ್ ಉದ್ದದ ಚಿಪ್ ತಯಾರಿಸಲು 28 ಲೀಟರ್‌ನಷ್ಟು ಶುದ್ಧ ನೀರು ಬಳಕೆಯಾಗುತ್ತದೆ. ಚಿಪ್ ತಯಾರಿಸಿ ಹಣ ಗಳಿಸುತ್ತೇವೆ ಎಂಬ ಹುಂಬತನಕ್ಕೆ ಬಿದ್ದು ಜೀವಾಮೃತವನ್ನು ಕಳೆದುಕೊಳ್ಳಬಾರದು. ಆರ್ಥಿಕ ಅಭಿವೃದ್ಧಿಯು ನೈಸರ್ಗಿಕ ಸಂಪನ್ಮೂಲಕ್ಕೆ ಕೊಡಲಿ ಏಟು ಹಾಕಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.