ADVERTISEMENT

ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:04 IST
Last Updated 20 ನವೆಂಬರ್ 2025, 0:04 IST
   

ಮಾನವ–ವನ್ಯಜೀವಿ ಸಂಘರ್ಷಕ್ಕೆ ಹಲವು ವನ್ಯಜೀವಿ ಪ್ರಭೇದಗಳು ಕಾರಣವಾದರೂ– ಆನೆ, ಚಿರತೆ ಹಾಗೂ ಹುಲಿ, ಮಾನವ ಪ್ರಾಣಹಾನಿಗೆ ಮುಖ್ಯವಾಗಿ ಕಾರಣವಾಗುವ ಪ್ರಭೇದಗಳು. ಪ್ರತಿ ವನ್ಯಜೀವಿ ಪ್ರಭೇದದ ಸಂಘರ್ಷಕ್ಕೆ ಕಾರಣಗಳು ಮತ್ತು ಪರಿಹಾರ ಮಾರ್ಗಗಳು ಬೇರೆಯಾಗಿರುತ್ತವೆ ಹಾಗೂ ಪರಿಹಾರಗಳು ಕೆಲವೊಮ್ಮೆ ಆಯಾ ಪ್ರದೇಶಕ್ಕೆ ಅನುಗುಣವಾಗಿರುತ್ತವೆ. ಈ ವ್ಯತ್ಯಾಸದ ಕಾರಣದಿಂದಲೇ ಪ್ರಸಕ್ತ ಬರಹದಲ್ಲಿ ಮಾನವ–ಹುಲಿ ಸಂಘರ್ಷವನ್ನಷ್ಟೇ ಚರ್ಚಿಸಲಾಗಿದೆ.

2022ರ ಸರ್ಕಾರಿ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 563 ಹುಲಿಗಳಿದ್ದವು. ಈ ಸಂಖ್ಯೆಯಲ್ಲಿ ಶೇ 52ರಷ್ಟು ಹುಲಿಗಳು ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳಲ್ಲಿ ದಾಖಲಾಗಿವೆ. ಇನ್ನುಳಿದ ಮೂರು ಹುಲಿ ಯೋಜನಾ ಪ್ರದೇಶಗಳಲ್ಲಿ ಬರೀ ಶೇ 15ರಷ್ಟು ಹುಲಿಗಳು ದಾಖಲಾಗಿವೆ. ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಅತೀ ಹೆಚ್ಚು ಹುಲಿಗಳು ಇರುವುದಕ್ಕೆ ಮುಖ್ಯ ಕಾರಣ: ಈ ಕಾಡುಗಳು ಹುಲಿಗಳ ವಾಸಕ್ಕೆ ಪ್ರಶಸ್ತವಾಗಿರುವುದು ಮತ್ತು ನಾಲ್ಕು ದಶಕಗಳಿಂದ ಅಲ್ಲಿ ಆಗಿರುವ ಉತ್ತಮ ಸಂರಕ್ಷಣಾ ಕಾರ್ಯಗಳು. ಹುಲಿಗಳ ಸಂಖ್ಯೆ ಈ ಪ್ರದೇಶಗಳಲ್ಲಿ ಸ್ಥಿರವಾಗಿ ಹೆಚ್ಚುತ್ತಲೇ ಇರುವುದಕ್ಕೆ ಹುಲಿಗಳಿಗೆ ಅನುಕೂಲವಾಗುವ ಹಾಗೆ ಈ ಆವಾಸಸ್ಥಾನಗಳನ್ನು ಉತ್ತಮವಾಗಿ ನಿರ್ವಹಿಸಿರು ವುದು ಕಾರಣವಾಗಿದೆ. ಅಂದರೆ, ಪ್ರಾಣಿಗಳಿಗೆ ವರ್ಷಪೂರ್ತಿ ನೀರು ಸಿಗುವ ಹಾಗೆ ಮಾಡಲು ಹೆಚ್ಚು ಹೆಚ್ಚು ಕೆರೆಗಳನ್ನು ತೋಡುವ, ನೀರು ಹಿಡಿದಿಡಲು ತಡೆಗೋಡೆಗಳನ್ನು ನಿರ್ಮಿಸುವ, ಮತ್ತು ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ಸಿಗಲೆಂದು ನೈಸರ್ಗಿಕ ಕಾಡನ್ನು ಹುಲ್ಲುಗಾವಲುಗಳನ್ನಾಗಿ ಕೃತಕವಾಗಿ ಪರಿವರ್ತಿಸುವ ಚಟುವಟಿಕೆಗಳು ಇಲ್ಲಿ ನಡೆದಿವೆ.

ಈ ಆವಾಸಸ್ಥಾನದ ಕೃತಕ ಮಾರ್ಪಾಡಿನಿಂದ ದೊಡ್ಡ ಮಾಂಸಾಹಾರಿ ಪ್ರಾಣಿಗಳಿಗೆ ಅವಶ್ಯವಾದ ಜಿಂಕೆಗಳ ಸಂಖ್ಯೆ ಏರಿಕೆಯಾಗಿ, ಹುಲಿಗಳ ಸಂಖ್ಯೆಯೂ ಹೆಚ್ಚಿದೆ. ಬಂಡೀಪುರದಲ್ಲಿ 2014ರಲ್ಲಿ 120 ಹುಲಿಗಳಿದ್ದು, ಆ ಸಂಖ್ಯೆ 2022ರಲ್ಲಿ 150ಕ್ಕೆ ಏರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ನಿರಂತರವಾಗಿ ಹೆಚ್ಚುತ್ತಿರುವ ಹುಲಿಗಳ ಸಂಖ್ಯೆಗೆ ಅನುಗುಣವಾಗಿ ಕಾಡು ಹಿಗ್ಗುತ್ತಿಲ್ಲ. ಹಾಗಾಗಿ, ಬಂಡೀಪುರ ಮತ್ತು ನಾಗರಹೊಳೆ, ಅವುಗಳ ಪಾರಿಸರಿಕಧಾರಣಾ ಸಾಮರ್ಥ್ಯ ಮೀರಿ ಹೆಚ್ಚು ಹುಲಿಗಳಿಗೆ ನೆಲೆಯಾಗಿವೆ. 

ADVERTISEMENT

ಹುಲಿಗಳಿಗೆ ನೈಸರ್ಗಿಕವಾಗಿ ವೈರಿಗಳಿಲ್ಲ. ಸಂಪನ್ಮೂಲಗಳ ಕೊರತೆ, ನೈಸರ್ಗಿಕವಾಗಿ ಆಗುವ ಗಾಯಗಳು ಮತ್ತು ಇತರ ಹುಲಿಗಳ ದಾಳಿಯಿಂದ ಸಾವಿಗೀಡಾಗುವುದು ಅವುಗಳ ನೈಸರ್ಗಿಕ ಮರಣಕ್ಕೆ ಮುಖ್ಯ ಕಾರಣಗಳು. ನೈಸರ್ಗಿಕ ಮರಣ, ಅವುಗಳ ಸಂಖ್ಯೆಯನ್ನು ಆ ಪ್ರದೇಶದ ಪಾರಿಸರಿಕಧಾರಣಾ ಮಿತಿಯಲ್ಲಿ ಇರಿಸಲು ಸಹಕಾರಿಯಾಗುತ್ತದೆ. ಆದರೆ, ನಾವು ನೀರು ಮತ್ತು ಆಹಾರವನ್ನು ಅನೈಸರ್ಗಿಕವಾಗಿ ಹೆಚ್ಚಿಸುತ್ತಿರುವುದರಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದೆ, ಕಾಡಿನಿಂದಾಚೆಯೂ ಅವು ಮನೆ ಮಾಡಿಕೊಳ್ಳುತ್ತಿವೆ. ಇಂದು ಬಂಡೀಪುರ– ನಾಗರಹೊಳೆಯಲ್ಲಿ ಹುಟ್ಟಿ ಬೆಳೆದ 50ಕ್ಕೂ ಹೆಚ್ಚು ಹುಲಿಗಳು ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಹೊಲ–ತೋಟಗಳಲ್ಲಿ ಸೇರಿಕೊಂಡಿವೆ.

ಎಷ್ಟು ದಿನ, ಕೇವಲ ಈ ಎರಡು ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವುದು? ಬಂಡೀಪುರ–ನಾಗರಹೊಳೆ ಪ್ರದೇಶಗಳ ಹುಲಿಗಳ ಪಾರಿಸರಿಕಧಾರಣಾ ಶಕ್ತಿ ಸುಮಾರು 200 ಹುಲಿಗಳು ಮಾತ್ರ. ಆದರೆ, ಅಲ್ಲೀಗ 290ಕ್ಕೂ ಹೆಚ್ಚು ಹುಲಿಗಳಿವೆ.

ಇತರೆ ಹುಲಿ ಸಂರಕ್ಷಣಾ ಪ್ರದೇಶಗಳಿಗೆ ಹೋಲಿಸಿದರೆ, ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಮಾತ್ರ ಹುಲಿಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿರುವುದು ಏಕೆ ಎನ್ನುವ ಪ್ರಶ್ನೆ ಸಹಜ. ಅದಕ್ಕೆ ಅಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಹಾಗೂ ಅದರಿಂದ ಬರುತ್ತಿರುವ ಆದಾಯವೇ ಕಾರಣ.

ಹಿಂದೆ ವನ್ಯಜೀವಿ ಪ್ರದೇಶಗಳಿಂದ ಬಂದ ಪ್ರವಾಸೋದ್ಯಮದ ಆದಾಯವನ್ನು ಕ್ರೋಡೀಕರಿಸಿ, ರಾಜ್ಯದ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿಧಾಮಗಳಿಗೆ ಅಗತ್ಯಕ್ಕೆ ಅನುಸಾರವಾಗಿ ಹಂಚಲಾಗುತ್ತಿತ್ತು. 2006ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಆದ ತಿದ್ದುಪಡಿಯಿಂದಾಗಿ, ಆಯಾ ಪ್ರದೇಶದ ಪ್ರವಾಸೋದ್ಯಮದ ಆದಾಯವನ್ನು ಅದೇ ವನ್ಯಜೀವಿಧಾಮದಲ್ಲಿ ಖರ್ಚು ಮಾಡಬೇಕಾಗಿದೆ. ಪ್ರಸ್ತುತ, ವಾರ್ಷಿಕವಾಗಿ ಬಂಡೀಪುರ ಮತ್ತು ನಾಗರಹೊಳೆಗಳಿಗೆ ತಲಾ ₹35 ಕೋಟಿ ಪ್ರವಾಸೋದ್ಯಮದ ಆದಾಯ ಬರುತ್ತಿದೆ. ಇದನ್ನು ಕೆರೆ ತೋಡಲು, ನೀರಿನಕಟ್ಟೆ ಕಟ್ಟಲು, ಹೆದ್ದಾರಿಗಳಲ್ಲಿ ಕಮಾನುಗಳನ್ನು ನಿರ್ಮಿಸಲು, ಇನ್ನಿತರೆ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ. ಈ ಖರ್ಚಿನ ಸ್ವರೂಪ ಬದಲಾಗಬೇಕು.

ವನ್ಯಜೀವಿಗಳ ಸಂತತಿ ಹೆಚ್ಚಳದ ಬೆಲೆ ತೆರುವವರು ಕಾಡಿನ ಸುತ್ತಮುತ್ತಲಿರುವ ಜನರು. ಪ್ರತಿನಿತ್ಯವೂ ಅವರ ಬೆಳೆಗಳನ್ನು ಆನೆ, ಕಾಡು ಹಂದಿ, ಜಿಂಕೆ, ನವಿಲು ಇನ್ನಿತರ ವನ್ಯಜೀವಿಗಳು ನಾಶಪಡಿಸುತ್ತವೆ; ಅವರ ಜಾನುವಾರುಗಳನ್ನು ಹುಲಿ, ಚಿರತೆಗಳು ಭಕ್ಷಿಸುತ್ತವೆ. ವನ್ಯಜೀವಿ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿರುವ ಕೆಲವೇ ಕೆಲವು ಸ್ಥಳೀಯ ಜನರನ್ನು ಬಿಟ್ಟರೆ, ವನ್ಯಜೀವಿಗಳಿಂದ ಸ್ಥಳೀಯ ಜನ ಯಾವುದೇ ಅನುಕೂಲಗಳನ್ನು ಕಾಣುತ್ತಿಲ್ಲ. ಅವುಗಳು ಅವರಿಗೆ ತೊಂದರೆಗಳ ಮೂಲವಾಗಿ ಕಾಣುತ್ತಿವೆ. ಹಾಗಾಗಿ, ಪ್ರವಾಸೋದ್ಯಮದ ಗಳಿಕೆಯಲ್ಲಿ ಕನಿಷ್ಠ ಶೇ 50ರಷ್ಟು ಹಣವನ್ನು ಕಾಡಿನ ಸುತ್ತಮುತ್ತಲ ಹಳ್ಳಿಗಳ ಅಭಿವೃದ್ಧಿಗೆ, ಅಥವಾ ಮಾನವ–ವನ್ಯಜೀವಿ ಸಂಘರ್ಷದ ಪರಿಹಾರಕ್ಕೆ, ಇನ್ನುಳಿದ ಶೇ 50 ಹಣವನ್ನು ಅರಣ್ಯ ಇಲಾಖೆಯ ತಾತ್ಕಾಲಿಕ ನೌಕರರ ಸಂಬಳ, ಕನಿಷ್ಠ ಸವಲತ್ತುಗಳು, ತರಬೇತಿ ಚಟುವಟಿಕೆಗಳು, ಇನ್ನಿತರೆ ಸಂರಕ್ಷಣಾ ಕಾರ್ಯಗಳಿಗೆ ವಿನಿಯೋಗ ಮಾಡಿಕೊಳ್ಳಬೇಕು.

ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಮತ್ತು ವನ್ಯಜೀವಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಕಡಿಮೆಗೊಳಿಸಲು ವನ್ಯಜೀವಿಧಾಮಗಳಲ್ಲಿ ಜೆಸಿಬಿ ಉಪಯೋಗವನ್ನು ನಿರ್ಬಂಧಿಸಿ, ಆ ಕೆಲಸಗಳನ್ನು ಜನರಿಂದ ಮಾಡಿಸಿದರೆ, ಸ್ಥಳೀಯ ಉದ್ಯೋಗಾವಕಾಶಗಳು ಹೆಚ್ಚಿದಂತಾಗುತ್ತದೆ.

ವನ್ಯಜೀವಿಗಳೊಂದಿಗಿನ ಸಂಘರ್ಷ ಕಡಿಮೆ ಆಗಬೇಕಾದರೆ, ನಮ್ಮ ಕೆಲವು ಜನಪ್ರಿಯ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ವನ್ಯಜೀವಿ ಸಂರಕ್ಷಣೆಯನ್ನು ವೈಜ್ಞಾನಿಕ ಮತ್ತು ಸಾಮಾನ್ಯ ಗ್ರಹಿಕೆಯ ದೃಷಿಕೋನದಿಂದ ನೋಡಬೇಕಾಗಿದೆ. ಕಾಡಿನಲ್ಲಿ ನೀರಿಲ್ಲ, ಮೇವಿಲ್ಲ; ಹಾಗಾಗಿ, ವನ್ಯಜೀವಿಗಳು ಕಾಡಿನಿಂದ ಆಚೆ ಬಂದು ಜನರಿಗೆ ತೊಂದರೆ ಕೊಡುತ್ತಿವೆ ಎಂದು ಕಳೆದ ಎರಡು ದಶಕಗಳಿಂದ ನೂರಾರು ಕೆರೆಗಳನ್ನು, ಸಾವಿರಾರು ಇಂಗು ಗುಂಡಿಗಳನ್ನು ತೋಡಿ, ಸಿಕ್ಕ ಸಿಕ್ಕ ಕೆರೆಗಳಿಗೆಲ್ಲ ಸೌರಶಕ್ತಿ ಪಂಪ್ ಅಳವಡಿಸಿ, ವರ್ಷಪೂರ್ತಿ ನೀರು ಸಿಗುವ ಹಾಗೆ ಮಾಡಿದ್ದೇವೆ. ಹಾಗಿದ್ದ ಮೇಲೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಮಾನವ–ವನ್ಯಜೀವಿ ಸಂಘರ್ಷ ಕಡಿಮೆ ಆಗಬೇಕಿತ್ತಲ್ಲವೇ? ಇದೇ ವಿಚಾರ ಕಾಡಿನಲ್ಲಿರುವ ಕಳೆಗಳಿಗೂ ಅನ್ವಯವಾಗುತ್ತದೆ. ಕಳೆಗಳಿಂದ ಸಸ್ಯಾಹಾರಿಗಳಿಗೆ ಆಹಾರ ಸಿಗುತ್ತಿಲ್ಲವೆಂದರೆ, ಅವುಗಳ ಸಂಖ್ಯೆ ಹೆಚ್ಚುತ್ತಿರುವುದಾದರೂ ಹೇಗೆ? ಎಲ್ಲ ಸಸ್ಯಾಹಾರಿ ಪ್ರಾಣಿಗಳು ನಾವು ಬೆಳೆದ ಆಹಾರ ಸಸ್ಯಗಳ ಮೇಲೆ ಅವಲಂಬಿತವಾಗಿದ್ದರೆ, ರಾಜ್ಯದಲ್ಲಿರುವ ಲಕ್ಷಾಂತರ ಜಿಂಕೆಗಳು ಕಾಡಿನಿಂದಾಚೆ ಇರಬೇಕಾಗಿತ್ತು.  

ಡಿಜಿಟಲ್ ಮಾಧ್ಯಮ ಜನಪ್ರಿಯವಾದ ಮೇಲೆ ಕಾಡಿನಲ್ಲಿ ನೈಸರ್ಗಿಕವಾಗಿ ಗಾಯಗೊಂಡ ಹುಲಿಗಳಿಗೆ ಚಿಕಿತ್ಸೆ ನೀಡುವುದು ಅಥವಾ ಹುಲಿ ಮರಿಗಳ ತಾಯಿ ಕಾಣೆಯಾದರೆ, ಮೃಗಾಲಯದ ಪ್ರಾಣಿಗಳಂತೆ ಅವುಗಳ ಲಾಲನೆ ಪಾಲನೆ ಮಾಡುವುದು ನಡೆಯುತ್ತಿದೆ. ಇದರಿಂದ ಅವುಗಳ ಸಂಖ್ಯೆ ಅನೈಸರ್ಗಿಕವಾಗಿ ಹೆಚ್ಚುತ್ತದೆ. ವನ್ಯಜೀವಿಗಳ ಸಹಜ ಅಥವಾ ನೈಸರ್ಗಿಕ ಸಾವಿಗೆ ಅಡ್ಡಿಪಡಿಸಬಾರದು. ಅವುಗಳ ಸಂಖ್ಯೆಯನ್ನು ಪಾರಿಸರಿಕ ಸಮತೋಲನದಲ್ಲಿ ಇಡಲು ಮತ್ತು ಸಂಘರ್ಷ ಕಡಿಮೆಗೊಳಿಸುವ ದೃಷ್ಟಿಯಿಂದ ನೈಸರ್ಗಿಕ ಕಾರಣಗಳಿಂದ ಗಾಯಗೊಂಡ ವನ್ಯಜೀವಿಗಳಿಗೆ ಅರಣ್ಯಪ್ರದೇಶದೊಳಗೆ (ವನ್ಯಜೀವಿಧಾಮ ಮತ್ತು ಪ್ರಾದೇಶಿಕ ವಿಭಾಗಗಳ ಅರಣ್ಯ ಪ್ರದೇಶದೊಳಗೆ) ಚಿಕಿತ್ಸೆ ನೀಡುವುದನ್ನು ಸ್ಥಗಿತಗೊಳಿಸಬೇಕು. ಡಿಜಿಟಲ್ ಮಾಧ್ಯಮದಿಂದ ಇಂತಹ ವಿಚಾರಕ್ಕೆ ಬರುವ ಒತ್ತಡಗಳನ್ನು ಗಣನೆಗೆ ತೆಗೆದುಕೊಳ್ಳದೆ, ವೈಜ್ಞಾನಿಕ ದೃಷ್ಟಿಕೋನದಿಂದ ವನ್ಯಜೀವಿಗಳ ಸಂಖ್ಯೆಯನ್ನು ನೈಸರ್ಗಿಕಧಾರಣಾ ಮಟ್ಟಕ್ಕೆ ತರಬೇಕಾಗಿದೆ. 

ಜಾನುವಾರು ನಷ್ಟವಾದಾಗ ಸರ್ಕಾರ ಕೊಡುವ ಪರಿಹಾರ ರೈತರಿಗೆ ತಲಪುವುದಕ್ಕೆ ಒಂದು ವರ್ಷದಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಜನ ತಾಳ್ಮೆ ಕಳೆದುಕೊಂಡು ವನ್ಯಜೀವಿಗಳ ಬಗ್ಗೆ ನಿರಾಶಾವಾದದ ಭಾವನೆ ಹೊಂದಿದ್ದಾರೆ. ಸಂತ್ರಸ್ತ ರೈತರಿಗೆ ಎರಡು ವಾರದೊಳಗೆ ಪರಿಹಾರ ಸಿಗುವ ಹಾಗೆ ಮಾಡಿದರೆ ಅವರಿಗೆ ಸ್ವಲ್ಪ ನೆಮ್ಮದಿಯಾಗುತ್ತದೆ. 

ಹುಲಿಗಳ ಸಂಖ್ಯೆ ಮಾನವ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವುದು ವನ್ಯಜೀವಿ ಸಂರಕ್ಷಣಾ ದೃಷ್ಟಿಕೋನದಿಂದ ಸಂತೋಷದ ವಿಚಾರವಾದರೂ, ಅದನ್ನು ಸಾಮಾಜಿಕ ಧಾರಣಾ ಶಕ್ತಿಯ ನೋಟದಿಂದ ಅವಲೋಕಿಸಬೇಕು. ಇಲ್ಲವಾದಲ್ಲಿ, ವನ್ಯಜೀವಿಗಳ ವಿಚಾರದಲ್ಲಿ ಸಮಾಜ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತದೆ. ಇದನ್ನು, ಹಾಸನ ಜಿಲ್ಲೆಯಲ್ಲಿ ಆನೆಗಳ ವಿಚಾರವಾಗಿ ನೋಡುತ್ತಿದ್ದೇವೆ.

ಮಾನವ–ವನ್ಯಜೀವಿ ಸಂಘರ್ಷವನ್ನು ಕಡಿಮೆ ಗೊಳಿಸಲು ನಾವು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಕಟ್ಟುನಿಟ್ಟಿನ ಕ್ರಮಗಳನ್ನು ಇಂದು ಕೈಗೊಳ್ಳಲು ಪ್ರಾರಂಭಿಸಿದರೆ, ಹತ್ತು ವರ್ಷಗಳಲ್ಲಿ ಮಾನವ–ವನ್ಯಜೀವಿ ಸಂಘರ್ಷದಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.