ADVERTISEMENT

ವಿಶ್ಲೇಷಣೆ: ತಿದ್ದುವ ತಿವಿಯುವ ‘ಕಾವ್ಯಖಡ್ಗ’

ವೈ.ಎಸ್‌.ವಿ.ದತ್ತ
Published 7 ಫೆಬ್ರುವರಿ 2026, 0:23 IST
Last Updated 7 ಫೆಬ್ರುವರಿ 2026, 0:23 IST
   
ವರ್ತಮಾನದ ಸಂಕಟಕ್ಕೆ ದನಿಯಾಗಿ ‘ಹಣತೆಯ ಕವಿ’ ಜಿ.ಎಸ್‌. ಶಿವರುದ್ರಪ್ಪನವರ ಕಾವ್ಯ ಒದಗಿಬರುತ್ತದೆ. ಮಾನವಕೇಂದ್ರಿತ ಸಮಾಜ ವ್ಯವಸ್ಥೆಯ ಬಗ್ಗೆ ಅವರಂತೆ ಪ್ರತಿಕ್ರಿಯಿಸಿರುವ ಕವಿಗಳು ವಿರಳ. ಜಿಎಸ್‌ಎಸ್‌ ಜನಶತಾಬ್ದಿ ವರ್ಷದಲ್ಲಿ ಅವರ ಕಾವ್ಯದ ‘ಕೃಷ್ಣಶಕ್ತಿ’ ನಾಡನ್ನು ಆವರಿಸಿಕೊಳ್ಳಬೇಕಾಗಿದೆ. ಜೊತೆಗೆ ಸಾತ್ವಿಕ ಸಿಟ್ಟು ಎಲ್ಲರದ್ದಾಗಬೇಕಾಗಿದೆ.

ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಜನ್ಮಶತಾಬ್ದಿ ವರ್ಷವಿದು (ಜನನ: ಫೆ. 7, 1926). ಸಹೃದಯರಿಗೆ ಅವರು ‘ಜಿಎಸ್ಎಸ್‌’ ಎಂದೇ ಪ್ರಿಯರು. ನವೋದಯ ಹಾಗೂ ನವ್ಯ ಕಾವ್ಯ ಮಾರ್ಗಗಳ ಲಕ್ಷಣಗಳನ್ನು ಒಗ್ಗೂಡಿಸಲು ಯತ್ನಿಸಿದವರು ಎಂಬ ಅರ್ಥದಲ್ಲಿ, ಸಮಕಾಲೀನ ಕಾವ್ಯವನ್ನು ಚರ್ಚಿಸುವ ಸಂದರ್ಭಗಳಲ್ಲೆಲ್ಲ ಅವರನ್ನು ‘ಸಮನ್ವಯ ಕವಿ’ ಎನ್ನುವ ಪರಿಪಾಠವಿದೆ. ಆದರೆ, ಜಿಎಸ್‌ಎಸ್‌ ಅವರ ಕಾವ್ಯಮಾರ್ಗವೇ ವಿಶಿಷ್ಟ, ವಿಭಿನ್ನ. ನವೋದಯ ಕಾಲಘಟ್ಟದ ಕುವೆಂಪು ಅವರ ಪ್ರಭಾವಕ್ಕೆ ಒಳಗಾದರೂ, ತಮ್ಮ ನಾಲ್ಕು ದಶಕಗಳ ಕಾವ್ಯಕೃಷಿಯಲ್ಲಿ ಅವರು ತುಳಿದದ್ದು ತಮ್ಮದೇ ನೆಲವನ್ನು. ಬಿತ್ತಿದ್ದು ತಮ್ಮ ನಂಬುಗೆಯನ್ನು. ಅವರ ಕಾವ್ಯ ಮನೋಧರ್ಮವನ್ನು ಸರಳೀಕರಿಸಿ ಹೇಳುವುದಾದರೆ, ಅವರು ತಮ್ಮ ಕಾವ್ಯರಚನೆಯಲ್ಲಿ ನಿಭಾಯಿಸಿದ್ದು ಎರಡು ಜಗತ್ತುಗಳನ್ನು: ಮೊದಲನೆಯದು, ಇತ್ಯಾತ್ಮಕವಾದ ಜೀವಸಮೃದ್ಧಿ ಪ್ರಕೃತಿ ಜಗತ್ತು. ಎರಡನೆಯದು, ನೇತ್ಯಾತ್ಮಕವಾದ ಮಾನವಕೇಂದ್ರಿತ ಸಮಾಜ ವ್ಯವಸ್ಥೆಯ ಜಗತ್ತು. ಮೊದಲನೆಯ ಜಗತ್ತಿನ ಇತ್ಯಾತ್ಮಕತೆಯನ್ನು ನಿರೂಪಿಸುವಾಗ ವಿಸ್ಮಯ, ಉತ್ಸುಕತೆಗಳೇ ಪ್ರಧಾನ ಭಾವಗಳಾಗುತ್ತವೆ. ಎರಡನೆಯ ಜಗತ್ತಿನ ನೇತ್ಯಾತ್ಮಕತೆಯನ್ನು ನಿರೂಪಿಸುವಾಗ ಖಿನ್ನತೆ, ಸಾತ್ವಿಕ ಸಿಟ್ಟು, ಹತಾಶೆಯ ಅಂಚಿನಲ್ಲಿ ಉಳಿಯುವ ಅಸಹಾಯಕತೆ ಇವು ಅವರ ಕವಿತೆಗಳ ಪ್ರಧಾನ ಭಾವಗಳಾಗುತ್ತವೆ ಎಂಬ ವಿಮರ್ಶಕ ಕೆ.ವಿ. ನಾರಾಯಣ ಅವರ ಮಾತುಗಳು ಗಮನಾರ್ಹ.

ನವೋದಯದಿಂದ ಮೂಡಿಬಂದ ಈ ಕವಿ ಕನ್ನಡ ಕವಿತೆ ಹಾದುಹೋದ ಎಲ್ಲ ನೆಲೆಗಳನ್ನೂ ಕಂಡರು, ಪ್ರತಿಕ್ರಿಯಿಸಿದರು. ನವ್ಯ, ಬಂಡಾಯ ಮಾರ್ಗಗಳೂ ಅವರ ಕವಿತೆಗಳ ಪರಿವಲಯದಲ್ಲಿ ನುಗ್ಗಿ ಬಂದವು. ಯಾವ ಪಂಥಕ್ಕೂ ಕಟ್ಟು ಬೀಳದ ತಮ್ಮ ಕಾವ್ಯದ ಉದ್ದೇಶವನ್ನು ಜಿಎಸ್‌ಎಸ್‌ ಅವರು ಹೀಗೆ ಸಾರುತ್ತಾರೆ: ‘ಅದೂ ಬೇಕು ಇದೂ ಬೇಕು, ಎಲ್ಲವೂ ಬೇಕು ನನಗೆ, ದಾರಿ ನೂರಾರಿವೆ ಬೆಳಕಿನರಮನೆಗೆ. ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ, ನೂರಾರು ಭಾವದ ಬಾವಿ; ಎತ್ತಿಕೋ ನಿನಗೆ ಬೇಕಾದಷ್ಟು ಸಿಹಿನೀರ, ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ? ನಮಗೆ ಬೇಕಾದದ್ದು ದಾಹ ಪರಿಹಾರ’ (‘ಹಿನ್ನುಡಿ’ ಕವಿತೆ).

‘ಸಾಮಗಾನ’ದಿಂದ ‘ದೀಪದ ಹೆಜ್ಜೆ’ ಕವನ ಸಂಕಲನದವರೆಗಿನ ಅವರ ಸುಮಾರು 500 ಕವಿತೆಗಳಲ್ಲಿ ನನಗೆ ಇಂದಿನ ವ್ಯವಸ್ಥೆಗೆ ಪ್ರಸ್ತುತವೆನಿಸಿದ್ದು, ಮಾನವ ಕೇಂದ್ರಿತ ಸಮಾಜ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಕವಿತೆಗಳು. ಅವು ಒಂದು ರೀತಿಯಲ್ಲಿ ಕಾವ್ಯಖಡ್ಗ. ನಮ್ಮನ್ನು ತಿವಿಯುತ್ತವೆ. ತಿದ್ದಲು ಯತ್ನಿಸುತ್ತವೆ.

ADVERTISEMENT

ಐವತ್ತು ವರ್ಷಗಳ ಹಿಂದೆ ಅವರು ಬರೆದ ಕವನ ‘ಗಾಂಧಿ’. ಗಾಂಧೀಜಿಯ ಹೆಸರೇ ರಾಜಕೀಯ ಲಾಭದ ಸರಕಾಗಿರುವ ಸಂದರ್ಭದಲ್ಲಿ ಈ ಕವನ ಹೆಚ್ಚು ಪ್ರಸ್ತುತವೆನಿಸುತ್ತದೆ. ಗಾಂಧೀಜಿಯನ್ನು ‘ನೀನೊಬ್ಬ ವಿಚಿತ್ರ ಮನುಷ್ಯ’ ಎಂದೆನ್ನುವ ಜಿಎಸ್‌ಎಸ್‌, ‘ಎಲ್ಲವನ್ನೂ ಅಂಗಡಿ ತೆರೆದು ಬೆಲೆ ಕಟ್ಟಬರದ ಈ ಮಂದಿಯ ಮುಂದೆ ಹರಾಜಿಗಿಟ್ಟೆ. ಕಾಸಿಗೆ ಕಾಸು, ಬಡ್ಡಿಗೆ ಬಡ್ಡಿ ಸೇರಿಸುತ್ತಾ ಬ್ಯಾಂಕಿನಲ್ಲಿ ಬೆಳೆವ ಬಡ್ಡಿಗೆ ರೋಮಾಂಚನಗೊಳ್ಳುತ್ತಾ ಕೂತವರ ನಡುವೆ ನೀನು ಎಲ್ಲಿಂದ ಬಂದೆಯೋ ಮಹರಾಯ!’ ಎನ್ನುವಲ್ಲಿನ ಅವರ ವ್ಯಂಗ್ಯ ಮತ್ತು ‘ನೀ ಬಂದು ಹೋದಾ ಮೇಲೆ ಏನೇನಾಗಿದೆ ಎಂದು ಹೇಳಲಾರೆ, ನಿನ್ನೆದೆಗೆ ತಾಕಿದ ಗುಂಡು ನಮ್ಮೆದೆಗೂ ತಾಕಿದ್ದರೆ ಆ ಮಾತೇ ಬೇರೆ’ ಎಂದು ಹೇಳುವಲ್ಲಿ ಮಡುಗಟ್ಟಿರುವ ಖಿನ್ನತೆ ಮಿಶ್ರ ಸಿಟ್ಟು ನಮ್ಮನ್ನು ತಟ್ಟದೇ ಇರದು.

‘ಪ್ರೀತಿ ಇಲ್ಲದ ಮೇಲೆ’ (1987) ಕವನದಲ್ಲಿ ‘ಪ್ರೀತಿ ಇಲ್ಲದ ಮೇಲೆ, ಸಂಶಯದ ಗಡಿಗಳುದ್ದಕ್ಕು, ಸಿಡಿಗುಂಡುಗಳ ಕದನ ನಿಂತೀತು ಹೇಗೆ? ಜಾತಿ–ಮತ–ಭಾಷೆ-ಬಣ್ಣಗಳ ಗೋಡೆಯ ನಡುವೆ ನರಳುವ ಪಾಡು ತಪ್ಪೀತು ಹೇಗೆ? ನಮ್ಮ ನಿಮ್ಮ ಮನಸ್ಸು ಮರುಭೂಮಿಯಾಗದ ಹಾಗೆ ತಡೆಗಟ್ಟುವುದು ಹೇಗೆ?’ ಎಂಬ ಅವರ ಪ್ರಶ್ನೆ ಈಗಲೂ ನಮ್ಮನ್ನು ಕಾಡುತ್ತಿರುವ ಪ್ರಶ್ನೆಯಾಗಿಯೇ ಉಳಿದಿದೆ.

1992ನೇ ವರ್ಷ, ಅಯೋಧ್ಯೆಯ ನೆನಪು ನಿಮಗಿರಬಹುದು. ಆಗ ಜಿಎಸ್‌ಎಸ್‌ ಬರೆದ ಕವನ ‘ನೀವೇ ಹೇಳಿ’. ‘ಕೇಳಿದಿರಾ ಮಹಾಜನರೇ, ಕೇಳಿದಿರಾ? ದೇವಸ್ಥಾನಗಳನ್ನು ಕಟ್ಟಿಸುತ್ತಾರಂತೆ ಇವರು. ಇನ್ನು ದೇವರುಗಳಿಗೆ ಭಯವಿಲ್ಲ. ಹಾಲಿನ ಮಳೆ ಸುರಿಯುತ್ತದೆ, ಜೇನಿನ ಹೊಳೆ ಹರಿಯುತ್ತದೆ, ರಾಮರಾಜ್ಯವಾಗುತ್ತದೆ ಇಡೀ ದೇಶ. ಇನ್ನು ತಡವಿಲ್ಲ. ಆದರೆ ಮಹಾಜನರೇ ಹೇಳಿ, ಈಗಾಗಲೇ ಹೊಟ್ಟೆಗಿಲ್ಲದೆ ತತ್ತರಿಸುವ ದೇವಸ್ಥಾನಗಳನ್ನೇನು ಮಾಡೋಣ? ಕಣ್ಣಲ್ಲೇ ಬೆಳಕಿಲ್ಲದ ದೇವಸ್ಥಾನಗಳನ್ನೇನು ಮಾಡೋಣ? ಬಾಯಿಲ್ಲದೆ ಬತ್ತಲಾಗಿ ಬಿದ್ದ ದೇವಸ್ಥಾನಗಳನ್ನೇನು ಮಾಡೋಣ? ನೀವೆ ಹೇಳಿ’ ಎನ್ನುವ ಜಿಎಸ್‌ಎಸ್‌, ‘ಸ್ಥಾವರಕ್ಕಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಎಂಬ ಬಸವಣ್ಣನ ವಚನವನ್ನು ಜ್ಞಾಪಿಸುತ್ತಾರೆ. ‘ಗುಡಿ–ಚರ್ಚು–ಮಸೀದಿಗಳ ಬಿಟ್ಟು ಹೊರ ಬನ್ನಿ’ ಎಂದ ಕುವೆಂಪು ಅವರು ಜಿಎಸ್‌ಎಸ್‌ ಮೇಲೆ ಪ್ರಭಾವ ಬೀರಿದಂತೆ ಕಾಣುತ್ತದೆ. 

ಇಂದಿನ ಜನತಂತ್ರ ವ್ಯವಸ್ಥೆಯಲ್ಲಿ ಜನರು ಪ್ರಜ್ಞಾವಂತಿಕೆ ಮೆರೆಯದಿದ್ದರೆ ಏನಾದೀತು? ಜಿಎಸ್‌ಎಸ್‌ ‘ಸುವರ್ಣ ಸಂಕಟವಾದೀತು’ ಎನ್ನುತ್ತಾರೆ ಅದೇ ಹೆಸರಿನ ಕವನದಲ್ಲಿ. ‘ಹಿತ್ತಾಳೆಯೇ ಚಿನ್ನವೆಂದು ಕಬ್ಬಿಣಗಳೆಲ್ಲಾ ಉದ್ಘೋಷಿಸುವ ಹೊತ್ತಿನಲ್ಲಿ, ನಿಜವಾದ ಚಿನ್ನಕ್ಕೆ ಅನ್ನಿಸಿತು, ಮತ್ತೆ ನಾ ಹೋಗುವುದೇ ಸರಿ ನೆಲದಾಳಗಳ ನಿಶ್ಶಬ್ದದಲ್ಲಿ’ ಎಂಬ ಸಾಲುಗಳಲ್ಲಿ ಸಜ್ಜನರೂ, ಸಭ್ಯರೂ, ಸಾರ್ವಜನಿಕ ಬದುಕಿಗೆ ಬರಲು ಹಿಂಜರಿಯುವ ಸ್ಥಿತಿಯ ಬಗ್ಗೆ ಗಮನ ಸೆಳೆಯುತ್ತಾರೆ. 

ನಮ್ಮ ನಡುವೆ ವಿರಾಜಿಸುವ ಜನರಾದರೂ ಎಂತಹವರು ಎಂಬುದಕ್ಕೆ ‘ಜನಗಣಮನ ಅಧಿನಾಯಕ’ ಕವಿತೆಯನ್ನು ನೋಡಿ: ‘ನಮ್ಮೀ ಜನಗಣಮನ ಅಧಿನಾಯಕ ಎಲ್ಲಿದ್ದಾನೆ? ಎಲ್ಲೆಲ್ಲೂ ಇದ್ದಾನೆ. ನಂಬದೆ ಕರೆದರು, ಕರೆಯದೇ ಇದ್ದರು, ಕಂಬಕಂಬದಲ್ಲಿ ಕೂತಿದ್ದಾನೆ, ಕೊಂಬೆಗೂ ಕೊಂಬೆಗೂ ನೆಗೆಯುತ್ತಾನೆ, ಗೋಸುಂಬೆಯ ಕೋಟನು ತೊಟ್ಟಿದ್ದಾನೆ, ಮುಖಕೆ ಮೈಕನ್ನು ಕಟ್ಟಿದ್ದಾನೆ, ಮೇಲ್‌ ಮನೆಯಲ್ಲೂ, ಕೆಳಮನೆಯಲ್ಲೂ, ಒಳಮನೆಯಲ್ಲೂ ಆ ಅವನೇ ತುಂಬಿದ್ದಾನೆ... ಎಚ್ಚರವಾಗಿರು, ನಮ್ಮೀ ಜನಗಣಮನ ಅಧಿನಾಯಕ ಇಲ್ಲೇ ಇದ್ದಾನೆ. ‘ಜಯಹೇ’ ಅನ್ನದೆ ಇದ್ದರೆ ನಿನಗೂ, ನೀ ಯಾರೆಂಬುದ ಕಾಣಿಸುತಾನೆ’ ಎನ್ನುವಲ್ಲಿನ ಹರಿತ ವ್ಯಂಗ್ಯ ನಮ್ಮನ್ನು ಚುಚ್ಚದೇ ಇದ್ದೀತೆ? ಇಂತಹ ‘ಜನಗಣಮನ ಅಧಿನಾಯಕ’ರೇ ಸಮಾಜದಲ್ಲಿ ತುಂಬಿ ತುಳುಕಿದಾಗ ನಾವು ಕಾಣುವ ಕನಸಾದರೂ ಎಂತಹುದು? ಅದೊಂದು ‘ದುಃಸ್ವಪ್ನ’ ಎನ್ನುತ್ತಾರೆ, ಅದೇ ಹೆಸರಿನ ಕವನದಲ್ಲಿ. ಆ ಕೆಟ್ಟ ಕನಸು ಹೀಗಿದೆ: ‘ಗೊಮ್ಮಟನಾಗಿ ನಿಂತಿದ್ದ ಮಹಾಮೂರ್ತಿ ಕರಗಿ ಕೊಚ್ಚೆಯಾಗಿ ಹರಿದಿದ್ದ ಕಂಡೆ, ಇಂದ್ರನೈರಾವತಕ್ಕೆ ತೊಣಚಿ ಹತ್ತಿ ಬೀದಿನಾಯಾಗಿ ಬೂದಿಯಲ್ಲಿ ಹೊರಳಾಡಿದ್ದ ಕಂಡೆ, ಕೊಳಕುಮಂಡಲಕೆ ಏಳು ಹೆಡೆ ಮೂಡಿ ಮಾನಸ ಸರೋವರದಲ್ಲಿ ಜಲಕ್ರೀಡೆಯಾಡಿದ್ದ ಕಂಡೆ, ಸರಸ್ವತೀ ಮಂದಿರದ ಶ್ವೇತಚಾಮರ ಕೆಲವು ಮಂತ್ರಿಗಳ ಮನೆಯ ಕಸಪೊರಕೆಯಾದದ್ದ ಕಂಡೆ, ದೊಡ್ಡ ಪೀಠಗಳ ಮೇಲೆ ಸಣ್ಣಜನ ಇಲಿಹೆಗ್ಗಣಗಳಾಗಿ ಹರಿದಾಡಿದ್ದ ಕಂಡೆ’ ಎನ್ನುವ ಕವಿ– ‘ಕಂಡು ಎಚ್ಚರಗೊಂಡೆ, ಎಚ್ಚರವೆಲ್ಲಾ ನಿಗಿ ನಿಗಿ ಉರಿವ ಕೆಂಡದ ಉಂಡೆ’ ಎನ್ನುತ್ತಾರೆ. ಉರಿವ ಕೆಂಡದ ಉಂಡೆಯಾಗುವ ಸಾತ್ವಿಕ ಸಿಟ್ಟು ನಮಗೆಂದು ಬಂದೀತು?

ಇಂದಿನ ಸಾಮಾಜಿಕ ವ್ಯವಸ್ಥೆ ಜಿಎಸ್‌ಎಸ್‌ ಅವರಿಗೆ ‘ಅರೇಬಿಯನ್ ನೈಟ್ಸ್‌’ನ ಬಾಗ್ದಾದಿನ ಕಾರಿರುಳ ನೆನಪು ತರುತ್ತದೆ. ತಮ್ಮ ‘ಷಹಜಾದೆಗೆ’ ಕವನದಲ್ಲಿ ಕವಿ ಹೀಗೆ ಕೇಳುತ್ತಾರೆ.‘... ಸಾವಿರದೊಂದು ಕಾರಿರುಳನ್ನು ಕತೆ ಹೇಳುತ್ತಲೇ ಗೆದ್ದ ಷಹಜಾದೆ, ಹೇಳೆ, ಈ ರಾತ್ರಿಗೆಂದು ಕೊನೆ? ಯಾವ ಕತೆ ನಮ್ಮನ್ನೀಗ ಉಳಿಸಬಹುದೇ?’

ದುಷ್ಟ ವ್ಯವಸ್ಥೆಯೊಂದರಲ್ಲಿ ಶಿಷ್ಟ ಜನರು ಅನುಭವಿಸುವ ಪಾಡನ್ನು ‘ಭೀಮಾಲಾಪ’ ಎನ್ನುತ್ತಾರೆ. ವಿರಾಟರಾಜನ ಅರಮನೆಯಲ್ಲಿ ಅಜ್ಞಾತವಾಸಿಗಳಾಗಿ ಜೀತ ಮಾಡಬೇಕಾದ ಪಾಂಡವರ ಪರಿಸ್ಥಿತಿಯನ್ನು ಭೀಮನ ಬಾಯಲ್ಲಿ ಜಿಎಸ್‌ಎಸ್‌ ಹೀಗೆ ಹೇಳಿಸುತ್ತಾರೆ: ‘ಸೀರೆ ಉಟ್ಟು ಬಳೆ ತೊಟ್ಟು, ಕಾಲಿಗೆ ಗೆಜ್ಜೆ ಕಟ್ಟಿದ್ದಾನೆ ಒಬ್ಬ; ಇನ್ನೊಬ್ಬ ಕಾವಿ ಉಟ್ಟು ಮೂಲೆಗೆ ಕೂತಿದ್ದಾನೆ. ದನದ ಕೊಟ್ಟಿಗೆಯಲ್ಲಿ ಒಬ್ಬ, ಕುದುರೆಲಾಯದಲ್ಲಿ ಮತ್ತೊಬ್ಬ. ಇದ್ದಾಳೆ ಇವಳು, ಅವರಿವರ ತಲೆಯ ಹೇನು ಹೆಕ್ಕುತ್ತಾ, ಆಗಾಗ ನಮ್ಮನ್ನು ಕುಕ್ಕುತ್ತಾ, ನಾನೂ ಇದ್ದೇನೆ – ಅಡುಗೆ ಮನೆಯಲ್ಲಿ ಉರಿವ ಸೌದೆಗಳ ಜೊತೆಗೆ ಪಾತ್ರಗಳಲ್ಲಿ ಕೊತ ಕೊತ ಕುದ್ದು, ಹಳೆಯ ನೆನಪುಗಳನ್ನು ರುಬ್ಬುತ್ತಾ’. ಭೀಮನ ಆಲಾಪ ಅಲ್ಲಿಗೇ ಮುಗಿಯುವುದಿಲ್ಲ. ‘ನೋಡುತ್ತಿದ್ದೇನೆ, ಸುತ್ತಲೂ ಎಂತೆಂಥವೋ ವಿಜೃಂಭಿಸಿ ಮೀಸೆ ತಿರುವುತ್ತವೆ, ಏರಬಾರದ ಕಡೆಗೆ ಏರಿ, ಇಳಿಯಬಾರದ ಕಡೆಗೆ ಇಳಿದು, ಕೆಡಿಸಿ ಹೊಲಸೆಬ್ಬಿಸಿವೆ. ಗೆರೆದಾಟಬಾರದ ನಾನು ಕಾಯುತ್ತಿದ್ದೇನೆ. ಉರಿವ ಸೌದೆಗಳ ಜೊತೆಗೆ ಪಾತ್ರೆಗಳಲ್ಲಿ ಕೊತ ಕೊತ ಕುದಿದು ಕಾಯುತ್ತಿದ್ದೇನೆ’. ಇಂದಿನ ಪರಿಸ್ಥಿತಿಯಲ್ಲಿ ಬಹುತೇಕರು ‘ಭೀಮಾಲಾಪ’ದಂತೆ ಕೊತಕೊತ ಕುದಿದು ಕಾಯುತ್ತಿರುವ ಸಾತ್ವಿಕರಾಗಿದ್ದಾರಲ್ಲವೇ?

ಜಿಎಸ್‌ಎಸ್‌ ನಿರಾಶವಾದಿಗಳಲ್ಲ. ಹತಾಶೆಯ ಅಂಚಿನಲ್ಲಿ ಉಳಿಯುವ ಅಸಹಾಯಕತೆ ಅವರ ಕವಿತೆಗಳಲ್ಲಿ ಪದೇ ಪದೇ ಮಾರ್ದನಿಸಿದರೂ, ಅವರು ಕಾಣುವುದು ಬೆಳಕನ್ನೇ. ರಾತ್ರಿ ಕಳೆದೀತು, ಬೆಳಕು ಹರಿದೀತು ಎಂಬುದು ಅವರ ನಂಬಿಕೆ. ಅವರು ನಂಬಿರುವುದು ಜನತಾ ಜನಾರ್ದನರ ‘ಕೃಷ್ಣಶಕ್ತಿ’ಯನ್ನು. ಕೊಳಲ ಹಿಡಿದ ಮೃದು ಬೆರಳುಗಳು ಅರ್ಜುನನ ರಥದ ವಾಘೆಯನ್ನು ಹಿಡಿಯಬೇಕಾಗಿದೆ. ಕೊಳಲಿನ ಜಾಗದಲ್ಲಿ ಪಾಂಚಜನ್ಯ ಮೊಳಗಬೇಕಾಗಿದೆ ಎನ್ನುತ್ತಾರೆ.

ಇಂದಿನ ಪರಿಸ್ಥಿತಿಯಲ್ಲಿ ಮೊದಲು ನಮ್ಮಲ್ಲಿ ಸಾತ್ವಿಕ ಸಿಟ್ಟು ಬರಬೇಕಾಗಿದೆ. ಅದಕ್ಕಾಗಿ ಜಿಎಸ್‌ಎಸ್‌ ಅವರ ಜನ್ಮಶತಾಬ್ದಿಯ ಈ ವರ್ಷವೆಲ್ಲ, ಅವರ ಸಾತ್ವಿಕ ಸಿಟ್ಟಿನ ಕವಿತೆಗಳ ಮೊರೆತ ನಾಡಿನಾದ್ಯಂತ ಹೆಚ್ಚು ಹೆಚ್ಚಾಗಿ ಕೇಳಿ ಬರಬೇಕಾಗಿದೆ.