ನುಡಿ ಬೆಳಗು
‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯ ಸಮಯ. ಕರ್ನಾಟಕದ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಭೂಗತರಾಗಿ ಸಂಘಟನೆ ಮಾಡುತ್ತಿದ್ದರು. ಹಲವರ ಸುಳಿವು ನೀಡಿದವರಿಗೆ ದೊಡ್ಡ ಮೊತ್ತದ ಬಹುಮಾನವನ್ನು ಬ್ರಿಟಿಷ್ ಸರ್ಕಾರ ಘೋಷಿಸಿತ್ತು. ಕೆಲವರ ವಿರುದ್ಧವಂತೂ ಕಂಡಲ್ಲಿ ಗುಂಡಿಕ್ಕುವ ಆದೇಶವಿತ್ತು. ಇಂತಹ ಸಂದರ್ಭದಲ್ಲಿಯೂ ನಮ್ಮ ಹೋರಾಟಗಾರರು ವೇಷ ಬದಲಿಸಿಕೊಂಡು ಓಡಾಡುತ್ತಿದ್ದರು, ಸಭೆ ಸೇರುತ್ತಿದ್ದರು.
ಚಳವಳಿಯನ್ನು ಮುನ್ನಡೆಸಲು ಅಖಿಲ ಭಾರತ ಸಮಿತಿಯ ಸಭೆಗಳು ದೇಶದಾದ್ಯಂತ ಏಕಕಾಲದಲ್ಲಿ ನಡೆಯುತ್ತಿದ್ದವು. ಮುಂಬೈನಲ್ಲಿ ಈ ಸಭೆಯನ್ನು ನಾ.ದಿವಾಕರರು ರಾತ್ರಿ ಹನ್ನೆರಡು ಗಂಟೆಗೆ ಕನ್ನಡಿಗರೊಬ್ಬರ ಮನೆಯಲ್ಲಿ ನಡೆಸಿದ್ದರು. ಆದರೆ, ಈ ವಿಷಯ ಪೊಲೀಸರಿಗೆ ತಿಳಿದಿದೆಯೆಂಬ ಸುದ್ದಿಯಿಂದ ಸ್ಥಳ ಬದಲಾಯಿಸಬೇಕಾಯಿತು. ಆಗ ಗಿರ್‌ಗಾಂವ್‌ನಲ್ಲಿರುವ ಮಿತ್ರರೊಬ್ಬರ ಮನೆಗೆ ಹೋದರೆ ಅವರ ಬಂಧನವಾಗಿ ಮನೆಗೆ ಬೀಗ ಹಾಕಿತ್ತು. ಮತ್ತೇನು ಮಾಡುವುದು? ಶಂಕರ ಕುರ್ತಕೋಟಿ ಎಂಬ ಕರ್ನಾಟಕದ ಹೋರಾಟಗಾರರಿಗೆ ಅಲ್ಲಿಯೇ ಕನ್ನಡಿಗ ಸರ್ಕಾರಿ ನೌಕರರೊಬ್ಬರ ಮನೆ ಇದೆಯೆಂದು ಗೊತ್ತಿತ್ತು. ಅವರನ್ನು ಬಾಗಿಲು ಬಡಿದು ಎಬ್ಬಿಸಿದಾಗ ಆ ವ್ಯಕ್ತಿ ಈ ಕ್ರಾಂತಿಕಾರಿಗಳನ್ನು ನೋಡಿ ಗಾಬರಿಯಾದ. ‘ಅಯ್ಯೋ ನೌಕರಿ ಹೋದರೆ ನಾನು ಹೊಟ್ಟೆಗೆ ಮಣ್ಣು ತಿನ್ನಬೇಕಾದೀತು, ದಯವಿಟ್ಟು ಬರಬೇಡಿ’ ಅಂದ. ಕ್ರಾಂತಿಕಾರಿಗಳಿಗೋ ಒಂದು ರಾತ್ರಿಯ ಮಟ್ಟಿಗೆ ವಸತಿ ವ್ಯವಸ್ಥೆ ಆಗಲೇಬೇಕು. ಅದನ್ನು ಹೇಳಿದಾಗ ಆತ ನೀವು ಹೊರಡದಿದ್ದರೆ ಪೋಲೀಸರಿಗೆ ತಿಳಿಸುತ್ತೇನೆಂದು ಹೇಳಿದ. ಆಗ ಒಳಗೆ ಎಲ್ಲವನ್ನು ಕೇಳುತ್ತಿದ್ದ ಅವನ ಹೆಂಡತಿ ಹೊರಬಂದು, ‘ದೇಶಕ್ಕಾಗಿ ಪ್ರಾಣವನ್ನು ಪಣವಾಗಿ ಇಟ್ಟ ಈ ಹುಡುಗರನ್ನು ಈ ಮಧ್ಯರಾತ್ರಿ ಹೊರಹಾಕುವ ಪಾಪದ ಕೆಲಸ ಬೇಡ. ನಿಮ್ಮ ಸರ್ಕಾರ ಮತ್ತು ನೌಕರಿಗೆ ಬೆಂಕಿ ಹಾಕಲಿ, ನಾನು ಅವರಿಗೆ ಮಲಗಲು ಸ್ಥಳವನ್ನು ಕೊಡುತ್ತೇನೆ’ ಎಂದು ಹೇಳಿ ಜಾಗ ಕೊಟ್ಟಳೆಂದು ಕುರ್ತಕೋಟಿ ದಾಖಲಿಸುತ್ತಾರೆ.
ಧಾರವಾಡದ ಒಂದು ಹಳ್ಳಿಯಲ್ಲಿ ಬ್ರಿಟಿಷರ ಪರವಿದ್ದ ಜಾಗೀರುದಾರನೊಬ್ಬ ಕ್ರಾಂತಿಕಾರಿಗಳಿಗೆ ಗುಂಡು ಹಾರಿಸುವ ಪ್ರಯತ್ನ ಮಾಡಿದಾಗ ಅವನ ಹದಿನಾಲ್ಕು ವರ್ಷದ ಮಗಳು, ‘ಗಾಂಧಿಯ ಜನರನ್ನು ಕೊಲ್ಲಬೇಡ’ ಎಂದು ಅಪ್ಪನನ್ನು ಬೇಡಿಕೊಳ್ಳುತ್ತಿದ್ದಳೆಂದೂ ಬರೆಯುತ್ತಾರೆ.
ಈ ಘಟನೆಗಳಿಂದ ಹೇಗೆ ಸಾಮಾನ್ಯ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆಂಬುದು ಅರ್ಥವಾಗುತ್ತದೆ. ದೇಶದ ಭವಿಷ್ಯಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ತ್ಯಾಗ ಮಾಡಿದ ಅದೆಷ್ಟೋ ಜನರಿದ್ದರು. ಅವರ ಹೆಸರುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗದೇ ಇರಬಹುದು. ಆದರೆ ಸುಸಜ್ಜಿತ ಸೇನೆಯುಳ್ಳ, ಹಣಬಲವುಳ್ಳ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಯೋಗದಾನ ನೀಡಿದ ಭಾರತದ ವೀರ ಪ್ರಜೆಗಳಾಗಿ ಅಂಥವರು ಅಮರರಾಗಿದ್ದಾರೆ. ನಮ್ಮ ಸ್ವಾತಂತ್ರ್ಯ ಅವರು ಕೊಟ್ಟ ಭಿಕ್ಷೆ ಎಂಬುದನ್ನು ನೆನಪಿಡುವ ಜವಾಬ್ದಾರಿ ಮಾತ್ರ ನಮ್ಮದೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.