ಭಾರತದ ಕೃಷಿ ಕ್ಷೇತ್ರವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ನಿರಂತರವಾಗಿ ಪ್ರಗತಿಯತ್ತ ಸಾಗುತ್ತಿದೆ. ರೈತರ ಕಲ್ಯಾಣಕ್ಕಾಗಿ ಅವರ ದೂರದೃಷ್ಟಿಯ ವಿಧಾನ ಮತ್ತು ಐತಿಹಾಸಿಕ ನಿರ್ಧಾರಗಳು ನಮ್ಮ ರೈತ ಬಂಧುಗಳಿಗೆ ಸಬಲೀಕರಣ ನೀಡಿವೆ ಹಾಗೂ 'ವಿಕಸಿತ ಭಾರತ'ದ ಮಹಾನ್ ಸಂಕಲ್ಪಕ್ಕೆ ಮತ್ತಷ್ಟು ಬಲ ನೀಡಿವೆ. ಇಂದು ನಮ್ಮ ಆಹಾರ ಉತ್ಪಾದಕರು ದೇಶದ ಆಹಾರ ಭದ್ರತೆಯನ್ನು ಖಚಿತಪಡಿಸುವುದಲ್ಲದೆ, ಹಲವು ರಾಷ್ಟ್ರಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ರಾಜ್ಯಗಳ ಸಹಯೋಗದೊಂದಿಗೆ, 'ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ' ಎಂಬ ಪರಿಕಲ್ಪನೆಯಡಿ ಕಾರ್ಯನಿರ್ವಹಿಸುವುದು ನಮ್ಮ ಧ್ಯೇಯವಾಗಿದೆ. ಕೃಷಿ ಸಂಶೋಧನೆಗಳು ಪ್ರಯೋಗಾಲಯಗಳಿಂದ ಸಮಯಕ್ಕೆ ಸರಿಯಾಗಿ ರೈತರ ಹೊಲಗಳಿಗೆ ತಲುಪುವಂತೆ ನೋಡಿಕೊಳ್ಳುವ ಮೂಲಕ ಕೃಷಿಯನ್ನು ಆಧುನೀಕರಿಸುವುದು ಹಾಗೂ ರೈತರು ಸ್ವಾವಲಂಬಿಗಳಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ.
ಕೃಷಿ ಮತ್ತು ರೈತರು ದೇಶದ ಸಮೃದ್ಧಿಗೆ ತಳಹದಿ. ನಮ್ಮ ಕೃಷಿ ವಿಜ್ಞಾನಿಗಳು ಹಲವು ಅಧ್ಯಯನಗಳನ್ನು ನಡೆಸಿ, ನೂತನ ತಂತ್ರಜ್ಞಾನಗಳು, ಸುಧಾರಿತ ಬೀಜಗಳು ಮತ್ತು ಗೊಬ್ಬರಗಳ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯುವಂತೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಅವರ ಈ ಸಂಶೋಧನೆಗಳು ನೈಜ ಸಮಯದಲ್ಲಿ ರೈತರನ್ನು ತಲುಪಬೇಕು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು, ಮಣ್ಣಿನ ಪೋಷಕಾಂಶಗಳು ಹಾಗೂ ಗೊಬ್ಬರಗಳ ಸರಿಯಾದ ಬಳಕೆಯಂತಹ ಅಂಶಗಳನ್ನು ಅವರು ಅರ್ಥಮಾಡಿಕೊಳ್ಳಲು ನೆರವಾಗಬೇಕು ಎಂಬ ಉದ್ದೇಶದಿಂದ, ಪ್ರಧಾನಮಂತ್ರಿ ಶ್ರೀ ಮೋದಿ ಅವರ ನಾಯಕತ್ವದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಮೇ 29 ರಿಂದ ಜೂನ್ 12 ರವರೆಗೆ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವನ್ನು ಪ್ರಾರಂಭಿಸುತ್ತಿದೆ.
ಈ ರಾಷ್ಟ್ರವ್ಯಾಪಿ ಅಭಿಯಾನದ ಮೂಲಕ, 700ಕ್ಕೂ ಅಧಿಕ ಜಿಲ್ಲೆಗಳಲ್ಲಿನ 65,000ಕ್ಕೂ ಹೆಚ್ಚು ಗ್ರಾಮಗಳಿಗೆ 2,170 ವಿಜ್ಞಾನಿಗಳ ತಂಡಗಳು ಭೇಟಿ ನೀಡಲಿವೆ. ಈ ಕಾರ್ಯಕ್ರಮದಲ್ಲಿ ಸುಮಾರು 1.5 ಕೋಟಿ (15 ಮಿಲಿಯನ್) ರೈತರು ನೇರವಾಗಿ ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ, ಕೃಷಿಯನ್ನು ಆಧುನೀಕರಿಸುವುದು ಮತ್ತು ರೈತರ ಬದುಕನ್ನು ಪರಿವರ್ತಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಅಭಿಯಾನ ಕೇವಲ ಒಂದು ಔಪಚಾರಿಕತೆಯಲ್ಲ, ಬದಲಿಗೆ ರೈತರ ಜೀವನದಲ್ಲಿ ಸಮೃದ್ಧಿಯನ್ನು ತರುವ ಮಹಾನ್ ಧ್ಯೇಯವಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ಕೃಷಿ ವಿಜ್ಞಾನ ಕೇಂದ್ರಗಳು (KVKs), ರಾಜ್ಯ ಕೃಷಿ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ನಾವೀನ್ಯತೆಗೆ ಸಂಬಂಧಿಸಿದ ಸಂಸ್ಥೆಗಳ ವಿಜ್ಞಾನಿಗಳು ‘ವಿಕಸಿತ ಕೃಷಿ ಮತ್ತು ಸಮೃದ್ಧ ರೈತರು’ ಎಂಬ ಗುರಿಯತ್ತ ಒಂದೇ ತಂಡವಾಗಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಈ ಅಭಿಯಾನವು ಪ್ರಧಾನಮಂತ್ರಿಯವರ ‘ಲ್ಯಾಬ್-ಟು-ಲ್ಯಾಂಡ್’ (ಪ್ರಯೋಗಾಲಯದಿಂದ ಭೂಮಿಗೆ) ಮಂತ್ರವನ್ನು ಸಾಕಾರಗೊಳಿಸಿ, ರೈತರ ಭವಿಷ್ಯ ಮತ್ತು ಭಾರತೀಯ ಕೃಷಿಯ ಸ್ವರೂಪ ಎರಡನ್ನೂ ಬದಲಿಸಲಿದೆ.
ವಿಜ್ಞಾನಿಗಳು ಗ್ರಾಮಗಳಲ್ಲಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ. ಅವರು ತಮ್ಮ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳುವುದರ ಜೊತೆಗೆ, ರೈತರ ವಾಸ್ತವ ಅನುಭವಗಳಿಂದ ಕಲಿಯುವ ಮೂಲಕ ಸಂಶೋಧನೆಯನ್ನು ಇನ್ನಷ್ಟು ಪ್ರಾಯೋಗಿಕಗೊಳಿಸಲಿದ್ದಾರೆ. ಈ ಅಭಿಯಾನದ ಮೂಲಕ ನಾವು ನಡೆಸುವ ಪ್ರಯತ್ನಗಳು ಮತ್ತು ರೈತರ ಅವಿರತ ಪರಿಶ್ರಮದಿಂದ ಪ್ರತಿ ಹೆಕ್ಟೇರ್ ಗೆ ಒಂದು ಕ್ವಿಂಟಾಲ್ ನಷ್ಟು ಉತ್ಪಾದಕತೆ ಹೆಚ್ಚಾದರೂ ಸಹ, ಇದು ದೇಶಾದ್ಯಂತ ಹೆಚ್ಚುವರಿ 20 ಮಿಲಿಯನ್ ಟನ್ ಗಳಷ್ಟು ಆಹಾರ ಉತ್ಪಾದನೆಯನ್ನು ವೃದ್ಧಿಸಲಿದೆ.
ಭಾರತದ ಆರ್ಥಿಕತೆಗೆ ಕೃಷಿಯು ಬೆನ್ನೆಲುಬಾಗಿದೆ. ಸುಮಾರು ಶೇ 50ರಷ್ಟು ಜನಸಂಖ್ಯೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇದರ ಮೇಲೆ ಅವಲಂಬಿತವಾಗಿದೆ. ಇದು ಒಟ್ಟು ದೇಶೀಯ ಉತ್ಪನ್ನ (GDP) ಕ್ಕೆ ಸುಮಾರು ಶೇ 18ರಷ್ಟು ಕೊಡುಗೆ ನೀಡುತ್ತದೆ. ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದಲ್ಲಿ, ಭಾರತವು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿದೆ ಮತ್ತು ಆಧುನೀಕೃತ ಕೃಷಿ ಹಾಗೂ ಸಮೃದ್ಧ ರೈತರು ಈ ಪಯಣದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಕಳೆದ 11 ವರ್ಷಗಳಲ್ಲಿ, NDA ಸರ್ಕಾರವು ರೈತರ ಸಬಲೀಕರಣಕ್ಕಾಗಿ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ಹಲವು ನಿರ್ಧಾರಗಳನ್ನು ಕೈಗೊಂಡು ಕೃಷಿಯನ್ನು ಸುಲಭಗೊಳಿಸಿದೆ. ಕನಿಷ್ಠ ಬೆಂಬಲ ಬೆಲೆ (MSP) ಯಲ್ಲಿನ ಖರೀದಿ, ಈರುಳ್ಳಿ ಮತ್ತು ಅಕ್ಕಿಯ ರಫ್ತು ಸುಂಕಗಳ ರದ್ದತಿ, ಹವಾಮಾನ-ನಿರೋಧಕ ಮತ್ತು ಅಧಿಕ ಇಳುವರಿ ನೀಡುವ ಬೆಳೆ ತಳಿಗಳ ಅಭಿವೃದ್ಧಿ, ಹಾಗೂ ರೈತ-ಸ್ನೇಹಿ ಯೋಜನೆಗಳ ವಿಸ್ತರಣೆಯಂತಹ ಇತ್ತೀಚಿನ ಉಪಕ್ರಮಗಳೆಲ್ಲವೂ ರೈತರ ಕಲ್ಯಾಣಕ್ಕಾಗಿ ಮೋದಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸಿವೆ.
ಭಾರತವು ಇತ್ತೀಚೆಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಕೃಷಿ ಉತ್ಪಾದನೆಯಲ್ಲಿ ಐತಿಹಾಸಿಕ ಬೆಳವಣಿಗೆ ಕಂಡುಬಂದಿದ್ದು, 2024-25ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆ 330.9 ಮಿಲಿಯನ್ ಟನ್ ಗಳನ್ನು ತಲುಪುವ ನಿರೀಕ್ಷೆಯಿದೆ. ಖಾರಿಫ್ ಭತ್ತ 120.6 ಮಿಲಿಯನ್ ಟನ್, ಗೋಧಿ 115.4 ಮಿಲಿಯನ್ ಟನ್ ಮತ್ತು ಸೋಯಾಬೀನ್ 15.1 ಮಿಲಿಯನ್ ಟನ್ ಗಳಷ್ಟಿದ್ದು, ಇವೆಲ್ಲವೂ ದಾಖಲೆ ಮಟ್ಟದಲ್ಲಿವೆ. ಸೋಯಾಬೀನ್ ಉತ್ಪಾದಕತೆಯು ಪ್ರತಿ ಹೆಕ್ಟೇರ್ ಗೆ 985 ಕೆ.ಜಿ.ಯಿಂದ 1,169 ಕೆ.ಜಿ.ಗೆ ಹೆಚ್ಚಿದೆ. ತೋಟಗಾರಿಕೆ ಕ್ಷೇತ್ರವೂ ಸಹ 362.1 ಮಿಲಿಯನ್ ಟನ್ ಉತ್ಪಾದನೆಯನ್ನು ತಲುಪುವ ನಿರೀಕ್ಷೆಯಿದೆ. ಈ ಸಾಧನೆಗಳು ರೈತರ ಕಠಿಣ ಪರಿಶ್ರಮ, ವೈಜ್ಞಾನಿಕ ಸಂಶೋಧನೆ ಮತ್ತು ಸರ್ಕಾರದ ರೈತ-ಸ್ನೇಹಿ ನೀತಿಗಳ ಸಂಯೋಜಿತ ಯಶಸ್ಸನ್ನು ಎತ್ತಿ ತೋರಿಸುತ್ತವೆ.
ಒಂದು ಸಮಗ್ರ ದೃಷ್ಟಿಕೋನ, ಸಂಯೋಜಿತ ಕಾರ್ಯವಿಧಾನ, ಸ್ಪಷ್ಟ ನೀತಿಗಳು ಮತ್ತು ಪ್ರಾಮಾಣಿಕ ಉದ್ದೇಶಗಳೊಂದಿಗೆ, ಕೇಂದ್ರ ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸಲು, ಅವರ ಶ್ರಮಕ್ಕೆ ನ್ಯಾಯಯುತ ಮೌಲ್ಯವನ್ನು ಖಚಿತಪಡಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿಸಲು ಆರು ಅಂಶಗಳ ಕಾರ್ಯತಂತ್ರವನ್ನು ರೂಪಿಸಿದೆ. ಇದು ಉತ್ಪಾದನೆಯನ್ನು ವೃದ್ಧಿಸುವುದು, ವೆಚ್ಚಗಳನ್ನು ತಗ್ಗಿಸುವುದು, ನ್ಯಾಯಯುತ ಬೆಲೆಗಳನ್ನು ಖಾತರಿಪಡಿಸುವುದು, ಸೂಕ್ತ ವಿಪತ್ತು ಪರಿಹಾರವನ್ನು ಒದಗಿಸುವುದು, ಬೆಳೆ ವೈವಿಧ್ಯೀಕರಣವನ್ನು ಪ್ರೋತ್ಸಾಹಿಸುವುದು ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದನ್ನು ಒಳಗೊಂಡಿದೆ.
'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವು ರೈತರ ಬದುಕನ್ನು ಉತ್ತಮಗೊಳಿಸುವ ಒಂದು ಬೃಹತ್ ಆಂದೋಲನವಾಗಿದೆ. ನನ್ನೆಲ್ಲಾ ರೈತ ಸಹೋದರ ಸಹೋದರಿಯರು ಈ ಅಭಿಯಾನದಲ್ಲಿ ಪಾಲ್ಗೊಂಡು ಇದರ ಪ್ರಯೋಜನಗಳನ್ನು ಪಡೆಯುವಂತೆ ನಾನು ಮನವಿ ಮಾಡುತ್ತೇನೆ. ವಿಜ್ಞಾನಿಗಳು ನೀಡುವ ಸಲಹೆಗಳನ್ನು ಪಾಲಿಸುವ ಮೂಲಕ, ನೀವು ನಿಮ್ಮ ಕೃಷಿ ಪದ್ಧತಿಗಳನ್ನು ಆಧುನೀಕರಿಸಬಹುದು ಮತ್ತು ನಿಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ, ವೆಚ್ಚಗಳನ್ನು ಕಡಿಮೆ ಮಾಡುವ ಮತ್ತು ರೈತರ ಲಾಭವನ್ನು ಗರಿಷ್ಠಗೊಳಿಸುವ ಗುರಿಯೊಂದಿಗೆ, ಈ ಮಹಾನ್ ಧ್ಯೇಯವು ವಿಕಸಿತ ಭಾರತದ ಅಡಿಪಾಯವಾಗಲಿದೆ.
(ಲೇಖಕರು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಕೇಂದ್ರ ಸಚಿವರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.