ADVERTISEMENT

ವಿಶ್ಲೇಷಣೆ: ಸಾಂಕ್ರಾಮಿಕ ರೋಗ ನಿಗ್ರಹಕ್ಕೆ ಒಪ್ಪಂದ

13 ಸುತ್ತಿನ ಚರ್ಚೆಯ ಬಳಿಕ ಸಹಿ ಬಿದ್ದಿರುವ ಈ ಒಪ್ಪಂದದ ಮಹತ್ವವಾದರೂ ಏನು?

ಡಾ.ಗೋಪಾಲ ದಾಬಡೆ
Published 22 ಮೇ 2025, 19:30 IST
Last Updated 22 ಮೇ 2025, 19:30 IST
   

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಮಧ್ಯೆ ಹದಿಮೂರು ಸುತ್ತಿನ ಚರ್ಚೆ ಮೂರು ವರ್ಷಗಳವರೆಗೆ ನಡೆದು, ಕಡೆಗೂ ‘ಜಾಗತಿಕ ಸಾಂಕ್ರಾಮಿಕ ರೋಗಗಳ ಒಪ್ಪಂದ’ಕ್ಕೆ ಸಹಿ ಬಿದ್ದಿದೆ. ರೋಗ ತಡೆ, ರೋಗವನ್ನು ಎದುರಿಸಲು ಸಿದ್ಧತೆ, ಸಾಂಕ್ರಾಮಿಕಕ್ಕೆ ಪ್ರತಿಸ್ಪಂದನೆ– ಈ ಮೂರು ವಿಚಾರಗಳ ಕುರಿತು 2021ರಿಂದಲೇ ಚರ್ಚೆ ಆರಂಭವಾಗಿತ್ತು. ಚುಚ್ಚುಮದ್ದು, ಚಿಕಿತ್ಸೆ, ತಂತ್ರಜ್ಞಾನ ಇವೆಲ್ಲ ಬಡರಾಷ್ಟ್ರಗಳಿಗೂ ಎಟುಕುವ ರೀತಿಯಲ್ಲಿ ಜಾಗತಿಕ ಮಟ್ಟದ ಕಾನೂನು ಇರಬೇಕು ಎಂಬುದರ ಕುರಿತೇ ಇಷ್ಟು ದಿನಗಳ ಚರ್ಚೆ ಕೇಂದ್ರೀಕೃತವಾಗಿತ್ತು.

ಸಾಂಕ್ರಾಮಿಕ ರೋಗವೊಂದು ಜಾಗತಿಕ ಮಟ್ಟದಲ್ಲಿ ಹಬ್ಬತೊಡಗಿತೆಂದರೆ, ಅದು ಜಗತ್ತಿನ ಎಲ್ಲಾ ದೇಶಗಳ ಆರೋಗ್ಯ ವ್ಯವಸ್ಥೆಯ ಮೇಲಷ್ಟೇ ಅಲ್ಲದೆ ಸಾಮಾಜಿಕ ವ್ಯವಸ್ಥೆಯ ಮೇಲೂ ಪ್ರಭಾವ ಬೀರುತ್ತದೆ. ಕೊರೊನಾ- 19 ಬಂದು ಇಡೀ ಭೂಗೋಳವನ್ನೇ ಬಾಧಿಸಿತು. ಅಂತಹದ್ದೇ ಅಥವಾ ಅದಕ್ಕಿಂತಲೂ ಕ್ರೂರವಾದ ಸಾಂಕ್ರಾಮಿಕ ರೋಗವೊಂದು ಮತ್ತೆ ಉದಯಿಸಬಹುದು, ಹಾಗೇನಾದರೂ ಅಂತಹ ರೋಗ ಬಂದರೆ, 2050ರ ಹೊತ್ತಿಗೆ ಏನಿಲ್ಲವೆಂದರೂ 2.5 ಕೋಟಿ ಜನ ಸಾಯಬಹುದು ಎಂದು ‘ಲ್ಯಾನ್ಸೆಟ್‌’ ನಿಯತಕಾಲಿಕದ ‘ಗ್ಲೋಬಲ್‌ ಹೆಲ್ತ್‌– 2050’ ಆಯೋಗವು ಭವಿಷ್ಯ ನುಡಿದಿದೆ. ಈ ರೋಗವನ್ನು ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವ ಸಂಬಂಧ ಅಂತರರಾಷ್ಟ್ರೀಯ ಒಪ್ಪಂದವೊಂದು ಆಗಬೇಕು ಎಂದು ಅದು ಹೇಳಿದೆ.

‘ಜಾಗತಿಕ ಸಾಂಕ್ರಾಮಿಕ ರೋಗಗಳ ಒಪ್ಪಂದ’ದ ಅವಶ್ಯಕತೆಯನ್ನು ಗ್ರಹಿಸಬೇಕಾದರೆ, ಕೋವಿಡ್‌- 19 ದಿನಗಳತ್ತ ಗಮನಹರಿಸಬೇಕು. ಈ ಸಾಂಕ್ರಾಮಿಕ ಉಂಟುಮಾಡಿದ ವಿನಾಶ, ಬಡ ದೇಶಗಳು, ಅದರಲ್ಲೂ ಆರೋಗ್ಯ ವ್ಯವಸ್ಥೆ ಸರಿಯಾಗಿಲ್ಲದ, ಉದ್ಯೋಗಗಳ ಅವಕಾಶ ಕಡಿಮೆ ಇರುವಂತಹ ದೇಶಗಳ ಕತೆ ಏನಾಯಿ ತೆಂಬುದನ್ನು ನೆನಪಿಸಿಕೊಳ್ಳಬೇಕು. ಶ್ರೀಮಂತ ರಾಷ್ಟ್ರ ಗಳಿಗಿಂತಲೂ ಲ್ಯಾಟಿನ್‌ ಅಮೆರಿಕದ ಬಡದೇಶಗಳು ಅತಿ ಹೆಚ್ಚು ಸಂಕಟವನ್ನು ಅನುಭವಿಸಿದವು. ಆರೋಗ್ಯ ಮತ್ತು ವೈದ್ಯಕೀಯದ ವಿಚಾರದಲ್ಲಿ ಶ್ರೀಮಂತ- ಬಡ ರಾಷ್ಟ್ರಗಳೆನ್ನದೆ, ಎಲ್ಲ ದೇಶಗಳಲ್ಲೂ ಸಮನಾದ ಚಿಕಿತ್ಸಾ ಅನುಕೂಲಗಳು ಇರಬೇಕಾದ ಅಗತ್ಯವನ್ನು ಅವುಗಳ ಪರಿಸ್ಥಿತಿ ಸಾರಿ ಹೇಳಿತು.

ADVERTISEMENT

ಕೊರೊನಾ ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳೇ ಮಿತಿಯಲ್ಲಿದ್ದು, ಅವು ಎಲ್ಲರಿಗೂ ದಕ್ಕುವಂತೆ ಇರಲಿಲ್ಲ. ಅಷ್ಟೇ ಅಲ್ಲ, ಶ್ರೀಮಂತ ರಾಷ್ಟ್ರಗಳಿಗೇ ಅವು ಆದ್ಯತೆಯ ಮೇರೆಗೆ ಪೂರೈಕೆಯಾಗಿದ್ದೂ ನಿಜ. ಇನ್ನು ಬಡರಾಷ್ಟ್ರಗಳಿಗಂತೂ ಅವು ಕೈಗೆಟುಕಲೂ ಇಲ್ಲ, ಆ ದೇಶಗಳು ಸ್ವಂತ ಉತ್ಪಾದಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.

ಸಾಂಕ್ರಾಮಿಕ ರೋಗವೊಂದು ಜಗತ್ತನ್ನೇ ವ್ಯಾಪಿಸಿದಾಗ, ಮುಂದುವರಿದ, ಶ್ರೀಮಂತ ರಾಷ್ಟ್ರಗಳಿಗಷ್ಟೇ ಔಷಧಗಳು ಸಿಕ್ಕಿದ್ದು ಜಗದ್ವ್ಯಾಪಿಯಾಗಿ ಚರ್ಚೆಗೆ ಒಳಗಾಯಿತು. ಇನ್ನೂ ಅಭಿವೃದ್ಧಿಯಾಗದ ದೇಶವಾಸಿಗಳಿಗೆ ಚುಚ್ಚುಮದ್ದು, ಸೂಕ್ತ ಚಿಕಿತ್ಸೆ ಮತ್ತು ಅವನ್ನೆಲ್ಲ ಪಡೆದುಕೊಳ್ಳುವ ತಂತ್ರಜ್ಞಾನ ಎಲ್ಲವೂ ಬೇಡವೇ? ಅಲ್ಲಿನ ಜನರ ಬದುಕುವ ಹಕ್ಕು, ಮಾನವ ಹಕ್ಕಿನ ಕತೆಯೇನು? ಇವೆಲ್ಲ ವಿಸ್ತೃತ ಚರ್ಚೆಗೆ ಒಳಗಾದವು ಎಂಬುದೇನೋ ನಿಜ. ಆದರೂ ಔಷಧಗಳು ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾದಾಗ ಅವು ಕೈಗೆಟುಕುವುದು ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಜನ ಹಾಗೂ ಸರ್ಕಾರಕ್ಕೆ ಮಾತ್ರ. ಶ್ರೀಮಂತ ದೇಶಗಳಲ್ಲಷ್ಟೇ ಉತ್ಪಾದನೆಯಾಗುವುದು, ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ, ಬಡ ದೇಶಗಳು ಚಿಕಿತ್ಸೆ, ಔಷಧ ಮತ್ತು ಚುಚ್ಚುಮದ್ದಿಗಾಗಿ ಕಾಯುತ್ತಲೇ ಇರುವುದು... ಇಂತಹ ಬೆಳವಣಿಗೆಗಳು ಕೊರೊನಾ ಸಮಯದಲ್ಲಷ್ಟೇ ಅಲ್ಲ, ಇಂದಿಗೂ ನಡೆಯುತ್ತಲೇ ಇವೆ. ಇವು ಜಾಗತಿಕ ಮಟ್ಟದಲ್ಲಿ ಮುಂದುವರಿದಿರುವ ಅಸಮಾನತೆಯನ್ನು ಎತ್ತಿ ತೋರಿಸುತ್ತವೆ.

ಹದಿಮೂರು ಸುತ್ತುಗಳಲ್ಲಿ ಚರ್ಚೆ ನಡೆದು, ಅಂತೂ ಕೊನೆಗೆ ಶ್ರೀಮಂತ ರಾಷ್ಟ್ರಗಳನ್ನು ಒಪ್ಪಿಸಿ ‘ಗ್ಲೋಬಲ್‌ ಪ್ಯಾಂಡೆಮಿಕ್‌ ಅಗ್ರೀಮೆಂಟ್’ ಅಥವಾ ‘ಜಾಗತಿಕ ಸಾಂಕ್ರಾಮಿಕ ರೋಗಗಳ ಒಪ್ಪಂದ’ಕ್ಕೆ ಸಹಿ ಹಾಕಿಸಲಾಯಿತು. ಈ ಒಪ್ಪಂದದ ಮಹತ್ವವೇನು? ತಂತ್ರಜ್ಞಾನದಲ್ಲಿ ಮುಂದುವರಿದಿರುವ ಶ್ರೀಮಂತ ರಾಷ್ಟ್ರ ಗಳಲ್ಲಿನ ಔಷಧ ಕಂಪನಿಗಳು ದಕ್ಷಿಣದ ಬಡ ದೇಶಗಳಿಂದ ತಮಗೆ ಬೇಕಾದ ರೋಗಾಣುಗಳ ಮಾದರಿಗಳನ್ನು ಒಯ್ಯುತ್ತವೆ. ಅದಕ್ಕೆ ಪ್ರತಿಯಾಗಿ ಆ ರಾಷ್ಟ್ರಗಳಿಗೆ ಏನನ್ನೂ ಕೊಡುವುದೇ ಇಲ್ಲ. ಆ ಮಾದರಿಗಳನ್ನು ಆಧರಿಸಿ ಔಷಧ ಕಂಡುಹಿಡಿದದ್ದು ಅಥವಾ ಅಭಿವೃದ್ಧಿಪಡಿಸಿದ್ದು ತಾವೇ ಎಂದು ಹೇಳಿಕೊಂಡು, ಅದಕ್ಕೆ ಪೇಟೆಂಟ್‌ ಮಾಡಿ ಇಟ್ಟು ಕೊಳ್ಳುತ್ತವೆ. ಕೋವಿಡ್‌- 19ರ ಸಂದರ್ಭದಲ್ಲಿ ಆಗಿದ್ದೂ ಅದೇ.

ಶ್ರೀಮಂತ ರಾಷ್ಟ್ರಗಳು ಆ ಕಂಪನಿಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡು, ಅವು ಉತ್ಪಾದಿಸಿದ್ದ ಎಲ್ಲ ಚುಚ್ಚುಮದ್ದುಗಳನ್ನೂ ಪಡೆದುಕೊಂಡವು. ಎಲ್ಲರಿಗೂ ಸಮಾನವಾಗಿ ಸಿಗಲೆಂಬ ಆಶಯದಿಂದ ವಿಶ್ವ ಆರೋಗ್ಯ ಸಂಸ್ಥೆ ಅಭಿವೃದ್ಧಿಪಡಿಸಿದ ‘ಕೋವ್ಯಾಕ್ಸ್‌’ನಿಂದ ಕೂಡ ಬಡದೇಶಗಳಿಗೆ ಪ್ರಯೋಜನ ಆಗದೇ ಹೋಯಿತು. ಬಡದೇಶಗಳು, ತಂತ್ರಜ್ಞಾನ ಇಲ್ಲದ ದೇಶಗಳು ‘ನಮಗೂ ಚುಚ್ಚುಮದ್ದು ಕೊಡಿ’ ಎನ್ನುತ್ತ ಸರದಿ ಸಾಲಿನಲ್ಲಿ ನಿಂತು ಕಾಯುವಂತಾಗಿತ್ತು.

ರೋಗಾಣು, ಸೂಕ್ಷ್ಮಜೀವಿಗಳನ್ನು ದಕ್ಷಿಣದ ಬಡ ದೇಶಗಳಿಂದ ಪಡೆದ ಕಂಪನಿಗಳು ತಾವು ಅಭಿವೃದ್ಧಿಪಡಿಸಿದ ಔಷಧ, ಸಲಕರಣೆ, ಚುಚ್ಚುಮದ್ದಿನ ಶೇ 10ರಷ್ಟು ಭಾಗವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳಿಸಬೇಕೆಂದು ಹೊಸ ಪ್ಯಾಂಡೆಮಿಕ್‌ ಅಗ್ರೀಮೆಂಟ್‌ ಹೇಳುತ್ತದೆ. ನಿಜ ಅರ್ಥದಲ್ಲಿ ಇದು ಯಾತಕ್ಕೂ ಸಾಲದು. ಆದರೂ ಏನನ್ನೂ ಕೊಡದೆ ದೋಚಿಕೊಂಡು ಹೋಗುತ್ತಿರುವುದಕ್ಕಿಂತ ಇದು ಸ್ವಲ್ಪ ವಾಸಿ.

ಬಲಾಢ್ಯ ರಾಷ್ಟ್ರಗಳು ತಮ್ಮ ಬಿಗಿಮುಷ್ಟಿಯನ್ನು ಸಡಿಲ ಮಾಡುವ ಯಾವುದೇ ಲಕ್ಷಣ ಇಲ್ಲಿ ಕಾಣುವುದಿಲ್ಲ. ಬದಲಿಗೆ ತಮ್ಮ ರಾಷ್ಟ್ರಗಳಲ್ಲಿ ನೆಲೆಯೂರಿರುವ ಕಂಪನಿಗಳ ಹಿಡಿತವನ್ನು ಇನ್ನಷ್ಟು ಗಟ್ಟಿ ಮಾಡಲು ಸಹಾಯ ಮಾಡುತ್ತವೆ. ಬಡ ದೇಶಗಳಲ್ಲಿ ಸಂಪನ್ಮೂಲಗಳೂ ಇಲ್ಲ, ತಂತ್ರಜ್ಞಾನವೂ ಇಲ್ಲ. ಹೀಗಾಗಿ, ಯಾವುದೇ ಹೊಸ ಆವಿಷ್ಕಾರ ಅಥವಾ ಉತ್ಪಾದನೆ ಅಲ್ಲಿ ಸಾಧ್ಯ ಇಲ್ಲದಿರುವುದರಿಂದ ಮಾತುಕತೆ ನಡೆದಾಗ ಪಟ್ಟು ಹಿಡಿಯುವುದಕ್ಕೆ ಅವುಗಳಿಗೆ ಅವಕಾಶವೂ ಇಲ್ಲ.

ಉತ್ಪಾದನೆಯ ಮೇಲೆ ಹಿಡಿತವಿಲ್ಲದ ಕಾರಣದಿಂದ ರೋಗತಡೆ ಚುಚ್ಚುಮದ್ದುಗಳು ಅವುಗಳಿಗೆ ಸಕಾಲದಲ್ಲಿ ಸಿಗುವುದಿಲ್ಲ. ಆದಾಗ್ಯೂ ನಾಗರಿಕ ಹಿತಾಸಕ್ತ ಸಂಘಟನೆಗಳು, ಮಾಧ್ಯಮಗಳ ಕಾರಣದಿಂದಾಗಿ ಆ ಕುರಿತು ಚರ್ಚೆಯೇನೋ ನಡೆಯಿತು. ಮತ್ತೆ ಮತ್ತೆ ಸಭೆಗಳಾದವು. ಮಾನವ ಹಕ್ಕಿನ ಕಾನೂನಾತ್ಮಕ ಅಂಶಗಳನ್ನು ಸೇರಿಸಿಯಾದರೂ ಬಡರಾಷ್ಟ್ರಗಳ ರಕ್ಷಣೆ ಆಗಬೇಕಿತ್ತು. ಆದರೆ ಬರೀ ಪರಿಚ್ಛೇದ 12ರಲ್ಲಿನ ಕೆಲ ಅಂಶಗಳನ್ನು ಬಿಟ್ಟರೆ ಬೇರೆ ಎಲ್ಲಿಯೂ ವಿಶ್ವ ಆರೋಗ್ಯ ಸಂಸ್ಥೆ ಸಹ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ಅಲ್ಲಿ ಕೂಡ ಶ್ರೀಮಂತ ರಾಷ್ಟ್ರಗಳದ್ದೇ ಹಿಡಿತ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಆರೋಗ್ಯ, ಆಹಾರದಂಥ ವಿಷಯಗಳಲ್ಲಿ ಬಡದೇಶಗಳಿಗೂ ಸಮಪಾಲು ಸಿಗಬೇಕೆಂಬುದು ಜಾಗತಿಕ ಮಟ್ಟದ ಸಂಸ್ಥೆಗಳ ಆಶಯ. ಆದರೆ ಅದು ಸಿಗುವ ಹಂತಕ್ಕೆ ಬಂದಾಗ ಅಥವಾ ಕ್ರಿಯೆಗಿಳಿಯಬೇಕಾದಾಗ ಶ್ರೀಮಂತ ದೇಶಗಳು ಏನಾದರೂ ಕೊಕ್ಕೆ ಹಾಕಿಯೋ ತರಲೆ ತೆಗೆದೋ ಅದು ಸಿಗದಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಇದಕ್ಕೆ ಹದಿಮೂರು ಬಾರಿ ಸಭೆ ಸೇರಿ ಒಂದು ನಿಲುವಿಗೆ ಬಂದ ಈ ಒಪ್ಪಂದವೇ ನಿದರ್ಶನ. ಹಿಂದಿನಿಂದ ನಡೆದು ಬಂದಿದ್ದೂ ಹಾಗೆಯೇ.

ಚುಚ್ಚುಮದ್ದುಗಳು, ಪರಿಣಾಮಕಾರಿಯಾದ ಔಷಧಗಳು, ತಂತ್ರಜ್ಞಾನ ಯಾವಾಗಲೂ ಉತ್ತರದ ಶ್ರೀಮಂತ ರಾಷ್ಟ್ರಗಳಲ್ಲಿಯೇ ತಯಾರಾಗುತ್ತವೆ. ಅವನ್ನು ಬಡದೇಶಗಳಿಗೆ ಕೊಡಲು ಅವು ತಯಾರಿಲ್ಲ. ಖರೀದಿಸುವ ತಾಕತ್ತೂ ಇವರಿಗಿಲ್ಲ. ‘ನಮಗೂ ಕೊಡಿ’ ಎಂದು ಬೇಡುವಂಥ ಪರಿಸ್ಥಿತಿ. ಈ ಒಪ್ಪಂದದಲ್ಲಾದರೂ ಬಡದೇಶಗಳಿಗೆ ಹಕ್ಕಿನಿಂದ ಕೇಳಬಹುದಾದ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿತ್ತು. ಹಸಿದ ನಾಯಿಗೆ ರೊಟ್ಟಿಯ ಚೂರು ಒಗೆದಂತೆ ಒಟ್ಟು ಉತ್ಪಾದನೆಯ ಹತ್ತು ಶತಾಂಶ ಕೊಡಲು ಒಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಗೆ ಬರುವ ಈ ಹತ್ತು ಶತಾಂಶ ಭಾಗವನ್ನು ಅದು ಅವಶ್ಯಕತೆ ಇರುವ ಎಲ್ಲ ಬಡದೇಶಗಳಿಗೂ ಹಂಚಬೇಕು. ಎಂಥ ವಿಡಂಬನೆ!

ಮುಂದಿನ ತಿಂಗಳು ಜಿನೀವಾದಲ್ಲಿ ನಡೆಯಲಿರುವ ಜಾಗತಿಕ ಆರೋಗ್ಯ ಸಮಾವೇಶದಲ್ಲಿ (ವರ್ಲ್ಡ್‌ ಹೆಲ್ತ್‌ ಅಸೆಂಬ್ಲಿ) ಈ ಒಪ್ಪಂದದ ಕರಡನ್ನು ಮಂಡಿಸಲಾಗುತ್ತದೆ. ಅಲ್ಲಿ ಏನು ನಿರ್ಧಾರವಾಗುವುದೋ ಕಾದು ನೋಡೋಣ.

ಲೇಖಕ: ಅಧ್ಯಕ್ಷ, ಡ್ರಗ್ ಆ್ಯಕ್ಷನ್ ಫೋರಮ್- ಕರ್ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.