ADVERTISEMENT

ಗ್ರ್ಯಾಂಡ್ ತಮಾಷಾ!

ಪ್ರೊ.ಎಸ್.ಬಿ.ರಂಗನಾಥ್
Published 6 ಮಾರ್ಚ್ 2019, 20:00 IST
Last Updated 6 ಮಾರ್ಚ್ 2019, 20:00 IST
   

‘ಅಭಿನಂದನೆಗಳು ಕಣಯ್ಯಾ, ಬೆಟ್‍ನಲ್ಲಿ ಗೆದ್ದಿದ್ದಕ್ಕೆ. ಎಸ್ಕೇಸಿ ಕೊಡಿಸು’ ಎಂದ ಜಿಗ್ರಿ ದೋಸ್ತ್ ಚಿಕ್ಕೇಶಿ. ನಾನು ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಬೇಷರತ್ತಾಗಿ ಬಿಡುತ್ತೇಂತ ಸ್ವೀಟ್, ಖಾರ, ಕಾಫಿ ಬೆಟ್ ಕಟ್ಟಿದ್ದೆ.

‘ಅಭಿನಂದನೆ ಅಂದ್ರೆ ಶೌರ್ಯ, ಪರಾಕ್ರಮ ಎಂದು ಅರ್ಥ ಬದಲಾಯಿಸಿಕೋಬೇಕೂಂತ ಪೀಎಂ ಹೇಳ್ತಿದಾರಲ್ಲಯ್ಯಾ’ ಎಂದೆ.

‘ಇದುವರೆಗೂ ಅವರು ನಗರಗಳ ಹೆಸರು ಮಾತ್ರ ಬದಲಾಯಿಸ್ತಿದ್ರು. ಈಗ ಭಾಷೆಗೂ ಕೈ ಹಚ್ಚಿದರಾ. ಈ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಿಮ್ಮ ಪೀಎಂ ಇನ್ನೂ ಏನೇನು ಬದಲಾಯಿಸ್ತಾರೋ!’

ADVERTISEMENT

‘ಅದಿರ್‍ಲಿ... ನಿನ್ನ ತಲವಾರ್ ಕಟ್ ಮೀಸೆ, ಗಿರಿಜಾ ಮೀಸೆ ಆದದ್ದು ಯಾವಾಗಿನಿಂದ?’

‘ಅದು ಗಿರಿಜಾ ಮೀಸೆ ಅಲ್ಲ, ಅಭಿನಂದನ್ ಮೀಸೆ. ನಿಮ್ಮ ಪೀಎಂ ಒಬ್ರೇ ಅಲ್ಲ ಹೆಸರು ಬದಲಾಯಿಸೋರು... ನ್ಯೂಸ್ ಪೇಪರ್ ನೋಡ್ಲಿಲ್ವೆ? ಹುಡುಗೀರೆಲ್ಲಾ ಗಿರಿಜಾ ಮೀಸೆ ಬರೆದುಕೊಂಡು ಸಂಭ್ರಮಿಸ್ತಿದಾರೆ!’

‘ಹೋಲ್ಡ್ ಆನ್, ಹಂಗೆಲ್ಲಾ ಸಂಭ್ರಮಿಸ ಬಾರದೂಂತ ನಿಮ್ಮ ಸೀಎಂ ಫರ್ಮಾನು ಹೊರಡಿಸಿದ್ದಾರಂತಲ್ಲಾ’!

‘ಆದ್ರೆ, ಸೀಎಂ ಹೇಳಿಕೆ ಕೋಮು ಸೌಹಾರ್ದ ಕದಡುತ್ತೇಂತ ಯಾರೋ ಪೊಲೀಸ್ ಕಂಪ್ಲೇಂಟ್ ಕೊಟ್ಟಿದಾರಂತಲ್ಲಯ್ಯಾ!’

‘ಅವರಿಗೆ ಬುದ್ಧಿ ಇಲ್ಲ. ಇದು ಭರತಖಂಡ ಹೊಸ ಸರ್ಕಾರವನ್ನು ಆರಿಸೋ ಸಮಯ. ನಿಮ್ಮ ಸೀಎಂ ಮಾಜಿ ಪೀಎಂ ಸಲಹೆ ಪಡೆದು ಇನ್ನೂ ಏನೇನು ದಾಳ ಉರುಳಿಸ್ತಾರೋ... ಎಷ್ಟು ಕರ್ಚೀಫ್ ಒದ್ದೆಯಾಗುತ್ವೋ’.

‘ಪ್ರೇಮ ಮತ್ತು ಯುದ್ಧದಲ್ಲಿ ಮಾಡಿದ್ದೆಲ್ಲವೂ ಸರಿ. ಇದಕ್ಕೆ ಚುನಾವಣೇನೂ ಸೇರಿಸಬೌದಲ್ವೇ?’

‘ಹೌದಯ್ಯಾ. ಇನ್ನು ಎರಡು ತಿಂಗಳು ನಮಗೆಲ್ಲಾ ‘ಗ್ರ್ಯಾಂಡ್ ಭಾರತ್ ತಮಾಷಾ’ ಪುಕ್ಕಟೆಯಾಗಿ! ನಡಿ ಸರ್ಕಲ್ ರೆಸ್ಟೋರೆಂಟ್‍ಗೆ’ ಎನ್ನುತ್ತಾ ರಟ್ಟೆಗೆ ಕೈಹಾಕಿದ.

‘ಬಿಡಯ್ಯಾ ನಾನೇನು ಪಾಕಿಸ್ತಾನದ ಯುದ್ಧ ಕೈದಿಯಲ್ಲ’ ಎನ್ನುತ್ತಾ ಜೇಬು ಮುಟ್ಟಿಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.