ADVERTISEMENT

ಕಮಲ ಪರಿಣಾಮ

ಬಜೆಟ್ ಕುರಿತು ಹಾಸ್ಯ

ಸುಮಂಗಲಾ
Published 7 ಜುಲೈ 2019, 19:45 IST
Last Updated 7 ಜುಲೈ 2019, 19:45 IST
   

ಅಕಳಂಕ ಜಾನಕೀರಮಣ ಅರ್ಥಾತ್ ನಿರ್ಮಲಾ ಸೀತಾರಾಮನ್ನರ ಕೆಂಪುವಸ್ತ್ರದ ಗಂಟಿನೊಳಗಿಂದ ತಮಗೂ ಮಾಯಾದೀಪವೊಂದು ಹೊರ ಬಂದೀತೆಂದು ಶ್ರೀಸಾಮಾನ್ಯರು ಕಾದಿದ್ದೇ ಬಂತು. ಈ ಬಜೆಟ್ಟಿನಲ್ಲಿ ದುಬಾರಿಯಾದ ವಸ್ತುಗಳು ಶ್ರೀಸಾಮಾನ್ಯನ ಇಡೀ ಆಯುಷ್ಯದ ಬಜೆಟ್ಟಿಗೂ ಕೈಗೆಟುಕದವೇ. ಇನ್ನು ಅಗ್ಗವೆನ್ನಲಾದ ಕಾರು, ಏ.ಸಿ ಇತ್ಯಾದಿಗಳು ಅವರ ತಿಂಗಳ ದಿನಸಿ ಪಟ್ಟಿಯ ವಸ್ತುಗಳೇನಲ್ಲವಲ್ಲ. ಅನ್ನ, ನೀರು, ಸೂರು ಮೊದಲು ಬೇಕು ಎಂದೆಲ್ಲ ಶ್ರೀಸಾಮಾನ್ಯ ಬಡಬಡಿಸುತ್ತಿದ್ದರೆ, ಭಕ್ತಮಾಧ್ಯಮಗಳು ಬ್ರಿಟಿಷ್‌ ದಾಸ್ಯದ ಸಂಕೇತ ಬ್ರೀಫ್‌ಕೇಸ್ ಕೈಬಿಟ್ಟು, ಸಾಂಪ್ರದಾಯಿಕ ‘ಬಹಿ ಖಾತಾ’ ಹಿಡಿದುಬಂದಿ ದ್ದನ್ನು ವರ್ಣರಂಜಿತವಾಗಿ ಬಿತ್ತರಿಸುತ್ತಿದ್ದವು. ಇನ್ನು ಮುಂದೆ ಬಜೆಟ್ ಪ್ರತಿಗಳನ್ನು ಪಾಶ್ಚಾತ್ಯರ ಪ್ರಿಂಟಿಂಗ್ ಸಂಸ್ಕೃತಿಯಲ್ಲಿ ಮುದ್ರಿಸದೇ, ತಾಳೆಗರಿಗಳಲ್ಲಿಯೇ ಬರೆದು, ‘ಬಹಿ ಖಾತಾ’ದಲ್ಲಿ ತರಬಹುದು. ಜಾನಕೀ ರಮಣರು ಪ್ರಯಾಣಕ್ಕೂ ಸೂಟ್‍ಕೇಸ್ ಬಿಟ್ಟು ಹಳೇ ರೇಷ್ಮೆ ಸೀರೆಯಲ್ಲಿ ಗಂಟು ಕಟ್ಟಿಕೊಂಡು ಹೋಗಬಹುದು, ಪ್ರಧಾನ ಸೇವಕರು ವಿದೇಶ ಪ್ರವಾಸದಲ್ಲಿ ಕಪ್ಪುಸೂಟು ಧಾರಿಯಾಗದೇ ಕುರ್ತಾ ಹಾಕಬಹುದು.

ಇತ್ತ ಕರ್ನಾಟಕದ ಆಪರೇಷನ್ ಪಂಡಿತರು ‘ಶಾ’ಣ್ಯಾ ನೇತೃತ್ವದಲ್ಲಿ ‘ಮುಸುಕಿನ ಮರೆಯಲ್ಲಿ ಕ್ರಿಯೆ ಹುಟ್ಟುಹಾಕಿ ತಮಗೆ ಬೇಕಾದ ಪ್ರತಿಕ್ರಿಯೆಯನ್ನು ಪಡೆಯುವ ಕಮಲ ಪರಿಣಾಮ’ವನ್ನು ಕಂಡು ಹಿಡಿದಿದ್ದಾರೆ. ಸಾವಿರಾರು ವರ್ಷಗಳ ಹಿಂದೆಯೇ ಶಸ್ತ್ರಚಿಕಿತ್ಸೆ ಕಂಡುಹಿಡಿದ ನಮ್ಮ ಘನಪರಂಪರೆಯನ್ನು ಮುಂದುವರಿಸಿದ ಕಮಲ ಪಾಳಯವು ‘ತೆನೆ’ ಹಿಡಿದು ಗಂಟಾಗಿದ್ದ ‘ಕೈ’ಗಳ ಆಪರೇಷನ್‍ ಯಶಸ್ವಿಗೊಳಿಸಿದ ಹುಮ್ಮಸ್ಸಿನಲ್ಲಿದೆ. ಆಡಿಯೂರಪ್ಪ ಮುಖ್ಯಮಂತ್ರಿಯಾಗುವ, ‘ರಾಜೀನಾಮೆ’ ಬಯಲಾಟದ 14 ನಾಯಕ ನಟರೂ ಮಂತ್ರಿಗಳಾಗುವ ಕನಸು ಕಾಣುತ್ತಿದ್ದರೆ, ಮತದಾರರು ದುಃಸ್ವಪ್ನ ಕಂಡು ಬೆಚ್ಚಿಬಿದ್ದಿದ್ದಾರೆ. ಅತೃಪ್ತಾತ್ಮಗಳು ಒಂಥರದ ಪ್ರೇತಾತ್ಮಗಳಂತೆ, ಮತದಾರರ ಯಾವ ಗೋಳೂ ಸೋಕುವುದಿಲ್ಲ! ಎಲ್ಲ ಶಾಸಕರೂ ಮಂತ್ರಿಯಾಗುವಂತೆ ಸಚಿವ ಸ್ಥಾನಗಳನ್ನು ಹೆಚ್ಚಿಸುವುದೊಂದೇ ದಾರಿ. ರೇವಣಾಯ ನಿಂಬೆ ಹಣ್ಣುಗಳು, ಡಿಕೆ ಫೆವಿಕಾಲು, ಸಿದ್ದ ಮೈತ್ರಿಸೂತ್ರ ಇವೆಲ್ಲವನ್ನೂ ಮಕಾಡೆ ಮಲಗಿಸಿ ‘ರೆಸಾರ್ಟ್ ರಾಜಕೀಯ’ ನಾಟಕದ ಪರದೆ ಎತ್ತಿರುವ ‘ಕಮಲ ಪರಿಣಾಮ’ಕ್ಕೆ ಈ ವರ್ಷದ ‘ರಾಜಕೀಯ ವಿಜ್ಞಾನ’ದ ನೊಬೆಲ್‍ ಪ್ರಶಸ್ತಿ ದಕ್ಕುವುದು ಖಚಿತ ಎನ್ನಲಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT