ADVERTISEMENT

ಬೆಕ್ಕಣ್ಣನ ಸಾಲಿ

ಸುಮಂಗಲಾ
Published 9 ಫೆಬ್ರುವರಿ 2020, 19:45 IST
Last Updated 9 ಫೆಬ್ರುವರಿ 2020, 19:45 IST
   

ಬೆಕ್ಕಣ್ಣ ಹಳೆಯ ಕಾಗದಪತ್ರಗಳನ್ನು ಹರಡಿಕೊಂಡು ಕೂತಿತ್ತು. ನನ್ನ ನೋಡಿದ್ದೇ, ‘ನಾ ತುರ್ತುಪರಿಸ್ಥಿತಿವಳಗ ಜೈಲಿಗಿ ಹೋಗಿದ್ನಲ್ಲ, ಅದ್ರ ಕಾಗದಪತ್ರ. ಯಡಿಯೂರಜ್ಜಂಗೆ ಕೊಡಾಕ’ ಎಂದಿತು. ‘ಮಂಗ್ಯಾನಂಥವ್ನೆ... ಆವಾಗ ನೀ ಇನ್ನಾ ಹುಟ್ಟೇ ಇರಲಿಲ್ಲ’ ಎಂದರೆ ‘ನಾ ಹೋಗದಿದ್ರೆ ಏನಾತು... ನನ್ನ ಮುತ್‍ಮುತ್ತಜ್ಜ, ಮುತ್ಮುತ್ತಜ್ಜಿ ಹೋಗ್ಯಾರೆ. ಅದಕ್ಕ ನನಗ ಪಿಂಚಣಿ ಕೊಡಬಕು’ ಎಂದು ವಾದಿಸಿತು.

‘ದೇಶಕ್ಕಾಗಿ ಹೋರಾಡೀವಿ, ಹಂಗೆಲ್ಲ ಪಿಂಚಣಿ ಕೇಳಬಾರದು ಅಂತ ರಾಷ್ಟ್ರಭಕ್ತ ಸಂಘದವ್ರು ಹೇಳ್ಯಾರಂತ. ಅವ್ರೇ ಬ್ಯಾಡ ಅಂದ್‌ಮ್ಯಾಗೆ ಯಡಿಯೂರಜ್ಜ ಏನು ಕೊಡ್ತಾನ. ದಶಕಂಟಕಗಳಿಗೆ ಮಂತ್ರಿ ಕುರ್ಚಿ ಕೊಟ್ಟಾತು, ಇನ್ನುಳಿದ ಕಂಟಕಗಳಿಗೆ ಏನ್ ಕೊಡಾದು, ಪುತ್ರ ಪಟ್ಟಾಭಿಷೇಕಕ್ಕೆ ಈಗಿಂದಲೇ ಹೆಂಗೆ ಹೆಜ್ಜೆ ಇಡಬಕು, ಹೀಂಗ ಹತ್ತಾರು ಚಿಂತಿವಳಗ ಒಲಿ ಮ್ಯಾಗಿಟ್ಟ ಕುಕ್ಕರ್ ಆಗ್ಯಾನ, ಪಾಪ’ ಎಂದೆ.

ಬೆಕ್ಕಣ್ಣ ‘ಹಂಗಾರೆ ಉತ್ತರಪ್ರದೇಶಕ್ಕಾದ್ರೂ ಕಳಿಸಿಕೊಡು. ಯೋಗಿ ಮಾಮಾ ಇಪ್ಪತೈದು ಸಾವಿರ ಪಿಂಚಣಿ ಕೊಡ್ತಾನಂತ’ ಎಂದಿತು.

ADVERTISEMENT

‘ಅವನ ಬ್ಲ್ಯಾಕ್ ಕ್ಯಾಟ್ ಕಮಾಂಡೊಗೆ ನಿನ್ನ ಸೇರಿಸ್ಕೋತಾರ ಅಂತ ಮಾಡೀಯೇನ್... ಅಲ್ಲಿ ಅಂವ ಸಿಎಎ ಜಾರಿ ಮಾಡ್ಯಾನ. ನೀ ಮೊಟ್ಟೆ, ಅವಲಕ್ಕಿ, ಮೊಸರು ತಿನ್ನೂದು ನೋಡಿದ್ರೆ ಎಲ್ಲೋ ಬಾಂಗ್ಲಾ ಕಡಿಂದ ಬಂದಿ ಅಂತ ನಿನ್ನ ಒದ್ದು ಹೊರಗೆ ಹಾಕ್ತಾನಲೇ’ ಎಂದೆ.

ಸ್ವಲ್ಪ ಹೊತ್ತು ಯೋಚಿಸಿದ ಬೆಕ್ಕಣ್ಣ ‘ದಿಲ್ಲಿಗಾದ್ರೂ ನನ್ನ ಕಳಿಸಿಕೊಡವ್ವಾ’ ಎಂದಿತು ಬಲು ಘನಗಂಭೀರವಾಗಿ.

‘ಮೋದಿ ಮಾಮಾಗ, ಶಾಣ್ಯಾ ಅಂಕಲ್‍ಗ ಜೈ ಅನ್ನಾಕೆ ಹೊಂಟೀಯೇನು’ ಎಂದು ಕೇಳಿದೆ. ಊಹ್ಞೂಂ ಎಂದು ತಲೆಯಲ್ಲಾಡಿಸಿತು. ‘ಎಲ್ಲಿಗಿ ಕೇಳಿದ್ರೂ ಕಳಿಸಂಗಿಲ್ಲ ಅಂತ ಏನೋ ನೆವ ಹೇಳ್ತಿದಿ. ನನಗ ಇವರ್ ಯಾರೂ ಬ್ಯಾಡೇಳವಾ. ಪೊರಕೆ ಪಕ್ಷದವ್ರು ಸರ್ಕಾರಿ ಸಾಲಿ ಚಲೋ ಮಾಡ್ಯಾರಂತ. ಅಲ್ಲಿಗಾದ್ರೂ ಸೇರಿಸು. ಛಲೋತ್ನಾಗಿ ಸಾಲಿ ಕಲಿತೀನಿ. ವಾಟ್ಸಾಪ್ ವಿ.ವಿ.ವಳಗ ಪಿಎಚ್‍.ಡಿ. ಮಾಡೂದಕ್ಕಿಂತ ಸರ್ಕಾರಿ ಸಾಲಿಗಿ ಹೋಗೂದೆ ವಾಸಿ’ ಎಂದು ಠಾಕುಠೀಕಾಗಿ ಪಾಟಿಚೀಲ ಹೆಗಲಿಗೇರಿಸಿಕೊಂಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.