ADVERTISEMENT

ಚುರುಮುರಿ| ಮದ್ಯಮಾಯಣ

ಲಿಂಗರಾಜು ಡಿ.ಎಸ್
Published 11 ಮೇ 2020, 19:45 IST
Last Updated 11 ಮೇ 2020, 19:45 IST
.
.   

ನಾನೂ, ತುರೇಮಣೆ ವತ್ತಾರೆಗೆ ವಾಕಿಂಗ್ ಮಾಡಿ ಪಾರ್ಕಲ್ಲಿ ಕುಂತುದ್ದಾಗ, ಎಣ್ಣೆ ಹಾಕಿದ್ದ ಒಬ್ಬ ಭಿಕ್ಷದೋನು ತೂರಾಡ್ತಾ ಬಂದು ‘ಲಾಕ್‍ಡೌನ್ ಟೈಮಲ್ಲಿ ನೂರು ರೂಪಾಯಿ ಕೊಡು ತಂದೆ, ನಿನ್ನೆಸರೇಳಿ ಕ್ವಾಟ್ರಾಕಿ ಬೌಬೌ ಬಿರಿಯಾನಿ ತಿಂದುಕತಿನಿ’ ಅಂದ.

‘ಅಲ್ಲಾ ಬಡ್ಡಿಹೈದ್ನೆ, ದುಡೂದು ತಿನ್ನಕಾಗೂ
ದಿಲ್ವಲಾ ನಿನಗೆ? ನಿನ್ನ ಕಡಿದರೆ ಇಡೀ ಮಂಡೇವುಕ್ಕೇ ಬಾಡು ಹಂಚಿ ತಲೆ-ಕಾಲು ಉಳಿತವೆ!’ ಅಂದು ಅವನ ಕಿಚಾಯಿಸಿದರು.

‘ಒಂದಾನೊಂದು ಕಾಲದೇಲಿ ನಾನೂ ಉದ್ಯಮಿ ಆಗಿದ್ದೆ ಕನಪ್ಪಾ. ಸಾಲ ಕೊಟ್ಟ ಬ್ಯಾಂಕಿನೋರು ಹಳೇ ಚಡ್ಡೀನೂ ಬುಡದೇ ಸಾಲಕ್ಕೆ ವಜ ಹಾಕ್ಯಂಡರು! ಲಾಕ್‍ಡೌನ್ ಆಗಿರ ಪ್ಯಾಕ್ಟ್ರಿಗೆ ಕೆಇಬಿ ಲಕ್ಷಾಂತರ ರುಪಾಯಿ ಬಿಲ್ಲು ಕೊಟ್ಟದೆ’ ಅಂದ ಅವ.

ADVERTISEMENT

‘ಸಾ, ನಂದೂ ಕರಂಟು ಬಿಲ್ಲು...’ ಅಂತ ಹೇಳೋಕೆ ಹೊಂಟ ನನ್ನ ತಡದು ತುರೇಮಣೆ ‘ಬಡ್ಡಿಹೈದ್ನೆ ಕೆಇಬಿ ಎಲ್ಲಾರಿಗೂ ಮೂರರಷ್ಟು ಬಿಲ್ಲು ಶಾಕ್ ಕೊಟ್ಟುಕಂಡು ಶಾಕಾಹಾರಿಯಾಗ್ಯದೆ. ಈಗ ನಂದೆಲ್ಲಿ ಮಡಗಲಿ ಅಂತ ತಬ್ಲಿಗಿ ಥರಾ ನಡಂತರಕ್ಕೆ ಬರಬೇಡ ಅಮಿಕ್ಕಂಡಿರು’ ಅಂದು ಆ ಕಡೆ ತಿರುಗಿದರು.

‘ಕುಡಿದ್ರೆ ಮನೆ ಹಾಳಾಯ್ತವೆ ಕನೋ’ ಅಂದ್ರು ಅವನಿಗೆ. ‘ಹೌದೇಳಪ್ಪೋ ಕುಡಿದೇವೋದ್ರೆ ದೇಶ ಹಾಳಾಯ್ತದೆ! ಹಂಗೆಲ್ಲ ಕುಡುಕ ಅಂತ ಜರಿಬ್ಯಾಡ, ಮದ್ಯಪ್ರೇಮಿ ಅನ್ನು! ನಮ್ಮಲ್ಲೂ ವೃತ್ತಿಪರ, ಪರಿಣತ, ಹವ್ಯಾಸಿ ಮದ್ಯಪ್ರೇಮಿಗಳವರೆ. ಸರ್ಕಾರ ನಮ್ಮ ಏಳ್ಗೆಗೆ ಎಣ್ಣೆ ಪ್ರಾಧಿಕಾರ ಮಾಡಬೇಕು ಅನ್ನೋದು ನನ್ನ ಪೆಗ್ಗೊತ್ತಾಯ!’ ಅಂದ.

‘ಬಡ್ಡಿಹೈದ್ನೆ, ಒಂದು ಪ್ರಶ್ನೆ ಕೇಳ್ತೀನಿ ಉತ್ತರ ಹೇಳಿದ್ರೆ ಕ್ವಾಟ್ರು ಎಣ್ಣೆ, ಬೌಬೌ ಬಿರಿಯಾನಿ ಕೊಡುಸ್ತೀನಿ. ಕುಡುಕರಿಗೆ ಕಾಲೆಲ್ಲಾ ನಡುಗತವೆ, ತಲೆ ತಿರುಗತದೆ ಯಾಕೆ ಹೇಳುಡಾ?’ ಅಂದ್ರು ತುರೇಮಣೆ.

‘ಅಣೈ, ಕುಡುಕ ಒಂದು ವಾರಕ್ಕೇ ನೂರಾರು ಕೋಟಿ ರೂಪಾಯಿ ಬಿಸಿನೆಸ್ಸು ಮಾಡ್ಯವುನೆ ಅಂದ್ರೆ ತಿಳಕಾ, ಇಡೀ ದೇಶದ ಆರ್ಥಿಕತೆನೇ ಅವನ ಹೆಗಲ ಮೇಲದೆ. ಆ ಭಾರ ತಡಿಲಾರದೇ ಕಾಲೆಲ್ಲಾ ನಡುಗ್ತವೆ, ತಲೆ ತಿರುಗ್ತದೆ ಗೊತ್ತಾ!’ ಅನ್ನದಾ ಮದ್ಯರಾಕ್ಷಸ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.