ADVERTISEMENT

ಮ್ಯಾಚಿಂಗ್ ಮಾಸ್ಕ್

ಮಣ್ಣೆ ರಾಜು
Published 10 ಮಾರ್ಚ್ 2020, 19:32 IST
Last Updated 10 ಮಾರ್ಚ್ 2020, 19:32 IST
   

ಕೊರೊನಾ ವೈರಸ್‌ಗೆ ಹೆದರಿ ಅಕ್ಕಪಕ್ಕದ ಮನೆ ಯವರು ಮಾಸ್ಕ್ ಹಾಕಿಕೊಂಡಿದ್ದರು. ‘ಅಮ್ಮಾ, ನಮಗೂ ಮಾಸ್ಕ್ ಬೇಕು’ ಅಂತ ಮಕ್ಕಳು ಆಸೆಪಟ್ಟವು. ಮಕ್ಕಳ ಆಸೆ ಈಡೇರಿಸಬೇಕು, ನೆರೆಹೊರೆಯವರಂತೆ ನಾವೂ ಬಾಳಬೇಕು ಎಂದು ಸುಮಿ, ಗಂಡ– ಮಕ್ಕಳ ಜೊತೆ ಮಾಸ್ಕ್ ಖರೀದಿಗೆ ಬಂದಿದ್ದಳು.

ಮಾಸ್ಕ್ ಅಂಗಡಿ ತುಂಬಾ ಜನಜಂಗುಳಿ. ‘ಲೇಟೆಸ್ಟ್ ಮಾಸ್ಕ್ ತೋರಿಸಿ’ ಅಂಗಡಿಯವನನ್ನು ಕೇಳಿದಳು ಸುಮಿ.

‘ಕಡಿಮೆ ಬೆಲೆ, ದೀರ್ಘ ಬಾಳಿಕೆಯ ಮಾಸ್ಕ್ ತೋರಿಸಿ’ ಎಂದ ಗಂಡ ಶಂಕ್ರಿ.

ADVERTISEMENT

ಅಂಗಡಿಯವ ಒಂದಷ್ಟು ಮಾಸ್ಕ್‌ಗಳನ್ನು ತಂದು ಹಾಕಿ, ‘ಇದನ್ನು ನೋಡಿ ಮೇಡಂ, ಹೈ ಕ್ವಾಲಿಟಿ ಮಾಸ್ಕ್. ಮದುವೆ, ನಾಮಕರಣ, ಗೃಹ ಪ್ರವೇಶಕ್ಕೆ ಧರಿಸಿ ಹೋಗಬಹುದು. ರೇಷ್ಮೆ ಸೀರೆ, ಒಡವೆಗೆ ಮ್ಯಾಚ್ ಆಗುತ್ತೆ’ ಅಂದ.

‘ಬೇರೆ ಕಲರ್, ಹೊಸ ಡಿಸೈನಿನ ಮಾಸ್ಕ್ ತೋರಿಸಿ, ಗ್ರ್ಯಾಂಡ್ ಆಗಿರಲಿ, ಬಾರ್ಡರ್ ಚೆನ್ನಾಗಿರಲಿ, ಕಾಸ್ಟ್‌ಲಿ ಆದರೂ ಪರ್ವಾಗಿಲ್ಲ’.

‘ಇದನ್ನು ಕೊಂಡುಕೊಳ್ಳಿ ಮೇಡಂ, ಸೂಪರ್ ಕ್ವಾಲಿಟಿ, ಕಟ್ಟಿಕೊಳ್ಳಲು ರೇಷ್ಮೆ ದಾರ ಇದೆ, ಈ ಮಾಸ್ಕ್ ಕೊಂಡರೆ, ನೈಟಿ ಹಾಕಿದಾಗ ಹಾಕಿಕೊಳ್ಳುವ ಡೈಲಿ ಯೂಸ್ ಮಾಸ್ಕ್ ಫ್ರೀ ಆಫರ್ ಇದೆ’.

‘ಮಕ್ಕಳಿಗೆ ಶೀತ, ನೆಗಡಿ ಆದಾಗ ಬಳಸುವ ಮಾಸ್ಕ್ ಇದೆಯೇ?’ ಶಂಕ್ರಿ ಕೇಳಿದ.

‘ಇದೆ ಸಾರ್, ಶೀತ, ನೆಗಡಿಯಾದಾಗ ಮೂಗಿನಿಂದ ಏನೇ ಸೋರಿದರೂ ಹೀರಿಕೊಂಡು ಶುಷ್ಕತೆ ಕಾಪಾಡುವ ಮಾಸ್ಕ್ ಇದೆ. ನಿಮ್ಮ ಸೈಜಿಗೂ ಸಿಗುತ್ತದೆ’ ಅಂದ.

‘ಮುಖದ ಮೇಕಪ್ ಮರೆಮಾಚದಂತಹ ಮಾಸ್ಕ್‌ ಇದೆಯೇ’ ಸುಮಿ ಪ್ರಶ್ನೆ.

‘ಇದೆ ಮೇಡಂ, ಟ್ರಾನ್ಸ್‌ಪರೆಂಟ್ ಮಾಸ್ಕ್, ಇದನ್ನು ಧರಿಸಿದರೆ ಹೆಂಗಸರ ಮೇಕಪ್, ಲಿಪ್‍ಸ್ಟಿಕ್, ಗಂಡಸರ ಮೀಸೆನೂ ಕಾಣುತ್ತೆ’ ಅಂದ.

ಸುಮಿ ತನಗೂ ತಗೊಂಡು, ಗಂಡ, ಮಕ್ಕಳಿಗೂ ಮಾಸ್ಕ್ ಕೊಡಿಸಿದಳು.

‘ರೀ, ನನ್ನ ಮಾಸ್ಕ್‌ಗೆ ಮ್ಯಾಚ್ ಆಗುವ ಎರಡು ಸೀರೆ ಕೊಂಡುಕೊಳ್ತೇನೆ, ಹೇಗೂ ಯುಗಾದಿ ಹಬ್ಬಕ್ಕೆ ಸೀರೆ ಬೇಕಲ್ಲ’ ಎನ್ನುತ್ತಾ ಸೀರೆ ಅಂಗಡಿ ಹೊಕ್ಕಳು. ಪೆಚ್ಚು ಮೋರೆ ಹಾಕಿಕೊಂಡು, ಕೊರೊನಾಕ್ಕೆ ಮನಸ್ಸಿನಲ್ಲೇ ಹಿಡಿಶಾಪ ಹಾಕುತ್ತಾ ಹಿಂಬಾಲಿಸಿದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.