ADVERTISEMENT

ಸರ್ಕಾರಿ ಕೆಮ್ಮು!

ಬಿ.ಎನ್.ಮಲ್ಲೇಶ್
Published 12 ಮಾರ್ಚ್ 2020, 19:40 IST
Last Updated 12 ಮಾರ್ಚ್ 2020, 19:40 IST
   

‘ಗುರೂ... ಈ ಮೊಬೈಲ್ ಯಾಕೋ ಮೊನ್ನಿಂದ ಕೆಮ್ಮೋಕೆ ಶುರು ಮಾಡೇತಿ. ಯಾರಿಗೆ ಫೋನ್ ಮಾಡಿದ್ರೂ ಬರೀ ಕೆಮ್ಮಿನ ಸೌಂಡು... ಮೊಬೈಲ್‍ಗೂ ಕೊರೊನಾ ಏನರ ಬಂತಾ ಅಂತ...’ ದುಬ್ಬೀರ ಪ್ರಶ್ನಿಸಿದ.

‘ನಿನ್ತೆಲಿ, ನಿಂದೊಬ್ಬುಂದೇ ಅಲ್ಲ. ಎಲ್ಲರ ಮೊಬೈಲೂ ಈಗ ಕೆಮ್ಮೋಕೆ ಶುರು ಮಾಡಿದಾವೆ. ಕೊರೊನಾ ಬಗ್ಗೆ ಜನ ಹುಷಾರಾಗಿರ‍್ಲಿ ಅಂತ ಹೇಳೋಕೆ ಸರ್ಕಾರದ ಕೆಮ್ಮು ಇದು...’ ತೆಪರೇಸಿ ಸ್ಪಷ್ಟನೆ ನೀಡಿದ.

‘ಅಲ್ಲಲೆ, ಇಡೀ ದಿನ ಇದು ಕೆಮ್ತಾ ಇದ್ರೆ ಹೆಂಗೆ? ತೆಲಿ ಕೆಡಲ್ವ?’

ADVERTISEMENT

‘ಕೆಮ್ಮು ಬ್ಯಾಡ ಅಂದ್ರೆ ಸರ್ಕಾರಕ್ಕೆ ಡುಂಡಿರಾಜ್ ಸ್ಟೈಲಲ್ಲಿ ಹೇಳಬೇಕು ‘ಅರೇ... ಫೋನ್ ಕರ್‍ನೇ ದೋ ಹಮ್ಕೋ... ಆಮೇಲ್ ಬೇಕಾದ್ರೆ ಕೆಮ್ಕೋ ಅಂತ...’ ಗುಡ್ಡೆ ನಕ್ಕ.

‘ಮೊಬೈಲ್ ಒಂದೇ ಅಲ್ಲ ಬಿಡ್ರಲೆ, ಈಗ ಎಲ್ಲ ಕಡೆ ಕೆಮ್ಮೋ ಸುದ್ದಿಗಳೇ ಪೇಪರ್‍ನಲ್ಲಿ. ವಿಧಾನ
ಸೌಧದಲ್ಲಿ ಸುಧಾಕರ್ ಮೇಲೆ ರಮೇಶ್‍ಕುಮಾರು, ರಮೇಶ್‍ಕುಮಾರ್ ಮೇಲೆ ಈಶ್ವರಪ್ಪ, ಈಶ್ವರಪ್ಪ ಮೇಲೆ ಸಿದ್ದರಾಮಯ್ಯ ಕೆಮ್ಮಿದ್ದೇ ಕೆಮ್ಮಿದ್ದು... ಇವರನ್ನೆಲ್ಲ ಕೊರೊನಾ ವಾರ್ಡ್‌ಗೆ ಸೇರಿಸಿದ್ರೆ ಹೆಂಗೆ?’

‘ಹೋಗ್ಲಿಬಿಡ್ರಪ್ಪ, ನಮಗೆ ರಾಜಕೀಯ ಬ್ಯಾಡ. ಆದ್ರೂ ಈ ಕೆಮ್ಮೋದು ಇದೆಯಲ್ಲ ಬಹಳ ಡೇಂಜರು. ಬಸ್‍ನಲ್ಲೋ, ಹೋಟ್ಲಲ್ಲೋ, ಮಾಲ್‍ನಲ್ಲೋ ಸ್ವಲ್ಪ ಕೆಮ್ಮಿದ್ರೆ ಸಾಕು, ಎಲ್ರೂ ಒಳ್ಳೆ ಕಳ್ಳನ ತರ ನೋಡ್ತಾರೆ...’ ದುಬ್ಬೀರ ಬೇಸರ ವ್ಯಕ್ತಪಡಿಸಿದ.

‘ಕೆಮ್ಮೋದ್ರಿಂದ ಲಾಭನೂ ಐತೆ ಕಣಲೆ, ರಜೆ ಕೇಳಿದ್ರೆ ಉರಿದು ಬೀಳ್ತಿದ್ದ ನಮ್ಮ ಪರ್ಮೇಶಿ ಬಾಸು ಮೊನ್ನೆ ಆಫೀಸ್‍ನಲ್ಲಿ ಸುಮ್ನೆ ಕೆಮ್ಮಿದ್ದಕ್ಕೆ ಪರ್ಮೇಶಿಗೆ ರಜೆ ಕೊಟ್ಟು ಮನೆಗೆ ಕಳಿಸಿದ್ನಂತೆ ಗೊತ್ತಾ?’ ಎಂದ ಗುಡ್ಡೆ.

‘ಏನ್ ಲಾಭ, ನಿನ್ ತಲೆ, ನಿನ್ನೆ ರಾತ್ರಿ ಬೆಡ್‍ರೂಮಲ್ಲಿ ನಮ್ ತೆಪರೇಸಿಗೆ ಯಾತಕ್ಕೋ ಕೆಮ್ಮು ಬಂತಂತೆ. ಅಷ್ಟಕ್ಕೇ ಅವನ ಹೆಂಡ್ತಿ ಚಾಪೆ- ದಿಂಬು ಹೊರಗಾಕಿ ಬೆಡ್‍ರೂಂ ಬಾಗಿಲು ಹಾಕ್ಕಂಡ್ಲಂತೆ. ಇದಕ್ಕೇನೇಳ್ತೀಯ?’

ದುಬ್ಬೀರನ ಮಾತಿಗೆ ಹರಟೆ ಕಟ್ಟೆಯಲ್ಲಿ ನಗೆಯ ಅಲೆ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.