ADVERTISEMENT

ಗಂಡೋ ಹೆಣ್ಣೋ?

ಬಿ.ಎನ್.ಮಲ್ಲೇಶ್
Published 9 ಏಪ್ರಿಲ್ 2020, 20:00 IST
Last Updated 9 ಏಪ್ರಿಲ್ 2020, 20:00 IST
ಚುರುಮುರಿ
ಚುರುಮುರಿ   

ಕೊರೊನಾ ನಾಶಕ್ಕೆ ಶಕ್ತಿಯಂತ್ರ ಮಂತ್ರಿಸಿ ಕೊಡುವುದಾಗಿ ಗುರೂಜಿಯೊಬ್ಬರು ಜಾಹೀರಾತು ನೀಡಿದ್ದನ್ನು ನೋಡಿದ ತೆಪರೇಸಿ, ಅವರಿಗೆ ಫೋನ್ ಮಾಡಿದ. ‘ಗುರುಗಳೇ, ನೀವು ಕೊರೊನಾ ಬಂದೋರಿಗೆ ಯಂತ್ರ ಮಾಡಿ ಕೊಡ್ತೀರೋ ಅಥ್ವಾ ಅದು ಬರದಂಗೇ ಯಂತ್ರ ಮಾಡಿಕೊಡ್ತೀರೋ?’

‘ಎರಡಕ್ಕೂ ಮಾಡಿಕೊಡ್ತೀನಿ, ನಿಮಗೆ ಯಾವುದು ಬೇಕು?’

‘ಅಲ್ಲ, ಅದು ಮಹಾಮಾರಿ ವೈರಸ್ಸು, ನಿಮ್ಮ ಮಾತು ಕೇಳುತ್ತಾ ಅಂತ...’

ADVERTISEMENT

‘ಎಂಥೆಂಥ ಭೂತ ಪ್ರೇತ ಪಿಶಾಚಿಗಳೆಲ್ಲ ನಮ್ಮ ಮಾತು ಕೇಳ್ತಾವೆ, ಜುಜುಬಿ ವೈರಸ್ ಕೇಳಲ್ವ?’

ಹೌದಾ? ಒಂದು ಪ್ರಶ್ನೆ ‘ಕೊರೊನಾ ಗಂಡೋ ಹೆಣ್ಣೋ?’ ಗುರೂಜಿ ತಡವರಿಸುತ್ತಾ ಕೇಳಿದರು ‘ಅದೆಲ್ಲ ಯಾಕೆ?’

‘ನೀವು ಯಂತ್ರ ಮಾಡಿಕೊಡುವಾಗ ಎಡ
ವಟ್ಟಾಗಬಾರದು ನೋಡಿ. ಗಂಡು ಕೊರೊನಾಗೆ ಯಂತ್ರ ಮಾಡಿಕೊಡೋದು, ಆಮೇಲೆ ಹೆಣ್ಣು ಕೊರೊನಾ ಕಾಟ ಕೊಡೋದು ಮಾಡಿದ್ರೆ?’

‘ನನಗೆ ಗೊತ್ತಿಲ್ಲ, ನೀವೇ ಹೇಳಿ ನೋಡೋಣ’.

‘ನನ್ನ ಪ್ರಕಾರ ಕೊರೊನಾ ಹೆಣ್ಣು...’

‘ಹೆಣ್ಣಾ? ಅದೆಂಗೆ?’

‘ಕೊರೊನಾ ಸ್ತ್ರೀ ಪಕ್ಷಪಾತಿ, ಕೊರೊನಾದಿಂದ ಈಗ ಸತ್ತಿರೋರೆಲ್ಲ ಗಂಡಸರೇ’

‘ಆಯ್ತು, ಹೆಣ್ಣು ಕೊರೊನಾಗೆ ಮಂತ್ರಿಸಿ, ದಿಗ್ಬಂಧನ ಹಾಕಿ ನಿಮಗೆ ಗಟ್ಟಿಯಂತ್ರ ಮಾಡಿಕೊಟ್ರೆ ಆಯ್ತಲ್ಲ?’ ಗುರೂಜಿ ರಾಜಿಗೆ ಬಂದರು.

‘ಆಯ್ತು ಆದರೆ ಒಂದು ಕಂಡೀಶನ್. ನಿಮ್ಮ ಅಕೌಂಟಿಗೆ ನೀವು ಹೇಳಿದಷ್ಟು ಹಣ ಹಾಕ್ತೇನೆ. ನಿಮ್ಮಿಂದ ಒಂದು ಉಪಕಾರ ಆಗಬೇಕು...’

‘ಖಂಡಿತ ಮಾಡೋಣ ಹೇಳಿ’ ಗುರೂಜಿ ಖುಷಿಯಾದರು.

‘ಏನಿಲ್ಲ, ಯಂತ್ರ ಇಸ್ಕಳೋಕೆ ನಾನು ಹೊರಕ್ಕೆಬಂದ್ರೆ ಪೊಲೀಸ್ರು ಒದೀತಾರೆ. ಹೆಂಗೂ ಕೊರೊನಾ ನಿಮಗೇನೂ ಮಾಡಲ್ಲ. ಒಂದು ಹೆಜ್ಜೆನೀವೇ ನಿಮ್ಮ ಕಚೇರಿ ಪಕ್ಕಾನೇ ಇರೋ ಗೌರ್ಮೆಂಟ್ ಆಸ್ಪತ್ರೆ ಕೊರೊನಾ ವಾರ್ಡ್‌ಗೆ ಹೋಗಿ ನಮ್ಮ ಪೇಶಂಟ್ ಕೈಗೆ ಆ ಯಂತ್ರ ಕಟ್ಟಿ ಬರ್ತೀರಾ?

ಹಲೋ... ಹಲೋ...’ ಗುರೂಜಿ ಫೋನ್ ಕಟ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.