ADVERTISEMENT

ಕೊರೊನಾ ಸ್ವಪ್ನಸಿದ್ಧಿ

ಲಿಂಗರಾಜು ಡಿ.ಎಸ್
Published 27 ಏಪ್ರಿಲ್ 2020, 19:45 IST
Last Updated 27 ಏಪ್ರಿಲ್ 2020, 19:45 IST
   

ತುರೇಮಣೆ ಆವತ್ತು ಕರಂಟಿಲ್ಲದೇ ಮಳೆಹುಳ್ಳಿಕಾಳು ಸಾರಿಗೆ ಕಾರಾ ರುಬ್ಬಿ ಸುಸ್ತಾಗಿ ತೂಕಡಿಸ್ತಿದ್ದಾಗ ದೇವಲೋಕಕ್ಕೆ ಕರಕೋಗಿದ್ರು. ಪಕ್ಕದಗೆ ನಿಂತಿದ್ದೋನ್ನ ‘ನೀನ್ಯಾರ‍್ಲಾ? ಏನು ನಡಿತಾ ಅದೆ ಇಲ್ಲಿ?’ ಅಂತ ಜೆಡಿಎಸ್ ಎಂಎಲ್‍ಸಿ ಥರಾ ಕೇಳಿದರು. ‘ಅಣೈ ನಾನಿಲ್ಲಿ ಬೆಂಚ್ ಕ್ಲಾರ್ಕಾಗಿವ್ನಿ. ಈಗ ನಿಮ್ಮ ವಿಚಾರಣೆ ಅದೆ’ ಅಂದ ಅವ.

‘ಮಹಾಸ್ವಾಮಿ, ಭೂಮಂಡಲದಲ್ಲಿ ಕೊರೊನಾ ಅಬ್ಬರದಲ್ಲೂ ಜನ ಎಗ್ಗುತಗ್ಗಿಲ್ಲದೇ ಡ್ರಾಮಾವತಾರ ಮಾಡ್ತಾವರೆ. ಲಾಕ್‍ಡೌನ್ ತೆಗುದ್ರೆ ಜಗತ್ತು ಇನ್ನೂ ಹಾಳಾಯ್ತದೆ’ ಅಂದರು ನಾರದರು.

‘ಮಹಾಪ್ರಭೋ, ವಾಹನಗಳ ಹೊಗೆ ಕುಡಿದು ನನಗೆ ಅಸ್ತಮಾ ಬಂದುಬುಟ್ಟದೆ. ಇನ್ನು ಸರ್ವೀಸ್ ಮಾಡಕಾಗಕಿಲ್ಲ, ವಾಲೆಂಟರಿ ಕೊಟ್ಬುಡಿ’ ಅಂದ ವಾಯುದೇವ ಕೆಮ್ಮಿಕ್ಯಂಡು.

ADVERTISEMENT

‘ಕಾಡು-ಮೇಡು, ಬೆಟ್ಟ-ಗುಡ್ಡ ಬೋಳೈಸಿ ನಾನು ಮಳೆ ಹುಯ್ಯದಂಗೆ ಮಾಡ್ಯವರೆ ಪ್ರಭೋ! ಮುಂದೆಂಗೆ?’ ಅಂದ ವೀಕಾಗಿದ್ದ ವರುಣದೇವ. ‘ಜನರ ಕೊಳಕೆಲ್ಲಾ ಮಡಿಲಿಗೆ ಹಾಕ್ಯಂಡು ಮೋರಿಯಾಗಿದ್ದೀಯ ಅಂತ ಯಜಮಾನ್ರು ಬೈತಾವ್ರೆ. ಕೈಲಾಸಕ್ಕೆ ಹೋಯ್ತಿನಿ, ತಗಳಿ ನನ್ನ ರಾಜೀನಾಮೆ’ ಅಂತ ಗಂಗವ್ವ ಅಂದ್ಲು.

‘ದೇವರಾಜರೇ, ರಾಸಾಯನಿಕ ಗೊಬ್ಬರ ಸುರಿದು ತಿನ್ನ ಅನ್ನೆಲ್ಲ ವಿಷವಾಗ್ಯದೆ!’ ಅಂದ್ಲು ಭೂದೇವಿ. ದೇವತೆಗಳೆಲ್ಲಾ ತಮಗೆ ವರ್ಕ್ ಫ್ರಂ ಹೋಂ ಆದ ಮ್ಯಾಲೆ ರೆಸ್ಟು ಸಿಕ್ಕಿ ಚೆನಾಗಿದ್ದೀವಿ ಅಂದ್ರು.

‘ಹೌದೇನ್ರಿ ತುರೇಮಣೆ ಇದೆಲ್ಲಾ ಸತ್ಯವೋ?’ ಅಂತ ದೇವೇಂದ್ರ ಕೇಳಿದಾಗ ‘ಹೌದು ಮಹಾಸ್ವಾಮಿ’ ಅಂತ ಒಪ್ಪಿಕ್ಯಂಡರು.

‘ಕೊರೊನಾ ಇದ್ದಾಗಲೇ ಭೂಮಿ ಚೆನ್ನಾಗದೆ! ತಕ್ಷಣ ಭೂಮಂಡಲಕ್ಕೆ ಕರಂಟು-ಇಂಟರ್ನೆಟ್ಟು ನಿಲ್ಲಿಸಿ. ಲಾಕ್‍ಡೌನ್ ಮುಂದುವರಿಸಿ’ ಅಂತ ದೇವೇಂದ್ರ ಆದೇಶ ಕೊಟ್ಟರು. ಇಕ್ಕಡೆ ‘ರೀ ರೀ’ ಅಂತ ತುರೇಮಣೆಯ ಸ್ವಾಟೆ ತಿವಿತಾ ಶ್ರೀಮತಿ ‘ರೀ ಕರಂಟಿಲ್ಲ, ಸಂಪಲ್ಲಿ ನಾಕು ಬಕೀಟು ನೀರು ತಕ್ಕಬಂದು ಆಮೇಲೆ ದ್ವಾಸೆ ಹಿಟ್ಟು ರುಬ್ಬಿಕೊಡಿ’ ಅಂತುದ್ರು. ನಾಕು ಫ್ಲೋರ್‌ ನಾಕು ಸಾರಿ ಹತ್ತಿಳಿದು, ಕಾರ ರುಬ್ಬೋ ಪಾಕಶಾಸನ ನೆನೆಸಿಕ್ಯಂಡಾಗ ತಾನು ಕಂಡ ಕೊರೊನಾ ಸ್ವಪ್ನದ ಬಗ್ಗೆ ತುರೇಮಣೆಗೆ ಯೋಚನೆಯಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.