ADVERTISEMENT

ಚುರುಮುರಿ | ನಾವು ಕುಡುಕರಲ್ಲ!

ಬಿ.ಎನ್.ಮಲ್ಲೇಶ್
Published 7 ಮೇ 2020, 20:28 IST
Last Updated 7 ಮೇ 2020, 20:28 IST
.
.   

‘ಕೊಲೆಲೆ ಪಾಂಡುಕುಮಾರರಾ... ಕೊಲೆಲೆ ಕುಂತಿ ಸುತರಾ...’ ಎಂದು ಹಾಡುತ್ತ, ತೂರಾಡುತ್ತ ಮನೆಗೆ ಬಂದ ತೆಪರೇಸಿಯನ್ನು ಕಂಡು ಹೆಂಡತಿ ಪಮ್ಮಿ ಕಿಡಿಕಿಡಿಯಾದಳು.

‘ಥೂ... ನಾಚ್ಕೆ ಆಗಲ್ವಾ? ಕಿಲೋಮೀಟರ್‌ಗಟ್ಲೆ ಕ್ಯೂ ನಿಂತ್ಕಂಡ್ ಕುಡ್ಕಂಡ್ ಬಂದಿದೀರಲ್ಲ... ಬೀದಿ ಜನ ಎಲ್ಲ ಒಳ್ಳೆ ಕುಡುಕನ ಸಂಸಾರ ಅನ್ನಲ್ವಾ?’

ತೆಪರೇಸಿಗೆ ಸಿಟ್ಟು ಬಂತು ‘ಲೇಯ್, ಯಾರೆ ಅದು ಕುಡುಕ ಅನ್ನೋದು? ನಾವು ಕುಡುಕರಲ್ಲ, ಫೈನಾನ್ಷಿಯರ್ಸ್. ನಾವು ಕುಡಿದು ಕೊಟ್ಟ ದುಡ್ಡಲ್ಲೇ ಸರ್ಕಾರ ನಡೆಯೋದು, ಇಲ್ಲಾಂದ್ರೆ ಇಲ್ಲ. ನಾವು ಕುಡಿದು ಬಿದ್ರೆ ನಮ್ಮನ್ನ ಯಾರೂ ಎತ್ತಲ್ಲಮ್ಮ, ಆದ್ರೆ ನಾವು ನಮ್ಮ ದುಡ್ಡಲ್ಲಿ ಸರ್ಕಾರದ ಆರ್ಥಿಕ ಸ್ಥಿತಿನೇ ಎತ್ತಿ ನಿಲ್ಲಿಸ್ತೀವಿ ಗೊತ್ತಾ?’ ಎಂದ.

ADVERTISEMENT

‘ಅಲ್ಲಿ ಬಾರ್ ಮುಂದೆ ಯಾರ‍್ಯಾರ್ ಜೊತೆ ನಿಂತಿದ್ರೋ ಏನೋ... ಕೊರೊನಾ ನಿಮಗೂ ಅಮರಿಕೊಂಡ್ರೆ ಆಗ ಗೊತ್ತಾಗುತ್ತೆ...’

‘ಏನು? ಕೊರೊನಾನ? ಅದಕ್ಕೆ ಧಮ್ಮಿದ್ರೆ ಈಗ್ಲೇ ಬಲ್ರಿ. ಲೇಯ್ ಸಿಂಹಾದ್ರಿ ವಂಶ ಕಣೆ ನಮ್ದು, ಜುಜುಬಿ ಕೊರೊನಾಗೆ ಹೆದರ್ತೀನಾ?’ ತೆಪರೇಸಿ ರಾಂಗಾದ.

ಪಮ್ಮಿ ತಲೆ ಚಚ್ಚಿಕೊಂಡಳು ‘ನೀವು ಖಂಡಿತ ನರಕಕ್ಕೆ ಹೋಗ್ತೀರ...’

‘ಹೌದಾ? ನಂಗೆ ಎಣ್ಣೆ ಕೊಟ್ಟ ಆ ಬಾರ್‍ನೋನು?’

‘ಅವನೂ ನರಕಕ್ಕೇ ಹೋಗ್ತಾನೆ’.

‘ಪಕ್ಕದಲ್ಲಿ ಚಿಕನ್ ಕಬಾಬ್ ಮಾರ್ತಿದ್ನಲ್ಲ ಅವನು?’

‘ಅವನೂ ನರಕಕ್ಕೇ ಹೋಗ್ತಾನೆ’.

‘ಮತ್ತೆ ನೀನೂ ಬರ್ತೀ ತಾನೆ ನರಕಕ್ಕೆ?’

‘ನಾನ್ಯಾಕೆ ಬರ‍್ಲಿ ನರಕಕ್ಕೆ? ಅದೂ ನಿಮ್ ಜೊತಿಗೆ, ಥೂ...’ ಕ್ಯಾಕರಿಸಿ ಉಗಿದಳು ಪಮ್ಮಿ.

‘ಹೌದಾ? ನೀ ಬರಲ್ವ? ಬೇಷಾತು. ಸದ್ಯ ಬಾರ್‍ನೋನು, ಕಬಾಬ್‍ನೋನು ಬಂದ್ರೆ ಸಾಕು. ನಾನು ನರಕಕ್ಕೇ ಹೋಗ್ತೀನಿ...’ ತೆಪರೇಸಿ ತೊದಲಿದ. ಪಮ್ಮಿ ತಲೆ ಮೇಲೆ ಕೈ ಹೊತ್ತು ಕೂತಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.