‘ಅಂತೂ ಎಲ್ಡ್‌ಸಾವ್ರುದಿಪ್ಪತ್ತು ಮುಗಿಯೋ ಹಂತಕ್ಕ್ ಬಂದ್‍ಕುಂತೈತಿ. ಇದರ್ ಬಗ್ಗೆ ತಾವೇನ್ ಹೇಳ್ತಿರ ಮಿ.ರುದ್ರಿಯವ್ರೇ?’ ಮೆಕ್ಕೆಜೋಳದ ದಂಟನ್ನು ಮೈಕ್‍ನಂತೆ ಹಿಡಿದು ಟಿ.ವಿ ಸಂದರ್ಶಕನ ಗತ್ತಿನಲ್ಲಿ ಕೇಳಿದ ಚಂಬಸ್ಯ.
ಕೂಡಲೇ ಗಂಟಲು ಸರಿಮಾಡಿಕೊಂಡ ರುದ್ರೇಶಿ, ‘ಬೈದಿಬೈ, ಈ ವರ್ಸ ನಮ್ಮ್ ವಕ್ಯಾಬುಲರಿ ಇಂಪ್ರೋ ಆಗೇತಿ. ಇನ್ನೊಂದ್ ಪಟ ನಮ್ಮುನ್ನೆಲ್ಲ ಸಾಲಿಗ್ ಕಳ್ಸಿ ಡಿಕ್ಟೇಸನ್ ಬರೆಸಿದ್ರೂ ಆ ಪದಗಳನ್ನು ಕಲಿಯಕ್ಕಾಗದುಲ್ಲ. ಅಂಡ್ರುಶ್ಟ್ಯಾಂಡ್!’ ಎಂದ.
‘ವಕ್ಯಾಬುಲರಿನಾ...!?’
‘ಯಸ್ ಅಫ್ಕೋರ್ಸ್. ಹಿಂದಿನ್ ವರ್ಸಗಳಲ್ಲಿ ನಮ್ಗೆಲ್ಲ ಈ ಲಾಕ್‌ಡೌನ್ ಅನ್ನೋ ಪದ ಗೊತ್ತುತ್ತಾ? ಸೀಲ್‍ಡೌನು? ಅಷ್ಟೇಅಲ್ಲ ಕ್ವಾರಂಟೈನು, ಡಿಸ್ಟರ್ಬೆನ್ಸು... ಸ್ಸಾರಿ ಡಿಸ್ಟೆನ್ಸಿಂಗು ಇವೆಲ್ಲ ಪದಗಳದಾವಂತ ಯಾರಿಗ್ಗೊತ್ತುತ್ತು?’
‘ಎಜ್ಜಾಟ್ಲಿ ರೈಟ್ ರುದ್ರಿಯವ್ರೇ’.
‘ನಮ್ಗೆಲ್ಲ ಇಂಗ್ಲಿಸ್‍ನ್ಯಾಗೆ ಕಮ್ಯುನಿಟಿ ಅನ್ನೊ ಪದ ಗೊತ್ತುತ್ತು. ಆದ್ರೆ ಇಮ್ಯುನಿಟಿ ಅಂತ ಬ್ಯಾರೆ ಐತಿ ಅಂತ ಈಗ್ಲೇ ಗೊತ್ತಾಗಿದ್ದು. ಅಲ್ಲದೇ, ಚೀನಾ ಅಂದ್ರೆ ಗೊತ್ತುದ್ದುದ್ದು ಬೀಜಿಂಗ್ ಒಂದೇ. ಈ ಇಪ್ಪತ್ತ್‌ರಾಗೇ ವುಹಾನ್ ಅಂತ ಯೆಸ್ರು ಬೆಳಕಿಗೆ ಬಂದುದ್ದು. ಅಂದ್ಹಂಗೆ ನಮ್ಮ್ ಭಾಮೈದ್ನ ತನ್ನ್ ಮಗಿಗೆ ವುಹಾನ್ ಅಂತ ನಾಮಕರಣ ಮಾಡ್‍ಕ್ಯಂಡದಾನೆ. ಯು ಸೀ, ಜನ ಚೇಂಜ್ ಕೇಳ್ತದಾರಲ್ಲ ಅದುಕ್ಕೆ. ಇನ್ನು ಕೊರೊನೇತರ ವಸ ಪದ ಅಂದ್ರೆ ಪೆಡ್ಲರ್! ಇದು ಬರೋ ಮಟ ನಮ್ಗೆ ಗೊತ್ತುದ್ದುದ್ದು ಸ್ಮಗ್ಲರ್ ಅನ್ನೋ ಹಳೇ ಮಾಸಲು ಪದ. ಜತಿಗೇ ಅಂಪನ್, ನಿವಾರ್, ಬುರೆವಿ...’
‘ಬರೇ ಇಂಗ್ಲಿಸ್‍ನವೇ ಹೇಳ್ತಾದೀರಿ. ಕನ್ನಡದ ವಸ ಪದಗಳ ಬಗ್ಗೆನೂ ಏನರ ಹೇಳ್‍ಬೌದಾ?’
‘ವೈ ನಾಟ್? ಗಂಟ್ಲುದ್ರವ, ಸೋಂಕಿತ, ಶಂಕಿತ, ಮುಖಗವಸು, ಹಸಿರು ಪಟಾಕಿ, ಎರಡನೇ ಅಲೆ ಇನ್ನೂ ಜಗ್ಗಿ ಅದಾವು. ಇವುಗಳನ್ನೆಲ್ಲಾ ಸೇರಿಸಿ ಒಂದ್ ಹೊಸ ನಿಘಂಟನ್ನು ಸಂಪಾದಿಸಬೇಕಂತದಾನಿ’.
‘ಓಹ್! ನಿಮ್ಮ ಈ some- ಶೋಧನಿಗೆ ಡಾಕ್ಟರೇಟ್ ಕೊಡಬೇಕಾಗ್ತತಿಪ್ಪಟ್ಟು’.
‘ಯಾವ್ದಾದ್ರು ‘ಗೌಡಾ’ ಸಿಕ್ತಾವಂದ್ರೆ ಹೇಳ್ರಿಪ್ಪಟ್ಟು. ವಲಮನಿ ಬೇಕಾದ್ರು ಮಾರ್ತನಿ’ ಎಂದು ತಮಾಷೆ ಮಾಡಿದ ರುದ್ರೇಶಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.