ADVERTISEMENT

ಸಂತೆಯೊಳಗೆ ನಿಂತವರು

ಚುರುಮುರಿ

ಲಿಂಗರಾಜು ಡಿ.ಎಸ್
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST
Chunumuri-23072019
Chunumuri-23072019   

‘ನೋಡ್ಲಾ ಒಂದೆರಡು ಹೆಡ್‍ಲೈನ್ ನ್ಯೂಸ್ ಒಂದೊಂದಾಗಿ ಓದತೀನಿ ಕೇಳಿಸ್ಕಳೋ’ ತುರೇಮಣೆ ನಗತಾ ಓದತೊಡಗಿದರು– ‘ಸ್ಪೀಕರ್ ಸರಿಯಿಲ್ಲ ಅನ್ನುವುದು ಕೇವಲ ವದಂತಿ, ಗವರ್ನರ್ ವಿರೋಧಿಸಿ ಪ್ರತಿಭಟನೆ, ನುಂಗಣ್ಣರ ದರ್ಬಾರ್, ಪ್ರಭಾವಿಗಳಿಗೆ 200 ಕೋಟಿ, ಕೊಳ್ಳೆಹೊಡೆದು ಸಿಕ್ಕಿಬಿದ್ದರು!’ ಈ ಅತೃಪ್ತಿಯ, ಅತಂತ್ರದ ಸಮಯದಲ್ಲಿ ಇಂತಹವೆಲ್ಲಾ ಸುದ್ದಿಯಾಗ್ತಾ ಇವೆಯಲ್ಲ ಅಂತ ಬಲು ಗಾಬರಿ ಯಾಯಿತು.

‘ಸಾರ್ ಸುಮ್ಮನೆ ರೋಸಬೇಡಿ. ರಾಜಕೀಯ ದೋರ ಹಲ್ಲಂಡೆ ಕಥೆ ಕೇಳಿ ತಲೆ ಕೆಟ್ಟದೆ’ ಅಂದೆ.

‘ನೋಡ್ಲಾ ಬಕರಾ! ಈ ಹೆಡ್‍ಲೈನುಗಳು ಸುಭಾಷಿತಗಳಿದ್ದಂಗೆ ಎಲ್ಲಿಗೆ ಬೇಕಾದ್ರೂ ಅನ್ವಯವಾಯ್ತವೆ. ಉದಾಹರಣೆಗೆ, ಸ್ಪೀಕರ್ ಸರಿಯಿಲ್ಲ ಅಂತ ಕಮಲ ಅಂದಿರಬೇಕು ಅಂದ್ಕಂಡಿದೀಯ. ತಪ್ಪು! ರವೀಂದ್ರ ಕಲಾಕ್ಷೇತ್ರದ ಸ್ಪೀಕರ್ ಸರಿಯಿಲ್ಲ ಅಂತ ನಾಟಕ ತಂಡದವರು ದೂರವ್ರೆ. ಅದಕ್ಕೆ ಕ್ಲಾರಿಫಿಕೇಶನ್ ವಾಟ್ಸಪ್ಪಲ್ಲಿ ಬತ್ತಾ ಅದೆ. ಗವರ್ನರ್ ಬಗ್ಗೆ ಪ್ರತಿಭಟನೆ ಸ್ಪೀಡ್ ಗವರ್ನರಿಗೆ ಸಂಬಂಧಿಸಿದ್ದು ಕಣೋ, ನುಂಗಣ್ಣರು ಸಾರಿಗೆ ಸಂಸ್ಥೆಯಲ್ಲವರಂತೆ! ಪ್ರಭಾವಿಗಳಿಗೆ ಐಎಂಎ 200 ಕೋಟಿ ರೂಪಾಯಿ ಕೊಟ್ಟದಂತೆ! ಕೊಳ್ಳೆ ಹೊಡೆದು ಸಿಕ್ಕಿಬಿದ್ದದ್ದು ಸಾರಿಗೆ ಸಂಸ್ಥೆಯಲ್ಲೇ! ಇವೆಲ್ಲಾ ಸುದ್ದಿಗಳನ್ನ ಈವತ್ತಿನ ರಾಜಕೀಯ ಪರಿಸ್ಥಿತಿಗೆ ಹೆಂಗೆ ಬೇಕಾದ್ರೂ ಹೊಂದಿಸಿಕೊಳ್ಳ ಬಹುದು ಕಣೋ! ಪೇಪರಿನ ಒಂದು ಪುಟದಲ್ಲೇ ನೋಡು ಅತೃಪ್ತ, ಅಕ್ರಮ, ಆತುರ, ಬಾಧೆ, ಕಣ್ಣೀರು, ಧ್ವಂಸದ ನೆಗೆಟಿವ್ ಸುದ್ದಿಗಳೇ ಪ್ರಧಾನವಾಗಿ ಕಾಣತವೇ!’ ತುರೇಮಣೆ ಗಂಭೀರವಾಗಿ ದೊಡ್ಡ ಭಾಷಣ ಕೊಟ್ಟರು.

ADVERTISEMENT

ಅಧಿಕಾರ ಪಡೆಯಕ್ಕೆ ಬಕ್ಕಬಾರಲು ಬೀಳೋರೊಂದು ಕಡೆ ಆದ್ರೆ, ಅಧಿಕಾರ ಬಿಡಲ್ಲ ಏನಾದರೂ ಬಿಟ್ಟೇನು ಅನ್ನೋರೊಂದು ಕಡೆ, ಇಬ್ಬರ ಮಧ್ಯೆ ಕೊಳ್ಳಿ ಹಿರಿಯೋರು, ಸೌದೆ ಹಾಕೋರು ಜಾಸ್ತಿಯಾಗವ್ರೆ ಅನ್ನಿಸಿತು.

‘ನೋಡಿ ಸಾರ್ ಇಲ್ಲೊಂದು ಸುದ್ದಿ ಅದೆ: ಸದನಕ್ಕೆ ಬನ್ನಿ– ಸವಾಲು, ಆಚೆಗೆ ಬಂದು ಮಾತಾಡು– ಪ್ರತಿ ಸವಾಲು’ ಅಂದೆ.

‘ಬಾ ಒಂದು ಕೈ ನೋಡ್ಕತೀನಿ ಅಂತ ಇಬ್ಬರೂ ಧಮಕಿ ಶುರು ಮಾಡಿದ್ರೆ ಸಂತೆಗೂ ಸದನಕ್ಕೂ ವ್ಯತ್ಯಾಸವೇ ಇಲ್ಲವಲ್ಲೋ’ ಅಂದ್ರು ತುರೇಮಣೆ. ಸಂತೆಯೊಳಗೆ ನಿಂತ ನಮ್ಮನ್ನ ದೇವರೇ ಕಾಪಾಡಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.