ADVERTISEMENT

ಕಣ್ಣೀರು ಮಾಪಕ ಕೇಂದ್ರಗಳ ವ್ಯಥೆ!

ಸುಮಂಗಲಾ
Published 25 ಆಗಸ್ಟ್ 2019, 20:00 IST
Last Updated 25 ಆಗಸ್ಟ್ 2019, 20:00 IST
   

ಬೆಕ್ಕಣ್ಣ ಎಕ್ಸೆಲ್ ಶೀಟ್ ಹರಡಿಕೊಂಡು ಏನೋ ಲೆಕ್ಕಾಚಾರ ನಡೆಸಿತ್ತು. ‘ಹನ್ನೆರಡು ವರ್ಷದ ಹಿಂದೆ ಆರು ಸಾವಿರ ಮಿಲಿಮೀಟರ್, ಈ ಸಲ ಹತ್ತು ಸಾವಿರ. ಅಂದ್ರೆ ನಾಕು ಸಾವಿರ ಮಿಲಿಮೀಟರ್ ಹೆಚ್ಚು’ ಬೆರಳು ಮಡಚಿ, ತೆಗೆದು ಎಣಿಸುತ್ತ ಬಲು ದುಃಖದಲ್ಲಿ ಹೇಳಿತು.

‘ಏನಲೇ... ಮಳೆ ಪ್ರಮಾಣ ಲೆಕ್ಕಾಚಾರ ಹಾಕಾಕಹತ್ತೀಯೇನು’ ಅಚ್ಚರಿಯಿಂದ ಕೇಳಿದೆ.

‘ಊಹೂಂ... ಮಳಿ ಲೆಕ್ಕಾಚಾರ ಹಾಕೂದು ಪ್ರವಾಹದಾಗ ಮನಿ ಕಳಕೊಂಡೋರು, ಬೆಳೆ ನಾಶವಾದ ರೈತರು. ಮಣ್ಣಿನ ಮಗ ದೇವೇಗೌಡಜ್ಜ ಅದನ್ಯಾಕ ಲೆಕ್ಕಾ ಹಾಕ್ತಾನ. ಆವಾಗ ಬಿಜೆಪಿ ಜತಿಗಿದ್ದಾಗ ಕುಮಾರಣ್ಣ ಕಣ್ಣೀರು ಮಾಪಕ ಕೇಂದ್ರದಾಗ ಆರುಸಾವಿರ ಮಿಲಿಮೀಟರ್ ಕಣ್ಣೀರು ದಾಖಲಾಗಿತ್ತು, ಈ ಸಲ ಕಾಂಗಿಗಳ ಜೊತಿಗಿದ್ದಾಗ ಹತ್ತು ಸಾವಿರ, ಅವ್ರಿಗಿಂತ ಇವ್ರ ಜೊತಿಗಿ ಸಂಸಾರ ಮಾಡೂಮುಂದ ಮಗ ಭಾಳ ಕಣ್ಣೀರು ಸುರಿಸ್ಯಾನ ಅಂತ ಗೌಡಜ್ಜ ಮುಸುಮುಸು ಮಾಡಾಕಹತ್ತಿದ್ದ...’

ADVERTISEMENT

ನನಗೆ ನಗು ತಡೆಯಲಾಗಲಿಲ್ಲ. ‘ಮಂಗ್ಯಾನಂಥವ್ನೆ... ಆರು ಸಾವಿರ, ಹತ್ ಸಾವಿರ ಮಿಲಿ ಮೀಟರ್ ಅಂದರ ಅದು ವರ್ಷ ಪೂರ್ತಿ ಬೀಳೂ ಮಳಿ ಪ್ರಮಾಣ ಆತಲೇ. ಅಷ್ಟ್ ಕಣ್ಣೀರು ಬರಾಕ ಅದೇನ್ ಮೋಡ ಬಿತ್ತನೆ ಮಾಡಿ ಮಳಿ ಸುರಿಸಿದಂಗೆ ಅಂದ್ಕಂಡ್ಯೇನಲೇ’.

‘ಓ ಅಲ್ಲಲ್ಲ, ನ್ಯಾನೋ ಮಿಲಿಮೀಟರ್ ಕಣ್ಣೀರು’ ಎಂದು ಲೆಕ್ಕ ತಿದ್ದಿಕೊಂಡಿತು.

‘ಅಂದ್ಹಂಗ ಈಗ ನಿಮ್ಮ ಯಡ್ಯೂರಜ್ಜನ ಡಾಲರ್ಸ್ ಕಾಲನಿ ಮನಿ, ಅಧಿಕೃತ ಸಿ.ಎಂ ನಿವಾಸದ ಹತ್ರ ಇರೂ ಎರಡೂ ಕಣ್ಣೀರು ಮಾಪಕ ಕೇಂದ್ರಗಳಾಗ ಎಷ್ಟು ದಾಖಲಾಗೈತಿ’ ಕುತೂಹಲದಿಂದ ಕೇಳಿದೆ.

‘ಯಡ್ಯೂರಜ್ಜನ ಕಣ್ಣೀರು ಮಾಪಕ ಕೇಂದ್ರಕ್ಕ ‘ಶಾ’ಣ್ಯಾರು ಬೀಗ ಹಾಕ್ಯಾರ, ಅದ್ರ ಜೊತಿಗಿ ಅನರ್ಹ ಅತೃಪ್ತಾತ್ಮಗಳ ಮನಿ ಹತ್ರದ ಕಣ್ಣೀರು ಮಾಪಕ ಕೇಂದ್ರಗಳಿಗೂ ಬೀಗ ಹಾಕಿ, ಎಲ್ಲಾ ಕೀಲಿಕೈ ‘ಸಂತೋಷ’ ತಿಜೋರಿ ವಳಗ ಇಟ್ಟು, ಭಾರೀ ಬಿಗಿ ಕಣ್ಗಾವಲು ಇಟ್ಟಾರಂತ’ ಹುಳ್ಳಗೆ ನಕ್ಕ ಬೆಕ್ಕಣ್ಣ ಲೆಕ್ಕ ಬಿಟ್ಟೆದ್ದು ಹೊರಗೋಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.