ADVERTISEMENT

ಕುರ್ಚಿ ದಾನಿ ಕರ್ಣರು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 20:01 IST
Last Updated 17 ಸೆಪ್ಟೆಂಬರ್ 2019, 20:01 IST
   

‘ಮಂತ್ರಿಗಳೇ, ಪ್ರಜೆಗಳು ಕ್ಷೇಮವಾಗಿದ್ದಾರೆಯೇ?’ ಕೇಳಿದರು ಮುಖ್ಯಮಂತ್ರಿ.

‘ಕ್ಷೇಮವೆಲ್ಲಿ ಪ್ರಭು, ಪ್ರಜೆಗಳು ಗೊಂದಲದಲ್ಲಿದ್ದಾರೆ’.

‘ಗೊಂದಲವೇ? ಏಕೆ?’

ADVERTISEMENT

‘ಕೋಡಗಾನ ಕೋಳಿ ನುಂಗಿತ್ತಾ ಎನ್ನುವಂತೆ ನೆರೆ ಹಾವಳಿ, ಇ.ಡಿ ಸೆರೆ ಹಾವಳಿ, ಚಂದ್ರನ ದಾರಿ ಹುಡುಕುವ ಕಳಕಳಿ, ಜೈಲು ನಾಯಕರ ಪರ ಚಳವಳಿ, ಟ್ರಾಫಿಕ್ ರೂಲ್ಸ್ ಬಳುವಳಿ, ಉದ್ಯೋಗ ಉಳಿಸಿಕೊಳ್ಳಲು ಪಿಳಿಪಿಳಿ ಎಂಬಂತಹ ಇಷ್ಯೂಗಳು ಒಂದನ್ನೊಂದು ನುಂಗಿ, ಏನು ಮಾಡಬೇಕು, ಏನು ಮಾಡಬಾರದು ಅಂತ ಗೊತ್ತಾಗದೆ ಪ್ರಜೆಗಳು ಕಂಗೆಟ್ಟು ಧ್ವನಿ ಹೀನರಾಗಿದ್ದಾರೆ’.

‘ನಮ್ಮದೂ ಅದೇ ಪರಿಸ್ಥಿತಿ, ಸಾಮ್ರಾಜ್ಯಪತಿಯಾದರೂ ಸಾಮಂತನ ಸ್ಥಿತಿ ನಮ್ಮದು... ಇರಲಿಬಿಡಿ, ನಮಗೆ ರಾಜ್ಯ ದೊರಕಿಸಲು ನೆರವಾದ ಕುರ್ಚಿ ದಾನಿ ಕರ್ಣರ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿತೇ, ಅವರಿಗೆಂದು ಮೀಸಲಾದ ಮಂತ್ರಿ ಕುರ್ಚಿಗಳು ಖಾಲಿ ಉಳಿದಿವೆ’.

‘ಅದನ್ನೇ ಹೇಳಲು ಬಂದೆ ಪ್ರಭು. ಸೋತಪುತ್ರರು ಕ್ಷೇತ್ರದಲ್ಲಿ ಪತ್ತೆಯಿಲ್ಲ ಎಂದು ಪ್ರಜೆಗಳು ತಮಗೆ ಓಲೆ ಬರೆದಿದ್ದಾರೆ ತೆಗೆದುಕೊಳ್ಳಿ’.

‘ಕುರ್ಚಿ ದಾನಿ ಕರ್ಣರು ಶಾಪಗ್ರಸ್ತರಾಗಿ ವನವಾಸ, ಅಜ್ಞಾತವಾಸ ಅನುಭವಿಸುತ್ತಿದ್ದಾರೆ, ಶಾಪ ವಿಮೋಚನೆ ನಂತರ ದರ್ಶನ ನೀಡುತ್ತಾರೆ ಎಂದು ಮರು ಓಲೆ ಕಳುಹಿಸಿ’.

‘ಸೋತಪುತ್ರರ ಶಾಪ ವಿಮೋಚನೆ ಯಾವಾಗ ಪ್ರಭುಗಳೆ?’

‘ನ್ಯಾಯದೇವತೆಯನ್ನು ಒಲಿಸಿಕೊಳ್ಳಲು ಅವರು ಸುದೀರ್ಘ ತಪಸ್ಸು ಮಾಡಬೇಕು. ನ್ಯಾಯದೇವತೆ ಒಲಿದು ವರ ಕೊಟ್ಟರೆ ಶಾಪಮುಕ್ತರಾಗುತ್ತಾರೆ, ಇಲ್ಲವಾದರೆ ಇನ್ನಷ್ಟು ಕಾಲ ವನವಾಸ ತಪ್ಪಿದ್ದಲ್ಲ’.

‘ಪ್ರಭುಗಳೇ, ತಮ್ಮಲ್ಲೊಂದು ಅರಿಕೆ... ಚುನಾವಣೆಯಲ್ಲಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದೇನೆ. ತಾವು ನೀಡಿರುವ ಮಂತ್ರಿ ಕುರ್ಚಿ ತೀರಾ ಚಿಕ್ಕದು. ಸೋತ ಪುತ್ರರಿಗೆ ಮೀಸಲಿಟ್ಟಿರುವ ಒಂದು ದೊಡ್ಡ ಕುರ್ಚಿಯನ್ನು ದಯಪಾಲಿಸಬೇಕು ಎಂದು ಪ್ರಾರ್ಥಿಸುತ್ತೇನೆ...’

ಪ್ರಭುಗಳು ಉರಿಗಣ್ಣುಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.