ADVERTISEMENT

ಶೌಚಾಲಯ ನಮೋನಮಃ!

ಸುಮಂಗಲಾ
Published 6 ಅಕ್ಟೋಬರ್ 2019, 20:00 IST
Last Updated 6 ಅಕ್ಟೋಬರ್ 2019, 20:00 IST
   

‘ನೋಡ್ರಿ ಆಂಟಿ, ‘ಬಯಲೇ ಶೌಚಾಲಯ, ಬಯಲೇ ಮೂತ್ರಾಲಯ’ ಅಂತ ಹಾಡ್ತಿದ್ದವರನ್ನೆಲ್ಲ ಹೆಂಗ ಕರ್ಕಂಡು ಬಂದು ಮನ್ಯಾಗಿನ ಪಾಯಿಖಾನೆ ವಳಗ ಕುಂಡ್ರಸ್ಯಾರ ನಮ್ಮ ನಮೋಗುರುಗಳು.ಪ್ರಪಂಚದಾಗ ಎಷ್ಟ್ ಹಿಂದುಳಿದ ದೇಶಗೋಳು ಅದಾವಲ್ರಿ... ಒಂದ್ರಗಾರೂ ಐದೇ ವರ್ಸದಾಗ ಹೀಂಗ ಹತ್ ಕೋಟಿ ಪಾಯಿಖಾನೆ ಕಟ್ಯಾರೇನ್ರಿ? ಸತ್ಯಾ ಏನದ ಅಂತ ಜರಾ ಬಲಕ್ಕ ತಿರುಗಿ ನೋಡೂದೇ ಇಲ್ಲಲ್ರೀ ನೀವು’ ಎಂದು ಗೆಳತಿಯ ಮಗಳು ನನ್ನನ್ನು ಹೀಗಳೆದಳು.

‘ಹೋದ್ವಾರ ನಾ ಬೆಂಗ್ಳೂರಿಂದ ಬಳ್ಳಾರಿಗೆ ಬಸ್ಸಿನಾಗೆ ಹೋಗಿದ್ದೆ. ಕುಡತಿನಿಯಿಂದ ಬಳ್ಳಾರಿವರೆಗೆ ಅಕ್ಕಪಕ್ಕ ಎಷ್ಟ್ ಹಳ್ಳಿ ಸಿಗ್ತಾವಲ್ಲ, ಅಷ್ಟೂ ಹಳ್ಳಿವಳಗ ಎಷ್ಟ್ ಮಂದಿ ಚಂಬ್ ಹಿಡ್ಕಂಡು ಹೊಂಟಿದ್ರು ಗೊತ್ತದೇನು... ಬೆಳಗ್ಗೆ ನಾನೇ ಕಣ್ಣಾರೆ ನೋಡೀನಿ’ ನಾನು ವಾದಿಸಿದೆ.

‘ರಾತ್ರಿಯಿಡೀ ಮಕ್ಕಂಡು ಕಾಲು ಜೋಮ ಹಿಡಿದಿರ್ತಾವಲ್ರೀ, ವಾಕಿಂಗ್ ಆಗ್ತದ, ಹಂಗೇ ಹೊಲಕ್ಕೂ ಗೊಬ್ಬರ ಆಗ್ತದಂತ ಅವ್ರು ಹೋಗ್ತಾರ‍್ರಿ. ಅದೊಂಥರಾ ಬಯಲು ಯೋಗಾಭ್ಯಾಸ’.

ADVERTISEMENT

‘ಉತ್ತರ ಭಾರತದಾಗ ಮನುಷ್ಯರೇ ಮಲ ಎತ್ತಿ ಸಾಗಿಸೋವಂಥ ಒಣಪಾಯಿಖಾನಿ ಲಕ್ಷಗಟ್ಟಲೆ ಅದಾವಂತ. ಅವನ್ನೂ ಹೈಟೆಕ್ ಮಾಡ್ಯಾರನು?’

‘ಐದ್ ವರ್ಸದ ಹಿಂದಿನ ಹಳೇಕಥಿ ಒದರಬ್ಯಾಡ್ರಿ. ಅಲ್ಲೂ ಈಗ ಪಕ್ಕಾ ಟಾಯ್ಲೆಟ್ ಕಟ್ಯಾರ‍್ರೀ. ಬಯಲುಶೌಚ ಮುಕ್ತ ಭಾರತ ನಮ್ಮದು... ಬೀದಿನಾಯಿಗಳು, ಬೆಕ್ಕುಗಳಿಗೆ ಶೌಚಾಲಯ ಕಟ್ಟೂದು ಬಾಕಿ ಅದ ಅಷ್ಟೆ’.

‘ಈ ಕೋಟಿಗಟ್ಟಲೆ ಪಾಯಿಖಾನೆ ಗುಂಡಿ ತುಂಬಿದ ಮ್ಯಾಗ ಕ್ಲೀನ್ ಮಾಡೋರು ಯಾರು... ಸ್ವಚ್ಛ ಭಾರತದ ನಿಮ್ಮ ಮಂದಿನೆ ಬಳಿತಾರೇನು’.

ಮುಖ ಕಿವುಚಿದಳು. ‘ನಮ್ಮ ಮಂದಿ ಯಾಕ್ ಬಳೀತಾರ‍್ರಿ... ಪಾಯಿಖಾನೆ ಗುಂಡಿ ಬಳಿಲಾಕ ಅಂತನೇ ಬ್ಯಾರೆ ಮಂದಿ ಅದಾರಲ್ರೀ... ಆ ಮಂದಿಗೂ ನಮೋಗುರುಗಳು ಕೈತುಂಬ ಕೆಲಸ ಕೊಟ್ಟಂಗ ಆತಿಲ್ರೀ. ನಮ್ಮ ಹೈಟೆಕ್ ಮಂದಿ ಬೇಕಿದ್ರ ನಾಸಾದವ್ರ ಜೋಡಿ ಚಂದ್ರಲೋಕಕ್ಕ ಹೋಗಿ, ಅಪೊಲೋ ಯಾತ್ರಿಗಳು ಬಿಟ್ ಬಂದಿದ್ದ ಸುಸೂ, ಕಕ್ಕದ ಪಾಕೀಟು ತಗಂಡು ಬರ್ತಾರ‍್ರೀ’ ಎನ್ನುತ್ತ ಕೊಂಕುನಗೆ ಬೀರಿದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.