ADVERTISEMENT

ಸಿನಿಮಾ ಹಿಟ್... ಜಿಡಿಪಿ ಆಕಾಶಕ್ಕೆ!

ಸುಮಂಗಲಾ
Published 13 ಅಕ್ಟೋಬರ್ 2019, 20:00 IST
Last Updated 13 ಅಕ್ಟೋಬರ್ 2019, 20:00 IST
ಚುರುಮುರಿ
ಚುರುಮುರಿ   

‘ಪ್ಲಾಗಿಂಗ್ ಮಾಡಿ ಸುಸ್ತಾತು’ ಎನ್ನುತ್ತ ಬಂದ ಬೆಕ್ಕಣ್ಣ, ಪ್ಲಾಸ್ಟಿಕ್ ಕವರುಗಳು ತುಂಬಿದ್ದ ಚೀಲವನ್ನು ಮೂಲೆಗೆಸೆಯಿತು. ‘ಮೋದಿ ಮಾಮನ ಬರಿಗಾಲಿನ ಪ್ಲಾಗಿಂಗ್ ಅನ್ನು ಗೌಡಜ್ಜನೂ ಎಷ್ಟ್ ಹೊಗಳ್ಯಾನ. ಇಷ್ಟ್ ವರ್ಷದಾಗ ಒಬ್ಬರಾದ್ರೂ ಕೈಮಂದಿ ಕೈಯೊಳಗ ಹೀಂಗ ಕಸ ಎತ್ತಿದ್ರೇನು’ ಎಂದು ಹಂಗಿಸಿತು.

‘ಮೊನ್ನಿ ಗೌಡಜ್ಜ ಏಕತಾ ಪ್ರತಿಮೆ ಹತ್ರ ಫೋಟೊ ತೆಗೆಸಿಕೊಂಡಿದ್ದನ್ನು ನಿಮ್ಮ ಮೋದಿ ಮಾಮಾ ಹೊಗಳಿದ್ದ. ಕಮಲ-ದಳಗಳ ನಡುವೆ ಹೊಗಳಿಕೆ ಹವಾ ಭಾಳ ನಡದದ ಈಗ...’ ಎಂದೆ.

‘ನನಗ ಮೋದಿ ಮಾಮ ಎಷ್ಟ್ ಪಿರೂತಿಯಿಂದ ಫೋನ್ ಮಾಡಿ ವಿಚಾರಿಸತಿದ್ರು, ಯಡ್ಯೂರಜ್ಜಂಗ ಕದ ಮುಚ್ಚತಾರ ಅಂತ ಕುಮಾರಣ್ಣನೂ ಹೇಳಾಕಹತ್ತಿದ್ದ. ಅತ್ತಾಗ ಕಮಲಕ್ಕನ್ನ ಬಿಟ್ಟಿದ್ದೇ ದೊಡ್ಡ ತಪ್ಪಾತಂತ ನಾಯ್ಡು ಅಂಕಲ್ ಗಲ್ಲಗಲ್ಲ ಬಡ್ಕೊಳಾಕ ಹತ್ಯಾನ. ಎಲ್ಲಾರೂ ಏನೋ ಹೊಸ ಸೂತ್ರ ಹೊಸೀತಿದ್ದಂಗ ಐತಿ...’ ಎನ್ನುತ್ತ ಪೇಪರೋದಿತು.

ADVERTISEMENT

‘ಮುಂದಿನ ವರ್ಸ ನಮ್ಮ ದೇಶಕ್ಕೊಂದು ನೊಬೆಲ್ ಗ್ಯಾರಂಟಿ. ಅಮರ್ಥ್ಯ ಸೇನ್‌ಗೂ ಮೀರಿಸೋ ಆರ್ಥಿಕ ತಜ್ಞ ಕೊನಿಗೂ ಹುಟ್ಯಾನ... ಇಲ್ಲೊಂದು ಹೊಸ ಸೂತ್ರ ಐತಿ’ ಖುಷಿಯಿಂದ ಉದ್ಗರಿಸಿತು. ‘ಡಿಗ್ರಿ ಮಾಡಿದೋರು ಖಾಲಿ ಕುತ್ತು ನೊಣ ಹೊಡಿತಾರ ಅನ್ನೂದೆಲ್ಲ ಸುಳ್ಳು. ಕೇಂದ್ರ ಕಾನೂನು ಸಚಿವರು ಜಿಡಿಪಿಗೆ ಹೊಸ ಸೂತ್ರ ಕಂಡುಹಿಡಿದಾರ. ಜನಕ್ಕೆ ಕೈತುಂಬ ಕೆಲಸೈತಿ, ಮಸ್ತ್ ರೊಕ್ಕ ಗಳಿಸಿ, ಸಿನಿಮಾಗ ಹೋಗತಾರ. ಬಾಕ್ಸ್ ಆಫೀಸಿನಾಗ ಎಷ್ಟ್ ರೊಕ್ಕ ಬಂದ್ ಬೀಳ್ತದ ಅನ್ನೂದೆ ಜಿಡಿಪಿ ಅಳತೆಗೋಲು’.

‘ಸಿನಿಮಾ ತೋಪಾಯ್ತು ಅಂದ್ರ ಜಿಡಿಪಿನೂ ಕೆಳಗ ಬೀಳ್ತದೇನು ಹಂಗಾರ’ ಕೇಳಿದೆ.

‘ತೋಪಾಗಿದ್ದ ಸಿನಿಮಾ ಲೆಕ್ಕಕ್ಕಿಲ್ಲ. ಬಾಕ್ಸ್ ಆಫೀಸ್ ಹಿಟ್ ಮಾತ್ರ ಲೆಕ್ಕಕ್ಕ ಬರ್ತದ. ಸೂಪರ್ ಹಿಟ್ ಸಿನಿಮಾ ರಿಲೀಸ್ ಮಾಡ್ತಾನೇ ಇದ್ರಾತು, ಜಿಡಿಪಿ ಆಕಾಶಕ್ಕ ಜಿಗೀತದ’ ಬೆಕ್ಕಣ್ಣ ವಾದಿಸುತ್ತ ಕಾನೂನು ಸಚಿವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಿ ಸ್ವೀಡಿಶ್ ಕಮಿಟಿಗೆ ಇ–ಮೇಲ್ ರವಾನಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.