ADVERTISEMENT

ಹೊಸ ಬಗೆ ಬೇತಾಳ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 19:46 IST
Last Updated 29 ಡಿಸೆಂಬರ್ 2019, 19:46 IST
   

ಛಲದಂಕ ಮಲ್ಲ ವಿಕ್ರಮಾದಿತ್ಯ, ವರ್ಷದ ಕೊನೆಯ ಪ್ರಯತ್ನವೆಂದು ನಟ್ಟನಡುರಾತ್ರಿ ಸ್ಮಶಾನಕ್ಕೆ ಹೋಗಿ ವಟವೃಕ್ಷದಿಂದ ಬೇತಾಳವನ್ನು ಇಳಿಸಿಕೊಂಡು ಮೌನವಾಗಿ ಬರುತ್ತಿರಲಾಗಿ... ಬೇತಾಳ ಮಾತು ಶುರು ಮಾಡಿತು.

‘ಕಥೆ ಹೇಳಿ ಕಡೆಯಲ್ಲಿ ಪ್ರಶ್ನೆ ಕೇಳುವ ಹಳೆಯ ಬೇತಾಳ ನಾನಲ್ಲ ರಾಜನೇ. ಒಂದೆರಡು ಪ್ರಶ್ನೆಗಳನ್ನೇ ಕೇಳುವೆ’ ಎಂದಿತು. ‘ಹುಶ್‍... ನಾವೀಗ ಏನೂ ಪ್ರಶ್ನಿಸಬಾರದ ರಾಷ್ಟ್ರದಲ್ಲಿದ್ದೇವೆ’ ವಿಕ್ರಮಾದಿತ್ಯ ಪಿಸುಗುಟ್ಟಿದ.

‘ಬೇತಾಳನಿಗಾವ ರಾಷ್ಟ್ರ... ಈಗ ನಾ ಕೇಳುವ ಎರಡು ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ನಿನ್ನ ಪೌರತ್ವದ ದಾಖಲೆಗಳೆಲ್ಲ ಸಾವಿರ ಹೋಳುಗಳಾಗಿ, ಯಾವ ರಾಷ್ಟ್ರಕ್ಕೂ ಸಲ್ಲದವನಾಗಿ ಹೋಗುವೆ ನೀನು, ನೆನಪಿರಲಿ’ ಎಂದು ಬೆದರಿಸಿದ ಬೇತಾಳ ಕೇಳತೊಡಗಿತು.

ADVERTISEMENT

* ‘2019ರಲ್ಲಿ ನಡೆದ ಅತಿ ಸೋಜಿಗದ ವಿದ್ಯಮಾನ ಯಾವುದು?’

‘ಅಯೋಧ್ಯೆಯ ಚಕ್ರಾಧಿಪತಿಯಾಗಿದ್ದವನಿಗೆ ಮಿಸ್ಟರ್ ರಾಮ್‌ಲಲ್ಲಾ ಹೆಸರಿನಲ್ಲಿ ಎರಡೂ ಮುಕ್ಕಾಲು ಎಕರೆ ಜಾಗದಲ್ಲಿ ನಾಲ್ಕು ಬೆಡ್‍ರೂಮಿನ ಫ್ಲ್ಯಾಟನ್ನು ಕೇಂದ್ರ ಸರ್ಕಾರವೇ ಕಟ್ಟಿಕೊಡಬೇಕೆಂಬ ಸುಪ್ರೀಂ ತೀರ್ಪು, ಅನರ್ಹರೇ ನಮ್ಮನ್ನಾಳಲು ಅರ್ಹರೆಂದು ಚುನಾ ಯಿಸಿದ ಕರುನಾಡಿನ ಜನಮತದ ತೀರ್ಪು, ಸೇನಾಮೈತ್ರಿ ಕಡಿದುಬಿದ್ದು, ತ್ರಿವೈರಿ ಬಣಗಳ ಮಹಾಮೈತ್ರಿ ಸದ್ಯಕ್ಕಾದರೂ ಮೋಶಾಟ್ಲರ್‌ಗಳ ನಿದ್ದೆ ಕದ್ದಿರುವುದು... ಹೀಗೆ ಹತ್ತಾರಿವೆ’.

‘ಮಾಯಾಮನೆ ಎಲ್ಲಿದೆ? ಯಾಕೆ ಅದಕ್ಕೆ ಮಾಯಾಮನೆ ಎನ್ನುವರು?’
‘ಅಸ್ಸಾಮಿನಲ್ಲಿ ಕಟ್ಟುತ್ತಿರುವ ಬಂಧನ ಕೇಂದ್ರವೆಂಬ ಸಂಕೀರ್ಣವೇ ಮಾಯಾಮನೆ. ಅವರದೇ ಸರ್ಕಾರ 46 ಕೋಟಿ ರೂಪಾಯಿ ಕೊಟ್ಟಿದ್ದರೂ ಮೋಶಾಟ್ಲರ್ ಅಂಥ ಕೇಂದ್ರ ಅಸ್ತಿತ್ವದಲ್ಲಿಯೇ ಇಲ್ಲವೆನ್ನುವರು. ಮಾಯಾಮನೆ ಇನ್ನು ಮುಂದೆ ದೇಶದ ತುಂಬೆಲ್ಲ ಮರಿಹಾಕುವುದಂತೆ’.

ಉತ್ತರಿಸಿದ ವಿಕ್ರಮಾದಿತ್ಯ ‘ಎಲ್ಲಕ್ಕೂ ಸರಿ ಯುತ್ತರ ಹೇಳಿದೆನಲ್ಲ, ಇನ್ನು ವಾಪಸು ಹೋಗು’ ಎಂದು ಬೇತಾಳನನ್ನು ಇಳಿಸಲು ಪ್ರಯತ್ನಿಸಿದ. ‘ಯಾವ ಪಕ್ಷ ಬಂದರೂ ರೈತನ ಬೆಂಬಿಡದ ಸಂಕಟಗಳಂತೆ ನಾನು’ ಎಂದು ಈ ಹೊಸ ಬೇತಾಳ ಗಟ್ಟಿಯಾಗಿ ಬೆನ್ನು ಹಿಡಿದು ಕೂತಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.