ADVERTISEMENT

ಹುಡುಗಿ ಹೋಗಿ ರೋಬೊ ಬಂತು...

ಡಾ.ಮಲ್ಲಿಕಾರ್ಜುನ ಗುಮ್ಮಗೋಳ
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST
   

‘ಚೀನಾದಲ್ಲಿ ಕೃತಕ ಬುದ್ಧಿಮತ್ತೆಯ ಸುದ್ದಿವಾಚಕ ರೋಬೊ ಸೃಷ್ಟಿಸಲಾಗಿದೆ’ ಎಂಬ ಬ್ರೆಕಿಂಗ್ ನ್ಯೂಸ್‍ ಅನ್ನು ಸುದ್ದಿವಾಹಿನಿಯೊಂದರ ಸುದ್ದಿವಾಚಕಿ ಎತ್ತರದ ಧ್ವನಿಯಲ್ಲಿ ಓದುತ್ತಿದ್ದಳು. ಇದನ್ನು ಕೇಳಿ ಹಂಡೆಹಾಲು ಕುಡಿದಷ್ಟು ಸಂತೋಷಗೊಂಡ ಪಾರು, ‘ಆ್ಯಂಕರ್‌ಗಳನ್ನು ನೋಡಿ ಜೊಲ್ಲು ಸುರಿಸುವ ನಿಮ್ಮಂಥವರನ್ನು ನೋಡಿಯೇ ಚೀನಾದವರು ಈ ರೋಬೊ ತಯಾರಿ ಮಾಡ್ಯಾರ. ತಯಾರಿ ಮಾಡಿದವರಿಗೆ ಕೋಟಿ ಕೋಟಿ ಪುಣ್ಯ ಬರಲಿ’ ಎನ್ನುತ್ತ ಎದ್ದು ಒಳಗೆ ಹೋದಳು. ನ್ಯೂಸ್ ನೋಡುವ ಹೆಸರಿನಲ್ಲಿ ಚಂದದ ಹುಡುಗಿಯರನ್ನು ನೋಡುವ ಭಾಗ್ಯ ಇಲ್ಲದಂತಾಗುತ್ತಿರುವುದಕ್ಕೆ ಬೇಸರಗೊಂಡ ಪರಮೇಶಿ, ‘ಹಿಂಗಾದ್ರ ಇನ್ಯಾರ್ ಟಿ.ವಿ. ನೋಡ್ತಾರ್’ ಎನ್ನುತ್ತ ರಿಮೋಟ್ ಬೀಸಿ ಒಗೆದ.

‘ಅಲ್ಲಾ ಎಂಥಾ ಕಾಲ ಬಂತು ಅಂತೀನಿ. ಹಿತ್ತಾಳಿ ಕೊಡಾ ಹೋಗಿ ಪ್ಲಾಸ್ಟಿಕ್ ಕೊಡಾ ಬಂದ್ವು, ಗಡಿಗಿ ಹೋಗಿ ಅಲ್ಯುಮಿನಿಯಂ ಭಾಂಡಿ ಬಂದ್ವು, ಸೀರಿ ಹೋಗಿ ನೈಟಿ (ನೈಂಟಿ ಅಲ್ಲ) ಬಂದ್ವು, ಧೋತ್ರ ಹೋಗಿ ಬರ್ಮುಡಾ ಬಂದ್ವು, ಹುಡುಗಿಯರ್ ಹೋಗಿ ರೋಬೋಟ್ ಬಂದ್ವು. ಹಿಂಗಾದ್ರ ಮುಂದ ಬಾಳೆ ಮಾಡುದ್ಹೆಂಗೋ ಏನೋ’ ಎಂದು ನಿಟ್ಟುಸಿರು ಬಿಡುತ್ತ ಪರಮೇಶಿ ಚಾವಡಿ ಕಟ್ಟೆಯ ಕಡೆಗೆ ನಡೆದ.

ಚಾವಡಿ ಕಟ್ಟೆಯಲ್ಲೂ ಇದೇ ಚರ್ಚೆಯಾಗುತ್ತಿತ್ತು. ‘ಅಲ್ಲಪಾ ಶಂಕ್ರಣ್ಣ, ನಾವು ಸಣ್ಣಾವ್ರ ಇದ್ದಾಗ ಚಿಮಣಿ ಬುಡ್ಡಿ ದೀಪದಾಗ ಜೀವನಾ ಮಾಡ್ತಿದ್ವಿ. ಟಿ.ವಿ. ಹೋಗ್ಲಿ, ಗೌಡ್ರ ಮನ್ಯಾಗ ಒಂದ್ ಬುಷ್ ರೇಡಿಯೊ ಬಿಟ್ರ ಊರಾಗ ಯಾರ ಮನ್ಯಾಗೂ ರೇಡಿಯೊ ಸಹ ಇರ್ಲಿಲ್ಲ. ಈಗ ಗುಡಿಸಲದಾಗೂ ಟಿ.ವಿ., ಸಣ್ಣ ಹುಡುಗುರ ಕೈಯಾಗ ಸ್ಮಾರ್ಟ್ ಫೋನ್, ಮನಿಗೊಂದ ಬೈಕ್, ಕಾರ್ ಬಂದಾವ. ಚೀನಾದವ್ರು ಪ್ಲಾಸ್ಟಿಕ್ ಅಕ್ಕಿ ಮಾಡ್ಯಾರಂತ ಸುದ್ದಿ ಕೇಳಿದ್ವಿ. ಈಗ ನೋಡಿದ್ರ ರೋಬೊ, ಪ್ಲಾಸ್ಟಿಕ್ ಹುಡುಗಿಯರನ್ನು ತಯಾರು ಮಾಡ್ಯಾರಂತ! ಅವರಕೂಡ ನಮ್ಮ ಹರೇದ ಹುಡುಗೂರ ಮದ್ವಿ ಮಾಡಿದ್ರ, ಅವು ಬಾಳೆ ಹೆಂಗ್ ಮಾಡ್ಬೇಕು, ನಮ್ಮ ಕೈಯಿಗೆ ಮೊಮ್ಮಕ್ಳನ್ನ ಹೆಂಗ್ ಕೊಡ್ಬೇಕು ಅನ್ನೋದು ತಿಳಿವಲ್ದು’ ಎಂದು ಸಂಗಣ್ಣ ಹಣಿಹಣಿ ಬಡಕೊಂಡ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.