ADVERTISEMENT

ಬಾರಾಣೆ ಖರ್ಚಾಗೈತಿ ಚಾರಾಣೆನೂ ಸಿಗಲ್ಲ...!

ಡಿ.ಬಿ, ನಾಗರಾಜ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST
   

‘ಬರ ನೋಡಾಕ ಕೇಂದ್ರ ತಂಡ ನಮ್ಮೂರ್‌ಗೆ ಬರಾಕತ್ತೈತಿ. ಕಟ್ಟೇಲಿ ಕೂತ್ ಏನ್‌ ಮಾಡೋದ್‌ ಬಾ ಮಾವ. ಒಂದೆಜ್ಜೆ ಅತ್ತ ಹೋಗ್ಬರೋಣ’ ಎಂದು ಪಕ್ಕ್ಯಾ ಆಹ್ವಾನ ನೀಡ್ತಿದ್ದಂತೆ, ‘ಆಯ್ತು ನಡೀಲೇ ಅಳಿಯ. ಇಲ್ಲಾರೆ ಕೂತ್‌ ನಾ ಏನ್‌ ಮಾಡ್ಲಿ. ಅವ್ರೆಲ್ಲಾ ಏನೇನ್‌ ಮಾಡ್ತವ್ರೆ ಅಂಥ ನಾವೂ ನೋಡೋಣ...’ ಎಂದು ಹೊಲದತ್ತ ಜತೆಯಾಗಿ ಹೆಜ್ಜೆ ಹಾಕಿದ್ರು ಪಕ್ಕ್ಯಾ, ಬಾಬ್ಯಾ.

ಹಾದಿಯುದ್ದಕ್ಕೂ ಇಬ್ಬರ ನಡುವೆ ಮಾತಿನ ಜುಗಲ್‌ಬಂದಿ ಸಾಗಿತು. ‘ಬರ ಬಂದಾಗಲೆಲ್ಲಾ ಸಚಿವ್ರು, ಈ ಕೇಂದ್ರದವ್ರು ಬರ್ತಾರೆ. ಎಲ್ರೂ ನಮ್ಮೂರ್‌ಗ ಯಾಕ ಬರ್ತಾರ ಅನ್ನೋದೇ ತಿಳಿವಲ್ದು. ನಮ್ಮಲ್ಲಿಗಿಂತ ಇಂಡಿ ಭಾಗದಲ್ಲಿ ಹೆಚ್ಚು ಬರ ಇರ್ತೈತಿ. ಆದ್ರೂ ಒಮ್ಮೆನೂ ಸಾಹೇಬ್ರು ಅವರನ್ನ ಅತ್ತ ಯಾಕ ಕರ್ಕೊಂಡ್‌ ಹೋಗಲ್ಲ ಮಾವ...?’ ಅಂಥ ಪಕ್ಕ್ಯಾ ತನ್ನೊಳಗಿನ ಅನುಮಾನವನ್ನು ಹೊರ ಹಾಕಿದ.

‘ನೋಡಲೇ ಅಳಿಯ... ಬಾಗಲಕೋಟೆಯಿಂದ ವಿಜಾಪುರಕ್ಕೆ ಬರೋ ದಾರ‍್ಯಾಗ ನಮ್ಮೂರ್‌ ಐತಿ. ಕೇಂದ್ರದ ಸಾಹೇಬ್ನೂ ಎಲ್ಲ ಜಿಲ್ಲೆಗೆ ಭೇಟಿ ಕೊಡಬೇಕಿರುತ್ತೆ. ಇಲ್ಲಿರುವ ನಮ್ಮವರಿಗೂ ಇದೇ ಬೇಕಿರುತ್ತೆ. ದಾರ‍್ಯಾಗ ಬರೋರನ್ನ ನಮ್ಮೂರ ಹಾದಿ ಬದಿ ಹೊಲದ ಬಳಿ ತರುವಿ, ನಮ್ಮಂಥ ಹತ್ತಿಪ್ಪತ್ತು ಮಂದಿ ಕರೆಸಿ ಗಿಳಿಪಾಠ ಒಪ್ಪಿಸೋ ಕಲೆ ಇಲ್ಲಿನ ತಲಾಟಿಗೆ ಕರಗತವಾಗಿದೆ’.

ADVERTISEMENT

‘ಅವ ಪಾಳಿಯಂತೆ ಒಮ್ಮೊಮ್ಮೆ ಹತ್ತಿಪ್ಪತ್ತು ದೀಡ್‌ ಪಂಡಿತರ ತಂಡವನ್ನು ಈ ಟೈಂಗೆ ರೆಡಿ ಮಾಡ್ತಾನೆ. ಕೇಂದ್ರದ ಅಧಿಕಾರಿ ಮುಂದ ಇವ್ರು ಗಿಳಿಪಾಠ ಒಪ್ಪಿಸ್ತಾರೆ. ಅವ ಸಹ ಕಾಟಾಚಾರಕ್ಕೆ ನಡೆಸಬೇಕಾದ ಎಲ್ಲ ಶಾಸ್ತ್ರ ಮುಗಿಸಿ, ಬುರ್ರೆಂದು ಕಾರಲ್ಲಿ ಹೋಗ್ತಾನೆ. ಮೂರ್ನಾಲ್ಕ್ ತಿಂಗ್ಳ ಬಳಿಕ ನಾವ್‌ ಖರ್ಚ್‌ ಮಾಡಿದ್ದ ಬಾರಾಣೆಗೆ, ಚಾರಾಣೆನೂ ಸಿಗದಂತಹ ಪರಿಹಾರ ಬ್ಯಾಂಕ್‌ ಖಾತೆಗೆ ಜಮಾ ಆಗ್ತದ. ಅದಕ್ಕೂ ನೂರೆಂಟ್ ಕಿರಿಕಿರಿ’ ಎಂದು ಬಾಬ್ಯಾ ಹೇಳೋದಕ್ಕೂ ಅಧಿಕಾರಿಗಳ ತಂಡ ಹಾದಿ ಬದಿಯ ಹೊಲಕ್ಕಿಳಿಯುವುದಕ್ಕೂ ಸರಿಹೋಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.