ADVERTISEMENT

ಚುರುಮುರಿ: ಸಿಡಿ ಹಬ್ಬ!

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:31 IST
Last Updated 2 ಏಪ್ರಿಲ್ 2021, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪೇಟೆ ಗೆಳೆಯನನ್ನು ಹಳ್ಳಿಗೆ ಕರೆದೊಯ್ದಿದ್ದೆ. ದೇವಸ್ಥಾನದ ಬಳಿ ರಿಟೈರ್ಡ್ ದಫೇದಾರ್ ಮುದುಕಪ್ಪ, ‘ಸಿಡಿ ಹಬ್ಬಕ್ಕೆ ಬಂದಿರಾ?’ ಎಂದರು.

ಬೆಚ್ಚಿದ ಮಿತ್ರ ‘ಏನಯ್ಯಾ, ಇಲ್ಲಿಯೂ ಸೀಡಿ ಸದ್ದು?!’ ಎಂದ.

ನಾನು, ‘ಅದು ನೀನಂದ್ಕೊಂಡಿರೋ ಸೀಡಿ ಅಲ್ಲಯ್ಯಾ... ಅಜ್ಜ ಹೇಳ್ತಾರೆ ಕೇಳು’ ಎಂದೆ.

ADVERTISEMENT

ಮುದುಕಪ್ಪ ಹೇಳಿದರು, ‘ಸಿಡಿಗಳಲ್ಲಿ ಎರಡು ನಮೂನಿ. ಒಂದು- ತಿರುಗಣಿ ಸಿಡಿ. ಇದು ನಿಮ್ಮ ಲ್ಯಾಂಡ್ ಫೋನ್ ಇದ್ದಂಗೆ. ನೆಲದಲ್ಲಿ ನೆಟ್ಟ ಇದರ ಸಿಡಿಗಂಬದ ಮೇಲೆ 35 ಮೊಳದುದ್ದದ ಸಿಡಿ ಮರ ಇರುತ್ತೆ. ಅದ್ರ ತುದಿಗೆ ಭಕ್ತರು ತಮ್ಮನ್ನು ಬಟ್ಟೆಯಿಂದ ಕಟ್ಟಿಕೊಂಡಿರ್ತಾರೆ. ಅದು ಗಾಣದಂತೆ ತಿರುಗ್ತಿರುತ್ತೆ. ನಮ್ಮೂರಿನದು ಇಂಥ ಸಿಡಿ’.

‘ಇನ್ನೊಂದು ಸಿಡಿ ಎಂಥದ್ದು?’

‘ಅದು ಬಂಡಿಸಿಡಿ, ನಿಮ್ಮ ಮೊಬೈಲ್ ಫೋನಿನಂತೆ. ಅತ್ತಿಂದಿತ್ತ ಓಡಾಡತ್ತೆ. ಒಳ್ಳೆ ಹೋರಿಗಳು ಆ ಬಂಡೀನ ಊರು ಗಡಿವರೆಗೆ ಎಳೆದೊಯ್ಯುತ್ವೆ... ದಾರಿಯಲ್ಲಿನ ಗುಂಡಿ ಗೊಟರು, ಕರೆಂಟ್ ಕಂಬ ತಪ್ಪಿಸೋಕೆ ಅದ್ರ ದಾರಿ ಬದ್ಲಾಗ್ತಿರತ್ತೆ’.

‘ಎರಡಕ್ಕೂ ವ್ಯತ್ಯಾಸವೇನಜ್ಜಾ?’

‘ಮೊದಲನೇದು ನಮ್ಮ ಹಳ್ಳಿ ಜನದಂತೆ... ಎರಡನೇದ್ರಂತೆ ನಮ್ಮ ನಾಯಕಮಣಿಗಳು’.

‘ಅಂದ್ರೆ?’

‘ನಾವು ಬಹುಪಾಲು ಏಕಪತ್ನಿ ವ್ರತಸ್ಥರು. ಕೆಲವ್ರು ಸೊಗಸುಗಾರ ಪುಟ್ಟಸ್ವಾಮಿಗಳಿದ್ರೂ ಅವ್ರ ಕಾರ್ಯಕ್ಷೇತ್ರ ತಿರುಗಣಿ ಸಿಡಿಯಂತೆ ಒಂದು ಕಡೆಗೇ ಸೀಮಿತ. ಎರಡನೆಯದು ಬಂಡಿ ಸಿಡಿ, ನಮ್ಮ ನಾಯಕಮಣಿಗಳ ಥರ. ಅವರಿಗೆ ಒಂದು ದಾರಿ ಸಾಲದು. ಅನೇಕವು ಬೇಕು. ಎಲ್ಲದರಲ್ಲೂ ಬಲಿಷ್ಠರಾದ ಅವರು ಆಗಾಗ ದಾರಿ ಬದಲಿಸ್ತಿರ್ತಾರೆ. ಈಗ ರಾಜಧಾನೀಲಿ ನಡೀತಿರೋದು ಇಂಥ ಸಿಡಿಯಾಟವೇ ಅಲ್ವೇ? ಅದು ಯಾವಾಗ, ಎಲ್ಲೆಲ್ಗೆ ಯಾರ‍್ಯಾರನ್ನು ಹತ್ತಿಸ್ಕೊಂಡುಹೋಗಿ ಎಲ್ಲಿ ನಿಲ್ಸುತ್ತೋ ಆ ದೇವರಿಗೇ ಗೊತ್ತು. ನಮ್ಗಿಂತ ಶ್ಯಾಣೇ ಆದ ನಿಮ್ಮಂಥ ಪ್ಯಾಟೇ ಮಂದೀನೆ ಹೇಳ್ಬೇಕು’.

ಬುಡಕ್ಕೇ ಸಂಚಕಾರ ಬಂತು! ದಿನಭವಿಷ್ಯದಲ್ಲಿ ಇವತ್ತು ಏಪ್ರಿಲ್ ಒಂದು, ಹುಷಾರಾಗಿರಿ ಎಂದಿದ್ದುದು ನೆನಪಾಗಿ, ಮಿತ್ರನನ್ನು ಮನೆಕಡೆ ಎಳೆದೊಯ್ದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.