ADVERTISEMENT

ಚುರುಮುರಿ: ಬಿ(ಟ್ಟಿ)ಟ್ ಕಾಯಿನ್!

ಬಿ.ಎನ್.ಮಲ್ಲೇಶ್
Published 11 ನವೆಂಬರ್ 2021, 19:31 IST
Last Updated 11 ನವೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೀ... ಈ ಬಿಟ್ ಕಾಯಿನ್ ಅಂದ್ರೆ ಏನು?’ ಮಡದಿ ಪಮ್ಮಿ ಪ್ರಶ್ನೆಗೆ ತಬ್ಬಿಬ್ಬಾದ ತೆಪರೇಸಿ ‘ಅದೂ... ಅದೊಂಥರ ದುಡ್ಡು, ಯಾಕೆ?’ ಎಂದ ತಡವರಿಸುತ್ತ.

‘ಅಲ್ಲರೀ ಟಿ.ವಿ. ರಿಪೋಟ್ರಾಗಿ ನಿಮಗೇ ಗೊತ್ತಿಲ್ಲ ಅಂದ್ರೆ ಹೆಂಗೆ?’

‘ಗೊತ್ತಿಲ್ಲ ಅಂತಲ್ಲ, ನಿಂಗೆ ಹೆಂಗೆ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ಅದೊಂಥರಾ ಆನ್‌ಲೈನ್ ಕ್ಯಾಶು...’

ADVERTISEMENT

‘ಕ್ಯಾಶು ಅಂದ್ರೆ ಅದ್ರಲ್ಲಿ ರೂಪಾಯಿ ಇರಲ್ವ? ಬರೀ ಕಾಯಿನ್ ಇರ‍್ತಾವಾ?’

‘ಥೋ... ಅದು ಕಾಯಿನ್ ಹೆಸರಲ್ಲಿರೋ ದುಡ್ಡು ಕಣೆ...’

‘ಹೌದಾ? ವಿಚಿತ್ರ. ಸಾವಿರಾರು ಕೋಟಿ ರೂಪಾಯಿ ಹಗರಣ ಅಂತೀರಿ, ಯಾರಾದ್ರೂ ಕಾಯಿನ್‌ನಲ್ಲಿ ವ್ಯವಹಾರ ಮಾಡ್ತಾರಾ? ಈಗಿನ ಕಾಲದಲ್ಲಿ ಭಿಕ್ಷುಕರೂ ಕಾಯಿನ್ ಮುಟ್ಟಲ್ಲಪ್ಪ’.

‘ಥೋತ್ತೇರಿ, ಇದು ಆ ಕಾಯಿನ್ ಅಲ್ಲ. ಇದೊಂಥರ ಕಣ್ಣಿಗೆ ಕಾಣದ ದುಡ್ಡು. ಲೆಕ್ಕಿಲ್ಲ ಬುಕ್ಕಿಲ್ಲ, ಯಾರ‍್ಯಾರು ವ್ಯವಹಾರ ಮಾಡ್ತಾರೆ ಯಾರಿಗೂ ಗೊತ್ತಾಗಲ್ಲ’.

‘ಹೌದಾ? ಅಂದ್ರೇ ಆ ದುಡ್ಡಿಂದ ತರಕಾರಿ, ಕೊತ್ತಮರಿ ಸೊಪ್ಪು ತಗಳ್ಳಾಕೆ ಆಗಲ್ವ?’

‘ಏನೋಪ್ಪ, ಆ ದುಡ್ಡನ್ನು ನಾನೂ ನೋಡಿಲ್ಲ. ರಾಜಕಾರಣಿಗಳ ಅಕೌಂಟಲ್ಲಿದೆಯಂತೆ...’

‘ಅಲ್ಲರೀ, ಈ ಬಿಟ್ ಕಾಯಿನ್ನನ್ನ ನಕಲಿ ಮಾಡಾಕೆ ಬರಲ್ವ?’

‘ನೀನೊಳ್ಳೆ... ಅದರ ಒರಿಜಿನಲ್ಲೇ ಸಿಕ್ಕಿಲ್ಲ, ನೀನು ನಕಲಿ ಮಾಡಾಕೆ ಹೊಂಟೆ...’ ತೆಪರೇಸಿ ನಕ್ಕ.

‘ನಾನೆಲ್ಲೋ ಈ ಬಿಟ್ ಕಾಯಿನ್ ಅಂದ್ರೆ ಬಿಟ್ಟಿ ಕಾಯಿನ್ನೋ, ಯಾರೂ ಮುಟ್ಟದೆ ಹಾಗೇ ಬಿಟ್ಟ ಕಾಯಿನ್ನೋ ಅನ್ಕೊಂಡಿದ್ದೆ...’

‘ಅದೂ ಒಂಥರಾ ಕರೆಕ್ಟೇ. ನೀನು ನನ್ನ ಶರ್ಟು ಪ್ಯಾಂಟಲ್ಲಿರೋ ರೂಪಾಯಿ ಎಲ್ಲ ಎತ್ಕಂಡು ಬರೀ ಕಾಯಿನ್ ಬಿಟ್ಟರ‍್ತೀಯಲ್ಲ, ಹಂಗೆ...’ ತೆಪರೇಸಿ ಮಾತಿಗೆ ಪಮ್ಮಿಗೂ ನಗು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.