ADVERTISEMENT

ಚುರುಮುರಿ: ಚುಮ್ಮಾ ಚುಮ್ಮಾ ಅಣ್ತಮ್ಮ!

ತುರುವೇಕೆರೆ ಪ್ರಸಾದ್
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
   

‘ಹಾವಾದ್ರೂ ಮುತ್ ಕೊಡ್ಬಾರ್ದಾ, ಚೇಳಾದ್ರೂ ಕಿಸ್ ಕೊಡ್ಬಾರ್ದಾ, ಹೊಟ್ಟೆಯುಣ್ಣಾಗೋ ನಗು ಬಂದು ಬಿದ್ದು ಉರುಳಾಡ್ಬಾರ್ದಾ, ನಾಕಾರು ಜ್ವರ ಬಂದು ಡಾಕ್ರ‍್ಗೆ ನಾಕು ಕಾಸಾಗ್ಬಾರ್ದಾ?’ ಗುನುಗಿದ ಗುದ್ಲಿಂಗ!

‘ಏನ್ಲಾ ಇದು? ವತ್ತಾರೇನೆ ಜನಪದ ಗೀತೇನೆ ತಿರುಚಿ ಹಿಂಡಿ ಕಳ್ಳಿ ಹಾಲ್ ಬದ್ಲು ಕಬ್ಬಿನಾಲು ಸುರುಸ್ತಿದೀಯ?’ ಕೇಳಿದ ಮಾಲಿಂಗ.

‘ಇನ್ಮೇಲೆ ಇಂಗೇ ಕಣ್ಲಾ? ದ್ವೇಷ ಬಾಸಣ ಮಾಡಂಗಿಲ್ಲ ಅಂತ ಕಾನೂನು ಮಾಡ್ತಾವ್ರೆ’.

ADVERTISEMENT

‘ಅಯ್ಯೋ ಅಂಗಾ? ಮತ್ತೆ ನಮ್ ಸೀಟಿ, ಯತ್ನಾಳು, ಅನಂತು ಇವರ ಕತೆ ಎಲ್ಲಾ ಎಂಗಪ್ಪ?’

‘ಎಲ್ಲಾ ಠುಸ್ಸೇ! ಪ್ರತಾಪು ಮತಾಪು, ಪ್ರದೀಪ ಕಿಟ್ಟ ಕಟ್ಟಿದ ದೀಪ...’

‘ಅಲ್ಲ ಕಣ್ಲಾ, ರಾಜಕೀಯದೋರ್ ಭಾಸಣ ಅಂದ್ರೇ ಬೈಗುಳ ಇಲ್ದೆ ಇರೋ ಜೋಗುಳನೇನ್ಲಾ? ಬಯ್ಯೋದೇ ಇಲ್ಲ ಅಂದ್ರೆ ಮೂತಿಗೆ ಮೈಕ್ ಹಿಡಿದು ನ್ಯೂಸ್ ಚಾನಲ್ನೋರು ಏನ್ ಗೀಗೀ ಪದ ಹಾಡುಸ್ತಾರೇನ್ಲಾ?’

‘ಅಂಗಾರೆ ಇನ್ಮೇಲೆ ಆಪತ್ ಬಂದು ಚಾಪೇಲಿ ಸುತ್ಕಂಡ್ ಓಗಾ ಅಂತ ಬಯ್ಯೋ ಅಂಗಿಲ್ಲ...’

‘ಉಹುಂ! ‘ಸಂಪತ್ ಬಂದು ಲೋಕಾಯುಕ್ತದೋರು ಕಿತ್ಕೊಂಡ್ ಓಗ’ ಅಂತ ಯೋಳ್ಬಹುದು?’

‘ಊ! ಶಾಲಲ್ಲಿ ಸುತ್ಕೊಂಡು ಹೊಡ್ಯೋ ತರ ನುಡಿದರೆ ಬೆಣ್ಣೇಲಿ ಕೂದ್ಲು ತೆಗ್ದಂಗಿರಬೇಕು. ಬಂಡೆಯ ಲಾವಾರಸ ನಿಂಬೆ ಪಾನಕವಾಗಬೇಕು, ಟಗರು ಮಾತಲ್ಲಿ ಗುಮ್ಮಿದರೂ ಚುಮ್ಮ ಕೊಟ್ಟಂತಿರಬೇಕು’.

‘ಅಂದ್ರೆ ನಿನ್ ಜನ್ಮಕ್ಕೆ ತುಪ್ಪ ಹಾಕಾ, ನಿನ್ ಮುಖಕ್ಕೆ ಕರ್ಚೀಪ್ ಹಿಡಿಯ, ಈ ತರ ಇರ‍್ಬೇಕು ಅನ್ನು’.

‘ಆದ್ರೂ ಉಟ್ಟಿದಾಗಿಂದ ಉಕ್ಕಂಡೇ ಬಂದಿರೋ ನಾಲ್ಗೆಗೆ ಇದೆಲ್ಲಾ ಕಷ್ಟ ಆಗಕಿಲ್ವಾ?’

‘‌ಆಯ್ತದೆ. ನಾಲ್ಗೆಗೆ ಬೆಳಿಗ್ಗೆ ಸಂಜೆ ಕೋಳಿಸಾರು, ಕುರಿಪಲ್ಯ ಕೊಡ್ಬೇಕು... ಅದು ಅವಾಗ ಅಣ್ತಮ್ಮ ಅಂತದೆ. ಬ್ರದರ್ ಭಾವ ಬಂದ್ಮೇಲೆ ಕಾನೂನು, ಲಾಯರ್ ಯಾಕ್ಲಾ ಬೇಕು?’

‘ಹೌದೌದು! ಚುಮ್ಮಾ ಚುಮ್ಮಾ ಅಣ್ತಮ್ಮ’ ಎಂದು ಎಲ್ಲಾ ಕೂಗಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.