ADVERTISEMENT

ಚುರುಮುರಿ: ಪ್ರಶ್ನಾತೀತರು!

ಚುರುಮುರಿ: ಪ್ರಶ್ನಾತೀತರು!

ಸುಮಂಗಲಾ
Published 10 ಡಿಸೆಂಬರ್ 2023, 19:29 IST
Last Updated 10 ಡಿಸೆಂಬರ್ 2023, 19:29 IST
<div class="paragraphs"><p>ಚುರುಮುರಿ: ಪ್ರಶ್ನಾತೀತರು!</p></div>

ಚುರುಮುರಿ: ಪ್ರಶ್ನಾತೀತರು!

   

ಬೆಕ್ಕಣ್ಣ ಬೆಳ್‌ಬೆಳಗ್ಗೆ ಹೊಸ ಉತಾವಳಿಯಲ್ಲಿತ್ತು.

‘ಮೋದಿಮಾಮ ಪತ್ರಕರ್ತರಿಗೆ ಮುಖನೇ ತೋರಿಸಂಗಿಲ್ಲ ಅಂತ ಹಂಗಿಸತಿದ್ದೆ
ಯಲ್ಲ… ನೋಡೀಗ… ಪಿಟಿಐ ಅಂತಾ ದೊಡ್ಡ ಸುದ್ದಿಮನೆಗೇ ಮೋದಿಮಾಮ ದರ್ಶನ ಕೊಟ್ಟು, ಅವರನ್ನೇ ಸಂದರ್ಶನ ಮಾಡ್ಯಾನೆ’ ಸುದ್ದಿಯನ್ನು ನನ್ನ ಮುಖಕ್ಕೆ ಹಿಡಿಯಿತು.

ADVERTISEMENT

‘ಸಾಮಾಜಿಕ ಮಾಧ್ಯಮಗಳಿಂದ ಚುನಾವಣೆ ಗೆಲ್ಲಕ್ಕೆ ಆಗಂಗಿಲ್ಲ ಅಂತ ಆಣಿಮುತ್ತನ್ನೂ ಉದುರಿಸ್ಯಾರೆ ಅವರು. 2024ರ ಚುನಾವಣೆ ಹತ್ತಿರ ಬಂತಲ್ಲ, ಹಿಂಗಾಗಿ ಬ್ಯಾರೆ ಥರದ ತಂತ್ರ ಹೊಸೆಯಾಕೆ ಹತ್ತಿರಬೇಕಲೇ’ ಎಂದೆ.

‘ತಂತ್ರದ ಹಂಗೇಕೆ ಎಮಗೆ, ಅಭಿವೃದ್ಧಿ ಮಂತ್ರವೇ ಸಾಕೆಮಗೆ’ ಬೆಕ್ಕಣ್ಣ ಹಾಡುತ್ತಲೇ ಹೇಳಿತು, ‘ಚಂದ್ರಯಾನದಿಂದ ಹಿಡಿದು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪರ್ಸೆಂಟ್‌ ಮೀಸಲಾತಿವರೆಗೆ ಎಷ್ಟ್‌ ವಿಚಾರಗಳಲ್ಲಿ ಅಭಿವೃದ್ಧಿ ಸಾಧಿಸೀವಲ್ಲ’.

‘ಮೀಸಲಾತಿ ಅಂತ ಹೇಳಿಕೊಳ್ತಾನೇ ಮಹುವಾಗೆ ಮಾತಾಡೋ ಅವಕಾಶನೂ ಕೊಡದೆ ಸಂಸತ್ತಿನಿಂದ ಹೊರಗೆ ಹಾಕಿದ್ರಲ್ಲಲೇ’.

‘ನೋಡಾ ಒಂದ್‌ ತಿಳಕೋ, ಈಗಿನ ಕಾಲದಾಗೆ ಮನಿ ಬೀಗದಕೈನೂ ಯಾರಿಗಾರೆ ಕೊಡಬೌದು, ಆದರೆ ಯಾವುದೇ ಇ-ಮೇಲ್‌ ಖಾತೆಗಳ ಲಾಗಿನ್‌, ಪಾಸ್‌ವರ್ಡುಗಳನ್ನೆಲ್ಲ ಯಾರಿಗೂ ಕೊಡಬಾರದು. ಆಕಿ ಅಷ್ಟೆಲ್ಲ ಓದಿಕೊಂಡಾಕಿ, ಇಷ್ಟ್‌ ತಿಳಿವಳಿಕಿ ಇಲ್ಲೇನ್? ಅಷ್ಟೇ ಅಲ್ಲದೇ ಆಕಿ ಪ್ರಶ್ನೆಗಾಗಿ ಕಾಸು, ಉಡುಗೊರೆ ಎಲ್ಲಾ ತಗೊಂಡಾಳೆ’ ಬೆಕ್ಕಣ್ಣ ಜೋರುದನಿಯಲ್ಲಿ ವಾದ ಮಂಡಿಸಿತು.

‘ಆಕಿ ಸಂಸತ್ ಸದಸ್ಯರ ಪೋರ್ಟಲ್ ಲಾಗಿನ್‌, ಪಾಸ್‌ವರ್ಡು ಕೊಟ್ಟಿದ್ದು ತಪ್ಪಾಯಿತು. ಆದರೆ ಕಾಸು ತಗೊಂಡಾಳೆ ಅಂತ ಎಲ್ಲಿ ಸಾಬೀತಾಗೈತಿ? ಆಕಿನ್ನ ಉಚ್ಚಾಟಿಸಿದ ಹಂಗೇ ಆಕೆ ಎತ್ತಿದ ಅದಾನಿ ಕುರಿತ ಪ್ರಶ್ನೆಗಳನ್ನೂ ಉಚ್ಚಾಟನೆ ಮಾಡೂದೇನು?’

‘ಶಾಂತಂಪಾಪಂ! ಅದಾನಿ ಪ್ರಶ್ನಾತೀತ. ಅವ್ರ ಬಗ್ಗೆ ಪ್ರಶ್ನೆ ಎತ್ತಿದವ್ರು ಸೀದಾ ನರಕಕ್ಕೇ ಹೋಗತಾರೆ. ಆ ನರಕ ಎಂಥಾದು ಅನ್ನೂದು ಪ್ರಶ್ನೆ ಎತ್ತಿದವ್ರಿಗೆ ಮಾತ್ರ ಗೊತ್ತಾಗತೈತಿ! ಹ್ಹಹ್ಹಾ’ ಬೆಕ್ಕಣ್ಣ ಗಹಗಹಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.