ADVERTISEMENT

ಚುರುಮುರಿ: ಬಾ ಗುರು ವೋಟ್ ಹಾಕು

ಚುರುಮುರಿ: ಬಾ ಗುರು ವೋಟ್ ಹಾಕು

ಗುರು ಪಿ.ಎಸ್‌
Published 19 ಏಪ್ರಿಲ್ 2024, 21:51 IST
Last Updated 19 ಏಪ್ರಿಲ್ 2024, 21:51 IST
<div class="paragraphs"><p>ಚುರುಮುರಿ: ಬಾ ಗುರು ವೋಟ್ ಹಾಕು</p></div>

ಚುರುಮುರಿ: ಬಾ ಗುರು ವೋಟ್ ಹಾಕು

   

‘ಮಹಾಪ್ರಭು, ನೀವೇನ್ ಇಲ್ಲಿ’ ಪರಮಾಶ್ಚರ್ಯ ದಿಂದ ಕೇಳಿದ ಮತದಾರ ವಿಜಿ. ‘ಯಾಕಪ್ಪ ವಿಜಿ, ನಿಮ್ಮ ಮನೆಗೆ, ಮನದೊಳಗೆ ನಾನು ಬರಬಾರದೇ?’ ಹಲ್ಲುಗಿಂಜುತ್ತಾ ಕೇಳಿದ ಎಂ.ಪಿ. ಮುದ್ದಣ್ಣ.

‘ಐದು ವರ್ಷದ ನಂತರ ಈಗಲೇ ನಿಮ್ಮನ್ನ ನೇರವಾಗಿ ನೋಡಿದ್ನಲ್ಲ, ಅದಕ್ಕೆ ಕೇಳ್ದೆ ಮಹಾಪ್ರಭು’ ಮತ್ತೆ ವ್ಯಂಗ್ಯವಾಗಿ ಹೇಳಿದ ವಿಜಿ.

ADVERTISEMENT

‘ಗೆದ್ದ ಮೊದಲ ವರ್ಷ ಬೀದಿಗೆ ಬರೋಣ ಅಂದ್ಕೊಂಡೆ. ಆಗಿನ್ನೂ ವೋಟ್ ಕೇಳೋಕೆ ಬಂದೂ ಬಂದೂ ನಿಮಗೆ ವಾಕರಿಕೆ ಬರಿಸಿದ್ದೆನಲ್ಲ, ಮತ್ತೇಕೆ ಕಾಣಿಸಿಕೊಳ್ಳೋದು ಅಂತ ಬರಲಿಲ್ಲ’.

‘ಮತ್ತೆ, ಎರಡನೆಯ ವರ್ಷವೂ ಬರಲಿಲ್ವಲ್ಲ?’

‘ಆಗ ಕೋವಿಡ್ ಬಂದಿರಲಿಲ್ವ, ಯಾರೂ ಹೊರಗೆ ಓಡಾಡಬೇಡಿ ಅಂತ ನಾವೇ ರೂಲ್ಸ್ ಮಾಡಿ, ನಾವೇ ಹೊರಗೆಲ್ಲ ಓಡಾಡೋಕಾಗುತ್ತಾ?’

‘ಮೂರನೇ ವರ್ಷವೂ ಕಾಣಿಸಿಕೊಳ್ಳಲಿಲ್ಲ’.

‘ಹೇಗೆ ಕಾಣಿಸಿಕೊಳ್ಳೋಕಾಗುತ್ತೆ ಹೇಳು? ನೀವು ಅಷ್ಟೊಂದು ರೈತರೆಲ್ಲ ಸೇರ್ಕೊಂಡು ಪ್ರೊಟೆಸ್ಟ್ ಮಾಡ್ತಿದ್ರಿ. ಅಲ್ಲಿ ನಿಮಗೇ ನಿಲ್ಲೋಕೆ ಜಾಗ ಇಲ್ಲ, ನಾನು ಬಂದರೆ ಜನ ಜಾಸ್ತಿ ಸೇರಿ ನಿಮಗೆಲ್ಲ ತೊಂದರೆ ಆಗಲ್ವ?’

‘ಮತ್ತೆ ನಾಲ್ಕನೇ ವರ್ಷವಾದರೂ
ಬರಬಹುದಿತ್ತಲ್ಲ?’

‘ಬಂದು ಏನ್ಮಾಡ್ಲಿ ನೀನೇ ಹೇಳು. ಬರ ಬಂದು ನಿಮಗೇ ತಿನ್ನೋಕೆ ಕೂಳಿಲ್ಲ, ಕುಡಿಯೋಕೆ ನೀರಿಲ್ಲ, ಅಂಥದ್ದರಲ್ಲಿ ನಾನು ಬೇರೆ ಬಂದು ನಿಮಗೆ ಭಾರವಾಗಬೇಕಿತ್ತಾ?’

‘ಮತ್ತೆ ಈಗ ಬಂದಿದೀರಿ?’

‘ಈಗಲೂ ಬಾರದಿದ್ದರೆ ಹೇಗೆ ವಿಜಿ, ನಿಮ್ಮ ನ್ನೆಲ್ಲ ನೋಡದೇ ಎಷ್ಟು ದಿನ ಅಂತ ಇರೋದು’.

‘ನೋಡಾಯ್ತಲ್ಲ, ಹೊರಡಿ’.

‘ನೀನು ನನಗೇ ವೋಟು ಹಾಕುತ್ತೇನೆ ಅಂದರೆ ಹೋಗಿಬಿಡುವೆ’.

‘ಇಲ್ಲ, ನಾನು ಈ ಬಾರಿ ಸತ್ಯವಂತ, ಭ್ರಷ್ಟಾಚಾರ ಮಾಡದಿರುವ, ಸುಳ್ಳು ಹೇಳದೇ ಇರುವ, ಫ್ಯಾಮಿಲಿ- ಜಾತಿ- ಧರ್ಮದ ರಾಜಕೀಯ ಮಾಡದಿರುವವರಿಗೆ ವೋಟ್ ಹಾಕ್ತೀನಿ’.

‘ಯಾವ ಪಾರ್ಟಿಯಲ್ಲೂ ಅಂತಹ ಒಬ್ಬರೂ ಕ್ಯಾಂಡಿಡೇಟ್‌ ನಿನಗೆ ಸಿಗಲ್ಲ ಬಿಡು’ ಮುದ್ದಣ್ಣನೇ ನಗುತ್ತಾ ಅಲ್ಲಿಂದ ಹೊರಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.