ADVERTISEMENT

ಚುರುಮುರಿ: ಘಾಟಿ ಕೋಳಿ!

ಮಣ್ಣೆ ರಾಜು
Published 6 ಜನವರಿ 2026, 19:33 IST
Last Updated 6 ಜನವರಿ 2026, 19:33 IST
<div class="paragraphs"><p>ಚುರುಮುರಿ: ಘಾಟಿ ಕೋಳಿ!</p></div>

ಚುರುಮುರಿ: ಘಾಟಿ ಕೋಳಿ!

   

ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ಮಾಡಿದ್ದಕ್ಕೆ ಚಟ್ನಿಹಳ್ಳಿ ಜನ ಸಡಗರಪಟ್ಟರು. ಸುತ್ತೂರಿನ ಜನರಿಗೆ ನಾಟಿ ಕೋಳಿ ಔತಣಕೂಟ ಏರ್ಪಡಿಸಿ ಸಂಭ್ರಮಿಸಲು ತೀರ್ಮಾನ ಮಾಡಿದರು. ಔತಣಕ್ಕೆ ನಾವು ನಾಟಿ ಕೋಳಿ ಕೊಡ್ತೀವಿ ಅಂತ ಊರಿನ ಜನ ಮುಂದೆಬಂದರು.

ಅದೇನಾಯ್ತೋ ಏನೋ, ಅಂದು ಮೇಯಲು ಹೋಗಿದ್ದ ಎಲ್ಲರ ಕೋಳಿಗಳು ರಾತ್ರಿಯಾದರೂ ಮನೆಗೆ ಬರಲಿಲ್ಲ. ಔತಣಕೂಟಕ್ಕೆ ಆಹಾರ ಆಗಿಬಿಡ್ತೀವಿ ಅಂತ ಹೆದರಿಕೊಂಡವೆ? ಸಂಭ್ರಮ ಸಹಿಸದ ವಿರೋಧಿಗಳು ಕೋಳಿಗಳನ್ನು ಕದ್ದರೆ? ನಾಯಿ, ನರಿಗಳು ಕಚ್ಚಿಕೊಂಡು ಹೋದವೆ? ಕೊಕ್ಕರೆ ರೋಗ ಬಂದು ಬೇಲಿ ಮರೆಯಲ್ಲಿ ಸತ್ತುಹೋದವೆ? ಚಟ್ನಿಹಳ್ಳಿ ಜನ ಆತಂಕಕ್ಕೀಡಾದರು.

ADVERTISEMENT

‘ಕೋಳಿ ಹುಡುಕಿಕೊಡಿ’ ಎಂದು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟರು. ಜುಜುಬಿ ಕೋಳಿ ಕೇಸು ಎಂದು ಪೊಲೀಸರು ನಿರ್ಲಕ್ಷ್ಯ ಮಾಡಿದರು. ಜನ ಸ್ಟೇಷನ್ ಮುಂದೆ ಪ್ರತಿಭಟನೆ ಮಾಡಿದಾಗ ಪೊಲೀಸರು ಸೀರಿಯಸ್ಸಾದರು. ಕೋಳಿ ಸಂತೆಗಳು, ಚಿಕನ್ ಸ್ಟಾಲ್‌ಗಳನ್ನು ತಪಾಸಣೆ ಮಾಡಿದರು. ಅನುಮಾನಾಸ್ಪದ ಕೋಳಿ ಕಳ್ಳರನ್ನು ಎಳೆದುತಂದು ವಿಚಾರಣೆಗೊಳಪಡಿಸಿದರು. ಕೋಳಿಗಳ ಸುಳಿವು ಸಿಗಲಿಲ್ಲ.

ಕೋಳಿ ಕೇಸನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು, ಕಡೆಗೂ ಪಕ್ಕದೂರಿನ ಬೇಲಿ ಸಂದಿಯಲ್ಲಿ ಚಟ್ನಿಹಳ್ಳಿ ಕೋಳಿಗಳು ಬೀಡುಬಿಟ್ಟಿರುವುದನ್ನು ಪತ್ತೆ ಮಾಡಿ, ವಶಕ್ಕೆ ಪಡೆದುತಂದರು. ಗ್ರಾಮಸ್ಥರ ಸಭೆ ಸೇರಿಸಿ ಕೋಳಿಗಳನ್ನು ವಾರಸುದಾರರಿಗೆ ವಿತರಿಸಿದರು.

‘ನಿಮ್ಮೂರಿನಲ್ಲಿ ಒಂದೂ ಹುಂಜ ಇಲ್ಲವೇನ್ರೀ?’ ಇನ್‌ಸ್ಪೆಕ್ಟರ್ ಕೇಳಿದರು.

‘ಹುಂಜಗಳು ಮೊಟ್ಟೆ ಇಕ್ಕಲ್ಲ, ಮರಿ ಮಾಡಲ್ಲ, ಇಟ್ಟುಕೊಂಡು ಏನು ಮಾಡೋಣ? ಬಾಯಿ ಕೆಟ್ಟಾಗ, ನೆಂಟರಿಷ್ಟರು ಬಂದಾಗ ಕುಯ್ದು ಉಂಡೆವು. ಯಾಕೆ ಸಾರ್?’ ತಿಮ್ಮಜ್ಜ ಕೇಳಿದ.

‘ನಿಮ್ಮ ಕೋಳಿಗಳು ಪಕ್ಕದೂರಿನ ಹುಂಜಗಳ ಜೊತೆ ಫ್ರೆಂಡ್‌ಶಿಪ್ ಮಾಡಿವೆ. ಹುಂಜಗಳನ್ನು ಉಳಿಸಿಕೊಳ್ಳದಿದ್ದರೆ ನಿಮ್ಮ ಕೋಳಿಗಳು ಮತ್ತೆ ಊರುಬಿಡುತ್ತವೆ ಹುಷಾರ್!’ ಎಂದು ಇನ್‌ಸ್ಪೆಕ್ಟರ್ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.