ADVERTISEMENT

ಚುರುಮುರಿ: ಎಐ ನಿರುದ್ಯೋಗ!

ಗುರು ಪಿ.ಎಸ್‌
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
   

‘ಲೈಫ್ ಏನಾಗುತ್ತೋ’ ಆತಂಕದಲ್ಲಿ ಹೇಳಿದಳು ಹೆಂಡತಿ.

‘ಯಾಕಮ್ಮ ಏನಾಯ್ತು, ಯಾಕೆ ಡಿಪ್ರೆಶನ್‌ನಲ್ಲಿದ್ದಂಗೆ ಇದ್ದೀಯಾ?’ ಕೇಳಿದೆ.

‘ಸಾಫ್ಟ್‌ವೇರ್ ಎಂಜಿನಿಯರ್ಸ್ ಅಂದ್ರೆ ಐಟಿ ಸೆಕ್ಟರ್‌ನಲ್ಲಿ ರೋರೆಲ್ಲ ಕೆಲಸ ಕಳ್ಕೊಳ್ತಾರಂತೆ, ಕಂಪ್ಯೂಟರ್ ಸೈನ್ಸ್ ಓದುತ್ತಿರೋರಿಗೆಲ್ಲ ಕೆಲಸಾನೇ ಸಿಗಲ್ವಂತೆ’.

ADVERTISEMENT

‘ಯಾರು ಹೇಳಿದರು ನಿಂಗೆ’.

‘ಬಿಲ್ ಗೇಟ್ಸ್‌ ಹೇಳಿದಾರಂತ್ರೀ... ಅಂಥ್ರೊಪಿಕ್ ಎಐ ಬಂದ ನಂತರ‌ ಐಟಿ ಕಂಪನಿಗಳೆಲ್ಲ ಕ್ಲೋಸ್ ಆಗ್ತಾವಂತೆ’.

‘ಅದ್ ಸರಿ, ನೀನೇನು ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದೀಯ?’ ಕೇಳಿದೆ.

‘ಇಲ್ಲ’.

‘ಕಂಪ್ಯೂಟರ್‌ ಸೈನ್ಸ್ ಓದಿದೀಯ?’

‘ಇಲ್ಲ ರೀ, ಇದೆಲ್ಲ ಯಾಕ್ ಕೇಳ್ತಿದಿರಾ?’

‘ಮತ್ಯಾಕ್ ನೀನು ಇಷ್ಟು ತಲೆ ಕೆಡಿಸಿಕೊಳ್ತಿದೀಯ?’

‘ಪ್ರಪಂಚದ ಮೇಲಾಗುವ ಪರಿಣಾಮ ನಮ್ಮ‌ ಮೇಲೂ ಆಗಲ್ವೇನ್ರೀ... ಒಬ್ಬೊಬ್ಬರ ಕೆಲಸ ಹೋದರೂ ಒಂದೊಂದು ಕುಟುಂಬ ಬೀದಿಗೆ ಬೀಳಲ್ವೇನ್ರೀ’ ಆತಂಕದಲ್ಲೇ ಹೇಳಿದಳು.

‘ನೀನೇನಿಷ್ಟು ಟೆನ್ಷನ್‌ ಮಾಡ್ಕೊತೀಯ, ನೀನು‌ ಹಿಂಗೆ‌ ನೆಗೆಟಿವ್ ಮಾತಾಡಿ, ಮಾತಾಡಿ ನನ್ನನ್ನೇ ಡಿಪ್ರೆಶನ್‌ಗೆ ಕಳಿಸಿಬಿಡ್ತೀಯ’ ಎನ್ನುತ್ತಲೇ ಮುಂದುವರಿದು, ‘ಈ ಎಐ ಮಾಡಿದೋರೆಲ್ಲ ಯಾರ್ ಹೇಳು’ ಎಂದೆ.

‘ಮನುಷ್ಯರು’ ಎಂದಳು.

‘ಎಐ ಮಾಡಿದ ಮನುಷ್ಯರಿಗೆ ಅದನ್ನು ಕಂಟ್ರೋಲ್ ಮಾಡೋಕೆ, ನಾಶ ಮಾಡೋಕೆ ಬರಲ್ವ?’

‘ಅದು ಹೇಗೆ ಸಾಧ್ಯ ರೀ?’

‘ಅಂಥ್ರೊಪಿಕ್ ಬಂದ್ರೆ ಐಟಿ ಉದ್ಯಮದಲ್ಲಿ ಉದ್ಯೋಗಿ ಗಳ ಸಂಖ್ಯೆ ಕಡಿಮೆಯಾಗುತ್ತೆ ಅನ್ನೋ ಬದಲು, ರಾಜಕಾರಣಿ
ಗಳ ಸಂಖ್ಯೆ ಕಡಿಮೆ ಆಗುತ್ತೆ. ಯಾರಿಗೆ ವೋಟ್ ಹಾಕ್ಬೇಕು,
ಹಾಕಬಾರ್ದು ಅಂತ ಈ ಎಐ ಹೇಳುತ್ತೆ. ಕೆಟ್ಟ ರಾಜಕಾರಣಕ್ಕೆ ಇನ್ನು ಉಳಿಗಾಲವಿಲ್ಲ ಎಂದು ಹಬ್ಬಿಸಿ ಬಿಡೋಣ’.

‘ಆಗ ಏನಾಗುತ್ತೆ ರೀ?’ ಕುತೂಹಲದಿಂದ ಕೇಳಿದಳು.

‘ಆಗ, ನಮ್ಮನ್ನು ಆಳುವವರೇ ಅದನ್ನ ನಿಲ್ಲಿಸಿಬಿಡ್ತಾರೆ, ಇಂಥದ್ದೊಂದು ಎಐ ಇತ್ತು ಅನ್ನೋ ಕುರುಹೂ ಇಲ್ಲದಂಗೆ ಮಾಡ್ತಾರೆ’ ಎಂದೆ.‌

‘ಮಾಡಬಹುದು, ಮಾಡಬಹುದು, ಯಾವ್ಯಾವುದನ್ನೋ ಇಲ್ಲದಂಗೆ ಮಾಡೋರಿಗೆ, ಎಐ ಇಲ್ಲದಂಗೆ ಮಾಡೋಕಾಗಲ್ವ’ ಎಂದು‌ ನಕ್ಕಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.