ADVERTISEMENT

ಚುರುಮರಿ | ಬೌ ಬೌ ಕೌನ್ಸೆಲಿಂಗ್

ಲಿಂಗರಾಜು ಡಿ.ಎಸ್
Published 30 ಜುಲೈ 2024, 0:30 IST
Last Updated 30 ಜುಲೈ 2024, 0:30 IST
   

ರಾತ್ರಿ ಹೋಟೆಲಲ್ಲಿ ತಿಂದ ಮಟನ್ ಬಿರಿಯಾನಿ ಕುರೀದಾ, ನಾಯಿದಾ! ಎಲ್ಲೋ ಯತ್ವಾಸಾಗಿ ಬೌ ಬೌ ಬಿರಿಯಾನಿ ತಿಂದ್ಬುಟ್ನಾ ಅಂದ್ಕತಿದ್ದೆ. ಯಾರನ್ನ ಕಂಡ್ರೂ ಬೊಗಳಂಗಾಯ್ತಿತ್ತು. ಆಗ ಬಂದ ತುರೇಮಣೆ ‘ಟ್ರಾನ್ಸ್‌ಫರಿಗೆ ಕೌನ್ಸೆಲಿಂಗ್ ಮಾಡ್ಯಾರಂತೆ. ಬಾ’ ಅಂತ ಹೆಡ್ರಾಪೀಸುತಕ್ಕೆ ನನ್ನೂ ಕರಕೋದ್ರು.

‘ಯರ‍್ರೀ ನಂಬರ್ 138? ತುರೇಮಣೆ ಬಲ್ರೀ!’ ಅಂತ ಕರೆದೇಟಿಗೇ ಒಳಿಕ್ಕೋದ ತುರೇಮಣೆ ಐದೇ ನಿಮಿಷಕ್ಕೆ ವಾಪಾಸ್ ಬಂದು ‘ಸಾಯಾಬ್ರು ರಾಂಗಾಗಿದ್ರು ಕಲಾ. ಬೆಂಗಳೂರಿಗೆ ಬಂದು ಇಪ್ಪತ್ತೊರ್ಸಾತು. ಇಲ್ಲೇ ಗೂಟ ಹೊಡಕಂದು ಕೂಕಂದಿದ್ದಿರೇನ್ರಿ ಅಂತ ಗದರಿಸಿದರು’ ಅಂದ್ರು.

‘ಆಮೇಲೆ ಸಾ?’ ಅಂದೆ.

ADVERTISEMENT

‘ಸಯಾಬ್ರು, ಅಲ್ರೀ ಆಪೀಸಿಗೆ 12 ಗಂಟೆಗೆ ಬತ್ತೀರಿ. ಮನ್ನೆ ನೀವು ಮೀಟಿಂಗಿಗೂ ಬರಲಿಲ್ಲ ಅಂತ ಕಮಿಷನರ್ ಭಾಳಾ ಸೀರಿಯಸ್ಸಾಗಿದ್ರು ಗೊತ್ತಾ ಅಂದ್ರು’. ನಾನು ಹಸುಮಗೀನಂಗೆ ‘ಹೌದ್ರಾ! ಈಗ ಕಮೀಷನರು ಯಾವ ಆಸ್ಪತ್ರೆಲೌರೆ ಸಾ?’ ಅಂದ್ನಾ. ಸಯಾಬ್ರು ಗೊಳ್ ಅಂತ ನಕ್ಕುಬುಟ್ರು’.

‘ಟ್ರಾನ್ಸ್‌ಫರ್ ಗ್ಯಾರೆಂಟಿಯಾತು’.

‘ಇಲ್ಲ! ನಾನು ಗೊಳ್ ಅಂತ ಅತ್ತುಬುಟ್ಟೆ ಕಲಾ. ‘ಯಾಕ್ರಿ?’ ಅಂದ್ರು ಸಯಾಬ್ರು. ‘ಸಾ ನಮ್ಮಪ್ಪ-ಅವ್ವನಿಗೆ ಸ್ಯಾನೆ ವಯಸ್ಸಾಗ್ಯದೆ. ಅವರಿಗೆ ಮಕ ತೊಳದು, ಮುದ್ದೆ ಉಣ್ಣಿಸಿ ಮುಕ್ಕುರಿಕ್ಯಂದು ಆಪೀಸಿಗೆ ಬರೋತ್ಗೆ ಲೇಟಾತದೆ ಸಾ’ ಅಂತ ಕಣ್ಣೀರಾಕಿದೆ’.

‘ಆಮೇಲೆ?’

‘ಆಮೇಲಿನ್ನೇನು! ‘ಎಲ್ಲಾರೂ ಸೈ ಅನ್ನಂಗಿದ್ದೀರಿ. ನಿಮ್ಮಂತ ನೀಯತ್ತಿರೋ ಮಕ್ಕಳಿರದೇ ಎಮ್ಮೆ ಕನ್ರಿ’ ಅಂದ ಸಯಾಬ್ರು ಮೂಡಕ್ಕೋ ಬೂಡಕ್ಕೋ ಹೇಳಿ ನನಗೂ ಪುಸ್ಕಟ್ಟೆ ಸೈಗಾರಿಕಾ ಸೈಟು ಕೊಡಿಸ್ತರಂತೆ ಕಲಾ. ಇದೇ ಖುಷೀಲಿ ಎರಡು ಮಿಳ್ಳೆ ಎಣ್ಣೆ ಹಾಕುಮಾ ಬಾ’ ಅಂತ ಕರಕೋದ್ರು.

‘ಇಲ್ದಿರೋ ನಿಮ್ಮಪ್ಪ-ಅವ್ವನ್ನೂ ಕಳ್ಳ ಲೆಕ್ಕದಲ್ಲಿ ತೋರಿದ್ದೀರಲ್ಲ, ನಿಮ್ಮ ನಂಬರು 138 ಅಂದಾಗಲೇ ಗೊತ್ತಾತು, ನೀವು ಹಳೇ 420 ಅಂತ’ ಅಂದೋನು ಚಾಕ್ಣ ಬಾಯಿಗೆ ಎಸಕಂದು ಬೌ ಅಂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.