ADVERTISEMENT

ಚುರುಮುರಿ: ಅಮೆರಿಕ ಮಗಾ...

ಲಿಂಗರಾಜು ಡಿ.ಎಸ್
Published 10 ಫೆಬ್ರುವರಿ 2026, 0:30 IST
Last Updated 10 ಫೆಬ್ರುವರಿ 2026, 0:30 IST
   

‘ಲಂಚ, ಕಮೀಶನ್, ಲಂಚ, ಕಮೀಶನ್... ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್. ಬಟ್ ಲಂಚ, ಕಮೀಶನ್ ಲೈಕ್ಸ್ ಮೀ’ ತುರೇಮಣೆ ಸತ್ಯ ಸ್ಫೋಟಿಸಿದರು.

‘ಹಂಗೆ ಹೇಳೇಳಿಕ್ಯಂದೇ ಲಂಚ, ಕಮೀಶನ್ ಇಸುಗಳೋ ಚಾಲು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹೆಸರುಬಲದಲ್ಲೇ ಬಂದ್ಬುಟ್ಟದೆ. ಯಾರು ಇಸುಗಂದೋರು ಅಂದ್ರೆ ‘ನಾನವನಲ್ಲ, ನಾನವನಲ್ಲ’ ಅಂತ ತಾರಮ್ಮಯ್ಯ ಆಡಿಸ್ತಾರೆ’ ಅಂತಂದೆ.

‘ಬುಡಿ ಅತ್ತಗೆ. ರಾಜ್ಯದೇಲಿ ಕುರ್ಚಿ ಇಚಾರದೇಲಿ ಸದ್ಯಕ್ಕಂತೂ ಸಿಎಂ ಬದಲಾವಣೆ ಗೊಂದಲ ಇಲ್ಲ ಅಂತ ‘ವೈ’ಕಮಾಂಡ್ ಹೇಳ್ಕಬತ್ತಾದಲ್ಲಣೈ’ ಅಂತ ವೈಕಾರ ಹಾಕಿದ ತಿಪ್ಪಣ್ಣ.

ADVERTISEMENT

‘ಈಗ ಹೊಸದಾಗಿ ಚಿಗುರಾಡ್ತಿರೋ ವೈ–ಕಮಾಂಡು ವೈಲೆಂಟಾಗಿ ಮದಗುಡ್ತಾದೆ ಕಪ್ಪಾ. ಇದ್ಯಾಕಿಂಗೆ ಅಂತ
ಕಾಲವೇ ಉತ್ತರಿಸಬೇಕು’ ಎಂದು ತುರೇಮಣೆ ಅಡ್ಡಗೋಡೆಯ ಮೇಲೆ ದೀಪ ಇಟ್ಟರು.

‘ದಿಟ. ಈ ಬಗ್ಗೆ ತನಿಖೆ ಮಾಡಿ ವರದಿ ತರಿಸಿಕೊಂಡು ಆಮೇಲೆ ಮಾತಾಡ್ತೀನಿ ಅಂತ ಪರಮಣ್ಣ ಹೇಳ್ಲೇ ಇಲ್ಲಪ್ಪ’ ಯಂಟಪ್ಪಣ್ಣ ಒಗ್ಗರಣೆ ಹಾಕಿತು.

‘ಅಣೈ, ಯುರೋಪ್ ಜೊತೆಗೆ ಸಾಲಾವಳಿ ಚೆನ್ನಾಗದೆ ಅಂತ ಒಪ್ಪಂದ ಮಾಡಿಕೋವಾಗ, ಇದು ಎಲ್ಲಾ ಒಪ್ಪಂದಗಳ ತಾಯಿ ಅಂದುದ್ರು. ಈಗ ಅಮೆರಿಕದ ಜೊತೆಗೆ ಒಪ್ಪಂದ ಅದಮ್ಯಾಲೆ, ಇದು ಎಲ್ಲಾ ಒಪ್ಪಂದಗಳ ತಂದೆ ಅಂತ ಯಾಕೆ ಹೇಳಲಿಲ್ಲವೋ ಗೊತ್ತಾತಿಲ್ಲ’ ಎಂದು ಸೋಜಿಗದಿಂದ ತುರೇಮಣೆಗೆ ಕೇಳಿದೆ.

‘ನೋಡ್ಲಾ, ‘ಕಾಶ್ಮೀರ ನಿಮಗೇ ಬುಡುಸಿ ಕೊಡ್ತೀವಿ. ರಷ್ಯಾ, ಚೀನಾದ ಬಡ್ಡೇಗೂ ಹೋಗಕುಲ್ಲ ಅಂತ ಗಾಡ್ ಪ್ರಾಮಿಸ್ ಮಾಡ್ರಿ. ಮೇಕ್ ಅಮೆರಿಕ ಗ್ರೇಟ್ ಅಗೈನ್ ಮಗಾ’ ಅಂತ ಟ್ರಂಪಣ್ಣ ಹೇಳಿಕ್ಯಂದಿರತನೆ’.

‘ಇಲ್ಲಿ ಯಾರು ಯಾರಿಗೆ ಸೈಲೆಂಟಾಗಿ ತಲೆ ಬಾಚಿದ್ರೋ, ಯಾರು ಯಾರಿಗೆ ಪೌಡರ್ ಹಾಕಿದ್ರೋ ಒಂದೂ ತಿಳೀವಲ್ದಾಗೇತಲ್ಲಣೈ...’

ತುರೇಮಣೆ ಸತ್ಯ ಹೇಳ್ತಾವ್ರೋ ಸುಳ್ಳು ಹೇಳ್ತಾವ್ರೋ ಅಂತ ಗೊತ್ತಾಗ್ದೆ ಗೊಂದಲಕ್ಕೆ ಬಿದ್ದ ನನ್ನ ನೋಡಿ ಎಲ್ಲಾ ನಗಕ್ಕೆ ಮುಟ್ಟಿಕ್ಯಂದ್ರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.