ADVERTISEMENT

ಚುರುಮುರಿ: ಆರ್‌ಸಿಬಿ ಕನ್ನಡಿಗ!

ಚುರುಮುರಿ

ಗುರು ಪಿ.ಎಸ್‌
Published 12 ಡಿಸೆಂಬರ್ 2024, 20:36 IST
Last Updated 12 ಡಿಸೆಂಬರ್ 2024, 20:36 IST
ಚುರುಮುರಿ
ಚುರುಮುರಿ   

‘ಇಲ್ನೋಡ್ರೀ… ಆರ್‌ಸಿಬಿಯವರು ಹಿಂದಿಯಲ್ಲಿ ‘X’ ಅಕೌಂಟ್‌ ತೆರೆದಿದ್ದಾರೆ, ಪ್ಯಾನ್‌ ಇಂಡಿಯಾ ಆಗ್ತಿದ್ದಾರೆ ಅನಿಸುತ್ತೆ’ ಮೊಬೈಲ್‌ ಹಿಡಿದುಕೊಂಡು ಬಂದಳು ಹೆಂಡತಿ. 

‘ಮತ್ತೆ ಹಿಂದಿಯಲ್ಲೇ ಅವರು ಅಕೌಂಟ್‌ ಓಪನ್‌ ಮಾಡಬೇಕು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟೀಮ್‌ನಲ್ಲಿ ಕನ್ನಡದವರೇ ಇಲ್ವಲ್ಲ’ ಎಂದಿನ ಬೇಸರದಲ್ಲಿ ಹೇಳಿದೆ. 

‘ಯಾಕ್ರೀ, ಒಂದಿಬ್ಬರು ಇರಬೇಕಲ್ಲ...’ 

ADVERTISEMENT

‘ಏನ್‌ ಪ್ರಯೋಜನ, ಮೂರು ಸೀಸನ್‌ನಿಂದ ಪಾಪ ಒಬ್ಬ ಹುಡುಗನ್ನ ಬೆಂಚ್‌ನಲ್ಲಿಯೇ ಕೂರಿಸಿದ್ದಾರೆ’ ಗೊಣಗಿದೆ. 

‘ನಮ್‌ ಮಗಾನೂ ಎಷ್ಟ್‌ ಚೆನ್ನಾಗಿ ಕ್ರಿಕೆಟ್‌ ಆಡ್ತಾನೆ, ಅಲ್ವೇನ್ರೀ?’ 

‘ಅದಕ್ಕೆ ಏನ್‌ ಮಾಡಬೇಕು?’ ಎಂದೆ. 

‘ನಮ್‌ ಮಗನ್ನೂ ಆರ್‌ಸಿಬಿ ಟೀಮ್‌ಗೆ ಸೇರಿಸಬೇಕು ರೀ… ಮುಂದೆ ಅವನೂ ಭಾರತ ತಂಡ ಸೇರಬೇಕು’ ಹುಮ್ಮಸ್ಸಿನಲ್ಲಿ ಹೇಳಿದಳು ಪತ್ನಿ. 

‘ಓಹ್, ಒಮ್ಮೆಗೇ ಇಂಡಿಯಾ ಟೀಮ್‌ಗೆ ಸೇರಿಸಿ
ಕೊಂಡುಬಿಡ್ತಾರೆ ನೋಡು ನಿನ್ನ ಮಗನ್ನ’.

‘ಹಾಗಲ್ಲ, ಮೊದಲು ಕರ್ನಾಟಕ, ನಂತರ ಆರ್‌ಸಿಬಿ, ಆಮೇಲೆ ಇಂಡಿಯಾ’. 

‘ಕರ್ನಾಟಕಕ್ಕೆ ಆಡಿದರೆ ಆರ್‌ಸಿಬಿಗೆ ಸೇರಿಸ್ಕೊಳಲ್ಲ ಕಣೆ. ಅದು ಅಲಿಖಿತ ನಿಯಮ’.

‘ಅಯ್ಯೋ, ಹಾಗಾದರೆ ಏನ್‌ ಮಾಡಬೇಕ್ರೀ?’ 

‘ಹೇಗಾದರೂ ಮಾಡಿ ಮಗನನ್ನ ಗುಜರಾತ್‌ ಐಪಿಎಲ್‌ ಟೀಮ್‌ಗೆ ಸೇರಿಸೋಣ’. 

‘ಅಲ್ಲಿಗೆ ಸೇರಿಸಿದರೆ?’ 

‘ಆರ್‌ಸಿಬಿಯಲ್ಲಿನ ಕನ್ನಡಿಗರಿಗಿಂತ ಮುಂಚೆಯೇ ಇಂಡಿಯಾ ಟೀಮ್‌ಗೆ ಸೇರ್ತಾನೆ’ ಎಂದು ನಕ್ಕೆ. 

‘ಐಪಿಎಲ್‌ ಶುರುವಾಗೋವರೆಗೂ ಹೀಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನ ಬೈಯ್ಕೊಂಡು ಇರ್ತೀರ, ಬೆಂಗಳೂರು ಮ್ಯಾಚ್‌ ಶುರುವಾಗೋದೇ ತಡ ಟೀವಿ ಮುಂದೆ ಠಿಕಾಣಿ ಹೂಡ್ತೀರ. ಕೊಹ್ಲಿ ಟಿ–ಶರ್ಟ್‌ ಹಾಕ್ಕೊಂಡು ಸ್ಟೇಡಿಯಂಗೆ ಬೇರೆ ಹೋಗ್ತೀರ...’ ಅಣಕಿಸಿದಳು ಹೆಂಡತಿ. 

‘ಆರ್‌ಸಿಬಿಯಲ್ಲಿ ಬಿ ಇದೆಯಲ್ಲ, ಅದಕ್ಕೆ’.

‘ಅಂದ್ರೆ?’ 

‘ಬೆಂಗಳೂರು ಅನ್ನೋ ಎಮೋಷನ್‌ ಇದೆಯಲ್ಲ, ಮ್ಯಾಚ್ ನೋಡಲೇಬೇಕು’ ಕಣ್ತುಂಬಿಕೊಂಡೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.