
‘ಅಲ್ಲ, ನರೇಗಾ ಯೋಜನೆ ಹೆಸರಲ್ಲಿದ್ದ ಮಹಾತ್ಮ ಗಾಂಧಿ ಹೆಸರು ತೆಗೆದು ಹಾಕೋದು ತಪ್ಪಲ್ವಾ?’ ಹರಟೆಕಟ್ಟೆಯಲ್ಲಿ ದುಬ್ಬೀರ ಆಕ್ಷೇಪಿಸಿದ.
‘ಅದೂ... ಗಾಂಧಿ ಹೆಸರು ತೆಗೆದು ರಾಮನ ಹೆಸರು ಹಾಕ್ತಾರಂತೆ. ಹೆಂಗೂ ಗಾಂಧಿಗೆ ರಾಮ ಅಂದ್ರೆ ಬಾಳ ಭಕ್ತಿಯಲ್ವಾ? ಸಾಯೋವಾಗ ‘ಹೇ ರಾಮ್’ ಅನ್ಲಿಲ್ವಾ?’ ಚಾದಂಗಡಿ ಮಂಜಮ್ಮ ಸಮರ್ಥಿಸಿಕೊಂಡಳು.
‘ನಿನ್ತೆಲಿ, ಗಾಂಧಿ ರಾಮನೇ ಬೇರೆ, ನಿಮ್ ಕಮಲ ಪಕ್ಷದ ರಾಮನೇ ಬೇರೆ. ನೀವು ಜಿ ರಾಮ್ ಜಿ ಅಂತ ಮಾಡ್ಕಂಡ್ರೆ ನಾವು ನಮ್ ರಾಜ್ಯದಲ್ಲಿ ‘ಎಸ್ ರಾಮ್ ಜಿ’ ಅಂತ ಮಾಡ್ಕಂತೀವಿ...’ ಗುಡ್ಡೆಗೆ ಸಿಟ್ಟು ಬಂತು.
‘ಎಸ್ ರಾಮ್ ಜಿ’ ಅಂದ್ರೆ?’
‘ಸಿದ್ದರಾಮ್ ಜಿ ಅಂತ... ಅಷ್ಟೇ ಅಲ್ಲ, ರಾಜಭವನಕ್ಕೆ ಲೋಕಭವನ ಅಂತಾನೂ ಹೆಸರಿಡಲ್ಲ, ಏನ್ ಮಾಡ್ಕಂತೀರಿ?’
‘ಕೇಂದ್ರದ ಅನುದಾನ ನಿಲ್ಲಿಸ್ತೀವಿ, ಆಗೇನ್ಮಾಡ್ತೀರಿ?’
‘ಈಗೇನ್ ಕೊಡ್ತಾ ಇದೀರಾ? ಎಷ್ಟ್ ಕೊಟ್ಟಿದೀರಿ?'
‘ನೀವೂ ಗೃಹಲಕ್ಷ್ಮಿ ಹಣ ಎರಡು ತಿಂಗಳು ಕೊಟ್ಟಿದೀರಾ?’ ಮಂಜಮ್ಮಗೂ ಸಿಟ್ಟು ಬಂತು.
‘ಏಯ್, ನಿಮ್ ಜಗಳ ಸಾಕು, ಬೇರೇನರೆ ಮಾತಾಡ್ರಿ, ಅದ್ಯಾರೋ ಮೆಸ್ಸಿ ಅಂತಲ್ಲ, ಅವನ ಜತಿ ಫೋಟೊ ತೆಗೆಸ್ಕಳಾಕೆ ಹತ್ತು ಲಕ್ಷ ರೂಪಾಯಂತೆ ಹೌದಾ?’ ಎಂದು ದುಬ್ಬೀರ ಮಾತು ಬದಲಿಸಿದ.
‘ಅವ್ನು ವರ್ಲ್ಡ್ ಫೇಮಸ್ ಫುಟ್ಬಾಲ್ ಆಟಗಾರ. ಬಾಳ ಚೆನ್ನಾಗಿ ಬಾಲ್ ಒದೀತಾನೆ...’ ತೆಪರೇಸಿ ಹೇಳಿದ.
‘ಅಲ್ಲ, ಅವನ ಕೈ ಕುಲುಕೋಕೆ ಒಂದು ಕೋಟಿ ರೂಪಾಯಂತೆ?’ ಕೊಟ್ರೇಶಿಗೆ ಆಶ್ಚರ್ಯ.
‘ಲೇಯ್, ಅದ್ಯಾವ ದೊಡ್ಡ ವಿಷ್ಯಲೆ? ಅವ್ನು ಕೈ ಕುಲುಕೋಕೆ ಒಂದು ಕೋಟಿ ತಗಂಡಿರಬೋದು, ನಮ್ ಎಮ್ಮೆಲ್ಲೆಗಳು ಅವರು ಗೆದ್ದ ಪಕ್ಷಕ್ಕೆ ‘ಕೈ ಕೊಡೋಕೆ’ ₹50ರಿಂದ ₹60 ಕೋಟಿ ತಗಂಡಿಲ್ವಾ? ತಗಂಡು ಬೇರೆ ಪಕ್ಷ ಸೇರ್ಕಂಡಿಲ್ವಾ?’ ಗುಡ್ಡೆ ವಾದಿಸಿದ.
‘ಯೂ ಆರ್ ಎಜ್ಜಾಟ್ ಲೀ ಕರೆಕ್ಟ್ ಗುಡ್ಡೆಜೀ’ ಎಂದ ಕೊಟ್ರ.
ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.