‘ಹೀಗಾಗಬಾರದಿತ್ತು, ಹೀಗಾಗಬಾರದಿತ್ತು’ ಅತ್ತಲಿಂದ ಗಂಡು ದನಿಯೊಂದು ಬೇಸರದಲ್ಲಿ ಮಾತನಾಡತೊಡಗಿತು.
‘ಏನಾಗಬಾರದಿತ್ತು, ಅಷ್ಟಕ್ಕೂ ನೀವ್ಯಾರು ಮಾತನಾಡ್ತಿರೋದು’ ಗೊಂದಲದಲ್ಲಿ ಕೇಳಿದೆ.
‘ಛೇ ಪಾಪ, ಮಂತ್ರಿ ಪದವಿ ಹೋಗಿದ್ದಕ್ಕೆ ಡಿಪ್ರೆಶನ್‌ಗೆ ಹೋಗಿದೀರಿ ಅನಿಸುತ್ತೆ’.
‘ಮಂತ್ರೀನಾ! ಯಾವ ಮಂತ್ರಿ ಪದವಿ ರೀ, ನಾನ್ಯಾಕ್ ಡಿಪ್ರೆಶನ್‌ಗೆ ಹೋಗಲಿ’.
‘ಒಂದೆರಡು ದಿನ ಬೇಸರ ಇದ್ದಿದ್ದೇ, ಆಮೇಲೆ ಎಲ್ಲ ಸರಿಹೋಗುತ್ತೆ’.
‘ಇಡ್ರೀ ಫೋನ್, ರಾಂಗ್ ನಂಬರ್’ ಎಂದು ಹೇಳಿ ಕಾಲ್ ಕಟ್ ಮಾಡಿದೆ. ಎರಡೇ ನಿಮಿಷಕ್ಕೆ ಮತ್ತೊಂದು ಕಾಲ್ ಬಂತು.
‘ಏನ್ ಸಾರ್ ಹೇಗಿದೀರಿ, ಬಿಜೆಪಿಯ ಹಿರಿಯ ನಾಯಕರ ಕರೆಯನ್ನೇ ಕರುಣೆ ಇಲ್ಲದೆ ಕಟ್ ಮಾಡಿದ್ರಂತೆ! ಮಿನಿಸ್ಟರ್ ಪದವಿ ಹೋಗಿದ್ದಕ್ಕೆ ಅಷ್ಟೊಂದ್ ಬೇಸರವಾಗಿದೆಯಾ?’
‘ಯಾರ‍್ರೀ ನೀವೆಲ್ಲ, ಯಾವ ಬಿಜೆಪಿ ಲೀಡರ್, ಅವರೆಲ್ಲ ನಂಗ್ಯಾಕ್ ಫೋನ್ ಮಾಡ್ತಾರೆ’ ಸಿಟ್ಟಿನಲ್ಲಿ ಹೇಳಿದೆ.
‘ಓಹ್, ಅವರು ಹೇಳಿದ್ದು ಸರಿ ಬಿಡಿ. ನೀವು ನೋವಿನಲ್ಲಿ ನರಳ್ತಿದೀರಿ, ಈಗಲಾದರೂ ತಿಳ್ಕೊಳಿ. ನಿಮ್ ಪಕ್ಷದಲ್ಲಿ ನಿಮಗೇ ವಾಕ್ ಸ್ವಾತಂತ್ರ್ಯ ಇಲ್ಲದಂತಾಯ್ತು’ ಎನ್ನುತ್ತಾ ಫೋನಿಟ್ಟರು.
ಅರೆಕ್ಷಣದಲ್ಲೇ ಮತ್ತೊಂದು ಕಾಲ್, ‘ನೋಡಿದ್ರಾ ಸರ್, ಬಿಜೆಪಿಯವರು ಈಗ ನಿಮ್ಮ ಪರ ಹೇಗ್ ಮಾತಾಡ್ತಿದ್ದಾರೆ, ನೀವು ಸಹಕಾರ ಸಚಿವರಾಗಿದ್ದಾಗ ಎಲ್ಲರೂ ಅಸಹಕಾರವನ್ನೇ ತೋರಿಸ್ತಿದ್ರು’.
‘ಸರ್, ನಿನ್ನೆಯಷ್ಟೇ ಈ ಸಿಮ್ ಖರೀದಿಸಿದ್ದೀನಿ. ಇದು ಯಾರ ನಂಬರ್ ಆಗಿತ್ತು ದಯವಿಟ್ಟು ಹೇಳಿ’.
‘ಅಯ್ಯೋ ಹೌದಾ, ಇದು ಮಿನಿಸ್ಟರ್ ಆಗಿದ್ದ ರಾಜಣ್ಣನವರ ಹಳೆಯ ನಂಬರ್ ಸರ್. ಈಗ ಅಧಿಕಾರ ಹೋಯ್ತಲ್ಲ, ಅದಕ್ಕೆ ಹಳೆಯ ನಂಬರ್‌ಗೆ ಕಾಲ್
ಮಾಡಿದ್ದೆ’.
‘ಅಯ್ಯಯ್ಯೋ ಸಾರ್, ನಾನು ಮಿನಿಸ್ಟರ್ ಅಲ್ಲ. ಪಾಪರ್ ಪಾಪಣ್ಣ’ ಎನ್ನುತ್ತಿದ್ದಂತೆ ಅವರು ಕಾಲ್ ಕಟ್ ಮಾಡಿದರು. ‘ಸಿಗೋದು ಸಿಕ್ತು, ಅಧಿಕಾರದಲ್ಲಿ ಇರೋರ ಹಳೆಯ ನಂಬರ್‌ನ ಸಿಮ್ ಸಿಗಬಾರದಿತ್ತಾ’ ಎನ್ನುತ್ತಾ ಮನಸಲ್ಲೇ ಮಂಡಿಗೆ ತಿನ್ನಲಾರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.