ADVERTISEMENT

ಚುರುಮುರಿ | ಅತಿಥಿ ತಿರಸ್ಕಾರ

ಸಿ.ಎನ್.ರಾಜು
Published 16 ಜನವರಿ 2025, 0:30 IST
Last Updated 16 ಜನವರಿ 2025, 0:30 IST
   

‘ಇನ್ಮೇಲೆ ನಾನು ಕಾಲೇಜಿಗೆ ಹೋಗೋದಿಲ್ಲ...’ ಬೇಸರದಿಂದ ಹೇಳಿದರು ಗಿರಿ.

‘ಹಾಗೆಲ್ಲಾ ಹಟ ಮಾಡಬೇಡಿ, ಕಾಲೇಜಿಗೆ ಹೋದ್ರೆ ಭವಿಷ್ಯ ಉಜ್ವಲವಾಗುತ್ತೆ, ಬದುಕು ಬಂಗಾರವಾಗುತ್ತೆ’ ಮನವೊಲಿಸುವ ಪ್ರಯತ್ನ ಮಾಡಿದರು ಅನು.

‘ನಾನು ಹಟ ಮಾಡ್ತಿಲ್ಲ, ನಮ್ಮನ್ನು ಕಾಲೇಜಿಗೆ ಸೇರಿಸುವುದಿಲ್ಲ ಅಂತ ಸರ್ಕಾರವೇ ಹಟ ಮಾಡ್ತಿದೆ. ನನ್ನಂತಹ ಐದು ಸಾವಿರ ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಿದೆ. ನಾವು ಒಳ್ಳೆಯ ಲೆಕ್ಚರರ್‌ಗಳಲ್ವಂತೆ’.

ADVERTISEMENT

‘ವಿದ್ಯಾರ್ಥಿಗಳಿಗೆ ನೀವು ಮೆಚ್ಚಿನ ಮೇಷ್ಟ್ರು ಆಗಿದ್ದೀರಿ. ನಿಮ್ಮ ಸಬ್ಜೆಕ್ಟ್‌ನಲ್ಲಿ ಈ ವರ್ಷ ಉತ್ತಮ ಫಲಿತಾಂಶ ಕೊಟ್ಟಿದ್ದೀರಿ, ಇಷ್ಟು ಸಾಲದಂತಾ?’

‘ವಿದ್ಯಾರ್ಥಿಗಳು ಮೆಚ್ಚಿದರೆ ಸಾಕಾಗುವುದಿಲ್ಲ, ಸರ್ಕಾರ ನಮ್ಮನ್ನು ಮೆಚ್ಚಬೇಕು’.

‘ಸರ್ಕಾರದ ಮುಂದೆಯೇ ಪಾಠ ಹೇಳಿ ನಿಮ್ಮ ಬೋಧನಾ ಸಾಮರ್ಥ್ಯ ತೋರಿಸಿ’.

‘ಕಾಲೇಜಿನಲ್ಲಿ ಪಾಠ ಹೇಳಲು ನಮ್ಮ ಕ್ವಾಲಿಫಿಕೇಷನ್ ಸಾಕಾಗುತ್ತಿಲ್ಲವಂತೆ.
ಎಕ್ಸ್‌ಪೀರಿಯನ್ಸ್‌ಗಿಂತ ಸರ್ಟಿಫಿಕೇಟ್
ಕ್ವಾಲಿಫಿಕೇಷನ್ನೇ ಮುಖ್ಯವಂತೆ’.

‘ನಮಗೆ ಕಾಲೇಜಿಗೆ ಹೋಗುವ ಮಕ್ಕಳಿದ್ದಾರೆ, ಸಂಸಾರದ ಖರ್ಚುವೆಚ್ಚ ಹೆಚ್ಚಾಗಿದೆ. ಈ
ಪರಿಸ್ಥಿತಿಯಲ್ಲಿ ನೀವು ಕಾಲೇಜು ಕೆಲ್ಸ ಕಳೆದುಕೊಂಡರೆ ಸಂಸಾರದ ನಿರ್ವಹಣೆ ಹೇಗ್ರೀ?’ ಅನು ಕಳವಳಗೊಂಡರು.

‘ಪರ್ಯಾಯ ಆದಾಯದ ಮಾರ್ಗ ನೋಡಿಕೊಳ್ಳಬೇಕು’.

‘ಪಾಠ ಹೇಳುವುದು ಬಿಟ್ಟರೆ ನಿಮಗೆ ಬೇರೆ ಕಸುಬು ಗೊತ್ತಿಲ್ಲವಲ್ರೀ’.

‘ಮುಂದೆ ಏನು ಮಾಡಬೇಕು ಎಂದು ಅತಿಥಿ ಉಪನ್ಯಾಸಕ ಗೆಳೆಯರು ಚರ್ಚೆ ಮಾಡ್ತೀವಿ’.

‘ಚರ್ಚಿಸಲು ಎಲ್ಲಿ ಸಭೆ ಸೇರ್ತೀರಿ?’

‘ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕ ಗೆಳೆಯನೊಬ್ಬ ಫುಟ್‍ಪಾತ್‍ನಲ್ಲಿ ತರಕಾರಿ ಅಂಗಡಿ ಇಟ್ಟಿದ್ದಾನೆ. ಆ ಅಂಗಡಿಯಲ್ಲಿ ಕುಳಿತು ಚರ್ಚೆ ಮಾಡಿ, ಮುಂದೆ ನಾವು ಯಾವ ವ್ಯವಹಾರ, ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಳ್ಳಬೇಕು ಅಂತ ತೀರ್ಮಾನ ಮಾಡ್ತೀವಿ...’ ಎಂದು ಗಿರಿ ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.