ADVERTISEMENT

ಚುರುಮುರಿ | ಕೊರೊನಾ ಜ್ಞಾನ

ಮಣ್ಣೆ ರಾಜು
Published 14 ಏಪ್ರಿಲ್ 2020, 18:17 IST
Last Updated 14 ಏಪ್ರಿಲ್ 2020, 18:17 IST
Churumur15-04-2020
Churumur15-04-2020   

‘ಮಮ್ಮಿ, ಪ್ರತಿವರ್ಷ ಸಮ್ಮರ್ ಹಾಲಿಡೇ ಬದಲು ಕೊರೊನಾ ಹಾಲಿಡೇ ಬರುತ್ತಾ?’ ಪಮ್ಮಿ ಕೇಳಿದಳು.

‘ವರ್ಷ ವರ್ಷ ಬರೋದಿಕ್ಕೆ ಕೊರೊನಾವೇನು ಯುಗಾದಿ, ದೀಪಾವಳಿ ಹಬ್ಬನಾ... ಯಾಕೆ?’ ಸುಮಿ ರೇಗಿದಳು.

‘ಕೊರೊನಾ ಇದ್ದರೆ ಎಕ್ಸಾಂ ಇಲ್ಲದೆ ಪಾಸ್ ಮಾಡ್ತಾರೆ, ಹೋಂ ವರ್ಕ್, ಟ್ಯೂಷನ್ನು ಇರಲ್ಲ, ಹಾರ್ಡ್‌ಸ್ಟಡಿ ಮಾಡು ಅಂತ ನೀವು ಹೇಳೊಲ್ಲ ಅದಕ್ಕೆ’.

ADVERTISEMENT

‘ಸ್ಕೂಲಿನವರು ಪಾಸ್ ಮಾಡಿದರೂ, ಸ್ಟಡಿ ಮಾಡದಿದ್ದರೆ ನಾನಂತೂ ನಿನ್ನನ್ನು ಫೇಲ್ ಮಾಡ್ತೀನಿ’.

‘ಇನ್ಮೇಲೆ ನಮ್ಮ ಸ್ಕೂಲ್ ಯೂನಿಫಾರಂನಲ್ಲಿ ಶೂ, ಟೈ ಜೊತೆಗೆ ಮಾಸ್ಕ್ ಅನ್ನೂ ಕಂಪಲ್ಸರಿ ಮಾಡಬಹುದು ಅಲ್ವಾ ಮಮ್ಮಿ?’.

‘ಮಾಡಬಹುದು, ಮಕ್ಕಳು ಡಿಸ್ಟೆನ್ಸ್ ಕಾಪಾಡಿಕೊಳ್ಳಬೇಕು ಅಂತ ಸ್ಕೂಲಿನವರು ಮಾಸ್ ಪಿ.ಟಿ, ಗ್ರೂಪ್ ಗೇಮ್ಸ್, ಗ್ರೂಪ್ ಡ್ಯಾನ್ಸನ್ನೂ ಕ್ಯಾನ್ಸಲ್ ಮಾಡಬಹುದು’.

‘ಮಕ್ಕಳು ಕೊರೊನಾ ಬಗ್ಗೆ ನಾಲೆಡ್ಜ್ ಬೆಳೆಸಿಕೊಳ್ಳಬೇಕು ಅಂತ ಕೊರೊನಾ ಸಬ್ಜೆಕ್ಟನ್ನೂ ಸ್ಕೂಲ್ ಸಿಲೆಬಸ್ಸಿಗೆ ಸೇರಿಸುತ್ತಾರೇನೋ...’ ಪಮ್ಮಿಗೆ ಆತಂಕ.

‘ಸೇರಿಸಿದರೆ ಒಳ್ಳೆಯದು. ಕೊರೊನಾ ಸಬ್ಜೆಕ್ಟ್‌ನಲ್ಲಿ ಹೈಯೆಸ್ಟ್ ಮಾರ್ಕ್ಸ್‌ ತಗೊಂಡ್ರೆ ಮುಂದೆ ನಿನಗೆ ಮೆಡಿಕಲ್ ಸೀಟು ಈಸಿಯಾಗಿ ಸಿಗಬಹುದು’.

‘ಮಮ್ಮಿ, ನಾನು ಮೆಡಿಕಲ್ ಓದಲ್ಲ, ಸೈಂಟಿಸ್ಟ್ ಆಗ್ತೀನಿ’.

‘ವೈದ್ಯೆಯೋ ವಿಜ್ಞಾನಿಯೋ ಏನಾದ್ರೂ ಆಗು, ಕೊರೊನಾ ಸಬ್ಜೆಕ್ಟ್ ಮಾತ್ರ ನೆಗ್ಲೆಕ್ಟ್ ಮಾಡ್ಬೇಡ. ಚೆನ್ನಾಗಿ ಓದಿ ಕೊರೊನಾ ಕಾಯಿಲೆಗೆ ಔಷಧಿ ಕಂಡುಹಿಡಿದ್ರೆ, ನೀನು ವರ್ಲ್ಡ್‌ ಫೇಮಸ್ ಆಗ್ತೀಯ ಗೊತ್ತಾ’ ಎಂದಳು ಸುಮಿ.

‘ಓದಬಹುದು ಮಮ್ಮಿ,… ಆದರೆ, ಮುಂದಿನ ವರ್ಷ ಇನ್ನೊಂದು ವೈರಸ್ಸು ಜಗತ್ತಿನ ಮಾರ್ಕೆಟ್ಟಿಗೆ ಬಂದರೆ, ಅದನ್ನೂ ಸ್ಟಡಿ ಮಾಡು ಅಂತ ಫೋರ್ಸ್ ಮಾಡಬೇಡಿ, ಸಿಲೆಬಸ್ ಹೆವಿ ಆಗುತ್ತೆ...’ ಎನ್ನುತ್ತಾ ಪಮ್ಮಿ ಮೊಬೈಲ್ ಹಿಡಿದು ರೂಮಿಗೆ ಹೋದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.