ADVERTISEMENT

ಚುರುಮುರಿ: ಸ್ವಾರ್ಥದ ರೀಡಿಂಗ್

ಲಿಂಗರಾಜು ಡಿ.ಎಸ್
Published 4 ಜನವರಿ 2021, 19:31 IST
Last Updated 4 ಜನವರಿ 2021, 19:31 IST
 ಚುರುಮುರಿ
ಚುರುಮುರಿ   

ಆವತ್ತು ಭಾರಿ ಸುದ್ದಿ! ‘ನಾವು-ನಮ್ಮ ಶಿಷ್ಯ ಕೀಟಗಳೆಲ್ಲ ಆಸೆ ಬುಟ್ಟು ರಾಜಕೀಯ ಸನ್ಯಾಸ ತಕಂದು ಪ್ರವ್ರಜಿತರಾಯ್ತಾ ಇದೀವಿ’ ಅಂತ ನಾಯಕರೆಲ್ಲ ಹೇಳತಿದ್ರು. ಕುಮಾರಣ್ಣ ‘ಆನಂದಬಾಷ್ಪ ಬ್ರದರ್’ ಅಂತ ಮಕ ಒರೆಸಿಗ್ಯಂಡ್ರೆ, ಹುಲಿಯಾ ‘ನವೆ’ ಅಂತ ಗಡ್ಡ ಕೆರಕತಿದ್ರು. ರಾಜಾವುಲಿ ಎರಡು ಬೆಳ್ಳು ತೋರಿಸಿಗ್ಯಂಡು ‘ಎಲ್ಲರೂ ನ್ಯಾಯಮಾರ್ಗದಲ್ಲಿ ನಡೀರಿ’ ಅಂತಿದ್ರು.

ಸರ್ಕಾರಿ ಇಲಿ-ಹೆಗ್ಗಣಗಳು ದಗಾ ಹಾಕಿದ ದುಡ್ಡಿನ ಪಟ್ಟಿ ಮಾಡ್ತಾ ‘ನೀವೇನಾದ್ರೂ ಕಾಸು ಕೊಟ್ಟಿದ್ರಾ?’ ಅಂತ ಕೇಳಿ ಬರಕತಿದ್ರು. ಲಾರಿ ಸೈಜಿನ ಕಾರುಗಳು ದಾತರಿಲ್ದೆ ಬಿದ್ದಿದ್ದೋ. ರೋಡಲ್ಲಿ ಬಿದ್ದಿದ್ದ ನೋಟಿನ ಕಟ್ಟುಗಳ ಪರ ಸೊತ್ತು ಪಾಷಾಣ ಅಂತ ಯಾರೂ ಮುಟ್ಟತಿರನಿಲ್ಲ.

ಎಪಿಎಂಸಿ ಧಣಿಗಳು ರೈತರಿಗೆ ಕಾಲು ಮುಗಿದು, ಬೆಳೆಗೆ ಜಾಸ್ತಿ ದುಡ್ಡು ತಕ್ಕಳಿ ಅಂತ ಅಟಕಾಸ್ಕತಿದ್ರು. ಡ್ರಗ್ ತಕ್ಕಬತ್ತಿದ್ದ ಪಾರಿನ್ ಮಾವಗೋಳು ತಪ್ಪಾಗ್ಯದೆ ಕ್ಸಮಿಸಿ ಅಂತ ಗೋಳುಯ್ಯತಿದ್ದೋ! ಜನ ಭಾರಿ ಸತುವಂತರಾಗಿಬುಟ್ಟಿದ್ರು!

ADVERTISEMENT

ಅಷ್ಟರಲ್ಲಿ ಮಿಲಿಟ್ರಿಯೋರು ಬಂದು ನನ್ನ ಬಾಯಿಗೆ ಮೀಟರ್ ಮಡಗಿ ‘ಸಾರ್ ಜೀರೊ ಅದೆ’ ಅಂದು ಜುಲುಮೇಲಿ ವ್ಯಾನು ಹತ್ತಿಸಿಗ್ಯಂಡರು. ಒಳಗೆ ತುರೇಮಣೆ, ಯಂಟಪ್ಪಣ್ಣ, ಚಂದ್ರು, ಗುಡ್ಡೆ, ದುಬ್ಬೀರ, ಶಂಕ್ರಿ, ಚಂಬಸ್ಯ, ಬೆಕ್ಕಣ್ಣ ಕುಂತುದ್ದರು.

‘ಎಡವಟ್ಟಾಗಿ ಆಸೆ ನಿಗ್ರಹಿಸೋ ಲಸಿಕೆ ಕೊಟ್ಟುಬುಟ್ಟವ್ರಂತೆ. ಅದುಕ್ಕೆ ಎಲ್ಲಾರೂ ತ್ಯಾಗಜೀವಿಗಳಾಗವ್ರೆ. ಸ್ವಾರ್ಥದ ರೀಡಿಂಗ್ ಕಡಮೆ ಇರೋರ್ಗೆ ಸಿಎಂ, ಡಿಸಿಎಂ, ಮಂತ್ರಿ ಮಾಡಾರಂತೆ. ನಿನ್ನ ಹೆಸರುಬಲಕೆ ಏನು ಬಂದದೋ!’ ಅಂತು ಯಂಟಪ್ಪಣ್ಣ. ‘ಈ ಗಾಳಿಗಂಟಲು ನನಗ್ಯಾಕೆ? ಮಂಡ್ಯಕ್ಕೆ ಮರಿಯೂಟಕ್ಕೆ ಹೋಗದದೆ. ನಾನು ಸಂದೇಗೆ ಬತ್ತೀನಿ. ಈಗ ಬುಟ್ಬುಡಿ, ನಾನೊಲ್ಲೆ’ ಅಂತ ಕೊಸರಾಡ್ತಿದ್ದೆ.

‘ಅಯ್ಯೋ ಬೊಡ್ಡಿಹೈದ್ನೆ, ಹಿತಕವ್ರೆ ಸಾರು ತಿಂದು ನಡು ಮದ್ಯಾನಕೆ ಜೂಗರಿಸ್ತದ್ದಯಾ! ಎದ್ದೇಳ್ಲಾ ಕೊರೋನ ವ್ಯಾಕ್ಸೀನ್ ಕೊಡತಾವ್ರಂತೆ ಹೋಗಮು’ ತುರೇಮಣೆ ಮೂತಿಗೆ ತಿವಿದು ಏಳಿಸಿದರು. ಈತರಕೀತರ ಆತ್ಮನಿರ್ಭರ ಭಾರತದ ಕನಸು ಭಗ್ನವಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.