ADVERTISEMENT

ಚುರುಮುರಿ: ಉಚಿತ ಪ್ರಯಾಣ

ಆನಂದ ಉಳಯ
Published 29 ಏಪ್ರಿಲ್ 2022, 18:35 IST
Last Updated 29 ಏಪ್ರಿಲ್ 2022, 18:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ನಾನು ಬಾಂಬೇಲಿ ಇದ್ದಾಗ...’ ಎನ್ನುತ್ತಿದ್ದಂತೆ
ಹೆಂಡತಿ ‘ಶುರುವಾಯಿತಾ ನಿಮ್ಮ ‘50 ವರ್ಷಗಳ ಹಿಂದೆ ಕಾಲಂ’ ಎಂದು ಛೇಡಿಸಿ ‘ಸರಿ ಶುರುಮಾಡಿ’ ಎಂದಳು.

‘ಒಂದಿಷ್ಟು ಜನ ಲೋಕಲ್ ಟ್ರೇನ್‍ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು ಪ್ರತೀ ದಿನ’.

‘ಪ್ರತೀ ದಿನ? ಸಿಕ್ಕಿಬೀಳ್ತಿರಲಿಲ್ಲವೇ?’

ADVERTISEMENT

‘ಇಲ್ಲ, ಏಕೆಂದರೆ ಅವರಿಗೆ ಇನ್‍ಶ್ಯೂರೆನ್ಸ್ ಇತ್ತು...’

‘ಇನ್‍ಶ್ಯೂರೆನ್ಸ್?!’

‘ಮಟ್ಕಾ ತರಹ ಒಬ್ಬ ದಾದ ಆ ಇನ್‍ಶ್ಯೂರೆನ್ಸ್ ದಂಧೆ ನಡೆಸ್ತಿದ್ದ. ಶೇ 100 ಖಾಸಗಿ’.

‘ಇಂಟರೆಸ್ಟಿಂಗ್ ಆಗಿದೆ, ಮುಂದುವರಿಸಿ’ ಎಂದಳು.

‘ಪ್ರತೀ ತಿಂಗಳು ಅವನಿಗೆ 10 ರೂಪಾಯಿ ಶುಲ್ಕ ಕಟ್ಟಿದರೆ ಆಯಿತು. ಫ್ರೀ ಟ್ರಾವೆಲ್ ಗ್ಯಾರಂಟಿ’.

‘ಮತ್ತೆ ಸಿಕ್ಕಿಬಿದ್ದರೆ?’

‘ದಂಡ ಹಾಕ್ತಾರೆ. ದಂಡ ಕಟ್ಟಿದ ರಸೀದಿ ದಾದಾನಿಗೆ ತೋರಿಸಿದರೆ ಆ ಹಣ ಫುಲ್ ರೀಫಂಡ್’.

‘ಅವನಿಗೇನು ಲಾಭ ಇದರಿಂದ?’

‘ಸಿಂಪಲ್ ಗಣಿತ ಮೇಡಂ. ದಾದಾನಿಗೆ ಪ್ರತೀ ತಿಂಗಳು 1,000 ಮಂದಿ ಹತ್ತತ್ತು ರೂಪಾಯಿ ಕೊಡ್ತಾರೆ. ಅಂದರೆ ಅವನ ಮಾಸಿಕ ಆದಾಯ 10,000. ಅವರಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕೆ ಸಿಕ್ಕಿ ಬೀಳುವವರು 100 ಮಂದಿ ಸಹ ಇರೋಲ್ಲ. ಅವರೆಲ್ಲರ ದಂಡವನ್ನ ಈ ದಾದ ಕಟ್ತಾನೆ. ಅದು 3-4 ಸಾವಿರ ಅಂತ ಇಟ್ಕೊ. ಉಳಿದ 6-7 ಸಾವಿರ ಅವನಿಗೆ ನೀಟ್ ಪ್ರಾಫಿಟ್’.

‘ಅವನು ಸಿಕ್ಕಿ ಬೀಳೊಲ್ಲವೆ?’

‘ದಾಖಲೆ ಇರೊಲ್ಲ. ಎಲ್ಲ ಬಾಯಿಮಾತಿನ ವ್ಯವಹಾರ. ಬ್ಲ್ಯಾಕ್‌ಮನಿ ದಂಧೆಯಂತೆ’.

‘ಅದನ್ನೀಗ್ಯಾಕೆ ನೆನಪಿಸಿಕೊಂಡಿರಿ?’

‘ಅದೇ ಈ ಪಿಎಸ್‍ಐ ಮತ್ತು ಇತರ ನೇಮಕಾತಿ ಹಗರಣಗಳ ಬಗ್ಗೆ ಓದ್ತಾ ಇದ್ದಾಗ ಅದು ನೆನಪಿಗೆ ಬಂತು ನೋಡು’.

‘ಅಂದಹಾಗೆ ನೀವೂ 10 ರೂಪಾಯಿ ಕೊಟ್ಟು ಟಿಕೆಟ್ ಇಲ್ಲದೆ ಪ್ರಯಾಣ ಮಾಡ್ತಿರಲಿಲ್ಲ ತಾನೆ?’

‘ಛೆ ಛೇ ಶಾಂತಂ ಪಾಪಂ. ನಾನು ಪ್ರತೀ ದಿನ ಟಿಕೆಟ್ ಕೊಂಡೇ ರೈಲು ಹತ್ತುತ್ತಿದ್ದೆ’ ಎಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.