ADVERTISEMENT

ಚುರುಮುರಿ: ಕನ್ನಡ ಪರೀಕ್ಷೆ

ಬಿ.ಎನ್.ಮಲ್ಲೇಶ್
Published 20 ಜನವರಿ 2022, 18:54 IST
Last Updated 20 ಜನವರಿ 2022, 18:54 IST
   

‘ಗುರೂ... ನಾನೂ ಕನ್ನಡ ಸಾಹಿತ್ಯ ಪರಿಷತ್ ಮೆಂಬರಾಗಬೇಕು ಅಂತಿದೀನಿ... ಆದ್ರೆ ಅದೇನೋ ಪರೀಕ್ಷೆ ಮಾಡ್ತಾರಂತೆ?’ ತೆಪರೇಸಿಯನ್ನು ಗುಡ್ಡೆ ವಿಚಾರಿಸಿದ.

‘ಹೌದಂತೆ, ಸಿಂಪಲ್ ಪ್ರಶ್ನೆ ಕೇಳ್ತಾರಂತೆ. ಉದಾಹರಣೆಗೆ, ಈಗ ಕನ್ನಡದಲ್ಲಿ ಎಷ್ಟು ಅಕ್ಷರ ಅದಾವೆ?’ ತೆಪರೇಸಿ ಕೇಳಿದ.

‘ನಾನು ಓದೋವಾಗ ಐವತ್ತೋ ಐವತ್ತೆಲ್ಡೋ ಇದ್ವು. ಈಗ ಎಲ್ಲ ರೇಟಾಗಿದಾವೆ, ಅವೂ ಜಾಸ್ತಿಯಾಗಿರಬೇಕು’.

ADVERTISEMENT

‘ನಿನ್ತೆಲಿ, ಹೋಗ್ಲಿ ನಿಂಗೆ ಈ ಸಂಧಿ ಸಮಾಸ ಗೊತ್ತಾ?’

‘ಸಮೋಸ ಗೊತ್ತು, ಅದೆ ಆಲೂಗಡ್ಡೆ ಹಾಕಿ ಮಾಡ್ತಾರಲ್ಲ. ಆದ್ರೆ ಈ ಸಂದಿ ಅಂದ್ರೆ ಏನು? ಮನೆ ಅಕ್ಕಪಕ್ಕ ಇರ‍್ತಾವಲ್ಲ ಅವಾ?’

‘ಥೂ ನಿನ್ನ, ಈಗ ಅದು ಬಿಡು... ಮದ್ಯಪಾನದಲ್ಲಿ ‘ದ್ಯ’ ಅಲ್ಪಪ್ರಾಣನೋ ಮಹಾಪ್ರಾಣನೋ?’

‘ಮದ್ಯಪಾನ ಅಂದ್ರೆ ನಂಗೆ ಮಹಾಪ್ರಾಣನೇ, ನೋ ಡೌಟ್...’

‘ನೀನು ಮೆಂಬರಾದಂಗೆ ಬಿಡು. ನಿಂಗೆ ಬೈಲಾ ಅಂದ್ರೆ ಏನು ಗೊತ್ತಾ?’

‘ಗೊತ್ತು... ಬೈಲಾ ಅಂದ್ರೆ ಬೈಯ್ಯೋದು. ಮಂಡ್ಯ ಕಡೆ ಹೋಗ್ಲಾ ಬಾರ‍್ಲಾ ಅಂತಾರಲ್ಲ, ಹಂಗೆ ಇದು ಬೈಲಾ...’

‘ವಾಹ್ ಎಷ್ಟ್ ತಿಳ್ಕಂಡೀಯಲೆ... ನಿಂಗೆ ಈ ಹೊಕ್ಕುಳ ಸೀಳೋದು ಅಂದ್ರೆ ಗೊತ್ತಾ?’

‘ಹೊಕ್ಕುಳ ಗಿಕ್ಕುಳ ಅಂದ್ರೆ ನಂಗೊ೦ಥರ ಗುಳುಗುಳು ಆಗುತ್ತಪ್ಪ, ಬೇರೇನರೆ ಕೇಳು...’

‘ಗುಡ್ಡೆ ಸಾಹಿತ್ಯ ಪರಿಷತ್ ಪರೀಕ್ಷೇಲಿ ಫೇಲಾದ’ ಇದು ವರ್ತಮಾನ ಕಾಲನೋ ಭವಿಷ್ಯತ್ ಕಾಲನೋ?’

‘ಲೇಯ್ ತೆಪರ, ಕಾಲ ಯಾವುದರೆ ಆಗರ‍್ಲಿ, ನಂಗೆ ಕನ್ನಡ ಮಾತಾಡಕೆ ಬರ‍್ತತೋ ಇಲ್ಲೋ? ನಿಂಗದು ಅರ್ಥ ಆಗ್ತತೋ ಇಲ್ಲೋ? ಅಷ್ಟು ಸಾಕು. ಕನ್ನಡ ಉಳಿದಿರೋದು ನಮ್ಮಂಥ ದಡ್ಡರಿಂದ. ನಿಮ್ಮಂಥ ಟಸ್ಸು ಪುಸ್ಸು ಡಿಗ್ರಿ ಮಂದಿಯಿಂದ ಅಲ್ಲ. ಸುಮ್ನೆ ಮೆಂಬರ್‌ಶಿಪ್ ಕೊಡ್ಸು...’ ಗುಡ್ಡೆಗೆ ಸಿಟ್ಟು ಬಂತು.

‘ಅಪ್ಪಣೆ ಗುಡ್ಡೆ ಮಹಾಪ್ರಭು’ ಎಂದ ತೆಪರೇಸಿ. ಇಬ್ಬರೂ ಒಟ್ಟಿಗೇ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.