ADVERTISEMENT

ಚುರುಮುರಿ: ಪ್ರಳಯ ಫಿಕ್ಸ್ !

ಗುರು ಪಿ.ಎಸ್‌
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
   

‘ಮಳೆಯಾಗುತ್ತೆ, ಈ ಬಾರಿ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತೆ’ ಸ್ವಾಮೀಜಿಯೊಬ್ಬರ ಬಾಯಿಂದ ಆಣಿಮುತ್ತು ಹೊರಬಿತ್ತು.

‘ಅನಾಹುತಕಾರಿ’ ಭವಿಷ್ಯವನ್ನೇ ದಶಕಗಳಿಂದ ಕೇಳುತ್ತಿದ್ದ ಭಕ್ತರು, ಸ್ವಾಮೀಜಿಯವರ ‘ಒಳ್ಳೆಯ’ ಮಾತು ಕೇಳಿ ಹಿರಿಹಿರಿ ಹಿಗ್ಗಿದರು!

‘ಸ್ವಾಮಿಗಳೇ, ಈ ಭವಿಷ್ಯ ನೀವೇ ಹೇಳ್ತಿರೋದಾ? ನಿಜವಾಗಿಯೂ ಉತ್ತಮ ಮಳೆ ಆಗುತ್ತಾ?’ ಎಂದು ಭಕ್ತರು ಕೇಳಿದರು.

ADVERTISEMENT

‘ಹೌದು. ಮಳೆ ಆಗುತ್ತೆ, ಎಷ್ಟು ಅಂದ್ರೆ ಜಲಪ್ರಳಯ ಆಗೋವಷ್ಟು!’

‘ಥೋ, ಮತ್ತೆ ಸ್ಯಾಡ್ ಎಂಡಿಂಗಾ?’

‘ಜ್ಯೋತಿಷ್ಯ ಅಂದ್ರೆನೇ ಹಾಗೆ, ಒಳ್ಳೆಯದರಲ್ಲಿ ಕೆಟ್ಟದ್ದಿರುತ್ತೆ, ಕೆಟ್ಟದ್ದರಲ್ಲಿ ಒಳ್ಳೆಯದಿರುತ್ತೆ’.

‘ಅಂದ್ರೆ ಗುರುಗಳೇ?’

‘ಅಂದ್ರೆ ಈಗ, ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿ ಆದ್ರೆ ಬಿಜೆಪಿಯವರಿಗೆ ಕೆಟ್ಟದ್ದು, ಅಚ್ಛೇ ದಿನ್ ಘೋಷಣೆ ಸಾಕಾರವಾದರೆ ಕಾಂಗ್ರೆಸ್‌ಗೆ ಕೆಟ್ಟದ್ದು’.

‘ನಮ್ ರಾಜ್ಯದ ಪಾಲಿಟಿಕ್ಸ್ ನೋಡಿದ್ರೆ ನಿಮಗೆಲ್ಲ ಕೆಟ್ಟದ್ದೇ ಕಾಣಿಸುತ್ತೆ. ಮಹಾರಾಷ್ಟ್ರದತ್ತ ಸ್ವಲ್ಪ ನೋಡಿ ಗುರುಗಳೇ, ಅಲ್ಲಿ ಎಷ್ಟೊಂದು ಒಳ್ಳೊಳ್ಳೆ ಬೆಳವಣಿಗೆಗಳಾಗ್ತಿವೆ. ಬ್ಲ್ಯಾಕ್ ಶರ್ಟ್ ಹಾಕ್ಕೊಂಡವ್ರು ಅದನ್ನು ತೆಗೆದು ಫಟಾಫಟ್ ವೈಟ್ ಶರ್ಟ್ ಹಾಕ್ಕೊಂಡಂತೆ, ಇವತ್ತು ಅಪೋಸಿಷನ್ ಪಾರ್ಟಿಯಲ್ಲಿದ್ದೋರು ಮರುದಿನವೇ ಡಿಸಿಎಂ ಆಗ್ಬಿಟ್ರು’ ಪಾಸಿಟಿವ್ ಆಗಿ ಹೇಳಿದರು ಭಕ್ತರು.

‘ಕರ್ನಾಟಕದಲ್ಲೂ ಹಂಗೇ ಆಗೋದಿದೆ. ಮತ್ತೆ ಚೆನ್ನಾಗಿ ಪಟ್ಟಣ ಆಳೋಣ ಅಂತ ಒಬ್ರು ರೆಡಿ ಆಗೋ ಸಂಭವವೂ ಇದೆ’ ಮತ್ತೊಂದು ಬಾಂಬ್ ಹಾಕಿದ್ರು ಸ್ವಾಮೀಜಿ. 

‘ಇದೆಲ್ಲ ಹೇಗೆ ಕಂಡುಹಿಡಿತೀರಿ ಗುರುಗಳೇ?’

‘ಏನಿಲ್ಲ, ಪ್ರತಿ ಬೆಳವಣಿಗೆಯೂ ಒಂದೊಂದು ಸೂಚನೆ ಕೊಡ್ತಿರುತ್ತೆ’.

‘ಅಂದ್ರೆ?’

‘ಮೊನ್ನೆ ಅಧಿವೇಶನದಲ್ಲಿ ವಿರೋಧ ಪಕ್ಷದ ಸಾಲಿನಲ್ಲಿ‌ ಮೊದಲೆರಡು ಸೀಟ್ ಖಾಲಿ ಬಿಟ್ಟಿದ್ರಲ್ವ. ಅದು ರಾಜ್ಯ ಮುಂದೆ ಕತ್ತಲಲ್ಲಿ ಮುಳುಗೋ ಮುನ್ಸೂಚನೆ!’

‘ಸುಮ್ನಿರಿ ಗುರುಗಳೇ. ಜಲಪ್ರಳಯ ಆಗುತ್ತೆ ಅಂದ್ರಿ, ಆದರೆ ಕೆಲವು ಕಡೆ ಇನ್ನೂ ಮಳೆನೇ ಆಗದೆ ಡ್ಯಾಮ್‌ಗಳೆಲ್ಲ ಖಾಲಿಯಾಗ್ತಿವೆ'.

‘ಅದು ಭೀಕರ ಬರದ ಮುನ್ಸೂಚನೆ’.

‘ಅಂದ್ರೆ, ಒಟ್ನಲ್ಲಿ...’

‘ಪ್ರಳಯ ಫಿಕ್ಸ್!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.