ADVERTISEMENT

ಚುರುಮುರಿ: ಪರಿಸತ್ ಪರೀಕ್ಷೆ

ಲಿಂಗರಾಜು ಡಿ.ಎಸ್
Published 23 ಫೆಬ್ರುವರಿ 2022, 19:30 IST
Last Updated 23 ಫೆಬ್ರುವರಿ 2022, 19:30 IST
ಚುರುಮುರಿ
ಚುರುಮುರಿ   

‘ಅಲ್ಲ ಕನೋ, ಪರಿಸತ್ ಅದ್ಯಕ್ಸರು ಸದಸ್ಯರಲ್ಲಿ ಹೆಬ್ಬೆಟ್ಟುಗಳು ಜಾಸ್ತಿ ಅವೆ, ಮುಂದ್ಕೆ ನೆಂಬ್ರಾಗೋರಿಗೆ ಈಥರಕೀತರಾ ಎಂಟ್ರೆನ್ಸ್ ಮಾಡಬೇಕು ಅಂತ ಜಿಲ್ಲಾ ಅಧ್ಯಕ್ಸರ ಪಟ್ಟೀನೇ ಒಪ್ಕದೇ ತಾವೇ ಪರೀಕ್ಸಾರ್ಥಿಗಳ ಯೇಗ-ಯೇಗ್ತೆಗಳ ಸ್ಟೂಲ್ ಕಿಟ್ ಮಾಡ್ತಾವ್ರಂತೆ!’ ಅಂದ್ರು ತುರೇಮಣೆ.

‘ಥೋ ಏನ್ ಭಾಷೆ ಸಾ ನಿಮ್ದು. ಅದ್ಕೇ ಮಯೇಸಣ್ಣ ನಿಮ್ಮಂತೇರಿಗೆ ಮಕ್ಕುಗಿಯದು. ಅದು ಸ್ಟೂಲ್ ಕಿಟ್ ಅಲ್ಲ ಸಾ ಟೂಲ್‍ಕಿಟ್. ಅವರು ಬೈಲಾ ತಿದ್ದುಪಡಿ ಮಾಡಕ್ಕೆ ಹೊಂಟವರಂತೆ’ ಅಂತ ತಿದ್ದಿದೆ.

‘ಯಂತದೋ ಒಂದು. ಬೈಲಾನೋ ಉಗಿಲಾನೋ ಕಾಣೆ. ಅಲ್ಲಾ ಎಂಟ್ರೆನ್ಸ್ ಮಾಡಿದ ಮ್ಯಾಲೆ ಥರಾವರಿ ಸಮಸ್ಯೆಗಳು ಹುಟ್ಟಿಕ್ಯಂತವೆ ಕನೋ. ಈಗ ಲೋಪಸೇವಾ ಆಯೋಗ ಅಕ್ರಮ-ಸಕ್ರಮಕ್ಕೆ ಕಯ್ಯಾಕಿದ ಮ್ಯಾಲೆ ಕೋರ್ಟ್ ಹೇಳಿದ್ರೂ ಕೇಳದೇ ಸರ್ಕಾರ ಮಸೂದೆ ತಂದದಂತೆ’ ತುರೇಮಣೆ ತಮ್ಮ ಗಾಬರಿಯನ್ನು ಪ್ರದರ್ಶಿಸಿದರು.

ADVERTISEMENT

‘ನೋಡಿ ಸಾ, ಪರೀಕ್ಸೆ ಅಂದಮ್ಯಾಲೆ ಇಂತೋವೆಲ್ಲಾ ಗಾಳಿಗಂಟಲು ಇದ್ದುದ್ದೇ. ಪೇಪರ್ ಲೀಕಾಯ್ತದೆ, ಮಾರ್ಕ್ಸ್‌ ಕೊಡೋರು ಜಾಸ್ತಿ ಕೊಡಬೌದು. ಒಟ್ರಾಸಿ ನಮ್ಮ ಡಿಪಾರ್ಟ್‌ಮೆಂಟ್‌ ಎಗ್ಜಾಂ ಆದಂಗಾಯ್ತದೇನೋ’ ಅಂತಂದೆ.

‘ಇಲಾಖಾ ಪರೀಕ್ಸೆ ನೀನೆಂಗೆ ಬರೆದೆ ಅಣ್ತಮ್ಮಾ?’

‘ಸಾ, ಇದೊಂತರಾ ಯೂಸರ್ ಫ್ರೆಂಡ್ಲಿ ಪರೀಕ್ಸೆ ಸಾ. ಪುಸ್ತಕ ನೋಡಿಕ್ಯಂಡೇ ಬರೆಯದ್ರಿಂದ ಭಯ ಇಲ್ಲ. ಇದುಕ್ಕೆ ಅಂತ್ಲೇ ಕೆಲವು ಸಮಾಜ ಸೇವಕರಿರತರೆ. ಅವರು ಚೀಟಿ, ಪುಸ್ತಕ ಎಲ್ಲಾ ಸಪ್ಲೇ ಮಾಡ್ತರೆ’ ಅಂತ ವಿವರಿಸಿದೆ.

‘ಆಯ್ತು ಕಪ್ಪಾ, ಪರಿಸತ್ ಪರೀಕ್ಸೆಲಿ ಕವನ ಬರೆದು ಕೊಡಕೆ, ಪಂಪ-ರನ್ನನ ಪದ್ಯ ಹೇಳಿಕೊಡಕೂ ಜನ ಬಂದಾರೇನೋ!’ ತಿರುಗಾ ಗಾಬರಿ ಬಿದ್ದರು.

‘ಬುಡಿ ಸಾ, ಟ್ಯೂಶನ್ ಸ್ಕೂಲುಗಳು ಹುಟ್ಟಿಕತವೆ. ಕನ್ನಡ ಮೇಷ್ಟ್ರಿಗೆ ಕೆಲಸಾಯ್ತದೆ. ಆಧಾರ್ ಕಾರ್ಡು, ಪ್ಯಾನ್ ಕಾರ್ಡು ಕಡ್ಡಾಯ ಅಂತ ಮಾಡಿದ್ರಾತು’ ಅಂತ ಸಮಾಧಾನ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.