ADVERTISEMENT

ಚುರುಮುರಿ: ಲಾಸ್ಟ್ ಅನಾಲಿಸಿಸ್

ಲಿಂಗರಾಜು ಡಿ.ಎಸ್
Published 19 ಸೆಪ್ಟೆಂಬರ್ 2022, 17:22 IST
Last Updated 19 ಸೆಪ್ಟೆಂಬರ್ 2022, 17:22 IST
   

‘ಲಾಸ್ಟ್ ಬೆಂಚಲ್ಲಿ ಕೂತಾಗಲೇ ಕ್ರಿಯಾಶೀಲತೆ, ಖುಷಿ ಸಿಕ್ತದೆ. ಅದರಿಂದಲೇ ನಾನು ಓದಿನ ಹೊರತಾದ ಅನುಭವ ತಕಂದು ಮುಂದಕ್ಕೆ ಬಂದೆ ಅಂದದೆ ಬಸಣ್ಣ’ ಅಂತಂದ್ರು ತುರೇಮಣೆ.

‘ಸೀಎಂ ಆಗಬೇಕಾದ್ರೆ ಲಾಸ್ಟ್ ಬೆಂಚಲ್ಲಿ ಕೂತೋರಿಗೆ ಮಾತ್ರ ಸಾಧ್ಯ! ದೇಶ ಮುಂದಕ್ಕೆ ಬರಬೇಕಾದ್ರೆ ಇನ್ನು ಮುಂದೆ ಎಲ್ಲಾ ಸ್ಕೂಲು-ಕಾಲೇಜುಗಳಲ್ಲಿ ಲಾಸ್ಟ್ ಬೆಂಚ್ ಮಾತ್ರ ಇರಬಕು ಅಂತ ಸಚಿವರು ಆದೇಶ ಹೊಂಡುಸ್ತಾವ್ರಂತೆ!’ ಅಂತು ಯಂಟಪ್ಪಣ್ಣ.

‘ಹಂಗಾದ್ರೆ ಇನ್ನು ಮುಂದೆ ಯಾರೂ ನಮ್ಮನ್ನ ‘ಲಾರ್ಡ್ ಆಫ್‌ ದಿ ಲಾಸ್ಟ್ ಬೆಂಚ್’ ಅಂತ ಬೈಯ್ಯಂಗಿಲ್ಲ ಬುಡಿ!’ ಅಂತ ಖುಷಿಪಟ್ಟೆ.

ADVERTISEMENT

‘ನೋಡ್ಲಾ, ನಾನು ಸಣ್ಣೊನಿದ್ದಾಗ
ನಮ್ಮಪ್ಪ ಲಾಸ್ಟ್ ಪೆಗ್ಗು ಎಣ್ಣೆಬುಟ್ಕಂದು ಲಾಸ್ಟ್ ಬಸ್ಸಿಗೆ ಬತ್ತಿದ್ದ. ಅವುನ್ನ ಮನೆ ಸೇರ್ಸೋ
ಲಾಸ್ಟ್ ರೆಸ್ಪಾನ್ಸಿಬಲಿಟಿ ನಂದಾಗಿತ್ತು’ ತುರೇಮಣೆ ನೆನಪಿನ ಲೋಕಕ್ಕೆ ಜಾರಿದರು.

‘ಲಾಸ್ಟ್ ಮ್ಯಾಚಿಗೆ ಮೊದಲೇ ಸೋತಿದ್ದರಿಂದ ಏಷ್ಯಾ ಕಪ್ ಸಿಗಲಿಲ್ಲ. ಅದಿರಲಿ ಲಾಸ್ಟ್ ರೆಸಾರ್ಟ್ ಅಂದ್ರೆ ಪಕ್ಷಾಂತರದ ಲೆಕ್ಕದೇಲಿ ಬಂದದಾ?’ ಚಂದ್ರು ಪ್ರಶ್ನೆ ಮಾಡಿದರು.

‘ಅದೇ ಥರಾ ಲಾಸ್ಟ್ ಕೊರೋನಾ ಕೇಸ್, ಲಾಸ್ಟ್ ದೌರ್ಜನ್ಯ, ರಸ್ತೇಲಿ ಲಾಸ್ಟ್ ಗುಂಡಿ, ಅಧಿಕಾರಿಗಳಿಗೆ ಲಾಸ್ಟ್ ಲಂಚ, ಶಾಸಕರ ಲಾಸ್ಟ್ ಕ್ಲಿಯರೆನ್ಸ್ ಸೇಲ್, ಲಾಸ್ಟ್ ಜೋಡೋ, ಲಾಸ್ಟ್ ಸ್ಪಂದನ, ಲಾಸ್ಟ್ ಧಾರೆ ಯಾವತ್ತಾದ್ರೂ ಲಾಸ್ಟಾದಾವಾ?’ ಅಂತ ಲಾಸ್ಟ್ ಕ್ವೆಸ್ಚನ್ ಹಾಕಿದೆ.

‘ಅಯ್ಯೋ ಬೊಡ್ಡಿಹೈದ್ನೆ, ಇವೆಲ್ಲ ಈಗಲೇ ಲಾಸ್ಟಾದ್ರೆ ರಾಜಕಾರಣಿಗಳಿಗೆ ಲಾಸ್ಟಿಗೆ ಏನು ಕೆಲಸ ಇದ್ದತ್ತು ಅನ್ನೋ ಲಾಸ್ಟ್ ಯೋಚನೇನೂ ಇಲ್ಲವಲ್ಲೋ ನಿನಗೆ!’ ಅಂತ ತುರೇಮಣೆ ಲಾಸ್ಟಿಗೆ ಮಕ್ಕುಗಿದರು. ಆದುದರಿಂದ ಲಾಸ್ಟ್ ಅನ್ನೋದು ನೆವರ್ ಲಾಸ್ಟ್ ವಿಚಾರ ಅನ್ನೋದು ಲಾಸ್ಟ್ ಮಿನಿಟಿಗೆ ನನಗೆ ಗೊತ್ತಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.