ADVERTISEMENT

ಚುರುಮುರಿ | ಎಂಎಲ್‍ಏಸ್ ಡೇ ಔಟ್

ಲಿಂಗರಾಜು ಡಿ.ಎಸ್
Published 14 ಫೆಬ್ರುವರಿ 2022, 19:45 IST
Last Updated 14 ಫೆಬ್ರುವರಿ 2022, 19:45 IST
   

ಎಂಎಲ್‍ಎ ಸಯಾಬ್ರು ವತ್ತಾರೆಗೇ ಸಿಟಿ ರೌಂಡ್ಸ್ ಹೋಗಿದ್ರು. ಎರಡು ದಿನದಿಂದ ನಲ್ಲೀಲಿ ನೀರು ಬಂದಿಲ್ಲ ಅಂತ ಜನ ರಾಂಗಾಗಿ ಘೇರಾವ್ ಮಾಡಿದಾಗ ಫೋನ್‌ ತಗಂಡೋರೆ, ಜಲಮಂಡಲಿ ಎಂಜಿನೀರಿಗೆ ತಾರಾಮಾರಾ ಬೋದು, ‘ಇನ್ನು ಹತ್ತು ನಿಮಿಸದಲ್ಲಿ ನೀರು ಬರದಿದ್ರೆ ಸಸ್ಪೆಂಡಾಯ್ತಿಯ!’ ಅಂತ ಧಮಕಿ ಹಾಕಿದ್ರು. ಐದೇ ನಿಮಿಸದಲ್ಲಿ ನೀರು ಬಂದಾಗ ಜನ ಸಯಾಬ್ರಿಗೆ ಜೈ ಅಂದು ನಲ್ಲಿತಕ್ಕೆ ಓಡೋದ್ರು!

ಅಲ್ಲಿಂದ ಸರ್ಕಾರಿ ಆಸ್ಪತ್ರೆ ತಾವ್ಕೋದಾಗ ಜನರ ಗುಂಪು ಸೇರಿತ್ತು. ಸಯಾಬ್ರುನ್ನ ನೋಡಿದ ಜನ ‘ಯಾವಾಗ್ಲೂ ಡಾಕ್ಟ್ರಿಲ್ಲ ಅಂತ್ಲೇ ಹೇಳತರೆ’ ಅಂದಾಗ ಸಯಾಬ್ರು ಡಾಕ್ಟ್ರಿಗೆ ಫೋನ್ ಮಾಡಿ, ‘ಲೇಯ್ ಡಾಕ್ಟ್ರೆ, ಇನ್ನೈದು ನಿಮಿಸದೇಲಿ ಆಸ್ಪತ್ರೇಲಿರಬೇಕು. ಇಲ್ಲಾಂದ್ರೆ ನೀರು-ನೆಳ್ಳು ಇಲ್ಲದ ಜಾಗ ತೋರಿಸ್ತೀನಿ’ ಅಂತ ಗುಟುರು ಹಾಕಿದರು. ಡಾಕ್ಟ್ರು ಐದು ನಿಮಿಸದೇಲಿ ಬಂದು ‘ವ್ಯಾಕ್ಸೀನು, ಕೊರೊನಾ ಮಾತ್ರೆ ಸಪ್ಲೇ ಇಲ್ಲ ಸಾ’ ಅಂತ ಅಲವತ್ತುಗಂಡರು. ಸಯಾಬ್ರು ಯಾರಿಗೋ ಫೋನ್ ಮಾಡಿ, 10 ನಿಮಿಸದೇಲಿ ಲಸಿಕೆ, ಮಾತ್ರೆ ತರಿಸಿ ಜನಕ್ಕೆ ಕೊಡಿಸಿದ್ರು. ಜನೆಲ್ಲಾ ಖುಷಿಯಾಗಿ ಜೈಕಾರ ಕೂಗಿದರು.

ಮಧ್ಯಾಹ್ನ ಕೆಡಿಪಿ ಮೀಟಿಂಗಲ್ಲಿ ಸಯಾಬ್ರು ಎಲ್ಲಾ ಅಧಿಕಾರಿಗಳಿಗೆ ಚೆನ್ನಾಗಿ ಕ್ಲಾಸು ತಗಂಡು ‘ಜನದ ದುಡ್ಡು ವಿಷ ಇದ್ದಂಗೆ. ಜಾಸ್ತಿ ತಿಂದ್ರೆ ಸತ್ತೋಯ್ತಿಯ’ ಅಂದುದ್ದ ನೋಡಿದ ಪೇಪರ್ನೋರು ‘ಸಯಾಬ್ರು ಘಾಟಿ ಮನುಷ್ಯ!’ ಅಂದು ನಾಳಿನ ಬ್ರೇಕಿಂಗ್ ನ್ಯೂಸ್ ಬರಕತಿದ್ರು.

ADVERTISEMENT

ರೆಸಾರ್ಟಿಗೆ ಎಂಎಲ್‍ಎ ಸಯಾಬ್ರು ಬಂದಾಗ ರಾತ್ರಿಯಾಗಿತ್ತು. ಎಲ್ಲಾ ಡಿಪಾರ್ಟ್‌ಮೆಂಟ್ ಅಧಿಕಾರಿಗಳೂ ಇದ್ರು. ಸಯಾಬ್ರು ‘ನಾನು ಬೈದೆ ಅಂತ ಯಾರೂ ಬೇಜಾರು ಮಾಡಿಕ್ಯಬೇಡಿ ಕಣಿರ‍್ಲಾ! ಜನದ ಮುಂದೆ ಸ್ಕೋಪು ತಗಳಕೆ ಬೈದಂಗೆ ಮಾಡ್ತೀನಿ. ಒಂದೊಂದು ಏರಿಯಾದಲ್ಲಿ ಹಿಂಗೇ ಪ್ರಾಬ್ಲಂ ಕ್ರಿಯೇಟ್ ಮಾಡಿ ನನಗೆ ಮೊದಲೇ ಹೇಳ್ರಿ’ ಅಂತ ಆರ್ಡ್ರು ಕೊಟ್ಟು ಮನೆಗೆ ಹೊಂಟ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.