ADVERTISEMENT

ಚುರುಮುರಿ: ಟಾರ್ಗೆಟ್ ಲೆಕ್ಕಾಚಾರ

ಆನಂದ ಉಳಯ
Published 6 ಏಪ್ರಿಲ್ 2022, 19:30 IST
Last Updated 6 ಏಪ್ರಿಲ್ 2022, 19:30 IST
   

‘ನಮ್ಮ ಅಸೆಂಬ್ಲೀಲಿ ಇರೋದು 224 ಸೀಟ್ ಅಷ್ಟೇ ಅಲ್ವಾ?’ ಎಂದು ಹೆಂಡತಿ ಕೇಳಿದಳು. ‘ಹೌದು ಯಾಕೀಗ?’ ಎಂದೆ.

‘ನೊ... ನೊ... ಮೊನ್ನೆ ರಾಹುಲ್‍ಜಿ ಮತ್ತು ಅಮಿತ್‍ಜಿ ಇಬ್ಬರೂನು ಬೆಂಗಳೂರಿಗೆ ಹಾರಿ ಬಂದು, ಮುಂದಿನ ವರ್ಷದ ಚುನಾವಣೇಲಿ ತಮ್ಮ ಪಕ್ಷ 150 ಸೀಟ್ ಗೆಲ್ಲಲೇಬೇಕು ಅಂತ ತಾಕೀತು ಮಾಡಿ ಹೋದ್ರು’.

‘ಕರೆಕ್ಟ್. ಕ್ಲಾಸ್ ಟೀಚರ್ ಹೋಂ ವರ್ಕ್ ಕೊಟ್ಟಂತೆ’.

ADVERTISEMENT

‘ಏನು ಕರೆಕ್ಟ್? ಇಬ್ಬರೂ ತಲಾ 150 ಗೆದ್ದರೆ ಒಟ್ಟು 300 ಸೀಟ್ ಆಯ್ತಲ್ಲ. ಇರೋದೆ 224 ಸೀಟ್’.

‘ಉಳಿದಿದ್ದು ಜೆಡಿಎಸ್‌ಗೆ' ಎಂದೆ. 300 ಮೈನಸ್ 224...

‘ಇದ್ಯಾವ ಲೆಕ್ಕಾಚಾರಾರಿ ನಿಮ್ಮದು?’

‘ಅಮ್ಮಾ ತಾಯಿ. ಇಬ್ಬರೂ ತಲಾ 150 ಗೆಲ್ಲೋದು ಅಲ್ಲ. 224ರಲ್ಲಿ ನಮ್ಮ ಪಕ್ಷ 150 ಗೆಲ್ಲಲಿ ಅಂತ ರಾಹುಲ್ ಬಯಸಿದರೆ, ಅಮಿತ್ ಶಾ ಸಹ ಅದೇ ಟಾರ್ಗೆಟ್ ತಮ್ಮ ಪಕ್ಷದವರಿಗೆ ನೀಡಿದ್ದಾರೆ ಅಷ್ಟೆ’.

‘ಮತ್ತೆ ಉಳಿದಿದ್ದು ಜೆಡಿಎಸ್‍ಗೆ ಅಂದ್ರಿ? ಇದ್ಯಾವ ಮ್ಯಾಥಮಾಟಿಕ್ಸ್ ನಿಮ್ಮದು?’

‘ಸಿಂಪಲ್. ಉಳಿಯೋದು 74 ತಾನೆ? ಅದು ಕುಮಾರಣ್ಣನ ಟಾರ್ಗೆಟ್. ಆದರೆ ಅವರಿನ್ನೂ ಅದನ್ನು ಅನೌನ್ಸ್ ಮಾಡಿಲ್ಲ’.

‘ಅಷ್ಟೆ ಸಾಕಾ ಅವರಿಗೆ?’

‘ಅವರು ಹೇಗಿದ್ದರೂ ಕಿಂಗ್ ಮೇಕರ್ ತಾನೆ? 74 ಸೀಟ್ ಇಟ್ಕೊಂಡು ಇಬ್ಬರನ್ನೂ ಆಟ ಆಡಿಸಬಹುದು ಅಂತ ಅವರ ಲೆಕ್ಕಾಚಾರ’.

‘ಆ 74ರಲ್ಲಿ ಕಾರ್ಯಕರ್ತರಿಗೆ ಸಿಗೋದು 70 ಟಿಕೆಟ್ ಅಷ್ಟೇ ಅಲ್ವೆ?’

‘ಇದ್ಯಾವ ಮೀಸಲಾತಿ ನಿಂದು?’

‘ಅದೇರಿ ಒಂದು ಕುಮಾರಣ್ಣನಿಗೆ, ಒಂದು ರೇವಣ್ಣರಿಗೆ, ಒಂದು ಅನಿತಾ ಅಕ್ಕನಿಗೆ...’

‘ಸರಿ ಫ್ಯಾಮಿಲಿ ಕೋಟಾ ಮುಗಿಯಿತು. ನಾಲ್ಕನೆಯದು?’

‘ಇಬ್ರಾಹಿಂ ಸಾಹೇಬ್ರಿಗೆ. ಸೆಕ್ಯುಲರ್ ಕೋಟಾದಲ್ಲಿ’.

‘ಮತ್ತೆ ಕಾಂಗ್ರೆಸ್‍ನಲ್ಲಿ ಸಿದ್ದೂಗೆ ಎಷ್ಟು ಟಿಕೆಟ್, ಡಿಕೆಶಿಗೆ ಎಷ್ಟು ಟಿಕೆಟ್?’

‘ಇಬ್ಬರೂ 150ಕ್ಕೂ ಹೋರಾಡಬೇಕು ಅಂತ ಹೈಕಮಾಂಡ್ ಆದೇಶಿಸಿದೆ. 150 ಗೆದ್ದಮೇಲೆ ಪಕ್ಷದಲ್ಲೇ ಇನ್ನೊಂದು ಹೋರಾಟ ನಡೆಯುತ್ತೆ ಅದನ್ನು ಹಂಚಿಕೊಳ್ಳೋಕೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.